ಡೋಣಿ ಸಮೀಪ ಕಪ್ಪತಗುಡ್ಡ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠದ ಆವರಣದಲ್ಲಿ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ವನದೇವಿಗೆ ಬೀಜದುಂಡೆಯ ಚರಗ ನಮನ, ಸಸ್ಯ ವೈವಿಧ್ಯತೆಯ ಅಧ್ಯಯನ ಹಾಗೂ ಚಾರಣ ಸಂಭ್ರಮವು ಯಶಸ್ವಿಯಾಯಿತು.
ಮೊದಲೇ ಸಿದ್ಧಪಡಿಸಿಟ್ಟುಕೊಂಡಿದ್ದ ಬೀಜದುಂಡೆಗಳನ್ನು ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ವಿದ್ಯಾರ್ಥಿನಿಗಳಾದ ಶ್ರೀಲೇಖಾ ಮತ್ತು ಸಹನಾರಿಗೆ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಪ್ಪತಗುಡ್ಡ ಶ್ರೀ ನಂದಿವೇರಿ ಮಠದ ಸಮೀಪದ ಬಂಗಾರ ಕೊಳ್ಳದ ಆಸುಪಾಸಿನಲ್ಲಿ ಕಪ್ಪತಗುಡ್ಡ ಶ್ರೀ ನಂದಿವೇರಿ ಶ್ರೀ ಮಠ ಹಾಗೂ ದಾಕ್ಷಾಯಿಣಿ ಭಾ ಜಾಬಶೆಟ್ಟಿ ಫೌಂಡೇಶನ್ ಸಹಕಾರದೊಂದಿಗೆ ‘ವನದೇವಿಗೆ ಬೀಜದುಂಡೆ ಚರಗ ನಮನ ಸಲ್ಲಿಸಲಾಯಿತು, ಜೊತೆಗೆ ಆಯೋಜಿಸಲಾಗಿದ್ದ ಚಾರಣದಲ್ಲಿ ಸಸ್ಯಗಳ ಅಧ್ಯಯನ , ಅಪರೂಪದ ಸಸ್ಯಗಳ ಗುರುತಿಸುವಿಕೆ, ಸಂರಕ್ಷಣೆ ಕುರಿತು ನಿವೃತ್ತ ಪ್ರಾಚಾರ್ಯ ಡಾ. ಆರ್.ಎಫ್. ಇಂಚಲ ವಿವರಣೆ ನೀಡಿದರು.
ಕಪ್ಪತಗುಡ್ಡದೊಂದಿಗೆ ಸಮುದಾಯದ ಭಾವಬಂಧ ಬೆಸೆಯುವ ಹಾಗೂ ಸಸ್ಯಾನುಭಾವ ಕುರಿತು ಸ್ವಾಮೀಜಿಯವರು ಆಶೀರ್ವಚನ ನೀಡಿದರು
ಬೀಜದುಂಡೆ ಚರಗ ನಮನ ಕ್ಕಾಗಿ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ವಿ.ವಿ. ಶೀರಿಯವರು ಸಾವಿರ ಬೀಜದುಂಡೆಗಳನ್ನು ಪೂರೈಸಿ ಭಕ್ತಿ ಸೇವೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕ್ಷೇತ್ರ ಭೇಟಿ ಹಾಗೂ ಸಸ್ಯಗಳ ಅಧ್ಯಯನಕ್ಕಾಗಿ ಶಿರಗುಪ್ಪಿಯ “ಕೃಷಿ ಪರಿಕರ ಮಾರಾಟಗಾರರಿಗಾಗಿ ಕೃಷಿ ವಿಸ್ತರಣಾ ಸೇವೆಯ ಡಿಪ್ಲೋಮಾ ಕೋರ್ಸನ ನೂರಾರು ಪ್ರಶಿಕ್ಷಣಾರ್ಥಿಗಳು ಆಗಮಿಸಿ ಚಾರಣದಲ್ಲಿ ಭಾಗವಹಿಸಿ ಕಪ್ಪತಗುಡ್ಡದ ವಿವಿಧ ಭಾಗಗಳಲ್ಲಿ ಸಂಚರಿಸಿ ವನದೇವಿಗೆ ಬೀಜದುಂಡೆ ಅರ್ಪಿಸುವ ಮೂಲಕ ಚರಗ ನಮನ ಸಲ್ಲಿಸಿ ಈ ಮಳೆಗಾಲದಲ್ಲಿ ಸಾವಿರಾರು ಗಿಡ ಮರಗಳ ಬೀಜಾಂಕುರವನ್ನು ಮಾಡಿದರು.
ಭಾಲಚಂದ್ರ ಜಾಬಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿ.ವಿ.ಶೀರಿ. ಮಹಾಂತಪ್ಪ ಪೂಜಾರ, ಔಷಧೀಯ ಸಸ್ಯಗಳ ಕುರಿತು ಸಂಶೋಧನೆ ಮಾಡುತ್ತಿರುವ ಚಂದ್ರಲತಾ, ನಿವೃತ್ತ ಪ್ರಾಧ್ಯಾಪಕ ಬಾಳಗೌಡ ದೊಡಬಂಗಿ, ಆನಂದ ಕರ್ಕಿ, ಕೆಂಪೆಗೌಡ, ಮಲ್ಲಿಕಾರ್ಜುನ, ಮುಂತಾದವರು ಉಪಸ್ಥಿತರಿದ್ದರು.