ಸಿಂದಗಿ : ಸೂಕ್ತ ಅರಿವಿನ ಮೂಲಕ ತಾವು ಸಂಪಾದಿಸಿದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಕೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಬಿ. ಯಡ್ರಾಮಿ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠ ಶಾಲೆಯ ೮ ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಆದರ್ಶ ವಿದ್ಯಾರ್ಥಿಗಳ ಹಾಗೂ ವಚನ ಸ್ವರ್ಧೆ ವಿದ್ಯಾರ್ಥಿಗಳ ಪ್ರಶಸ್ತಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ತಂತ್ರಜ್ಞಾನ ಹೆಚ್ಚು ಅಭ್ಯಾಸ ಮಾಡಲು ಮುಂದಾಗಬೇಕು ಮುಂದಿನ ವಿದ್ಯಾಭ್ಯಾಸ ಮಾಡಲು ಪ್ರೌಢ ಶಾಲೆಗೆ ಹೋದ ಸಮಯದಲ್ಲಿ ಶಿಸ್ತು, ಸಮಯ ಪ್ರಜ್ಞೆ ಮತ್ತು ಜೀವನದಲ್ಲಿ ಯಶಸ್ಸು ಗಳಿಸಲು ಆತ್ಮವಿಶ್ವಾಸ ಬಹಳ ಪ್ರಾಮುಖ್ಯವೆಂದು ವಿದ್ಯಾರ್ಥಿಗಳಿಗೆ ಕೆಲವು ನಿದರ್ಶನಗಳ ಮೂಲಕ ತಮ್ಮದೇ ಜೀವನದ ಕೆಲವೊಂದು ಅನುಭವದ ಘಟನೆಗಳನ್ನು ವಿವರಿಸಿದರು.
ಶಿಕ್ಷಣ ಸಂಯೋಜಕ ಬಿ ಬಿ ಪಾಟೀಲ, ಕನ್ನೊಳ್ಳಿ ವಲಯದ ಸಿ ಆರ್ ಪಿ ಸೋಮೇಶಗೌಡ ಪಾಟೀಲ ಮಾತನಾಡಿದರು.
ಬಸವನಬಾಗೇವಾಡಿ ತಾಲೂಕಿನ ಹಾಲಿಹಾಳ ಸರಕಾರಿ ಮಾದರಿ ಶಾಲೆಯ ಶಿಕ್ಷಕ ಕೊಟ್ರಯ್ಯ ಹೆಬ್ಬಾಳ ಪವಾಡ ಬಯಲು ಕಾರ್ಯಕ್ರಮ ಮೂಲಕ ಸಮಾಜದಲ್ಲಿರುವ ಮೂಢನಂಬಿಕೆಗಳ ವಿರುದ್ಧ ಯಾವ ರೀತಿಯಾಗಿ ನಾವು ಬದಲಾಗಬೇಕು ಎಂಬುದರ ಬಗ್ಗೆ ಸುಮಾರು ೨೦ಕ್ಕು ಹೆಚ್ಚು ಪವಾಡಗಳನ್ನು ಬಯಲು ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಿದರು ಮತ್ತು ಮಕ್ಕಳಲ್ಲಿ ಮೂಢನಂಬಿಕೆ ತೊಲಗಲು ವಿಜ್ಞಾನ ವಿಷಯ ಆಳವಾಗಿ ಓದುವದು ನಿರಂತರವಾಗಬೇಕು ಸಮಾಜದಲ್ಲಿ ಮನುಷ್ಯನಲ್ಲಿರುವ ಸಂವೇದನೆಗಳು ಅವನ ಹಿಡಿತದಲ್ಲಿದ್ದಾಗ ಮಾತ್ರ ಅವನಿಗೆ ಧನಾತ್ಮಕ ಚಿಂತನೆ ಸಾಧ್ಯವಾಗುತ್ತದೆ. ಕಲಿಕೆ ಎನ್ನುವುದು ನಿರಂತರವಾಗಿ ನಡೆಯುವಂತಹದ್ದು. ಮಹಾನ ವ್ಯಕ್ತಿಗಳ ಜೀವನ ಸಾಧನೆಗಳನ್ನು ಪ್ರತಿಯೊಬ್ಬರು ಅಧ್ಯಯನ ಮಾಡುವ ಮೂಲಕ ಉತ್ತಮ ಮೌಲ್ಯಗಳನ್ನು ಹೊಂದಬೇಕು ಎಂದು ತಿಳಿಸಿದರು.
ಪ್ರಶಸ್ತಿಗೆ ಆಯ್ಕೆಯಾದ ಸಂಪತ್ ದೇವರಮನಿ ಹಾಗೂ ವಿದ್ಯಾಶ್ರೀ ಪಾಟೀಲ ಹಾಗೂ ವಚನ ಸ್ವರ್ಧೆ ಮೂಲಕ ಆಯ್ಕೆಯಾದ ರಾಘವೇಂದ್ರ ಗಡಗಿ, ಅರ್ಚನ ದೇವರಮನಿ, .ಅಕ್ಷತಾ ಕಕ್ಕೇರಿ, ನಾಗಮ್ಮ ಹಂಚನಾಳ, ವಿದ್ಯಾಶ್ರೀ ಹಿರೇಮಠ ಮತ್ತು ಪವಾಡಬಯಲು ಕಾರ್ಯಕ್ರಮ ನೀಡಿರುವ ಶಿಕ್ಷಕ ಕೊಟ್ರಯ್ಯ ಹೆಬ್ಬಾಳ ಅವರಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿ ಗೌರವಿಸಿದರು.
ಮುಖ್ಯಗುರು ನಿಂಗನಗೌಡ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದರು. ಸಿದ್ದಲಿಂಗಪ್ಪ ಪೋದ್ದಾರ, ಬಸವರಾಜ ಅಗಸರ, ಸುಮಂಗಲಾ ಕೆಂಬಾವಿ, ಪಿ ವ್ಹಿ ಕುಲಕರ್ಣಿ, ಶಿವಶರಣ ಕಂಟಿಗೊಂಡ, ದಯಾನಂದ ಅಂಬಿಗೇರ, ಈಶ್ವರಿ ನಾಗಠಾಣ, ಸಿದ್ದು ತಳವಾರ, ಬೋರಮ್ಮ ಬಿರಾದಾರ, ಅರ್ಚನ ಬಿರಗೊಂಡ, ಸೋಮೈಯ್ಯ ಬಿಜಾಪೂರ ವೇದಿಕೆ ಮೇಲೆ ಇದ್ದರು.
ಶಿಕ್ಷಕ ಭಾಗಣ್ಣ ಗೊಲಗೇರಿ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ ಬುಯ್ಯಾರ ನಿರೂಪಿಸಿದರು. ಶಿಕ್ಷಕ ಕೃಷ್ಣ ರಾವ್ ಕುಲಕರ್ಣಿ ವಂದಿಸಿದರು.