ಬೆಳಗಾವಿ: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣಕ್ಕಾಗಿ ರೂ. 322.45 ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ಕೈಗೊಂಡಿದೆ ಮತ್ತು ಇದು ಪ್ರಸ್ತುತ 0.8 ಎಂಪಿಪಿಎ ಸಾಮರ್ಥ್ಯದಿಂದ ವಾರ್ಷಿಕ 3.5 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮಮೋಹನ್ ನಾಯ್ಡು ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಚಳಿಗಾಲ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಬೆಳಗಾವಿ ವಿಮಾನ ನಿಲ್ದಾಣದ ವಿಸ್ತರಣೆ ಮತ್ತು ಮೇಲ್ದರ್ಜೆ ಯೋಜನೆಗಳ ಪ್ರಗತಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಮಂಜಿನಿಂದ ಉಂಟಾಗುವ ಅಡೆತಡೆಗಳನ್ನು ಎದುರಿಸಲು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪ್ರಸ್ತುತ, ಸಿಎಟಿ-I ಇನ್‌ಸ್ಟ್ರುಮೆಂಟ ಲ್ಯಾಂಡಿಂಗ್ ಸಿಸ್ಟಮ್ ಕಾರ್ಯನಿರ್ವಹಿಸುತ್ತಿದೆ. ಕಾರ್ಯಾಚರಣೆಯ ಅವಶ್ಯಕತೆಗಳು ಮತ್ತು ಭೂ ಲಭ್ಯತೆಯ ಆಧಾರದ ಮೇಲೆ ಈ ವ್ಯವಸ್ಥೆಗಳು ಸಿಎಟಿ-II ಅಥವಾ ಸಿಎಟಿ-III ಲ್ಯಾಂಡಿಂಗ್ ಸಿಸ್ಟಮ್ ಅನ್ನು ನವೀಕರಿಸಲಾಗುತ್ತದೆ ಎಂದರು.
1994 ರಲ್ಲಿ ಏರ್ ಕಾರ್ಪೊರೇಷನ್ ಕಾಯ್ದೆಯನ್ನು ರದ್ದುಗೊಳಿಸಿದಾಗಿನಿಂದ ಭಾರತೀಯ ದೇಶೀಯ ವಿಮಾನಯಾನದ ನಿಯಂತ್ರಣ ಮುಕ್ತಗೊಳಿಸಲಾಗಿದೆ. ಸರ್ಕಾರದ ಮಾರ್ಗ ಪ್ರಸರಣ ಮಾರ್ಗಸೂಚಿಗಳನ್ನು ಪಾಲಿಸಿದರೆ ವಿಮಾನಯಾನ ಸಂಸ್ಥೆಗಳು ತಮ್ಮ ಮಾರ್ಗಗಳು ಮತ್ತು ವಿಮಾನ ಪ್ರಕಾರವನ್ನು ಆಯ್ಕೆ ಮಾಡಲು ಮುಕ್ತವಾಗಿವೆ ಎಂದು ಹೇಳಿದರು.
ಬೆಳಗಾವಿಗೆ ಅಥವಾ ಅಲ್ಲಿಂದ ಸೇವೆಗಳನ್ನು ಪರಿಚಯಿಸುವುದು ವಿಮಾನಯಾನ ನಿರ್ವಾಹಕರು ನಿರ್ಣಯಿಸುವ ವಾಣಿಜ್ಯ ಮತ್ತು ಕಾರ್ಯಾಚರಣೆಯ ಕಾರ್ಯಸಾಧ್ಯತೆಯನ್ನು ಅವಲಂಬಿಸಿರುತ್ತದೆ ಎಂದು ಅವರು ತಿಳಿಸಿದ್ದಾರೆ. .
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸರಕು ಸಾಗಣೆ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು, ದೇಶಿಯ ವಿಮಾನ ಸರಕುಗಳ ನಿರ್ವಹಣೆ ಮತ್ತು ಚಲನೆಯನ್ನು ಪ್ರಸ್ತುತ ದೇಶಿಯ ಪ್ರಯಾಣಿಕರ ಟರ್ಮಿನಲ್ ಕಟ್ಟಡದ ಮೂಲಕ ನಡೆಸಲಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

