spot_img
spot_img

ಕೃಪಾಕರ – ಸೇನಾನಿ

Must Read

- Advertisement -

ಕೃಪಾಕರ – ಸೇನಾನಿ ಒಂದೇ ಹೆಸರಿನಂತಿರುವ ಮಹಾನ್ ಸಾಧನೆ ಮಾಡಿರುವ ಜೋಡಿ. ಈ ಜೋಡಿ ಶ್ರೇಷ್ಠ ಮಟ್ಟದ ವನ್ಯಜೀವಿಗಳ ಕುರಿತಾದ ಚಿತ್ರಗಳಿಗಾಗಿ ವಿಶ್ವಮಾನ್ಯತೆ ಗಳಿಸಿರುವುದರ ಜೊತೆಗೆ, ಪರಿಸರದ ಕಾಳಜಿಯ ಕುರಿತಾಗಿ ಮಹತ್ವದ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿರುವವರು. ವೀರಪ್ಪನ್ ಇಂದ ಅಪಹೃತರಾಗಿದ್ದ ಈ ಜೋಡಿ ತಮ್ಮ ಸ್ನೇಹಗುಣದಿಂದ ಆತನಿಂದಲೂ ಆಪ್ತ ಬೀಳ್ಕೊಡುಗೆ ಪಡೆದು ಬಂದು ನಿರಂತರವಾಗಿ ವನ್ಯಜೀವನದ ಕುರಿತಾದ ಕಾಳಜಿಗಳಲ್ಲಿ ಸಾಗುತ್ತಿರುವವರು.

ಬಿ. ಎಸ್. ಕೃಪಾಕರ 1956 ರ ಜುಲೈ 7 ರಂದು ಜನಿಸಿದರು. ಅವರು ಮೈಸೂರು ಡಿ ಬನುಮಯ್ಯ ಕಾಲೇಜಿನಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಅಧ್ಯಯನ ಮಾಡಿದರು.  ಅವರು ಮೈಸೂರು ವಿಶ್ವವಿದ್ಯಾಲಯವನ್ನು ಕ್ರಿಕೆಟ್‍ನಲ್ಲಿ ಪ್ರತಿನಿಧಿಸಿದ್ದರು. 

ಸೇನಾನಿ ಹೆಗ್ಡೆ 1960 ರ ಜನವರಿ 1 ರಂದು ಜನಿಸಿದರು.  ಸೇನಾನಿ ಹೆಗಡೆ ಅವರು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ  ಸಿವಿಲ್ ಎಂಜಿನಿಯರಿಂಗ್ ಪದವಿ ಮಾಡಿದರು ಮತ್ತು  ಅವರು ಕೃಪಾಕರ್ ಜೊತೆ ವನ್ಯಜೀವಿ ಛಾಯಾಗ್ರಹಣ ಮುಂದುವರಿಸುವ ಸಲುವಾಗಿ ಲಾಭದಾಯಕವಾದ ವ್ಯಾಪಾರವನ್ನ ತ್ಯಜಿಸಿದರು. ಕೃಪಾಕರ ಅವರು ಸೇನಾನಿ ಹೆಗ್ಡೆ ಅವರೊಂದಿಗೆ ವೃತ್ತಿಪರವಾಗಿ ಛಾಯಾಗ್ರಹಣವನ್ನು ತೆಗೆದುಕೊಳ್ಳುವ ಮೊದಲು, ಮಂಗಳೂರಿನಲ್ಲಿ ಮತ್ತು ಬೆಂಗಳೂರಿನಲ್ಲಿ ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು. 

- Advertisement -

ಕೃಪಾಕ – ಸೇನಾನಿ ಜೋಡಿಯ ಊರು ಮೈಸೂರಾದರೂ, ನೀಲಗಿರಿಯ ಬೆಟ್ಟದ ತಪ್ಪಲೇ ತಮ್ಮ ಊರೆಂಬ ಭಾವ ಈ ಜೋಡಿಯದು.

ಕೃಪಾಕರ – ಸೇನಾನಿ  ಜೊತೆಗೂಡಿ ಜನಪ್ರಿಯ ನಿಯತಕಾಲಿಕೆಗಳಿಗೆ ಫೋಟೋ ಪ್ರಬಂಧಗಳನ್ನು ಬರೆದರು. ಆರಂಭದಲ್ಲಿ, ಅವರು ಮಂಡ್ಯ ಜಿಲ್ಲೆಯ ಹಲವು ಬಗೆಯ ಪಕ್ಷಿಗಳನ್ನು ಅಧ್ಯಯನ ಮಾಡಿದರು. ವಿವಿಧ  ಪಕ್ಷಿಗಳ ಜೀವನ ವಿಧಾನವನ್ನು ಸೆರೆಹಿಡಿದು ಬದಲಾಗುತ್ತಿರುವ ಆವಾಸಸ್ಥಾನಕ್ಕೆ ಅವುಗಳ ಹೊಂದಾಣಿಕೆಯನ್ನು ದಾಖಲಿಸಿದರು. ಅದೇ ಸಮಯದಲ್ಲಿ, ಅವರು ಈ ಪಕ್ಷಿಗಳ ಬಗ್ಗೆ ತಮ್ಮ ಅನುಭವಗಳನ್ನು ದಾಖಲಿಸುವ ಮತ್ತು ಸಾಮಾಜಿಕ ಅಂಶಗಳನ್ನು ನೇಯ್ಗೆ ಮಾಡುವ ಬಗ್ಗೆ ಜನಪ್ರಿಯ ಲೇಖನಗಳನ್ನು ಕನ್ನಡದ ಎಲ್ಲ ಜನಪ್ರಿಯ ನಿಯತಕಾಲಿಕಗಳಿಗೆ ಬರೆದರು. ನಂತರ ಅವರು ಮದುಮಲೈ ವನ್ಯಜೀವಿ ಅಭಯಾರಣ್ಯಕ್ಕೆ ಬಂದರು.

ಕೃಪಾಕರ – ಸೇನಾನಿ ಜೋಡಿ ಕೆ.ಪುಟ್ಟಸ್ವಾಮಿ ಅವರೊಂದಿಗೆ ಸಹ-ಲೇಖಕರಾಗಿ ಮೂಡಿಸಿರುವ ‘ಜೀವ ಜಾಲ’ ಕೃತಿ, ವಿಜ್ಞಾನ ಬರವಣಿಗೆಗಾಗಿ 1999 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿತು. ಕೃಪಾಕರ – ಸೇನಾನಿ ಜೋಡಿಗೆ 2006 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿತು.

- Advertisement -

ಕೃಪಾಕರ – ಸೇನಾನಿ ಅಂದಿನ ದಿನಗಳಲ್ಲಿ ಅರಣ್ಯ ಅಧಿಕಾರಿಗಳಾಗಿದ್ದ ಡಿ.ಯತೀಶ್ ಕುಮಾರ್  ಅವರೊಂದಿಗೆ ದಕ್ಷಿಣ ಭಾರತದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿ, ಅರಣ್ಯ ಸಂರಕ್ಷಣಾ ಪ್ರಯತ್ನವಾದ  ‘ನಮ್ಮ ಸಂಘ’ ಎಂಬ ಸಮಾಜವನ್ನು ಸ್ಥಾಪಿಸಿದರು.  ಈ ಸಮಾಜವು ಅರಣ್ಯ ಉಳಿಕೆಯ  ಕಾರ್ಯಚಟುವಟಿಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾ ಬಂದಿದೆ. ಉದ್ಯಾನದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಡುಗೆ ಅನಿಲವನ್ನು ಪರಿಚಯಿಸುವ ಮೂಲಕ ಅರಣ್ಯದಿಂದ ಇಂಧನಕ್ಕಾಗಿ ಮರವನ್ನು ತೆಗೆಯುವ ಒತ್ತಡವನ್ನು ಕಡಿಮೆ ಮಾಡುವಲ್ಲಿ ಈ ಸಮಾಜವು ಯಶಸ್ವಿಯಾಗಿದೆ. ಸೊಸೈಟಿಯ ಜಾಲವು 194 ಹಳ್ಳಿಗಳನ್ನು ಒಳಗೊಂಡಿದ್ದು, 30,000 ಕ್ಕೂ ಹೆಚ್ಚು ಕುಟುಂಬಗಳು ಅಡುಗೆ ಅನಿಲವನ್ನು ಬಳಸುವುದಕ್ಕೆ ಅನುವು ಮಾಡಿಕೊಟ್ಟಿದೆ. ಈ ಯೋಜನೆಗೆ  ಯಾವುದೇ ವಿದೇಶಿ ಹಸ್ತ ಮತ್ತು ಸರ್ಕಾರದ ಸಹಾಯವಿಲ್ಲದೆ, ಸಂಪೂರ್ಣವಾಗಿ ಸ್ನೇಹಿತರು ಮತ್ತು ಹಿತೈಷಿಗಳು ಧನಸಹಾಯ ನೀಡಿದರು. ಈ ಯೋಜನೆಯು ಮುಂದಿನ ದಿನಗಳಲ್ಲಿ ಸ್ವಾವಲಂಬಿಯಾಗಿದ್ದು ಅಂತಹ ಇತರ ಪ್ರಯತ್ನಗಳಿಗೆ ಮಾದರಿಯಾಗಿದೆ. ದೇಶದಲ್ಲೇ ಅರಣ್ಯ ಸಂರಕ್ಷಣಾ ಕಾರ್ಯಗಳಲ್ಲಿ ಇದೊಂದು ಅತ್ಯಂತ ಯಶಸ್ವೀ ಪ್ರಯತ್ನವೆನಿಸಿದೆ. ‘ನಮ್ಮ ಸಂಘ’ ಸ್ಥಾಪಿಸಿ ಅದೆಷ್ಟೋ ಗ್ರಾಮಸ್ಥ ಬಡ ಹುಡುಗರಿಗೆ ಕೆಲಸ ನೀಡಿ ಅವರುಗಳ ಪಾಲಿಗೆ ಬೆಳಕಾದವರು ಈ ಜೋಡಿ. 

ಕೃಪಾಕರ – ಸೇನಾನಿ ಜೋಡಿ ಕೃಪಾಕರ್-ಸೇನಾನಿ ಫೀಚರ್ಸ್ ಎಂಬ ಹೆಸರಿನಿಂದ ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ. ಜೊತೆಗೂಡಿ ವಿಫುಲವಾಗಿ ಸಂಚರಿಸಿ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿನ ಪ್ರಾಣಿಗಳು ಮತ್ತು ಪಕ್ಷಿಗಳನ್ನು ವೀಕ್ಷಿಸಿ ಅವುಗಳ ಬದುಕನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಛಾಯಾಗ್ರಹಣ ಮಾಡಿದ್ದಾರೆ. ಐವತ್ತಕ್ಕೂ ಹೆಚ್ಚು ಸಚಿತ್ರ ಪ್ರಬಂಧಗಳನ್ನು ಪ್ರಸಿದ್ಧ ಕನ್ನಡ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. 

ಕೃಪಾಕರ – ಸೇನಾನಿ ಜೋಡಿಯ ಕೆಲಸ ರಾಜ್ಯದ, ರಾಷ್ಟ್ರಮಟ್ಟದ ಮತ್ತು ಅಂತರರಾಷ್ಟ್ರೀಯ ತಜ್ಞರನ್ನು ಬೆರಗುಗೊಳಿಸುತ್ತಾ ಬಂದಿದೆ. ಈ ಜೋಡಿಯ ಸಹಸ್ರಾರು ವನ್ಯಜೀವಿ ಚಿತ್ರಗಳು ವಿಶ್ವದ ಅನೇಕ ಶ್ರೇಷ್ಠ ಪುಸ್ತಕಗಳಲ್ಲಿ ಮತ್ತು ಶ್ರೇಷ್ಠತೆಗೆ ಹೆಸರಾದ ನ್ಯಾಚುರಲ್ ಹಿಸ್ಟರಿ, ಜಿಇಒ, ಲಂಡನ್ ಟೈಮ್ಸ್, ಬಿಬಿಸಿ ವನ್ಯಜೀವಿ, ಬಿಬಿಸಿ ವೈಲ್ಡ್ ಲೈಫ್ ಮುಂತಾದ ನಿಯತಕಾಲಿಕೆಗಳಲ್ಲಿ ಮೂಡಿಬಂದಿವೆ. ಆಕ್ಸ್‌ಫರ್ಡ್ ಸೈಂಟಿಫಿಕ್ ಫಿಲ್ಮ್ಸ್, ಯುಕೆ ಇವರ ಛಾಯಾಚಿತ್ರಗಳನ್ನು ಮಾರಾಟ ಮಾಡುತ್ತಿವೆ.

ಕೃಪಾಕರ್ – ಸೇನಾನಿ ಅವರ ‘ದ ವೈಲ್ಡ್ ಲೈಫ್ ಡೈರೀಸ್’ ಸಾಕ್ಷ್ಯ ಚಿತ್ರಕ್ಕೆ  ಪ್ರತಿಷ್ಟಿತ ನ್ಯಾಷನಲ್ ಜಿಯಾಗ್ರಫಿ  ಪ್ರಶಸ್ತಿ ಸಂದಿತಲ್ಲದೆ ಇನ್ನೂ 6 ಅಂತರರಾಷ್ಟ್ರೀಯ ವನ್ಯಜೀವಿ ಚಿತ್ರೋತ್ಸವಗಳ ಗೌರವಗಳು ಸಂದವು.

1997 ರಲ್ಲಿ ಬಂಡೀಪುರದ ಕಾಡಿನಲ್ಲಿರುವ ಮನೆಯಲ್ಲಿ ಕೃಪಾಕರ ಸೇನಾನಿ ಜೋಡಿ ಡಾಕ್ಯುಮೆಂಟರಿ ಒಂದನ್ನು ತಯಾರಿಸುತ್ತಾ ಅದಕ್ಕೆ ಅಂತಿಮ ಸ್ಪರ್ಶ ನೀಡುವ ತಯಾರಿಯಲ್ಲಿದ್ದರು. ಅದೆಷ್ಟೋ ದಿನದಿಂದ ಅವರ ನಡೆಯನ್ನ ಗಮನಿಸುತ್ತಿದ್ದ ಕಾಡುಗಳ್ಳ ವೀರಪ್ಪನ್ ಈ ಜೋಡಿಯನ್ನ ಅಪಹರಿಸಿದ. ತನ್ನನ್ನ ಸೆರೆಹಿಡಿಯಲು ಕೇಂದ್ರ ಸರ್ಕಾರ ನೇಮಿಸಿದ ಅಧಿಕಾರಿಗಳು ಇವರು ಎಂಬ ಆತನ ಸಹಚರರು ನೀಡಿದ ತಪ್ಪು ಸಂದೇಶದಿಂದ ಈ ಜೋಡಿಯನ್ನು ವ್ಯವಸ್ಥಿತವಾಗಿ ಅಪಹರಿಸಿ ಕಾಡಿಗೊಯ್ದಿದ್ದ ವೀರಪ್ಪನ್. ಆದರೆ ಈ ಜೋಡಿ ಆ ಕಟುಕನ ಮನಸ್ಸನ್ನೇ ಗೆದ್ದಿದ್ದರು. ಹದಿನಾಲ್ಕು ದಿನ ಅವರನ್ನ ಬಂಧಿಸಿದ್ದ ವೀರಪ್ಪನ್‍ಗೆ ಇವರನ್ನ ಬೀಳ್ಕೊಡುವಾಗ ಮನಸ್ಸು ಭಾರವಾಗಿತ್ತು.

ಆ ಹದಿನಾಲ್ಕು ದಿನದ ಅನುಭವ ಕಥನವನ್ನ “ಕಾಡುಗಳ್ಳನ ಜೊತೆ ಹದಿನಾಲ್ಕು ದಿನಗಳು”ಎಂಬ ಪುಸ್ತಕದಲ್ಲಿ ಬರೆದಿದ್ದಾರೆ

ಕೃಪಾಕರ – ಸೇನಾನಿ ಜೋಡಿಗೆ ಏಷಿಯಾಟಿಕ್ ಕಾಡುನಾಯಿಗಳ ಕುರಿತು ಡಿಸ್ಕವರಿ ಚಾನೆಲ್ಗಾಗಿ ನಿರ್ಮಿಸಿದ  ‘ದಿ ಪ್ಯಾಕ್’ ಸಾಕ್ಷ್ಯ್ತಚಿತ್ರಕ್ಕೆ ಪ್ರತಿಷ್ಠಿತ ವೈಲ್ಡ್ ಸ್ಕ್ರೀನ್ ಚಲನಚಿತ್ರೋತ್ಸವದಲ್ಲಿ 2010 ರ ‘ಗ್ರೀನ್ ಆಸ್ಕರ್’ ಪ್ರಶಸ್ತಿ ಸಂದಿತು. ಈ ಪ್ರಶಸ್ತಿ ಸಂದ ಸಂದರ್ಭದಲ್ಲಿ ‘ದಿ ಪ್ಯಾಕ್’ ಜೊತೆ ಸ್ಪರ್ಧೆಗಿಳಿದಿದ್ದ ಚಿತ್ರಗಳಲ್ಲಿ ವಿಶ್ವ ಖ್ಯಾತಿಯ ಚಲನಚಿತ್ರ ನಿರ್ಮಾಪಕ ಅಟೆನ್ ಭರೋ ಅವರ ವನ್ಯಜೀವಿಗಳ ಕುರಿತಾದ ‘ಲೈಫ್ ಸರಣಿ’ ಹಾಗೂ ನ್ಯಾಶನಲ್ ಜಿಯೋಗ್ರಫಿಕ್ ಚಾನೆಲ್‌ನ ಪ್ರತಿಷ್ಟಿತ ಚಿತ್ರಗಳು ಇದ್ದವು. ಏಷ್ಯಾ ಖಂಡದಲ್ಲಿ ನಿರ್ಮಾಣಗೊಂಡು, ವೈಲ್ಡ್ ಸ್ಕ್ರೀನ್ ಚಿತ್ರೋತ್ಸವದ ಮುಕ್ತ ವಿಭಾಗದಲ್ಲಿ ನಾಮಕರಣಗೊಂಡ ಹಾಗೂ ಪ್ರಶಸ್ತಿ ಪಡೆದ ಏಕೈಕ ಸಾಕ್ಷ್ಯಚಿತ್ರ ಎಂಬ ಹೆಗ್ಗಳಿಕೆಗೆ ‘ದಿ ಪ್ಯಾಕ್’ ಪಾತ್ರವಾಯಿತು. ನೀಲಗಿರಿ ಜೈವಿಕ ವಲಯದಲ್ಲಿ ಬೇಟೆ ನಾಯಿಗಳ ಬದುಕಿನ ಕುರಿತಾದ ಹಿನ್ನೆಲೆಯನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿದೆ. ಕಾಡುನಾಯಿಗಳ ಸಂಕೀರ್ಣ ಬದುಕಿನ ಬಗೆಗೆ ಅದುವರೆಗೂ ತಿಳಿದಿರದಿದ್ದ ಅನೇಕ ಸಂಗತಿಗಳನ್ನು ‘ದಿ ಪ್ಯಾಕ್’ ಸಾಕ್ಷ್ಯಚಿತ್ರ ಅನಾವರಣಗೊಳಿಸಿದೆ. ಕೃಪಾಕರ ಮತ್ತು ಸೇನಾನಿ ಜೋಡಿ ನೀಲಗಿರಿ ಕಾಡುಗಳಲ್ಲಿ ಬಹಳ ವರ್ಷಗಳ ಕಾಲ ಶ್ರಮಿಸಿ ಈ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸಿದ್ದರು.

ಕಾಡುನಾಯಿಗಳ ಕುರಿತ ಅಚ್ಚರಿಯ ಸಂಗತಿಗಳನ್ನು ‘ದಿ ಪ್ಯಾಕ್’ ಹೊರಗೆಡುಹಿದೆ. ಕಾಡುನಾಯಿಗಳ ಕುರಿತ ‘ದಿ ಪ್ಯಾಕ್’ ಸಾಕ್ಷ್ಯ ಚಿತ್ರವಾಗಲಿ, ಕೆ.ಪುಟ್ಟಸ್ವಾಮಿಯವರೊಂದಿಗೆ ಸಂಪಾದಿಸಿರುವ ‘ಜೀವಜಾಲ’ದಂತಹ ಪುಸ್ತಕವಾಗಲಿ, ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳ ಮುಖಪುಟ ಚಿತ್ರಗಳಲ್ಲಿರಲಿ ಕೃಪಾಕರ ಸೇನಾನಿ ಜೋಡಿಯ ಕೈಚಳಕ ಎದ್ದು ಕಾಣುತ್ತದೆ.

ಕೃಪಾಕರ – ಸೇನಾನಿ ಜೋಡಿ  ಅವರ ಪ್ರಕಟಿತ ಕೃತಿಗಳಲ್ಲಿ ಜೀವಜಾಲ – 1998 (ಶ್ರೀ ಕೆ. ಪುಟ್ಟಸ್ವಾಮಿ ಯವರ ಜೊತೆ);

ಸೆರೆಯಲ್ಲಿ ಕಳೆದ 14 ದಿನಗಳು (1999) ವೀರಪ್ಪನ್ ಒತ್ತೆಯಾಳುಗಳಾಗಿದ್ದಾಗಿನ ಅನುಭವಗಳ ಪುಸ್ತಕ; ಎ ವಾಕ್ ಆನ್ ದಿ ವೈಲ್ಡ್ ಸೈಡ್ : ಯಾನ್ ಇನ್ಫರ್ಮೇಷನ್ ಗೈಡ್ ಟು ನ್ಯಾಶನಲ್ ಪಾರ್ಕ್ಸ್ ಅಂಡ್ ವೈಲ್ಡ್ ಲೈಫ್ ಸ್ಯಾಂಕ್ಚುಯರೀಸ್ ಆಫ್ ಕರ್ನಾಟಕ, (ಕರ್ನಾಟಕ ಅರಣ್ಯ ಇಲಾಖೆ 2000);

ವ್ಯಾಲಿ ಅಫ್ ಬ್ಯಾಂಬೂಸ್ ಅಂಡ್ ಫರ್ಗಾಟನ್ ವಿಲೇಜಸ್: ಎ ಪ್ರೊಫೈಲ್ ಆಫ್ ಭದ್ರಾ ಟೈಗರ್ ರಿಸರ್ವ್ ಅಂಡ್ ದ ರಿಸೆಟಲ್ಮೆಂಟ್ ಆಫ್ ವಿಲೇಜಸ್  (2002);

ಬರ್ಡ್ಸ್, ಬೀಸ್ಟ್ಸ್ ಅಂಡ್ ಬ್ಯಾಂಡಿಟ್ಸ್ (2011); ಕೆನ್ನಾಯಿಯ ಜಾಡಿನಲ್ಲಿ (2018) ಸೇರಿವೆ.

ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಚಿತ್ರಿಸಿರುವ ‘ವಾಕಿಂಗ್ ವಿಥ್ ವುಲ್ಪ್ಸ್’ ಸಾಕ್ಷ್ಯಚಿತ್ರದಲ್ಲಿ ಗಣಿಕಾರಿಕೆ ಮತ್ತ ಅಭಿವೃದ್ಧಿ ಎಂಬ ಎರಡು ಸಂಗತಿಗಳು ಕುರಿಗಾಯಿಗಳು ಮತ್ತು ತೋಳಗಳ ಬದುಕನ್ನು ಹೇಗೆ ಅಲ್ಲೋಲ ಕಲ್ಲೋಲ ಮಾಡಿವೆ ಎಂಬ ದರ್ಶನವಿದೆ. 

ಕೃಪಾಕರ – ಸೇನಾನಿ ಅವರಂತಹ ಉತ್ಸಾಹಿಗಳ ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಯ ಪ್ರಯತ್ನಗಳು,  ಸಮಾಜದ ಮತ್ತು ಆಡಳಿತ ವ್ಯವಸ್ಥೆಗಳ ಬೆಂಬಲವನ್ನು ಸದಾ ಗಳಿಸಲಿ ಎಂದು ಆಶಿಸುತ್ತಾ ಈ ಜೋಡಿಯ ಸಕಲ ಕಾರ್ಯಗಳಿಗೆ ಮತ್ತು ಅವರ ಬದುಕಿಗೆ ಶುಭಹಾರೈಸೋಣ. 

ಇಂತಹ ಮಹಾನ್ ಜೋಡಿಯ ಜೊತೆ ಮತ್ತೊಂದು ಮಹಾನ್ ವ್ಯಕ್ತಿತ್ವ ಜಯಂತ್ ಕಾಯ್ಕಿಣಿ ಅವರುಗಳೊಂದಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವೇ ಸರಿ.


ಹೇಮಂತ ಚಿನ್ನು

ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group