ಧಾರವಾಡ – ಬರುವ ಫೆಬ್ರುವರಿ ತಿಂಗಳಲ್ಲಿ ಆಲೂರು ವೆಂಕಟರಾವ್ ಸಭಾ ಭವನದಲ್ಲಿ ಜರುಗಲಿರುವ ಧಾರವಾಡ ತಾಲೂಕು ೧೨ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಿಸರ್ಗ ಬಡಾವಣೆಯ ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಾಂಗದ ನಿವೃತ್ತ ನಿರ್ದೇಶಕರು, ೧೭ ಕೃತಿ ಪ್ರಕಟಿಸಿದ, ಕರ್ನಾಟಕ ಪುಸ್ತಕ ಪ್ರಾಧಿಕಾರ ಧಾರವಾಡ ಜಿಲ್ಲೆಯ ಜಾಗೃತಿ ಸಮಿತಿ ಸದಸ್ಯರು, ಸಾಹಿತಿಗಳು ಆದ ಡಾ. ಚಂದ್ರಶೇಖರ ರೊಟ್ಟಿಗವಾಡ ಅವರನ್ನು ಅವರ ಮನೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರು ಆದ ಶ್ರೀಮತಿ ಜ್ಯೋತಿ ಪಾಟೀಲ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಆಮಂತ್ರಣ ನೀಡಿ ಗೌರವಿಸಲಾಯಿತು.
ಶ್ರೀಮತಿ ಜ್ಯೋತಿ ಪಾಟೀ ಅವರು ಈ ಸಂದರ್ಭದಲ್ಲಿ ಮಾತನಾಡುತ್ತ ‘ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ ಎಲೆ ಮರೆಯ ಕಾಯಿಯಂತಿರುವ ಲೇಖಕ ಬರಹಗಾರರನ್ನು ಬೆಳಕಿಗೆ ತಂದು ಅವರನ್ನು ಪ್ರೋತ್ಸಾಹಿಸಿ ಗೌರವಿಸುವ ಕೆಲಸವನ್ನು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ ಮಾಡುತ್ತಿರುವುದು ಅಭಿಮಾನದ ವಿಷಯವಾಗಿದೆ. ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಡಾ. ಚಂದ್ರಶೇಖರ ರೊಟ್ಟಿಗವಾಡ ಅವರನ್ನು ಎಲ್ಲರ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಡಾ. ಲಿಂಗರಾಜ ಅಂಗಡಿ ಅವರು ಮಾತನಾಡುತ್ತಾ ‘ಸಮ್ಮೇಳನದ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡುವಾಗ ಅವರ ಸಾಹಿತ್ಯ ಸಾಧನೆ, ನಡೆದು ಬಂದ ದಾರಿ, ಅವರ ವ್ಯಕ್ತಿತ್ವ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಲಾಗುತ್ತದೆ. ಡಾ. ರೊಟ್ಟಿಗವಾಡ ಅವರು ಕವಿಗಳಾಗಿ, ಸಂಶೋಧಕರಾಗಿ, ವಿಮರ್ಶಕರಾಗಿ ಹಲವಾರು ರಂಗಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ’ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತೇಶ ನರೇಗಲ್, ಮಾರ್ತಾಂಡಪ್ಪ ಕತ್ತಿ, ಶ್ರೀಮತಿ ಮೇಘಾ ಹುಕ್ಕೇರಿ, ಶ್ರೀಮತಿ ಪ್ರಮಿಳಾ ಜಕ್ಕನ್ನವರ, ನಾರಾಯಣ ಭಜಂತ್ರಿ, ನಾರಾಯಣ ವ್ಯಾಸ ಸಮುದ್ರ , ಎಸ್ ಎಚ್ ಪ್ರತಾಪ್, ಡಾ. ಬಿ ಜಿ ಬಿರಾದಾರ, ಬಿ ಎಮ್ ದೊಡ್ಡಯ್ಯ, ಎಸ್ ಬಿ ಪಾಟೀಲ್, ಎಸ್ ಡಿ ಸಿದ್ದಾಪುರ, ಗುರು ತಿಗಡಿ, ಅಶೋಕ್ ಮಣ್ಣೂರ, ಡಾ.ಪ್ರಭಾಕರ ಲಗಮನ್ನವರ, ಎಫ್ ವಿ ಮಂಜನ್ನವರ, ಪ್ರಕಾಶ್ ಸುಣಗಾರ, ಎಮ್ ಜಿ ಸುಬೇದಾರ್, ಸಿದ್ಧರಾಮ ಹಿಪ್ಪರಗಿ, ಬಸವರಾಜ ಗೊರವರ, ಜಿ ಬಿ ಹೊಸಮನಿ, ಬಿ ಜಿ ಬಾರ್ಕಿ, ಡಾ. ಯಶೋಧಾ ನಿಂಬನ್ನವರ ಮತ್ತು ನಿಸರ್ಗ ಬಡಾವಣೆ ಗುರು ಹಿರಿಯರು ಉಪಸ್ಥಿತರಿದ್ದರು.

