ಸಿಂದಗಿ: ಸಂವಿಧಾನವನ್ನು ಹೆಚ್ಚು ಪ್ರಚಾರ ಮಾಡಿದ್ದೇ ಪ್ರಧಾನಿ ನರೇಂದ್ರ ಮೋದಿಯವರು. ಅವರು ಸಂವಿಧಾನ ಸಮರ್ಪಣಾ ದಿನ ಜಾರಿಗೆ ತರುವ ಮೂಲಕ ಡಾ. ಅಂಬೇಡ್ಕರ್ ಅವರು ರಚಿಸಿದ ಹಾಗೂ ಜಗತ್ತಿಗೆ ಮಾದರಿಯಾದ ಸಂವಿಧಾನವನ್ನು ಯುವ ಪೀಳಿಗೆ ಓದುವಂತೆ ಮಾಡಿದ್ದಾರೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಸಿಂದಗಿ ಮಂಡಲದಿಂದ ರಾಷ್ಟ್ರೀಯ ಸಂವಿಧಾನ ದಿವಸ ಪ್ರಯುಕ್ತವಾಗಿ ಹಮ್ಮಿಕೊಂಡಿದ್ದ ಸಂವಿಧಾನ ಗೌರವ ಅಭಿಯಾನ-2021 ಕಾರ್ಯಕ್ರಮವನ್ನು ಶ್ಯಾಮಾ ಪ್ರಕಾಶ ಮುಖರ್ಜಿ, ಭಾರತಾಂಬೆ, ಪಂಡಿತ ದೀನದಯಾಳ ಉಪಾಧ್ಯಾಯ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈಯ್ಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಯಾರು ದೇಶವನ್ನು ಮುನ್ನಡೆಸಬೇಕೆಂದು ತೋರಿಸಿಕೊಟ್ಟವರು ಅಂಬೇಡ್ಕರ್ ಅವರೇ. ಪ್ರಧಾನಿ ಮೋದಿ ಅವರು ಪಂಚ ರತ್ನ ಯೋಜನೆ ಮೂಲಕ ಡಾ.ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಪ್ರವಾಸಿ ಸ್ಥಳಗಳನ್ನಾಗಿ ಅಭಿವೃದ್ಧಿಗೊಳಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಘಟಕಾಂಬಳೆ ಮಾತನಾಡಿ, ಕಾಂಗ್ರೆಸ್ ಸೇರಿದಂತೆ ಇನ್ನುಳಿದ ಯಾವುದೇ ಪಕ್ಷಗಳು ಸಂವಿಧಾನವನ್ನು ಗೌರವಿಸುವ, ಸ್ಮರಿಸಿಕೊಳ್ಳುವ ಕೆಲಸವನ್ನು ಮಾಡಿಲ್ಲ, ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಪಕ್ಷವು ಸಂವಿಧಾನ ಗೌರವಿಸುವ, ಸ್ಮರಿಸಿಕೊಳ್ಳುವ ಕೆಲಸ ಮಾಡಿದೆ ಎಂದರು.
ಮುಖಂಡ ರಾಜಶೇಖರ ಚೌರ ಮಾತನಾಡಿ, ಡಾ.ಅಂಬೇಡ್ಕರ್ ಅವರು ದೇಶಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆಂದು ಪ್ರಧಾನಿ ಮೋದಿ ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ಸಿನ ಮತ ಬ್ಯಾಂಕ್ ಆಗಿದ್ದ ದಲಿತ ಸಮುದಾಯವನ್ನು ಬಿಜೆಪಿಯಿಂದ ದೂರ ಇಡುವ ಕೆಲಸವನ್ನು ಕೈ ಪಕ್ಷ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಆ ಪಕ್ಷವೀಗ ಬಿಜೆಪಿ ದಲಿತ ವಿರೋಧಿ ಎಂದು ಹೇಳುತ್ತಿದೆ ಎಂದು ಅಭಿಪ್ರಾಯಪಟ್ಟರಲ್ಲದೇ ಡಾ.ಅಂಬೇಡ್ಕರ್ ಅವರ ಚಿಂತನೆಗಳ ಬಗ್ಗೆ 365ದಿನಗಳು ನೆನೆಯುವಂತೆ ಮಾಡಿದ್ದು ಪ್ರಧಾನಿ ಮೋದಿಯವರು ಎಂದು ಹೇಳಿದರು.
ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಮುಖಂಡರಾದ ಈರಣ್ಣ ರಾವೂರ, ಸುನಂದಾ ಯಂಪೂರೆ, ಪ್ರಧಾನಿ ಮೂಲಿಮನಿ, ಶಿವಪುತ್ರ ನಾಟೀಕಾರ ಮಾತನಾಡಿದರು.
ಮುಖಂಡರಾದ ರಾಜಶೇಖರ ಪೂಜಾರ, ಬಿ.ಎಚ್.ಬಿರಾದಾರ, ಶ್ರೀಶೈಲಗೌಡ ಬಿರಾದಾರ (ಮಾಗಣಗೇರಿ) ಬಸವರಾಜ ಹೂಗಾರ, ಸಿದ್ದು ಬುಳ್ಳಾ, ಅನಿಲ ನಾಯಕ, ರಾಜು ಸಿಂಧೂರ,ಪರಶುರಾಮ ಬಜಂತ್ರಿ, ಖಾಜು ಬಂಕಲಗಿ, ನಿಂಗರಾಜ ಬಗಲಿ ಇತರ ಗಣ್ಯರು ವೇದಿಕೆ ಮೇಲಿದ್ದರು.
ಸಿದ್ದಾರ್ಥ ಮೇಲಿನಕೇರಿ, ಏಕನಾಥ ಕಟ್ಟಿಮನಿ ಕಾರ್ಯಕ್ರಮ ನಿರ್ವಹಿಸಿದರು. ಮುಖಂಡರಾದ ಶಿವಾನಂದ ಹಡಪದ, ಸಿದ್ದು ಬಿರಾದಾರ(ಅಡಕಿ), ಪ್ರಕಾಶ ಶೇರಖಾನೆ ಶಿವುಕುಮಾರ ಬಿರಾದಾರ, ಸಂಗು ರತ್ನಾಕರ, ಪಿಂಟು ರಾಠೋಡ, ಮಹೇಶ ಜವಳಗಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.