ಸಿಂದಗಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2002ನೇ ಸಾಲಿನ ಮತದಾರ ಪಟ್ಟಿಯನ್ನು 2025ರ ಮತದಾರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯಕ್ರಮ ಗ್ರಾಮದಲ್ಲಿ ನಡೆಯುತ್ತಿದೆ ಎಂದು ಗ್ರಾಮ ಆಡಳಿತ ಅಧಿಕಾರಿ ಕುಮಾರಿ ಸರಸ್ವತಿ ಮೋರೆ ತಿಳಿಸಿದರು.
ತಾಲೂಕಿನ ಬಂದಾಳ ಗ್ರಾಮದ ಬನ್ನಿ ಮಂಟಪದ ಹತ್ತಿರ ಗ್ರಾಮ ಪಂಚಾಯತ ಹಾಗೂ ತಾಲೂಕು ಆಡಳಿತ ಪರವಾಗಿ ಗ್ರಾಮದ ಮತದಾರರಿಗೆ ಮತದಾರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಕುರಿತು ಅವರು ಮಾತನಾಡಿ ಗ್ರಾಮದಲ್ಲಿ2002ರ ನಂತರ ಮದುವೆಯಾಗಿ ಬಂದವರು ಅಥವಾ ಸ್ಥಳಾಂತರಗೊಂಡವರು, ಹೊಸದಾಗಿ ಸೇರ್ಪಡೆಯಾದವರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ(ಬಿಎಲ್ಒ) ಮತಗಟ್ಟೆ ಮಟ್ಟದ ಅಧಿಕಾರಿಗಳ ಬಳಿ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು ಎಂದರು.
ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಸಮಿತಿ ಅಧ್ಯಕ್ಷ ನಿಂಗನಗೌಡ ಬಿರಾದಾರ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ ರೂಗಿ, ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ, ಗ್ರಾ ಪಂ ಕಾರ್ಯದರ್ಶಿ ರಾಜೇಸಾಬ ಮುಜಾವರ ಮಾತನಾಡಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು, ನಿಮ್ಮ ತಂದೆ ತಾಯಿ, ಮ್ಯಾಪ್ ಆಗದಿದ್ದರೆ ಮತಪಟ್ಟಿಯಿಂದ ಅಂಥವರನ್ನು ಪ್ರತ್ಯೇಕಿಸಲಾಗುತ್ತದೆ. ಚುನಾವಣಾ ಆಯೋಗ ಭಾರತದ ನಾಗರಿಕ ಎಂಬುದನ್ನು ತೋರಿಸುವ ಒಂದಷ್ಟು ದಾಖಲಾತಿಗಳನ್ನು ಕೇಳುತ್ತದೆ. ಅದನ್ನು ಒದಗಿಸಿದರೆ ಮತಪಟ್ಟಿಯಲ್ಲಿಅಂಥವರ ಹೆಸರು ಮುಂದುವರೆಯಲಿದೆ, ಇಲ್ಲದಿದ್ದರೆ ಪಟ್ಟಿಯಿಂದ ಕೈ ಬಿಡಲಾಗುವುದು ಎಂದರು.
ಗ್ರಾಮದ ಬಿ ಎಲ್ ಓ ನಿಂಗನಗೌಡ ಪಾಟೀಲ, ಸಿದ್ದಲಿಂಗಪ್ಪ ಪೋದ್ದಾರ ಸೇರಿದಂತೆ ಗ್ರಾಮಸ್ಥರು ಇದ್ದರು.

