ಕರ್ನಾಟಕ ಸರ್ವೋದಯ ಮಂಡಲದಿಂದ ಗಾಂಧಿ ಚಿಂತನೆಯ ಬೀಜ

Must Read

ನಾಲ್ಕು ವರ್ಷಗಳಲ್ಲಿ 68 ವಿದ್ಯಾಸಂಸ್ಥೆ, 5 ಕಾರಾಗೃಹಗಳಲ್ಲಿ ಮೌಲ್ಯ ಶಿಕ್ಷಣ

ಬೆಂಗಳೂರು – ಗಾಂಧೀ ಚಿಂತನೆ ಮತ್ತು ಸರ್ವೋದಯ ಸಿದ್ಧಾಂತಗಳನ್ನು ಯುವಪೀಳಿಗೆಗೆ ತಲುಪಿಸುವ ಮಹತ್ವದ ಕಾರ್ಯದಲ್ಲಿ  ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ಕಳೆದ ನಾಲ್ಕು ವರ್ಷಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಆಗಸ್ಟ್ 2022 ರಿಂದ ಜನವರಿ 2026ರವರೆಗೆ ರಾಜ್ಯದ 68 ಶಾಲಾ–ಕಾಲೇಜುಗಳು ಹಾಗೂ ಐದು ಕಾರಾಗೃಹಗಳಲ್ಲಿ ಗಾಂಧೀ ಮೌಲ್ಯಾಧಾರಿತ ಚಿಂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜ ಪರಿವರ್ತನೆಗೆ ದಿಟ್ಟ ಹೆಜ್ಜೆ ಇಟ್ಟಿದೆ.

ಆಚಾರ್ಯ ವಿನೋಬಾ ಭಾವೆ ಅವರ ಆಶೀರ್ವಾದದೊಂದಿಗೆ 1958ರಲ್ಲಿ ಸ್ಥಾಪನೆಯಾದ ಮಂಡಲವು ಹಲವು ವರ್ಷಗಳ ನಿಷ್ಕ್ರಿಯತೆಯ ಬಳಿಕ ಪುನಶ್ಚೇತನಗೊಂಡು, ಗಾಂಧೀವಾದಿ ಕಾರ್ಯಕರ್ತ ಸುರೇಂದ್ರ ಕೌಲಗಿ ಹಾಗೂ ನಂತರ ಶಿಕ್ಷಣ ತಜ್ಞ  ಎಲ್. ನರಸಿಂಹಯ್ಯ ಅವರ ನೇತೃತ್ವದಲ್ಲಿ ಹೊಸ ದಿಕ್ಕು ಕಂಡಿತು. 2022ರಲ್ಲಿ ಡಾ. ಹೆಚ್. ಎಸ್. ಸುರೇಶ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ವಿದ್ಯಾರ್ಥಿ ಕೇಂದ್ರೀಕೃತ ಕಾರ್ಯಕ್ರಮಗಳು ಇನ್ನಷ್ಟು ವ್ಯಾಪಕಗೊಂಡವು.

ಗಾಂಧೀ ಮೌಲ್ಯಗಳ ಕ್ರಿಯಾನ್ವಯ, ಸಾಮಾಜಿಕ ಕರ್ತವ್ಯ,  ಅಪಪ್ರಚಾರದ ತಡೆ, ಕುಟುಂಬ ಮೌಲ್ಯಗಳು, ಬದುಕು ಕಟ್ಟಿಕೊಳ್ಳುವ ಕಲಿಕೆ ಸೇರಿದಂತೆ ಹಲವು ವಿಷಯಗಳ ಮೇಲೆ ಭಾಷಣ, ಸಂವಾದ, ರಸಪ್ರಶ್ನೆ ಮತ್ತು ಸ್ಪರ್ಧೆಗಳು ನಡೆಯಿತು. ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಮಾದರಿಯನ್ನು ಅಳವಡಿಸಿಕೊಂಡು ಮಂಡಲವು “ಸ್ಮಾಲ್ ಇಸ್ ಬ್ಯೂಟಿಫುಲ್” ತತ್ವವನ್ನು ಕಾರ್ಯರೂಪಕ್ಕೆ ತಂದಿದೆ.

ಮಂಡಲವು ‘ಬದಲಾಗುತ್ತಿರುವ ಸಮಾಜಕ್ಕೆ ಸರ್ವೋದಯ ಸಿದ್ಧಾಂತ’, ‘ಬಾ ಬಾಪು ಪರಿಚಯ ದರ್ಶಿನಿ’ ಹಾಗೂ ಪರಿವರ್ತಿತ ಖೈದಿ ಲಕ್ಷ್ಮಣ್ ತುಕಾರಾಂ ಗೋಲೆ ಅವರ ಜೀವನಾಧಾರಿತ ‘ಪಾತಕ ಲೋಕದಿಂದ ಗಾಂಧಿಯಾನದೆಡೆಗೆ’ ಎಂಬ ಕೃತಿಗಳನ್ನು ಪ್ರಕಟಿಸಿದೆ. ವಿಶೇಷವೆಂದರೆ ಗೋಲೆ ಅವರ ಜೀವನಕಥಾ ಪುಸ್ತಕ ಮೂರು ತಿಂಗಳೊಳಗೆ ಸಂಪೂರ್ಣ ಮಾರಾಟವಾಗಿ ಸಮಾಜದಲ್ಲಿ ಗಾಂಧೀ ಚಿಂತನೆಯ ಮೇಲಿನ ಆಸಕ್ತಿಯನ್ನು ತೋರಿಸಿದೆ.

ರಾಜ್ಯ ಮಟ್ಟದಲ್ಲಿ ಶಿವಮೊಗ್ಗ, ಬೆಟ್ಟಕೋಟೆ ಮತ್ತು ಈಸೂರುಗಳಲ್ಲಿ ನಡೆದ ಸರ್ವೋದಯ ಸಮಾವೇಶಗಳು ಗ್ರಾಮೀಣ ಭಾಗಕ್ಕೂ ಚಳವಳಿಯನ್ನು ತಲುಪಿಸಿವೆ. ಗ್ರಾಮ ವಾಸ್ತವ್ಯ, ಯುವ ಸಂವಾದ, ನಾಟಕ ಪ್ರದರ್ಶನಗಳ ಮೂಲಕ ಗಾಂಧೀ ಮೌಲ್ಯಗಳು ಜೀವಂತ ಅನುಭವವಾಗಿ ಮೂಡಿಬಂದವು.

ಇದೀಗ ರಾಜ್ಯದಲ್ಲಿ ಒಂಬತ್ತು ಜಿಲ್ಲಾ ಸರ್ವೋದಯ ಮಂಡಲಗಳು ಕಾರ್ಯನಿರ್ವಹಿಸುತ್ತಿದ್ದು ಪರಿಸರ ಸಂರಕ್ಷಣೆ, ಮಹಿಳಾ ಶಕ್ತೀಕರಣ, ವಿದ್ಯಾರ್ಥಿ ಅರಿವು ಮತ್ತು ಗ್ರಾಮೀಣ ಹಕ್ಕು  ಹೋರಾಟಗಳಲ್ಲಿ ಸಕ್ರಿಯವಾಗಿವೆ.

 

ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು ಮೂರು ಲಕ್ಷ ರೂ.ಗಳ ಆದಾಯದೊಂದಿಗೆ ಸಂಸ್ಥೆ ತನ್ನ ಕಾರ್ಯಕ್ರಮಗಳನ್ನು  ಸಂಪೂರ್ಣವಾಗಿ ಸ್ವಾವಲಂಬನೆಯೊಂದಿಗೆ ನಡೆಸಿದ್ದು, ಶಿಕ್ಷಣ ಮತ್ತು ಸಾಮಾಜಿಕ ಮೌಲ್ಯಗಳ ಪ್ರಸಾರಕ್ಕೆ ಬಹುಪಾಲು ವೆಚ್ಚ ಮೀಸಲಿಟ್ಟಿರುವುದು ಗಮನಾರ್ಹವಾಗಿದೆ.

“ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೌಲ್ಯಗಳ ಬೀಜ ಬಿತ್ತಿದರೆ  ಸಮಾಜ ತಾನೇ ಬದಲಾಗುತ್ತದೆ” ಎಂಬ ನಂಬಿಕೆಯಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸರ್ವೋದಯ ಮಂಡಲ, ಗಾಂಧೀ ಚಿಂತನೆಯ ನವ ಪುನರುತ್ಥಾನದ ಕೇಂದ್ರವಾಗಿ ರೂಪುಗೊಳ್ಳುತ್ತಿದೆ ಎಂದು ಸಾಮಾಜಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಜ.30 ರಂದು ಕಲಬುರಗಿಯಲ್ಲಿ ರಾಷ್ಟ್ರೀಯ ಸರ್ವೋದಯ ದಿನಾಚರಣೆ – ಯುದ್ಧ ವೀರರಿಗೆ ಗೌರವ

ಕಲಬುರಗಿ: ಕರ್ನಾಟಕ ಸರ್ವೋದಯ ಮಂಡಳ ಹಾಗೂ  ಹುತಾತ್ಮ ಅಪ್ಪಾರಾವ್ ಪಾಟೀಲ್ ಫೌಂಡೇಶನ್ ವತಿಯಿಂದ ಜನವರಿ 30ರಂದು ನಗರದಲ್ಲಿ ರಾಷ್ಟ್ರೀಯ ಸರ್ವೋದಯ ದಿನ ಹಾಗೂ ಹುತಾತ್ಮರ ದಿನಾಚರಣೆ ನಡೆಯಲಿದೆ.

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಲಾದ ಈ  ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಜಗತ್ ಸರ್ಕಲ್‌ನಿಂದ ಸರ್ದಾರ್ ಪಟೇಲ್ ಚೌಕ್‌ವರೆಗೆ ಫ್ರೀಡಂ ವಾಕ್ ನಡೆಯಲಿದ್ದು, ಸ್ವಾತಂತ್ರ್ಯ ಹೋರಾಟದ ಫೋಟೋ ಪ್ರದರ್ಶನ ಮತ್ತು ಐತಿಹಾಸಿಕ ವಸ್ತುಗಳ ಪ್ರದರ್ಶನ ನಡೆಯಲಿದೆ.

ಶಾಂತಿ ಕಾರ್ಯಕರ್ತ ಇ.ಪಿ. ಮೆನನ್ ಅವರಿಗೆ ರಾಷ್ಟ್ರೀಯ ಸರ್ವೋದಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜೊತೆಗೆ ಶ್ರಮಜೀವಿಗಳು, ಸಮಾಜ ಸೇವಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರಿಗೆ ಗೌರವ ಸಲ್ಲಿಸಲಾಗುವುದು.

ಸರ್ವೋದಯ ಮೌಲ್ಯಗಳು, ದೇಶಭಕ್ತಿ ಮತ್ತು ಸಮಾಜ ಸೇವೆಯ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ಮಹತ್ವದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಲಬುರಗಿ ಉತ್ತರ ಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ ಹುತಾತ್ಮ ಅಪ್ಪಾರಾವ್ ಪಾಟೀಲ ಫೌಂಡೇಶನ್ ಕಾರ್ಯದರ್ಶಿ ಪ್ರೋ ಬಿ.ಎ.ಪಾಟೀಲ್ ಮತ್ತು ಕರ್ನಾಟಕ ಸರ್ವೋದಯ ಮಂಡಳ ಅಧ್ಯಕ್ಷ ಡಾ.ಹೆಚ್.ಎಸ್.ಸುರೇಶ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Latest News

ಕವನ : ಎಡಗೈ ಶಕ್ತಿ

ಎಡಗೈ ಶಕ್ತಿ ಬಲಕ್ಕಿಲ್ಲದ ವೇಗ, ಎಡಕ್ಕಿಹುದು ನೋಡಿ ಯುವರಾಜ್ ಸಿಂಗ್ ನ ಬ್ಯಾಟಿಂಗ್ ಶಕ್ತಿಯಲ್ಲಿ ಹರಿಯಿತು ರನ್ ಮಳೆ ಎಡಗೈಯ ಸವಿನಯ ನಗು ಎಲ್ಲರನು ಮೋಡಿಮಾಡಿದಾಗ ಜಗವೆಲ್ಲ ಕೊಂಡಾಡಿತು ಸಾಧನೆಯನುವಿಷ್ಣುವರ್ಧನ್ ಎಡಗೈ...

More Articles Like This

error: Content is protected !!
Join WhatsApp Group