ಸಿಂದಗಿ: ಶಿಕ್ಷಕರು ಜಾತಿ ಭೇದ ಮರೆತು ಎಲ್ಲ ಸಮುದಾಯದ ಮಕ್ಕಳನ್ನು ತಮ್ಮ ಸ್ವಂತ ಮನೆಯ ಮಕ್ಕಳಂತೆ ಭಾವಿಸಿ ಮಕ್ಕಳು ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳಿ ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುತ್ತಿರುವ ಗುರುಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದ ಪ್ರತಿಷ್ಠಿತ ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಆಡಳಿತಾಧಿಕಾರಿ ಎಸ್ ಎಚ್ ದುಳಬಾ ಗುರುಗಳಿಗೆ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಇರುವ ಅಜ್ಞಾನವನ್ನು ಅಳಿಸಿ, ಸುಜ್ಞಾನದ ಬೆಳಕನ್ನು ಚೆಲ್ಲಿ ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಶಿಕ್ಷಕರ ಪಾತ್ರ ಶ್ರೇಷ್ಠವಾದದ್ದು. ಪಾಲಕರು ಶಿಕ್ಷಕರಿಗೆ ಸಹಕಾರ ನೀಡುವುದು ಅತೀ ಅವಶ್ಯವಿದೆ ಎಂದರು.
ವಿಜಯಪುರ ಖ್ಯಾತ ದಂತ ವೈದ್ಯೆ ರೇಖಾ ಪಾಟೀಲ್ ಮಾತನಾಡಿ, ಕೆಲವೊಮ್ಮೆ ಒಂದು ಚಿಕ್ಕ ಸಂಸಾರ ನಡೆಸುವುದು ಕೂಡಾ ಕಷ್ಟಸಾಧ್ಯ ಆಗುತ್ತದೆ ಆದರೆ ಗ್ರಾಮೀಣ ಭಾಗದಲ್ಲಿ ಸುಸಜ್ಜಿತವಾದ ಕಟ್ಟಡ ಸುಂದರವಾದ ಮೈದಾನ ನಿರ್ಮಾಣ ಮಾಡಿ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ ಸಂಸ್ಥೆಯ ಅಧ್ಯಕ್ಷರ ಸಾಧನೆ ಮೆಚ್ಚುವಂತದ್ದು ಗುರುವೃಂದ, ಗುರುಮಾತೆಯರ ಉತ್ತಮ ಬೋಧನೆಯಿಂದ ಪ್ರತಿ ವರ್ಷ ಪರೀಕ್ಷೆಯಲ್ಲಿ ಜಿಲ್ಲೆ ಮತ್ತು ರಾಜ್ಯದ ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕಲ್ಪವೃಕ್ಷ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲು ಕಾರಣಿಕರ್ತರಾದ ಆಡಳಿತ ಅಧಿಕಾರಿ ಎಸ್ ಎಚ್ ದುಳಬಾ ನಿವೃತ್ತ ಶಿಕ್ಷಕರ 75 ನೇ ಹುಟ್ಟುಹಬ್ಬದ ಪ್ರಯುಕ್ತ ಸಂಸ್ಥೆಯ ವತಿಯಿಂದ ಬೆಳ್ಳಿ ಕಿರೀಟ ಹಾಕಿ ಗ್ರಂಥ ತುಲಾಭಾರ ಮಾಡಿದರು ಹಾಗೂ ಸಿಂದಗಿ ಮತ್ತು ಅಲಮೇಲ ತಾಲೂಕಿನ ನಿವೃತ್ತ ಶಿಕ್ಷಕರಿಗೆ ವಿಶೇಷವಾಗಿ ಸನ್ಮಾನಿಸಿದರು.
2022 ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ 720 ಅಂಕಗಳಿಗೆ 583 ಅಂಕಗಳನ್ನು ಪಡೆದು ಸರಕಾರಿ ಕೆ, ಎಂ ಸಿ ಗೆ ಆಯ್ಕೆಯಾಗಿದ್ದ ಕುಮಾರಿ ಅಕ್ಷತಾ ತಳವಾರ ವಿದ್ಯಾರ್ಥಿ ಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವಾರಾಧ್ಯ ಮಳೆಂದ್ರ ಶಿವಾಚಾರ್ಯ ಸಂಸ್ಥಾನ ಮಠ ಅಫ್ಜಲ್ಪುರ್ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ, ಆನಂದ ಭೂಸನೂರ,ಮಾಜಿ ಜಿ ಪಂ ಸದಸ್ಯ ಎನ್ ಆರ್ ತಿವಾರಿ, ಎಸ್ ಬಿ ಕಮತಗಿ, ವಿಶೇಷ ಸನ್ಮಾನಿತರಾದ ಬಿ ಎಲ್ ಡಿ ಸಂಸ್ಥೆಯ ಆಡಳಿತ ಅಧಿಕಾರಿ ಎಂ ಎನ್ ಚೋರಗಸ್ತಿ, ಗ್ರಾ. ಪಂ. ಅಧ್ಯಕ್ಷೆ ಗೌರಮ್ಮ ನಡುವಿನಕೇರಿ, ಉಪಾಧ್ಯಕ್ಷೆ ದೌಲಬಿ ಮುಲ್ಲಾ ಅಕ್ಷತಾ ಬಿ ಎಸ್ ಬಿರಾದಾರ, ಎಸ್ ಎಂ ಲಂಗುಟಿ, ತಳವಾರ, ಎಸ್ ಬಿ ಬಿರಾದಾರ, ಜಿಲಾನಿ ನಾಗಾವಿ ಇದ್ದರು.