Homeಸುದ್ದಿಗಳುಮತದಾನ ನಮ್ಮೆಲ್ಲರ ಹಕ್ಕು: ಪ್ರೊ. ಶಂಕರ ನಿಂಗನೂರ

ಮತದಾನ ನಮ್ಮೆಲ್ಲರ ಹಕ್ಕು: ಪ್ರೊ. ಶಂಕರ ನಿಂಗನೂರ

ಮೂಡಲಗಿ: ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮತದಾನ ಜನರ ಪ್ರಮುಖ ಹಕ್ಕುಗಳಲ್ಲಿ ಒಂದು.  ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ ಜನರ ಆಶೋತ್ತರಗಳಂತೆಯೇ ನಡೆಯಬೇಕೆಂಬುದು ಸಂವಿಧಾನದ ನಿಯಮವಾಗಿದೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರಭಾರಿ ಸಂಯೋಜನಾಧಿಕಾರಿ ಪ್ರೊ. ಶಂಕರ ನಿಂಗನೂರ ಹೇಳಿದರು.

ಅವರು ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಹಾಗೂ ಎನ್.ಎಸ್.ಎಸ್. ಘಟಕಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಜೆಗಳ ಒಳಿತನ್ನು ಬಯಸುವ ಜನಪರ ನಾಯಕನನ್ನು ಆಯ್ಕೆ ಮಾಡಲು ಮತದಾನ ಪ್ರಕ್ರಿಯೆ ನಡೆಯುತ್ತದೆ. ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿಯೇ ಪ್ರತಿವರ್ಷ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಸುರೇಶ ಹನಗಂಡಿ ಮಾತನಾಡಿ,  ಮತದಾನ ಜವಾಬ್ದಾರಿಯ ಅರಿವಿದ್ದೂ ದೂರ ಉಳಿಯುವ ವಿದ್ಯಾವಂತರಿಗೆ ಹಾಗೂ ಅರಿವಿಲ್ಲದೆ ದೂರ ಉಳಿಯುವ ಅವಿದ್ಯಾವಂತರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವುದು, 18 ವರ್ಷ ಮೇಲ್ಪಟ್ಟ ಎಲ್ಲ ಪ್ರಜೆಗಳೂ ಚುನಾವಣಾ ಸಂದರ್ಭದಲ್ಲಿ ಖಡ್ಡಾಯವಾಗಿ ಮತದಾನ ಮಾಡಬೇಕೆಂಬ ಜಾಗೃತಿ ಮೂಡಿಸುವುದು ನಮ್ಮೇಲ್ಲರ ಜವಾಬ್ದಾರಿಯಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಎಂ.ಬಿ.ಕುಲಮೂರ, ಡಿ.ಎಸ್.ಹುಗ್ಗಿ, ವಿ. ವಾಯ್. ಕಾಳೆ, ಆರ್.ಎನ್. ತೋಟಗಿ, ಆರ್. ಎಸ್. ಪಂಡಿತ, ಎಂ. ಬಿ. ಜಾಲಗಾರ, ಸಂತೋಷ ಬಂಡಿ, ಸಂತೋಷ ಜೋಡಕುರಳಿ,  ಬಿ.ಸಿ.ಮಾಳಿ, ಸಾಗರ ಐದಮನಿ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯಶಾಸ್ತ್ರ ಉಪನ್ಯಾಸಕ ಮಲ್ಲಪ್ಪ ಮುರಗೋಡ ಪ್ರತಿಜ್ಞಾವಿಧಿ ಬೋಧಿಸಿದರು. ಮಲ್ಲಪ್ಪ ಕರಗಣ್ಣಿ ನಿರೂಪಿಸಿದರು. ವಿಲಾಸ ಕೆಳಗಡೆ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group