ಸಿಂದಗಿ; ಒಬ್ಬ ಮಹಿಳೆ ಆರೋಗ್ಯವಾಗಿದ್ದರೆ ಮಾತ್ರ ಇಡೀ ಕುಟುಂಬ ಆರೋಗ್ಯವಾಗಿರುತ್ತದೆ ಈ ದಿನಗಳಲ್ಲಿ ಹೆಚ್ಚು ಸೌಲಭ್ಯಗಳಿದ್ದರೂ ಉತ್ತಮ ಆರೋಗ್ಯ ಕಾಪಾಡಲಾಗುತ್ತಿಲ್ಲ. ಆಹಾರದ ಅವ್ಯವಸ್ಥಿತ ಸೇವನೆಯು ಶಾರೀರಿಕ ಕ್ಷೀಣತೆಗೆ ಕಾರಣವಾಗುತ್ತಿದೆ. ಇದರ ಪರಿಣಾಮವಾಗಿ ಕೆಲವರು ಜಿಗುಪ್ಸೆ ಹೊಂದಿ ಆತ್ಮಹತ್ಯೆ ಕಡೆ ವಾಲುತ್ತಿದ್ದಾರೆ ಎಂದು ಆಯುಶ್ ಮುಖ್ಯಸ್ಥ ಡಾ. ಮಾಂತೇಶ ಹಿರೇಮಠ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಸಂಗಮ ಸಂಸ್ಥೆಯಲ್ಲಿ ನಡೆದ ವಿಶ್ವ ಆತ್ಮಹತ್ಯೆ ತಡೆ ಹಾಗೂ ವಿಶ್ವ ಹೃದಯ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಮಾನಸಿಕ ಒತ್ತಡಕ್ಕೆ ಒಳಪಡುವ ಪರಿಸ್ಥಿತಿಯು ನಿರ್ಮಾಣವಾಗಿದೆ. ಇದಕ್ಕೆ ಸಾಮಾಜಿಕ ಮಾಧ್ಯಮಗಳು ಪ್ರಮುಖ ಕಾರಣವಾಗಿವೆ. ದ್ವೇಷ, ವಿರೋಧಾತ್ಮಕ ಚಟುವಟಿಕೆಗಳಿಂದ ದೂರವಿದ್ದು, ಸಮತೋಲನದ ಜೀವನ ನಡೆಸಬೇಕು” ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಸಂಗಮ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿ ಮೆಲ್ಲೋ ಮಾತನಾಡಿ, “ಪ್ರತಿಯೊಬ್ಬರೂ ಆತ್ಮಹತ್ಯೆ ಹೇಗೆ ತಪ್ಪಿಸಬೇಕು ಎಂಬ ವಿಚಾರದಲ್ಲಿ ಜಾಗೃತರಾಗಬೇಕು.ಭಾರತದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು, ಸಣ್ಣ ವಿಷಯಕ್ಕೂ ಮಾನಸಿಕವಾಗಿ ಕುಗ್ಗಬಾರದು. ಜೀವನದ ಪ್ರತಿಯೊಂದು ಹಂತದಲ್ಲೂ ಪ್ರತಿಸ್ಪರ್ಧೆ ಇದೆ, ಅದನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ವಿಶ್ವ ಹೃದಯ ದಿನದ ಅಂಗವಾಗಿ ೨೦೨೫ರ ಧ್ಯೇಯವಾಕ್ಯ – ಒಂದು ಹೃದಯವನ್ನು ಕಳೆದುಕೊಳ್ಳಬೇಡಿ. ಇದು ಆರೋಗ್ಯಕರ ಜೀವನಶೈಲಿಯನ್ನು ಬೆಂಬಲಿಸುತ್ತದೆ. ನಿಯಮಿತ ತಪಾಸಣೆ, ಶುದ್ಧ ಗಾಳಿ ಮತ್ತು ಆಹಾರ, ವ್ಯಾಯಾಮ ಇವು ಹೃದಯ ಆರೋಗ್ಯದ ಚಾವಿ. ಜನರು ತಾವು ಮಾಡಬಹುದಾದ ಸಣ್ಣ ಕೆಲಸಗಳ ಮೂಲಕ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಪೂರಕವಾಗಬೇಕು ಎಂದರು.
ತಾಲೂಕ ಎನ್‌ಸಿಡಿ ವಿಭಾಗದ ವೈದ್ಯಾಧಿಕಾರಿ ಡಾ. ರಶ್ಮಿ ಪ್ರಿಯ ಮಾತನಾಡಿ, ಹೃದಯ ಕಾಯಿಲೆ, ಕ್ಯಾನ್ಸರ್ ಮೊದಲಾದವುಗಳಿಗೆ ದೈನಂದಿನ ಚಟುವಟಿಕೆಗಳು ಹಾಗೂ ದುಃಖ ಕಾರಣವಾಗಿವೆ. ಪೌಷ್ಟಿಕಾಹಾರದ ಕೊರತೆಯಿಂದ ಬಿಪಿ, ಶುಗರ್ ಸಮಸ್ಯೆಗಳು ಹೆಚ್ಚುತ್ತಿವೆ. ಮಹಿಳೆಯರು ಸ್ವಚ್ಛತೆ ಹಾಗೂ ಆಹಾರದಿಂದ ಶ್ರದ್ಧೆಯಿಂದಿರಬೇಕು ಎಂದು ತಿಳಿಸಿದರು.
ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಕುಲಕರ್ಣಿ ಮಾತನಾಡಿ, ಆತ್ಮಹತ್ಯೆ ಮಾಡುವ ನಿರ್ಧಾರ ತೆಗೆದುಕೊಳ್ಳುವ ಮಹಿಳೆಯರು ಬಹುತೇಕ ಸಮಯದೊಳಗೆ ಮನಸ್ಸು ಬದಲಾಯಿಸಲಾಗದು. ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು. ಮಾನಸಿಕ ಖಿನ್ನತೆ, ಪರೀಕ್ಷೆಯಲ್ಲಿ ವಿಫಲತೆ, ಹಣಕಾಸು ತೊಂದರೆಗಳು, ಉದ್ಯೋಗ ಒತ್ತಡ ಮೊದಲಾದವು ಕಾರಣಗಳಾಗಿವೆ. ಈ ಎಲ್ಲಾ ಸಮಸ್ಯೆಗಳನ್ನು ಸಹನೆಯಿಂದ ಎದುರಿಸಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗ, ಸುತ್ತಮುತ್ತಲ ಹಳ್ಳಿಗಳಿಂದ ಆಗಮಿಸಿದ ಮಹಿಳೆಯರು, ಮತ್ತು ಸಂಗಮ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು
ಶ್ರೀಮತಿ ತೇಜಸ್ವಿನಿ ಹಳ್ಳದಕೇರಿ ನಿರೂಪಿಸಿದರು. ಬಸವರಾಜ್ ಬಿಸ್ನಾಳ್ ಸ್ವಾಗತಿಸಿದರು. ಮಲ್ಕಪ್ಪ ಹಲಗಿ ವಂದಿಸಿದರು. ಗೀತಾ ಪಟ್ಟಣ, ಶ್ರೀಮತಿ ಕಲಾವತಿ ಸಿಂಗೆ ಸಂವಿಧಾನದ ಪ್ರಸ್ತಾವನೆ ಓದಿದರು.