ಮೂಡಲಗಿ: ಹಿಡಕಲ್ ಜಲಾಶಯ ಹಾಗೂ ಹಿರಣ್ಯಕೇಶಿ ನದಿಯಿಂದ ಘಟಪ್ರಭಾ ನದಿಗೆ ಹೊರ ಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರವಿವಾರಂದು ಮೂಡಲಗಿ ತಾಲೂಕಿನ ತಿಗಡಿ ಸೇತುವೆಯು ಸಂಪೂರ್ಣ ಜಲಾವೃತಗೊಂಡಿದೆ.
ನೀರು ತಿಗಡಿ ಗ್ರಾಮದೊಳಗೆ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ನದಿ ತೀರದ ಗ್ರಾಮಗಳಿಗೆ ಆಪ್ತ ಸಹಾಯಕ ಭಾಸ್ಕರ್ ರಾವ್ ಅವರು ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸುರಕ್ಷಿತವಾದ ಸ್ಥಳಗಳಿಗೆ ಹೋಗುವಂತೆ ಮನವಿ ಮಾಡಿಕೊಂಡರು.
ಸುಣಧೋಳಿಯ ಜಡಿಸಿದ್ಧೇಶ್ವರ ತೋಟದ ಶಾಲೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಕಾಳಜಿ ಕೇಂದ್ರವನ್ನು ಆರಂಭಿಸಲಾಯಿತು. ಹೆಚ್ಚುತ್ತಿರುವ ಮಳೆಯಿಂದಾಗಿ ಸುಣಧೋಳಿ ಗ್ರಾಮದ ಕೆಲ ಪ್ರದೇಶಗಳು ಜಲಾವೃತಗೊಂಡಿದ್ದು, ಸುರಕ್ಷತೆ ದೃಷ್ಟಿಯಿಂದ ಅಂತಹ ಕುಟುಂಬಗಳಿಗೆ ಈ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಮೂಡಲಗಿ ತಾಲ್ಲೂಕು ಆಡಳಿತವು ಆರಂಭಿಸಿದೆ.
ಈ ಸಂದರ್ಭದಲ್ಲಿ ಭಾಸ್ಕರ್ ರಾವ್, ಗ್ರಾ.ಪಂ.ಅಧ್ಯಕ್ಷ ಸಿದ್ದಪ್ಪ ದೇವರಮನಿ, ರಾಮಣ್ಣ ಬೆಣ್ಣೆ, ಸಿದ್ಧಾರೂಢ ಕಮತಿ, ಉದಯ ಜಿಡ್ಡಿಮನಿ, ನಾಗಪ್ಪ ಪಾಶಿ, ಅನಿಲ ಕಣಕಿಕೊಡಿ, ಪಿಡಿಓ ಗಂಗಾಧರ ಮಲ್ಹಾರಿ, ಗ್ರಾಮ ಆಡಳಿತ ಅಧಿಕಾರಿ ಎಂ.ಬಿ. ಶಿಗಿಹೊಳಿ, ಶಾಲೆಯ ಪ್ರಧಾನ ಗುರು ರವಿ ಹುಲಗನ್ನವರ, ಪುಂಡಲೀಕ ಬೆಣ್ಣಿ, ಬಿಸಿಯೂಟ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.