ಮೈಸೂರು – ಹಾರ-ತುರಾಯಿ, ಶಾಲು -ಶಲ್ಯಗಳ ಸನ್ಮಾನವನ್ನು ತಿರಸ್ಕರಿಸಿದ ಕನ್ನಡಿಗರ ಮೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಗಳು. ಅವುಗಳ ಬದಲಿಗೆ ಪುಸ್ತಕಗಳನ್ನು ಅಭಿನಂದನೆಯ ಸಂದರ್ಭದಲ್ಲಿ ನೀಡಿ ಎಂದು ನೀಡಿರುವ ಅವರ ಹೇಳಿಕೆ ಸ್ವಾಗತಾರ್ಹ ಎಂದು ಹಿರಿಯ ಸಾಹಿತಿ, ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಶ್ಲಾಘಿಸಿದ್ದಾರೆ.
ತಮ್ಮನ್ನು ಅಭಿನಂದಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಕನ್ನಡ ಪುಸ್ತಕಗಳನ್ನೇ ನೀಡಬೇಕೆಂದು ಮುಖ್ಯಮಂತ್ರಿಗಳು ಸೂಚಿಸಲಿ.ತಮಗೆ ಬಂದ ಪುಸ್ತಕಗಳನ್ನು ಶಾಲಾ-ಕಾಲೇಜುಗಳ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಲಿ. ಆ ಮೂಲಕ ಭವಿಷ್ಯತ್ತಿನಲ್ಲಿ ಕನ್ನಡ ನಾಡು-ನುಡಿಯ ಉಳಿವಿಗೆ ಕಾರಣರಾಗಲಿ ಎಂದವರು ಆಶಿಸಿದ್ದಾರೆ.
ಕನ್ನಡ ಕಾವಲು ಸಮಿತಿಯ ಪ್ರಥಮ ಅಧ್ಯಕ್ಷರಾಗುವ ಮೂಲಕ ರಾಜ್ಯದಾದ್ಯಂತ ಕನ್ನಡ ನಾಡು-ನುಡಿಯ ಅಭ್ಯುದಯದ ಕಹಳೆ ಮೊಳಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತದಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಕನ್ನಡ ಬಳಸುವಂತೆ ಕ್ರಮಕೈಗೊಳ್ಳಲಿ. ಕನ್ನಡದ ಬಗ್ಗೆ ಅಸಡ್ಡೆ ತೋರುವ ಅಧಿಕಾರಿಗಳ ಮೇಲೆ ಶಿಸ್ತಿನಕ್ರಮ ಜರುಗಿಸಲಿ ಎಂಬುದೇ ನಮ್ಮ ಆಶಯ.ಎಂದವರು ತಿಳಿಸಿದ್ದಾರೆ.