ಬೀದರ: ಗಡಿ ಜಿಲ್ಲೆ ಬೀದರ ನಲ್ಲಿ ಬಿಸಿಲಿನ ತಾಪದ ಜೊತೆಯೇ ವಿಧಾನಸಭಾ ಚುನಾವಣೆಯ ಕಾವು ಬಹಳ ಜೋರಾಗಿ ಹೊಡೆಯುತ್ತಿದೆ. ಇಂಥದರಲ್ಲಿ ಆಕಾಂಕ್ಷಿ ಅಭ್ಯರ್ಥಿಗಳ ಚಿತ್ರ ವಿಚಿತ್ರ ನಡವಳಿಕೆಗಳು ಚುನಾವಣೆಗೆ ಒಂದು ರಂಗು ತರುತ್ತಿದೆ.
ಬಿಜೆಪಿ ಪಕ್ಷ ಇನ್ನೂ ಅಭ್ಯರ್ಥಿಗಳ ಟಿಕೆಟ್ ಘೋಷಣೆಯನ್ನೇ ಮಾಡಿಲ್ಲ ಆದರೆ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ, ನಾಮಕರಣ ಮಾಡಿದಂತೆ ವರ್ತಿಸುತ್ತಿರುವ ದಕ್ಷಿಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನ ಗೆಲುವಿಗಾಗಿ ಪಾದಯಾತ್ರೆ ನಡೆಸಿದರು.
ದಕ್ಷಿಣ ಕ್ಷೇತ್ರದ ಬಿಜೆಪಿ ಪಕ್ಷದಿಂದ ಡಾ. ಶೈಲೇಂದ್ರ ಬೇಲ್ದಳೆ ಟಿಕೆಟ್ ಆಕಾಂಕ್ಷೆ ಹೊಂದಿದ್ದಾರೆ. ಕೇಂದ್ರ ನಾಯಕರು ರಾಜ್ಯ ನಾಯಕರು ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂದು ಇನ್ನೂ ನಿರ್ಧಾರ ತೆಗೆದುಕೊಳ್ಳಲು ಸಭೆ ಮೇಲೆ ಸಭೆ ನಡೆಸುತ್ತ ಇದ್ದಾರೆ ಇಂತಹ ಸಂದರ್ಭದಲ್ಲಿ ದಕ್ಷಿಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಗೆಲುವಿಗಾಗಿ ಪಾದ ಯಾತ್ರೆ ಮಾಡುವ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಅಣದೂರ ಗ್ರಾಮದಿಂದ ಹೊನ್ನಕೇರಿ ಕೋರಿಸಿದ್ದೇಶ್ವರ ದೇವಸ್ಥಾನದ ವರೆಗೆ ಸುಮಾರು ಹತ್ತು ಕಿಮೀ ವರೆಗೆ ಪಾದ ಯಾತ್ರೆ ಮಾಡಿದ ಅಭಿಮಾನಿಗಳು ಹೊನ್ನಕೇರಿ ದೇವರಿಗೆ ವಿಶೇಷ ಪೂಜೆ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕ ಬೀದರ್ ದಕ್ಷೀಣ ಕ್ಷೇತ್ರ ಅಭ್ಯರ್ಥಿ ಡಾ. ಶೈಲೇಂದ್ರ ಬೆಲ್ದಾಳೆ ಅವರ ಗೆಲುವಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಘಟನೆಯೇ ಸದರಿ ಕ್ಷೇತ್ರದಲ್ಲಿ ಡಾ. ಶೈಲೇಂದ್ರ ಅವರ ವರ್ಚಸ್ಸು ಸ್ಥಾಪಿಸಲಿದ್ದು ಪಕ್ಷದ ಹೈಕಮಾಂಡ್ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆಯೆಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ