
ಸಿಂದಗಿ: ಸರ್ವರಿಗೂ ಸಮಾನತೆಯ ದಾರಿ ತೋರಿದ ಮಹಾನ್ ಸಂತ ಶ್ರೇಷ್ಠ ಕನಕದಾಸರ ಆದರ್ಶಗಳನ್ನು ನಾವು ನೀವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ನೂತನ ಶಾಸಕ ರಮೇಶ ಭೂಸನೂರ ಹೇಳಿದರುು.
ಪಟ್ಟಣದ ಕನಕದಾಸ ವೃತ್ತದಲ್ಲಿ ಹಾಲುಮತ ಸಮಾಜ ಬಾಂಧವರು ಹಮ್ಮಿಕೊಂಡ ಭಕ್ತ ಕನಕದಾಸರ 534 ನೇ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ವೃತ್ತಕ್ಕೆ ಪೂಜೆ ನೆರವೇರಿಸಿ ಮಾತನಾಡಿ, ಶ್ರೇಷ್ಠ ಸಂತ ಕನಕರು ತಮ್ಮದೇ ಆದ ವಚನ ಮತ್ತು ಸಾಹಿತ್ಯದ ಮೂಲಕ ಈ ನಾಡಿಗೆ ಕೊಟ್ಟಿರುವ ಕೊಡುಗೆ ಅಪಾರ ಅದಕ್ಕೆ ವಿರುದ್ದವಾಗಿ ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಸಮಾನತೆಯ ಸಂದೇಶ ನೀಡಿ ಮನುಷ್ಯ ಯಾವ ರೀತಿ ಬದುಕಬೇಕು ಎನ್ನುವುದು ಕನಕರ ವಚನಗಳು ಎತ್ತಿ ಹೇಳುತ್ತಿವೆ ಸಂತರ ವಚನಗಳನ್ನು ಓದಿ ಅವರ ತತ್ವಗಳನ್ನು ಅನುಸರಿಸಬೇಕಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, ಕನಕದಾಸರ ಬದುಕು ನಮ್ಮೆಲ್ಲರ ಬದುಕಿಗೆ ಆದರ್ಶದ ಹೊತ್ತಿಗೆ, ಅದನ್ನು ಬಿಡಿಸಿ ಎಣಿಸಿ ಪೋಣಿಸಿದ ಪದಗಳನ್ನು ಅಥೈಸಿಕೊಂಡರೆ ನಾವ್ಯಾರೆಂಬುದು ನಮಗರಿವಾಗುವುದು. ಕನಕದಾಸರು ಯಾವುದೋ ಒಂದು ಜಾತಿ ಇಲ್ಲವೇ ಜನಾಂಗದ ಅಭಿಮಾನಕ್ಕೆ ಕಟ್ಟುಬೀಳಬೇಕಾದ ಕವಿಗಳ ಸಾಲಿಗೆ ಸೇರಿದವರಲ್ಲ. ಕನಕ ಕನ್ನಡ ಭಾಷಾ ಚಿಂತಕ, ಕನ್ನಡಿಗರ ಬದುಕುಗಳ ನಡುವಿನ ಬಿಕ್ಕಟ್ಟೊಳಗಿಂದ ಹುಟ್ಟಿದ, ನೊಂದ ಬದುಕುಗಳ ನಡುವಿನಿಂದ ಮೇಲೆದ್ದು ಬಂದ ಸಂತ. ವೈಚಾರಿಕ ಪ್ರಗತಿಪರ ನಿಲುವನ್ನು ಇತರರಲ್ಲಿ ಕಾಣಲು ಬರುವುದಿಲ್ಲ. ಕನಕದಾಸರನ್ನು ಜನಾಂಗೀಯ ವ್ಯಕ್ತಿಯನ್ನಾಗಿ ಭಾವಿಸದೆ ಪರಮಹರಿಭಕ್ತರೆಂದು ಅರಿತಾಗ ನಮ್ಮಲ್ಲೂ ಆ ದೈವೀಕ ಭಾವ ಜಾಗೃತವಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕಾ ದಂಡಾಧಿಕಾರಿ ಸಂಜೀವ್ ಕುಮಾರ್ ದಾಸರ ಮಾತನಾಡಿ, ಸಂತರ ಅನುಯಾಯಿಗಳು ಹಾಲುಮತ ಬಾಂಧವರು ಪ್ರತಿ ವರ್ಷ ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಡೊಳ್ಳು ವಾಲಗದೊಂದಿಗೆ ಅದ್ಧೂರಿಯಾಗಿ ಆಚರಿಸುತ್ತಿದ್ದೀರಿ ನಾನು ಕೂಡ ಕನಕರ ಅನುಯಾಯಿ ಆಗಿದ್ದೇನೆ ಮುಂಬರುವ ವಿಧಾನ ಪರಿಷತ್ ಚುನಾವಣೆ ನಿಮಿತ್ತ ಸರಕಾರ ನೀತಿ ಸಂಹಿತೆ ಜಾರಿಗೊಳಿಸಿದೆ ಕಾರಣ ಈ ವರ್ಷದ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ ಮುಂಬರುವ ದಿನಗಳಲ್ಲಿ ಸಂತರ ಜಯಂತಿ ವಿಜೃಂಭಣೆಯಿಂದ ಆಚರಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಿಂಬೆ ಅಭಿವೃದ್ಧಿ ರಾಜ್ಯ ಅಧ್ಯಕ್ಷ ಅಶೋಕ್ ಅಲ್ಲಾಪುರ, ಸಿದ್ದು ಬುಳ್ಳಾ, ಕುರಬರ ಸಂಘದ ಅಧ್ಯಕ್ಷ ನಿಂಗಣ್ಣ ಬಿರಾದಾರ್, ಶಿಲ್ಪಾ ಕುದರಗೊಂಡ, ಮಾಜಿ ಅಧ್ಯಕ್ಷ ಶರಣಪ್ಪ ಹಿರೇಕುರುಬರ, ಮಲ್ಲು ಸಾವಳಸಂಗ, ಶ್ರೀಶೈಲ್ ಬೀರಗೊಂಡ, ಸಿದ್ದು ಕೆರಿಗೊಂಡ, ಕುಮಾರ ಹರವಾಳ, ಸಿದ್ದು ಬೀರಗೊಂಡ, ಪ್ರಕಾಶ್ ಹಿರೇಕುರುಬರ, ಸೋಮು ಹೂಗಾರ, ಸೋಮನಗೌಡ ಬಿರಾದಾರ್, ದತ್ತಾತ್ರೇಯ ಯಡಗಿ ಸೇರಿದಂತೆ ಅನೇಕರು ಇದ್ದರು.