ಸಿಂದಗಿ: ಮತಕ್ಷೇತ್ರದಲ್ಲಿ ಯಾರೇ ಶಾಸಕರಾಗಲಿ ಪಟ್ಟಣದ ಅಭಿವೃದ್ಧಿಗೆ ಅನುದಾನ ತರುವುದು ಅವರ ಆದ್ಯ ಕರ್ತವ್ಯ. ಅದರಲ್ಲಿ ಅವರ ಅವಧಿಯಲ್ಲಿ ಕೆರೆ ನಿರ್ಮಾಣಕ್ಕೆ ಅನುದಾನ ನೀಡಿರಬಹುದು ಅದನ್ನೆ ನನ್ನ ಸಾಧನೆ ಎಂದು ಬಿಂಬಿಸುತ್ತಿರುವುದು ತಪ್ಪು. ಮಾಜಿ ಮಂತ್ರಿ ಆರ್.ಬಿ.ಚೌಧರಿ ಹಾಗೂ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ಕೂಡಾ ಕಾರಣೀಭೂತರು ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರೊಬ್ಬರೇ ಕಾರಣರಲ್ಲ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣಾ ರಾವೂರ ಅವರು ಚಾಟಿ ಬಿಸಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆದರೆ ಕೆರೆ ಕೆಳಗಿನ ಭಾಗದಲ್ಲಿರುವ ಉದ್ಯಾನವನಕ್ಕೆ ಶ್ರೀ ಶಾಂತವೀರ ಸ್ವಾಮೀಜಿ ಅವರು ಹೆಸರಿಟ್ಟು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಹಳೇ ಎಸ್.ಬಿ.ಐ ರಸ್ತೆಗೆ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ಹೆಸರಿಟ್ಟು ಕೆರೆಗೆ ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ಹೆಸರಿಡಬೇಕು ಎನ್ನುವ ಮುಂದಾಲೋಚನೆಯಲ್ಲಿಯೇ ಈ ನಿರ್ಧಾರಕ್ಕೆ ಕೈ ಹಾಕಿರಬಹುದಲ್ಲ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಅವರು ಅಧಿಕಾರ ದುರುಪಯೋಗ ಪಡಿಸಿಕೊಳ್ಳದೇ ಕೆರೆಗೆ ದಿ. ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ಹೆಸರಿಡಲು ಮುಂದಾಗದೇ ಇಡೀ ದೇಶಾದ್ಯಂತ 80 ಸಂಸ್ಥೆಗಳನ್ನು ಪ್ರಾರಂಭಿಸಿ ಶಿಕ್ಷಣದ ಕ್ರಾಂತಿಯ ಮೂಲಕ ಹೆಸರು ಮಾಡಿದ ಡಾ. ತೋಂಟದ ಶ್ರೀಗಳ ಹೆಸರಿಡಬೇಕು ಎಂದು ಆಗ್ರಹಿಸಿದರು.
ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ಪಟ್ಟಣದ ಜನರಿಗೆ ಕುಡಿಯುವ ನೀರು ಕೊರತೆಯಾಗಬಾರದು ಎಂದು ಸರಕಾರ ಮಟ್ಟದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಕಾಲುವೆಗೆ ನೀರು ಹರಿಸಿದ್ದೇವೆ ಆದರೆ ಪುರಸಭೆ ಅಧಿಕಾರಿಗಳ ನಿರ್ಲಕ್ಷತನದಿಂದ ನೀರು ಪೋಲಾಗಿ ಹರಿಯುತ್ತಿವೆ ಆದಾಗ್ಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಅಕ್ರಮ ನಳಗಳನ್ನು ಸಕ್ರಮಗೊಳಿಸಿ ಎಂದು ಹಲವಾರು ಬಾರಿ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರು ಕೂಡಾ ಇನ್ನೂವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ ಎನ್ನುವುದನ್ನು ಮರೆತು ರಾಜಕಾರಣ ಮಾಡುವುದು ಸರಿಯಲ್ಲ ಸ್ಥಳೀಯ ಪುರಸಭೆಯಲ್ಲಿ ಮೂರು ಸದಸ್ಯರನ್ನು ಹೊಂದಿದೆ. ಪಟ್ಟಣದ ಅಭಿವೃದ್ಧಿಯಲ್ಲಿ ಪುರಸಭೆ ಅಧ್ಯಕ್ಷರು ಹಿಂದೇಟು ಹಾಕಿದರೆ ಅವರ ವಿರುದ್ಧ ಹೋರಾಟ ಮಾಡಲು ಹಿಂಜರಿಯುವುದಿಲ್ಲ. ಇದನ್ನೆಲ್ಲ ನೋಡಿದರೆ ಸಿಂದಗಿ ಪುರಸಭೆ ಮುಖ್ಯಾಧಿಕಾರಿಗಳು ಬರುವಾಗ ತೆಳ್ಳಗೆ ಇರುತ್ತಾರೆ ಆದರೆ ಹೋಗಬೇಕಾದರೆ ದಪ್ಪಗಾಗಿ ಹೋಗುತ್ತಾರೆ ಇದುವೇ ಕಾರಣ ಇರಬಹುದು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಆಶ್ರಯ ಸಮಿತಿ ನಾಮ ನಿರ್ದೇಶನ ಸದಸ್ಯ ರಾಕೇಶ ಕಂಟಿಗೊಂಡ ಜು. 12 ರಂದು ನಡೆಯಲಿರುವ ಪುರಸಭೆ ಸಾಮಾನ್ಯ ಸಭೆಯ ಅಜಂಡಾ ಓದುವ ಮೂಲಕ ಕೆರೆಗೆ ನಾಮಕರಣ, 2021ನೇ ಸಾಲಿನ ಜಮಾ-ಖರ್ಚು ಹಾಗೂ ಕ್ರಿಯಾ ಯೋಜನೆಗಳ ಕುರಿತು ಅನುಮೋದನೆ ಮತ್ತು ಹೊಸ ಲೇಔಟಗಳ ಮಂಜೂರಾತಿ, ನಿರ್ಮಾಣಗೊಂಡ ಲೇಔಟಗಳ ಅಭಿವೃದ್ಧಿಗೆ ಲೇಔಟ ಮಾಲೀಕರಿಗೆ ನೊಟೀಸ ಸೇರಿದಂತೆ 12 ಕಡತಗಳ ಅಜೆಂಡಾ ಓದಿದರು. ಅಲ್ಲದೆ ಪುರಸಭೆಯಲ್ಲಿ ಏಜೆಂಟರ ಹಾವಳಿ ಹೆಚ್ಚಿದ್ದು ಇದರ ಬಗ್ಗೆ ಮುಖ್ಯಾದಿಕಾರಿಗಳು ನಿಗಾ ವಹಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಈ ಸಂದರ್ಭದಲ್ಲಿ ಹಿರಿಯ ಧುರೀಣ ಎಂ.ಎಸ್.ಮಠ, ಕಾಜು ಬಂಕಲಗಿ, ಸುದರ್ಶನ ಜಿಂಗಾಣಿ, ಮಲ್ಲು ಪೂಜಾರಿ, ಅನುಸೂಯಾ ಪರಗೊಂಡ, ಶಿವಕುಮಾರ ಬಿರಾದಾರ ಸೇರಿದಂತೆ ಇನ್ನಿತರು ಇದ್ದರು.
ವರದಿ: ಪಂಡಿತ್ ಯಂಪೂರೆ, ಸಿಂದಗಿ