ನಾಡಿನ ಶಿಕ್ಷಕರ ಕಣ್ಮಣಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು

0
619

ಮೈಸೂರು: ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ವತಿಯಿಂದ ತುಮಕೂರಿನ ಸಿದ್ದಗಂಗಾ ಮಠದ ಉದ್ದಾನೇಶ್ವರ ಭವನದಲ್ಲಿ ನಡೆದ “ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ 2022” ನ್ನು ತುಮಕೂರು ಗ್ರಾಮಾಂತರ ಶಾಸಕರಾದ ಡಿ.ಸಿ,ಗೌರಿಶಂಕರ ಅವರು ಉದ್ಘಾಟಿಸಿ ಮಾತನಾಡಿದರು.

ನಾಡಿನಲ್ಲಿ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸುವದು ಪುಣ್ಯದ ಕೆಲಸ. ಅವರಲ್ಲಿಯ ಪ್ರತಿಭೆಗೆ ರಾಜ್ಯ ಮಟ್ಟದಲ್ಲಿ ಅನೇಕ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ, ಈ ಪವಿತ್ರ ಭೂಮಿಯಲ್ಲಿ ವಿಜೇತರೆಲ್ಲರಿಗೂ ಒಂದು ಲಕ್ಷದ ಎಂಬತ್ತು ಸಾವಿರದಷ್ಟು ಹಣವನ್ನು ಬಹುಮಾನದ ರೂಪದಲ್ಲಿ ನೀಡುತ್ತಿರುವದು ಇಡೀ ರಾಜ್ಯದಲ್ಲಿಯೇ ಇದೇ ಮೊಟ್ಟಮೊದಲು ಆಗಿದೆ.

ಅಂತಹ ಅಮೋಘ ಕಾರ್ಯದಲ್ಲಿ ಸದ್ದಿಲ್ಲದೇ ತನ್ನನ್ನು ತಾನು ತೊಡಗಿಸಿಕೊಂಡ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ನಿಜಕ್ಕೂ ಶಿಕ್ಷಕರ ಪಾಲಿಗೆ ವರದಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಕರೋನದ ಪರಿಸ್ಥಿತಿಯಲ್ಲಿ ವಿವಿಧ ಸಮಿತಿಗಳ ಅಡಿಯಲ್ಲಿ ಪ್ರತಿಭಾ ಪರಿಷತ್ತು ರಾಜ್ಯದ ಶಿಕ್ಷಕರಿಗೆ ಹತ್ತು ಹಲವು ವೈಶಿಷ್ಟ್ಯಪೂರ್ಣ ಸ್ಪರ್ಧಾ ಚಟುವಟಿಕೆಗಳನ್ನು ಏರ್ಪಡಿಸಿತ್ತು. ಅಲ್ಲಿಯ ವಿಜೇತರಿಗೆ ಈ ಶೈಕ್ಷಣಿಕ ಸಮ್ಮೇಳನದಲ್ಲಿ ನಗದು ಬಹುಮಾನ, ಸರ್ಟಿಫಿಕೇಟ್ ನೀಡುವ ಜೊತೆಗೆ ಸತ್ಕರಿಸಿ ಸನ್ಮಾನಿಸಲಾಯಿತು. ಈ ಬಹುಮಾನದ ಒಟ್ಟು ಮೊತ್ತ 1 ಲಕ್ಷದ 80 ಸಾವಿರ ಅನ್ನೋದು ಹೆಮ್ಮೆಯ ವಿಷಯವಾಗಿದೆ. ಇಂತಹ ಹೊಸ ಪ್ರಯೋಗಕ್ಕೆ ಕೈಹಾಕಿ ಪ್ರತಿಭಾ ಪರಿಷತ್ತು ಯಶಸ್ವಿಯಾಗಿದ್ದು, ಇಡೀ ರಾಜ್ಯದಲ್ಲಿಯೇ ಶಿಕ್ಷಕರ ಕಣ್ಮಣಿಯ ಸಂಘಟನೆ ಎಂದೆನಿಸಿಕೊಡಿದೆ.

ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಹಂತದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಕರ ಸಂಘಟನೆಯಾಗಿರುವ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್(ರಿ),ಮೈಸೂರು ತನ್ನ “ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ-2022″ವನ್ನು 24 ಜುಲೈ 2022 ರಂದು ಭಾನುವಾರ ಬೆಳಿಗ್ಗೆ 9.30 ಕ್ಕೆ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಉದ್ದಾನೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ನಾಡಿನ ಪ್ರತಿಯೊಂದು ಜಿಲ್ಲೆ-ತಾಲೂಕುಗಳಿಂದ ಸಾವಿರಾರು ಶಿಕ್ಷಕರು ಭಾಗವಹಿಸಿದ್ದು, ಅವಿಸ್ಮರಣೀಯವಾಗಿದೆ.

ಡಾ.ಎಸ್ ರಾಧಾಕೃಷ್ಣನ್ ಪ್ರಶಸ್ತಿ, ಶಿಕ್ಷಣ ಚೇತನ ಪ್ರಶಸ್ತಿ, ಗುರು ಪುರಸ್ಕಾರ, ಗುರು ಶ್ರೇಷ್ಠ ಪ್ರಶಸ್ತಿ ಪುರಸ್ಕಾರ, ಜನಸೇವಾ ರತ್ನ ಪ್ರಶಸ್ತಿ, ಶಿಕ್ಷಣ ಸಾರಥಿ ಪ್ರಶಸ್ತಿ- ಎಂಬ ಅನೇಕ ಬಗೆಯ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನಾಡಿನ 200 ಕ್ಕೂ ಅಧಿಕ ವಿವಿಧ ಸಾಧಕರಿಗೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಪರಮಪೂಜ್ಯ ಡಾ.ಸದಾಶಿವ ಶಿವಾಚಾರ್ಯ ಸ್ವಾಮಿಗಳು ಹಿತ್ತಲಹಳ್ಳಿ ಮಠ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ, ಚಲನಚಿತ್ರ ನಟ ನಿರ್ಮಾಪಕ ಹಾಗೂ ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸಂಪಾದಕರಾದ ಗಂಡಸಿ ಸದಾನಂದಸ್ವಾಮಿ, ಬೆಂಗಳೂರಿನ ಉದ್ಯಮಿ ಹಾಗೂ ನವ್ಯ ಕನ್ ಸ್ಟ್ರಕ್ಷನ್ ಮಾಲೀಕರಾದ ಟಿ ಎಸ್ ಭಾಗ್ಯಲಕ್ಷ್ಮೀ ಲಿಂಗರಾಜು, ಪ್ರತಿಭಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಪಿ ಮಹೇಶ, ಬೆಂಗಳೂರು ಉತ್ತರ ಜಿಲ್ಲೆಯ ಯಲಹಂಕದ ಕೆ ಬಿ ಎಂ ಬ್ಲಾಸಂ ಪಬ್ಲಿಕ್ ಶಾಲೆ ಹಾಗೂ ಅಕ್ಕಲಕ್ಕಮ್ಮ ಬೆಟ್ಟೇಗೌಡ ಎಜುಕೇಶನ್ ಟ್ರಸ್ಟ್ ನ ಚೇರ್ಮನ್ ಕೆ ಬಿ ಮಹಾದೇವಯ್ಯ, ಚಿತ್ರರಂಗದ ಹಿರಿಯ ನಟ ಕರಿಸುಬ್ಬು, ಹಿರಿಯ ಹಾಸ್ಯ ಕಲಾವಿದರಾದ ಎಂ ಎನ್ ಸುರೇಶ, ನಟ ಸಾಯಿ ಪ್ರಕಾಶ, ಚಲನಚಿತ್ರ ನಿರ್ದೇಶಕ ನೀನಾಸಂ ಮಂಜು, ಸೋಮೇಶ ನವೋದಯ, ನಟಿ ನಿರ್ಮಾಪಕಿ ಇಳಾ ವಿಟ್ಲ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಶಾಲೆ ಹಾಗೂ ಶಿಕ್ಷಣ ಇಲಾಖೆಯ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಿ ಆರ್ ಪಿ ಗಳನ್ನು ಪ್ರತಿ ತಾಲೂಕಿಗೆ ಒಬ್ಬರಂತೆ ಆಯ್ಕೆಮಾಡಿ “ರಾಜ್ಯ ಮಟ್ಟದ ಶಿಕ್ಷಣ ಸಾರಥಿ” ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು, ನಾಡಿನ ಸಮಸ್ತ ಶಿಕ್ಷಕ- ಸಿ ಆರ್ ಪಿ- ಬಿ ಆರ್ ಪಿ- ಉನ್ನತ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇಂಥಹ ಪ್ರಭುದ್ಧತೆಯ ಕಾರ್ಯಗಳಿಗೆ ಪ್ರತಿಭಾ ಪರಿಷತ್ತು ಸದಾ ಮುಂದಡಿ ಇಡಲಿ ಎಂದು ರಾಜ್ಯದ ಶಿಕ್ಷಕರ ಸಹೃದಯತೆಯ ಕಾಳಜಿಯಾಗಿದೆ.

ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಪಿ ಮಹೇಶ, ರಾಜ್ಯ ಉಪಾಧ್ಯಕ್ಷರಾದ ವಿ ಜಿ ಅಗ್ರಹಾರ ಹಾಗೂ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷಕುಮಾರ ಎಸ್ ಬಂಡೆ, ರಾಜ್ಯ ಕೋಶಾಧ್ಯಕ್ಷರಾದ ಎನ್ ಚಲುವೇಗೌಡ, ಮತ್ತು ರಾಜ್ಯ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಚಂದ್ರಶೇಖರ ನಾಯಕ ಮತ್ತು ಅನೇಕ ರಾಜ್ಯ ಪದಾಧಿಕಾರಿಗಳು ಭಾಗವಹಿಸಿದ್ದರು.