ಇವರ ಬೇಜವಾಬ್ದಾರಿಯಿಂದ ಮಕ್ಕಳ ಪ್ರಾಣಕ್ಕೆ ಸಂಚಕಾರ ಬರದಿರಲಿ
ಇದೇ ದಿ. ೨೮ ರಂದು ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಸಮೀಪ ರಾತ್ರಿ ಶಾಲಾ ವಾಹನ ಹಾಗೂ ಟ್ರಾಕ್ಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿ, ೧೨ ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಸಂಭವಿಸಿದೆ.
ಆಲಗೂರ ಗ್ರಾಮದ ಖಾಸಗಿ ಶಾಲೆಯೊಂದರ ವಾರ್ಷಿಕ ಸ್ನೇಹ ಸಮೇಳನ ಸಮಾರಂಭ ಮುಗಿಸಿ ತಡರಾತ್ರಿ ಮಕ್ಕಳನ್ನು ಮನೆಗೆ ಬಿಡಲು ಹೊರಟ ಶಾಲಾ ವಾಹನ ಟ್ರಾಕ್ಟರ್ ಒಂದಕ್ಕೆ ಢಿಕ್ಕಿ ಹೊಡೆದಿದ್ದು ನಾಲ್ವರು ಮಕ್ಕಳು ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಘಟನೆಯ ನಂತರ ಬಾಗಲಕೋಟ ಜಿಲ್ಲೆಯ ಶಿಕ್ಷಣ ಇಲಾಖೆ ಎಚ್ಚತ್ತುಕೊಂಡಿದ್ದು ಜಮಖಂಡಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶವೊಂದನ್ನು ಹೊರಡಿಸಿ, ದಿ. ೨೯ ರಿಂದಲೇ ಹಗಲಿನಲ್ಲಿ ಮಾತ್ರ ಸ್ನೇಹ ಸಮ್ಮೇಳನಗಳನ್ನು ನಡೆಸಬೇಕು ಎಂದು ಹೇಳಿದರು. ಖಾಸಗಿ ಶಾಲೆಗಳಿಗೆ ಇದು ಎಷ್ಟರಮಟ್ಟಿಗೆ ತಲುಪಿತೋ ಗೊತ್ತಿಲ್ಲ ಆದರೆ ಈ ಆದೇಶ ರಾಜ್ಯಾದ್ಯಂತ ತಲುಪಬೇಕಾಗಿತ್ತು. ಯಾಕೆಂದರೆ ಈಗಿನ ದಿನಗಳಲ್ಲಿ ಎಲ್ಲ ಶಾಲೆಗಳಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನಗಳು ತಡರಾತ್ರಿಯವರೆಗೆ ನಡೆಯುತ್ತಲೇ ಇರುತ್ತವೆ. ಸಮಾರಂಭಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳೂ ಭಾಗವಹಿಸಿ ಬರುತ್ತಾರೆ ಅನಂತರ ಕಾರ್ಯಕ್ರಮ ಮಾಡುವ ಮಕ್ಕಳು ರಾತ್ರಿ ಬಹಳ ಹೊತ್ತಿನ ನಂತರ ಮನೆ ಸೇರುತ್ತವೆ ಇಂಥ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಶಾಲಾ ಆಡಳಿತ ಹಾಗೂ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸುವುದು ಅಕ್ಷಮ್ಯ.
ಇದೀಗ ಬಾಗಲಕೋಟ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಮಖಂಡಿಯ ಉಪವಿಭಾಗಾಧಿಕಾರಿಗಳು ಹಾಗೂ ಜಮಖಂಡಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು ಜಂಟಿಯಾಗಿ ಆದೇಶವೊಂದನ್ನು ಹೊರಡಿಸಿ ಶಾಲೆಗಳಿಗೆ ಸುಮಾರು ೩೪ ಸುರಕ್ಷತಾ ಮಾನದಂಡಗಳನ್ನು ಸೂಚಿಸಿ ಆದೇಶ ಹೊರಡಿಸಿವೆ. ಇದು ಕೇವಲ ಬಾಗಲಕೋಟೆ ಜಿಲ್ಲೆಗಷ್ಟೇ ಸೀಮಿತವಾಗದೇ ರಾಜ್ಯದ ಎಲ್ಲಾ ಕಡೆಯೂ ಅನ್ವಯವಾಗಬೇಕಾಗಿದೆ. ಶಾಲೆಗಳು ಮಕ್ಕಳ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳ ಬಗ್ಗೆ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾರ ಮುಲಾಜಿಗೂ ಒಳಗಾಗದೆ ಕ್ರಮಕ್ಕೆ ಮುಂದಾಗಬೇಕಾಗಿದೆ. ಯಾವುದೋ ಶಾಲೆ ಹೊಲದಲ್ಲಿ ಕೆನಾಲ್ ಪಕ್ಕದಲ್ಲಿ ಇರುತ್ತದೆ, ಅಗ್ನಿ ನಂದಕಗಳನ್ನು ಅಳವಡಿಸದೇ ಇರುತ್ತದೆ, ವಾಹನ ಚಾಲಕರಿಗೆ ತರಬೇತಿ, ಲೈಸೆನ್ಸ್ ಇಲ್ಲದೆ ಇರುತ್ತದೆ, ವಾಹನ ಚಾಲಕರಿಗೆ ಪೊಲೀಸ್ ಪರಿಶೀಲನೆ ಹಾಗೂ ಪ್ರಮಾಣಪತ್ರ ಇಲ್ಲದೆ ಇರುತ್ತದೆ….ಹೀಗೆ ಅನೇಕ ರೀತಿಯಲ್ಲಿ ಯಾವುದೇ ಸುರಕ್ಷತೆ ಕ್ರಮ ಕೈಗೊಳ್ಳದೆ ಶಾಲೆಯನ್ನು ನಡೆಸುತ್ತಿರುವ ಆಡಳಿತ ಮಂಡಳಿಯ ವಿರುದ್ಧ ಶಿಕ್ಷಣಾಧಿಕಾರಿಗಳು ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಯಾಕೆಂದರೆ ಎಲ್ಲಕ್ಕಿಂತ ಹಿರಿದಾದದ್ದು ಮಕ್ಕಳ ಪ್ರಾಣ. ತಮ್ಮ ಸ್ವಾರ್ಥಕ್ಕಾಗಿ, ಅಧಿಕಾರಿಗಳು, ಆಡಳಿತ ಮಂಡಳಿಯವರು ಮಕ್ಕಳ ಪ್ರಾಣ ಬಲಿ ಕೊಡುವಂತಾಗಬಾರದು ಎಂಬುದೇ ಎಲ್ಲರ ಆಶಯ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಚ್ಚತ್ತುಕೊಳ್ಳಬೇಕಾಗಿದೆ.
ಉಮೇಶ ಬೆಳಕೂಡ, ಮೂಡಲಗಿ