ಡಿಸಿಸಿ ಬ್ಯಾಂಕಿನ ಸೇವೆ ಇಡೀ ವರ್ಷವೂ ರೈತರಿಗೆ ಸಿಗಲಿದೆ – ಅಣ್ಣಾಸಾಹೇಬ ಜೊಲ್ಲೆ

Must Read

ಬೆಳಗಾವಿ – ಮುಂದಿನ ಐದು ವರ್ಷದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಅನೇಕ ಹೊಸ ಹೊಸ ಯೋಜನೆಗಳನ್ನು ರೂಪಿಸಿದ್ದು, ರೈತರ ಜೀವನಾಡಿಯಂತೆ ಬ್ಯಾಂಕಿನ ಸೇವೆಯು ಇಡೀ ವರ್ಷವೂ ರೈತ ಬಾಂಧವರಿಗೆ ಸಿಗಲಿದೆ ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಹೇಳಿದರು.

ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದ ಶಂಕರಲಿಂಗ ಮಂಗಲ ಕಾರ್ಯಾಲಯದಲ್ಲಿ ಗುರುವಾರ ರಾತ್ರಿ ಜರುಗಿದ ಹುಕ್ಕೇರಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸೌಹಾರ್ದಯುತ ಸಭೆ ಮತ್ತು ಸತ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದ್ಯದಲ್ಲಿಯೇ ಹೊಸ ಯೋಜನೆಗಳು ಜಾರಿಗೆ ಪ್ರಯತ್ನಿಸಲಾಗುವುದು ಎಂದರು.

ಜಿಲ್ಲಾ ಸಚಿವ ಸತೀಶ ಜಾರಕಿಹೊಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ನನ್ನ ಮುಂದಾಳತ್ವದಲ್ಲಿ ಬ್ಯಾಂಕ್‌ ಆರ್ಥಿಕವಾಗಿ ಬಲಿಷ್ಠಗೊಳ್ಳಲು ಹಾಗೂ ರೈತರ ಮನೆ ಬಾಗಿಲಿಗೆ ಜಾರಿಯಾಗುವ ಯೋಜನೆಗಳು ಸಿಗಲಿವೆ. ಶೀಘ್ರದಲ್ಲಿ ಇವುಗಳ ಅನುಷ್ಟಾನಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.

ಕಳೆದ 42 ವರ್ಷಗಳಿಂದ ಬ್ಯಾಂಕಿಗೆ ನಿರ್ದೇಶಕರಾಗಿ, 22 ವರ್ಷ ಅಧ್ಯಕ್ಷರಾದ ಈ ತಾಲ್ಲೂಕಿನವರಿಂದ ಬ್ಯಾಂಕನ್ನು ಬೆಳೆಸಲಿಕ್ಕೆ ಸಾಧ್ಯವಾಗಲಿಲ್ಲ. ನಮ್ಮ ಜಿಲ್ಲೆಯಲ್ಲಿ 15 ತಾಲ್ಲೂಕು, 18 ಶಾಸಕರು, ಇಬ್ಬರು ಸಂಸತ್ ಸದಸ್ಯರಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಬ್ಯಾಂಕ್ ಬೆಳವಣಿಗೆಯಾಗದೇ ಕೇವಲ 6 ಸಾವಿರ ಕೋಟಿ ರೂಪಾಯಿ ಮಾತ್ರ ಠೇವಣಿಯನ್ನು ಹೊಂದಿದೆ. ಆದರೆ ನಮ್ಮ ನೆರೆಯ ಬಾಗಲಕೋಟೆ, ವಿಜಯಪುರ, ಕೊಲ್ಹಾಪುರ, ಮಂಗಳೂರು ಬ್ಯಾಂಕುಗಳು ಸುಮಾರು 10 ಸಾವಿರ ಕೋಟಿ ರೂಪಾಯಿ ಠೇವಣಿಯನ್ನು ಹೊಂದಿವೆ. ನನ್ನ ಅಧಿಕಾರವಧಿಯಲ್ಲಿ ರೈತರಿಗೆ ಸುಲಭವಾಗಿ ಸರ್ಕಾರದ ಯೋಜನೆಗಳು ಮುಟ್ಟಬೇಕು.ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಿ ಕೆಲಸವನ್ನು ಮಾಡಲಾಗುವುದು. ಮುಂದಿನ ದಿನಗಳಲ್ಲಿ 10 ಸಾವಿರ ಕೋಟಿ ರೂಪಾಯಿ ಠೇವಣಿ ಮಾಡಲು ಪ್ರಯತ್ನಿಸಲಾಗುವುದು. ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಸಾಲವನ್ನು ವಿತರಿಸಲಾಗುವುದು. ಕೃಷಿಯೇತರ ಹಾಗೂ ವಾಣಿಜ್ಯ ಚಟುವಟಿಕೆಗಳು, ಗೃಹ ಸಾಲ, ವಾಹನ ಸಾಲಗಳನ್ನು ಸಹ ನಮ್ಮ ಸಂಸ್ಥೆಯಿಂದ ನೀಡಲಾಗುವುದು. ಟ್ರ್ಯಾಕ್ಟರ್ ಸಾಲವನ್ನು ಸಹ ಶೂನ್ಯ ಬಡ್ಡಿದರದಲ್ಲಿ ರೈತರು ತೆಗೆದುಕೊಳ್ಳಬಹುದು. ಕರ್ನಾಟಕ, ಗೋವಾ, ಪಾಂಡಿಚೇರಿ, ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಖರೀದಿ ಮಾಡಬಹುದು. ಆದರೆ ಸಾಲದ ಭೋಜಾ ಮಾತ್ರ ನಾವು ಏರಿಸುತ್ತೇವೆ ಎಂದು ತಿಳಿಸಿದರು.

ಈಗಾಗಲೇ ಅಧಿಕಾರ ವಹಿಸಿಕೊಂಡ ಬಳಿಕ ಜಿಲ್ಲೆಯಲ್ಲಿರುವ ಎಲ್ಲ ಪಿಕೆಪಿಎಸ್ ಸಂಘಗಳಿಗೆ ಭೇಟಿ ನೀಡಿ ಅಥವಾ ಸಲಹೆ, ಸೂಚನೆಗಳನ್ನು ಪಡೆಯುತ್ತಿದ್ದೇವೆ. ಪಿಕೆಪಿಎಸ್ ಗಳಿಗೆ ಹೆಚ್ಚಿನ ಪತ್ತು ನೀಡಲು ಬದ್ಧರಿದ್ದೇವೆ. ಅದರಲ್ಲೂ ಹುಕ್ಕೇರಿ ತಾಲೂಕಿನ 37 ಸಂಘಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೆರವು ನೀಡಲಾಗುವುದು. ಯಾರಿಗೂ ಅಂಜದೇ ತಮ್ಮ ಕೆಲಸ,ಕಾರ್ಯಗಳನ್ನು ಮಾಡಿಕೊಂಡು ಹೋಗುವಂತೆ ಅವರು ಸಂಘಗಳ ಸದಸ್ಯರಿಗೆ ಅಭಯ ನೀಡಿದರು.

ಕಬ್ಬಿಗೆ 3360 ರೂಪಾಯಿ ನಿಗದಿ
ಹೀರಾ ಶುಗರ್, ಹಾಲಸಿದ್ಧನಾಥ ಮತ್ತು ಸಂಗಮ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ವಾರದೊಳಗೆ ಬಿಲ್ ಪಾವತಿಸಲು ಕ್ರಮ ಕೈಕೊಳ್ಳಲಾಗಿದೆ. ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯು ರೈತರ ಪ್ರತಿ ಟನ್ ಕಬ್ಬಿಗೆ ರೂಪಾಯಿ 3360 ಗಳನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು. ಹೀರಾ ಶುಗರ್ಸ್ ಪ್ರಸ್ತುತ 5500 ಸಾಮರ್ಥ್ಯದ ಕಬ್ಬು ನುರಿಸುವದು ಎರಡ್ಮೂರು ದಿನದಲ್ಲಿ ‌ ಸುಮಾರು 10 ಸಾವಿರ ಕಬ್ಬು ನುರಿಸುವ ಸಾಮರ್ಥ್ಯ ಹೊಂದಲಿದೆ. 1.5 ಲಕ್ಷ ಲೀಟರ್ ಎಥೆನಾಲ್ ಹಾಗೂ ಎರಡು ಪಟ್ಟು ಹೆಚ್ಚಿಗೆ ಕೋ, ಜನರೇಶನ್ ಉತ್ಪಾದನೆ ಆಗಲಿದೆ ಎಂದು ಅವರು ಹೇಳಿದರು.

ಸಂಕೇಶ್ವರ ಭಾಗದ ರೈತರ ಎಲ್ಲ ಕಬ್ಬುಗಳನ್ನು ತೆಗೆದುಕೊಂಡ ಬಳಿಕ ಕಾರ್ಖಾನೆಯನ್ನು ಬಂದ್ ಮಾಡಲಾಗುವುದು. ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು ಎಂದು ಜೊಲ್ಲೆ ತಿಳಿಸಿದರು.

ವೇದಿಕೆಯಲ್ಲಿ ಹಿರಿಯ ಮುಖಂಡ ಎ.ಎಸ್. ಶಿರಕೋಳಿ, ಹೀರಾ ಶುಗರ್ಸ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಶ್ರೀಕಾಂತ ( ಭಂಡು) ಹಥನೂರೆ, ಶಶಿರಾಜ ಪಾಟೀಲ, ಪ್ರಭುದೇವ ಪಾಟೀಲ, ಪರಗೌಡ ಪಾಟೀಲ, ಸುರೇಶ ಹುಣಚ್ಯಾಳಿ, ಸಂತೋಷ ಮುಂಡಸಿ, ಪವನ ಪಾಟೀಲ, ರಿಷಬ ಪಾಟೀಲ, ಮಹಾಂತೇಶ ಮಗದುಮ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಹುಕ್ಕೇರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರು ಸತ್ಕರಿಸಿದರು.

ನಮಗೆ ಮತ ನೀಡಿದ ಮತದಾರರಿಗೆ ನ್ಯಾಯ ದೊರಕಿಸಿಕೊಡುತ್ತೇವೆ. ಯಾವುದೇ ಕಾರಣಕ್ಕೂ ಯಾರಿಗೂ ಅಂಜದೇ ಧೈರ್ಯದಿಂದಿರಿ. ನಿಮ್ಮ ಬೆನ್ನಿಗೆ ನಾವಿರುತ್ತೇವೆ. ನಮ್ಮ ಕಾರ್ಯಕರ್ತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಗುಡುಗಿದರು.

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಹಿಡಿಯುವ ಆಸೆಯು ರೈತರ ಮೂಲಕ ಈಡೇರಿದೆ. ಎಲೆಮುನ್ನೊಳಿ ಗ್ರಾಮದಲ್ಲಿ ನಡೆದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಈ ಮೊದಲೇ ಹೇಳಿದ್ದೇ. ನಾವು ಬಿಡಿಸಿಸಿ ಬ್ಯಾಂಕ್ ಆಡಳಿತ ಚುಕ್ಕಾಣಿ ಹಿಡಿಯುತ್ತೇವೆ ಆಂತ, ಅದರಲ್ಲೂ ಗೋಡೆ ಮೇಲೆ ಬರೆದು ಹೋಗುತ್ತೇನೆಂದು ಮೊದಲೇ ಪ್ರಚಾರ ಭಾಷಣದಲ್ಲಿ ಮಾತನಾಡಿದ್ದೆ ಎಂದು ಹಿಂದಿನ ಘಟನೆಯನ್ನು ಮೆಲುಕು ಹಾಕಿದರು.

ವಿದ್ಯುತ್ ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಬೀಗಬೇಕಾಗಿಲ್ಲ. ನಮ್ಮದು ಸೋಲಾಗಿರಬಹುದು. ಆದರೆ, ನಮ್ಮ ಅಭ್ಯರ್ಥಿಗಳು ಪಡೆದಿರುವ ಮತಗಳ ಪ್ರಮಾಣ ಹೆಚ್ಚಳವಾಗಿದೆ. ಹುಕ್ಕೇರಿ ತಾಲೂಕಿನ ರೈತರ ಪ್ರಗತಿಗೆ ನಾವು ಸದಾ ಬದ್ದರಿದ್ದೇವೆ. ನಾನು, ಸಚಿವ ಸತೀಶ ಜಾರಕಿಹೊಳಿ ಮತ್ತು ಅಣ್ಣಾಸಾಹೇಬ್ ಜೊಲ್ಲೆಯವರು ಸೇರಿ ನಮ್ಮ ಬೆನ್ನು ಹತ್ತಿದವರನ್ನು ಯಾವ ಕಾರಣಕ್ಕೂ ಕೈ ಬಿಡುವುದಿಲ್ಲ. ನಿಮ್ಮ ಜತೆಯಲ್ಲಿ ನಾವು ಸದಾ ಇರುತ್ತೇವೆ‌.

ಬಾಲಚಂದ್ರ ಜಾರಕಿಹೊಳಿ
ಶಾಸಕರು, ಬೆಮುಲ್ ಅಧ್ಯಕ್ಷರು

LEAVE A REPLY

Please enter your comment!
Please enter your name here

Latest News

ವಿಮರ್ಶೆಯಲ್ಲಿ ಸ್ತ್ರೀ ಸಾಹಿತ್ಯಕ್ಕೆ ಅನ್ಯಾಯ ; ವಿಚಾರ ಗೋಷ್ಠಿ,

ವಿಮರ್ಶೆಯಲ್ಲಿ ಸ್ತ್ರೀ ಸಾಹಿತ್ಯಕ್ಕೆ ಅನ್ಯಾಯ ಸಂವಾದ ಹಾಗೂ ಸ್ತ್ರೀಸಂವೇದನಗಳ ಬಗ್ಗೆ ಕವಿಗೋಷ್ಠಿ ಕಾರ್ಯಕ್ರವನ್ನು ಹಾಸನ ಜಿಲ್ಲಾ ಬರಹಗಾರರ ಸಂಘದ ವತಿಯಿಂದ ಡಿ. 07 - ಭಾನುವಾರ...

More Articles Like This

error: Content is protected !!
Join WhatsApp Group