ಬೆಂಗಳೂರು ಆರ್.ವಿ.ರಸ್ತೆಯ ಬೆಂಗಳೂರು ಉನ್ನತ ಪ್ರೌಢಶಾಲೆಯಲ್ಲಿ ಕರ್ನಾಟಕ ಸರ್ವೋದಯ ಮಂಡಲ ಸಹಯೋಗದೊಂದಿಗೆ ‘ಆದರ್ಶ ವ್ಯಕ್ತಿಯಾಗಿ ಮಹಾತ್ಮ ಗಾಂಧೀಜಿ ಕುರಿತು ವಿಶೇಷ ಉಪನ್ಯಾಸ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕರ್ನಾಟಕ ಸರ್ವೋದಯ ಮಂಡಲದ ಕೋಶಾಧಿಕಾರಿ ವಿರೂಪಾಕ್ಷ ಟಿ. ಹುಡೇದ್‍ರವರು ಗಾಂಧೀಜಿಯವರ ಜೀವದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಲ್ಲಿ ಪ್ರೇರೇಪಿಸಿದರು.
ಖಾದಿ ಗ್ರಾಮೋದ್ಯೋಗದ ಮಹತ್ವ ತಿಳಿಸಿ ಖಾದಿ ಧರಿಸುವಂತೆ ತಿಳಿಸಿದರು. ವಿಜಯಾ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಉತ್ಸಾಹಿ ವಿದ್ಯಾರ್ಥಿನಿ ಕು. ಭುವನೇಶ್ವರಿ ಸಿ.ಎಸ್. ಹಾಗೂ ಕು. ತೇಜಸ್ವಿನಿ ಎಂ ಅಸ್ಕಿ ರವರು ಗಾಂಧೀಜಿಯವರ ಜೀವನದ ಘಟನೆಗಳನ್ನು ಕಥೆಯ ರೂಪದಲ್ಲಿ ಸರಳವಾಗಿ ಮಕ್ಕಳಿಗೆ ತಿಳಿಸಿ, ಅವರ ಮೌಲ್ಯವನ್ನು ಅನುಸರಿಸುವಂತೆ ಕರೆಕೊಟ್ಟರು.
ಕಾರ್ಯದರ್ಶಿ ಡಾ. ಯ.ಚಿ.ದೊಡ್ಡಯ್ಯ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ 75ನೇ ಸರ್ವೋದಯ ದಿನ ವರ್ಷಾಚರಣೆಯ ಅಂಗವಾಗಿ ಯುವಕರಿಂದ ಯುವಕರಿಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧಿಜಿ ಬದುಕು-ಬರಹ-ಸಂದೇಶ ಸಾರುವ ಈ ಅಭಿಯಾನ ಯಶಸ್ವಿಯಾಗಿ ಸಾಗುತ್ತಿದೆ ಎಂದರು.
ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ಬಗ್ಗೆ ಇರುವ ಜ್ಞಾನವನ್ನು ಪರೀಕ್ಷಿಸುವ ಸಲುವಾಗಿ ರಸ-ಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಈ ರಸ-ಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಹುಮಾನವನ್ನು ಗಳಿಸಿದರು.
ವಿಜಯ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗ ಮುಖ್ಯಸ್ಥ ಡಾ.ಗೋಪಾಲಕೃಷ್ಣರವರು ಗಾಂಧೀಜಿಯವರ ಮಂತ್ರವಾದ ಸ್ವದೇಶಿ ಆಂದೋಲಕ್ಕೆ ಭವಿಷ್ಯದ ಪ್ರಜೆಗಳನ್ನು ಕೈಜೋಡಿಸುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಂಗಳೂರು ಉನ್ನತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಸಿ.ಬಿ. ಅಹೋಬಲ ರಾವ್‍ರವರು ಸತ್ಯ, ಅಹಿಂಸೆ, ಪ್ರಾಮಾಣಿಕತೆ ಮುಂತಾದ ಉದಾತ್ತ ಗುಣಗಳು ಸಾಕಾರಮೂರ್ತಿಯಾದ ಗಾಂಧೀಜಿಯವರನ್ನು ಅನುಸರಿಸುವಂತೆ ಉತ್ತೇಜಿಸಿದರು. ಕರ್ನಾಟಕ ಸರ್ವೋದಯ ಮಂಡಲ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಗುರುರಾಜ ಪೋಶೆಟ್ಟಿಹಳ್ಳಿಯವರು ಸ್ವಾಗತಿಸಿದರು.
ಶಿಕ್ಷ್ಷಕಿಯರಾದ ವೀಣಾ ಎನ್.ರವರು ವಂದಿಸಿದರು, ಶೋಭಾ ಪ್ರಾರ್ಥನೆ ನಡೆಸಿಕೊಟ್ಟರು ಜಮುನಾ ರಮೇಶ್‍ರವರು ನಿರೂಪಿಸಿದರು.