ಕನ್ನಡ ಸಾಹಿತ್ಯ ಪರಿಷತ್ತಿನ ಪರಿಮಳ ಪ್ರತಿ ಗ್ರಾಮಗಳಿಗೂ ಪಸರಿಸಲಿ – ಎನ್.ಆರ್.ಠಕ್ಕಾಯಿ

Must Read

ಪರಿಷತ್ತಿನ ಸದಸ್ಯರಾಗುವುದು ಹೆಮ್ಮೆಯ ಸಂಗತಿ

ಬೆಳಗಾವಿ: ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಪರಿಮಳ ಪ್ರತಿ ಗ್ರಾಮಗಳಿಗೂ ಪಸರಿಸಲಿ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು.

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದಲ್ಲಿ ಸಂಸ್ಥಾಪನಾ ದಿನ ಅಂಗವಾಗಿ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಚಾಲನೆಯಿಂದ 1915 ರಲ್ಲಿ ಸ್ಥಾಪಿತವಾಗಿ ಇಂದು 111 ರ ಸಂಭ್ರಮದಲ್ಲಿರುವ ಪರಿಷತ್ತಿನ ಸದಸ್ಯರಾಗುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.

ಕನ್ನಡ ನಾಡು, ನುಡಿ, ಸಾಹಿತ್ಯ, ಕಲೆ, ಸಂಸ್ಕೃತಿಗಳ ಸಂರಕ್ಷಣೆಗಾಗಿ ಹುಟ್ಟಿಕೊಂಡ ಸಂಸ್ಥೆಗೆ ಮೈಸೂರಿನ ಅಂದಿನ ದಿವಾನರಾದ ಸರ್. ಎಂ.ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆಯೂ ಅಪಾರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಮದುರ್ಗ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಪಾಂಡುರಂಗ ಜಟಗನ್ನವರ ಮಾತನಾಡಿ, ಗಡಿಭಾಗಗಳಲ್ಲಿ ಕನ್ನಡವನ್ನು ಬಳಸಿ, ಉಳಿಸುವ ಹೊಣೆಗಾರಿಕೆ ನಮ್ಮದಾಗಿದೆ ಎಂದರು.

ಸುಮಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ತನ್ನದೇ ಆದ ಹಲವು ವೈಶಿಷ್ಟ್ಯಗಳನ್ನು ಹೊಂದಿರುವುದು ನಮಗೆಲ್ಲ ಅಭಿಮಾನದ ವಿಷಯ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಂ.ವಾಯ್.ಮೆಣಸಿನಕಾಯಿ ಮಾತನಾಡಿ ಕನ್ನಡ ರತ್ನಕೋಶ ನಿಘಂಟು ಪ್ರತಿಯೊಬ್ಬರ ಮನೆಯಲ್ಲಿ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮೂಡಲಗಿ ಕಸಾಪ ತಾಲೂಕಾಧ್ಯಕ್ಷ ಡಾ. ಸಂಜಯ ಸಿಂಧಿಹಟ್ಟಿ, ಗೋಕಾಕ ಕಸಾಪ ತಾಲೂಕಾಧ್ಯಕ್ಷೆ ಭಾರತಿ ಮದಬಾವಿ, ಕಿತ್ತೂರು ಕಸಾಪ ತಾಲೂಕಾಧ್ಯಕ್ಷ ಎಸ್.ಬಿ.ದಳವಾಯಿ, ನಿಪ್ಪಾಣಿ ಕಸಾಪ ತಾಲೂಕಾಧ್ಯಕ್ಷ ಈರಣ್ಣ ಶಿರಗಾವಿ, ಬೆಳಗಾವಿ ಕಸಾಪ ತಾಲೂಕಾಧ್ಯಕ್ಷ ಸುರೇಶ ಹಂಜಿ, ಯರಗಟ್ಟಿ ಕಸಾಪ ತಾಲೂಕಾಧ್ಯಕ್ಷ ತಮ್ಮಣ್ಣ ಕಾಮನ್ನವರ, ರಾಯಬಾಗ ಕಸಾಪ ತಾಲೂಕಾಧ್ಯಕ್ಷ ಆರ್.ಎಂ.ಪಾಟೀಲ್, ಚಂದ್ರಶೇಖರ ಅರಭಾವಿ, ವಿ.ಜಿ.ಅಂತ್ರೆ ಉಪಸ್ಥಿತರಿದ್ದರು. ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಸುನಿಲ್ ಹಲವಾಯಿ ಸ್ವಾಗತಿಸಿ ನಿರೂಪಿಸಿದರು. ಶಿವಾನಂದ ತಲ್ಲೂರು ವಂದಿಸಿದರು.

Latest News

ಪಾಪನಾಶ ದೇವಾಲಯ ಪ್ರಕರಣ ; ಏಕವಚನದಲ್ಲಿ ಖಂಡ್ರೆ ನಿಂದಿಸಿದ ಖೂಬಾ

ಬೀದರ - ನಗರದ ಪಾಪನಾಶ ದೇವಾಲಯದಲ್ಲಿ ಮಹಾಪೂಜೆ ಕುರಿತಂತೆ ಕೈ ಕಮಲ ಜಟಾಪಟಿಯು ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಇಳಿದಿದ್ದು ತಮಗೆ ಶಿವನ ದರ್ಶನಕ್ಕೆ ಅವಕಾಶ ಕೊಡಲಿಲ್ಲವೆಂದು...

More Articles Like This

error: Content is protected !!
Join WhatsApp Group