ಮೂಡಲಗಿ – ಅರಭಾವಿ ವಿಧಾನ ಸಭಾ ಕ್ಷೇತ್ರದ ಪ್ರಮುಖ ನಗರವಾದ ಮೂಡಲಗಿ ನಗರದ ಮಧ್ಯದಲ್ಲಿರುವ ಬಸವ ಮಂಟಪದಲ್ಲಿ ಚುನಾವಣೆಯ ಕೊನೆಯ ಭಾಷಣ ಮಾಡುವವರೇ ಚುನಾವಣೆಯಲ್ಲಿ ಆಯ್ಕೆಯಾಗುತ್ತಾರೆಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಭಿಪ್ರಾಯ ಪಡುತ್ತಾರೆ.
ಇದೀಗ ತಾನೆ ಮುಗಿದ ವಿಧಾನ ಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಬಸವ ಮಂಟಪದ ಮಹತ್ವದ ಬಗ್ಗೆ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು, ಮೂಡಲಗಿಯ ಈ ಬಸವ ಮಂಟಪದಲ್ಲಿ ಚುನಾವಣಾ ಭಾಷಣ ಮಾಡುವ ಅಭ್ಯರ್ಥಿಯೇ ಗೆಲ್ಲುತ್ತಾರೆಂಬುದು ನನ್ನ ಅನಿಸಿಕೆ. ಹಾಗಾಗಿ ನಾನು ಇಲ್ಲಿಯೇ ಕೊನೆಯ ಭಾಷಣ ಮಾಡುತ್ತೇನೆ ಎಂದರು.
ಈ ಮಂಟಪದ ಮಹತ್ವ ಗೊತ್ತಿದ್ದರಿಂದ ವಿರೋಧಿಗಳು ಕೂಡ ಚುನಾವಣಾ ಪ್ರಚಾರದ ಕೊನೆಯ ಭಾಷಣ ಹಮ್ಮಿಕೊಂಡಿದ್ದರು ಆದರೆ ಅವರಿಗೆ ಏನೂ ಗೊತ್ತಿಲ್ಲದೆ ದಿ. ೭ ರಂದು ಪ್ರಚಾರದ ಕೊನೆಯ ದಿನವೆಂದು ತಿಳಿದುಕೊಂಡು ಅವರು ದಿನಾಂಕ ಫಿಕ್ಸ್ ಮಾಡಿದ್ದರು ಆದರೆ ದೇವರು ನಮ್ಮ ಕಡೆ ಇದ್ದಾನೆ ಅದು ದಿ. ೮ ರಂದು ಕೊನೆಯ ದಿನವೆಂದು ಆಯೋಗ ಹೇಳಿ ನಮಗೆ ಪ್ರಚಾರಕ್ಕೆ ಅವಕಾಶ ಕೊಟ್ಟಿತು. ಇದರಿಂದಲೇ ತಿಳಿಯುತ್ತದೆ ದೇವರು ನಮ್ಮ ಕಡೆ ಇದ್ದಾನೆ ಅಂತ ಎಂದು ಬಾಲಚಂದ್ರ ಜಾರಕಿಹೊಳಿ ತಮ್ಮ ಭಾಷಣದಲ್ಲಿ ಹೇಳಿದ್ದರು.
ಜಾರಕಿಹೊಳಿಯವರ ಭಾಷಣದ ಇಂದು ವಿಡಿಯೋ ಇಂದು ಸಿಕ್ಕಿದ್ದು ಮೂಡಲಗಿಯ ಬಸವ ಮಂಟಪದ ಮಹತ್ವದ ಬಗ್ಗೆ ಅವರು ತಿಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅವರು ಅಭಿಪ್ರಾಯ ಪಟ್ಟಂತೆಯೇ ಅವರು ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದು ಬಂದಿದ್ದಾರೆ.
ಇದೇ ಸದವಕಾಶವನ್ನು ಬಳಸಿಕೊಂಡು ಬಾಲಚಂದ್ರ ಜಾರಕಿಹೊಳಿಯವರು ಬಸವ ಮಂಟಪವನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕು. ಮಂಟಪದ ಸುತ್ತ ಮುತ್ತ ಇರುವ ಮೂತ್ರಾಲಯದ ಗಬ್ಬು ವಾಸನೆ ತೊಲಗಬೇಕು. ಹತ್ತಿರವೇ ಇರುವ ಬೆಣ್ಣೆಗುಂಡ ಎಂಬ ಬಾವಿಯನ್ನು ಶಾಸಕರ ನೇತೃತ್ವದಲ್ಲಿ ಪುನರುತ್ಥಾನಗೊಳಿಸುವ ಕಾರ್ಯವಾಗಬೇಕು. ಆ ಭಾವಿಯಲ್ಲಿ ಗಣೇಶ ವಿಸರ್ಜನೆ ಮಾಡಲಾಗುತ್ತದೆ ಆದ್ದರಿಂದ ಭಾವಿಯನ್ನು ಇನ್ನಷ್ಟು ಆಳ ಮತ್ತು ಅಗಲ ಮಾಡಿ ಗಣೇಶ ವಿಸರ್ಜನೆ ಗೆ ಅನುಕೂಲ ಮಾಡಿಕೊಡಬೇಕು. ಬಸವ ಮಂಟಪದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿ ಆಕರ್ಷಕ ಮಾಡುವ ಕಾರ್ಯವನ್ನು ಪುರಸಭೆಯವರು ವಹಿಸಿಕೊಳ್ಳುವಂತೆ ಶಾಸಕರು ಆದೇಶ ನೀಡಬೇಕು ಎಂಬುದು ಮೂಡಲಗಿ ಜನತೆಯ ಆಶಯವಾಗಿದೆ.
ಉಮೇಶ ಬೆಳಕೂಡ, ಮೂಡಲಗಿ