spot_img
spot_img

ಎತ್ತರ ನಿಲುವಿನ ದಿಟ್ಟ ಶರಣೆ -ಬೊಂತಾದೇವಿ

Must Read

spot_img
- Advertisement -

ಕಲ್ಯಾಣ ಶರಣ ಶರಣೆಯರಲ್ಲಿ ಅತ್ಯಂತ ನಿಷ್ಟುರಿ ಎತ್ತರ ನಿಲುವಿನ ಶರಣೆ ಅನುಭಾವಿ ವಚನಕಾರ್ತೆ ಕಾಶ್ಮೀರದ ರಾಜಕುಮಾರಿ ಬೊಂತಾದೇವಿ. ಲೋಕದ ಕಣ್ಣಿಗೆ ಕಾಣದಿದ್ದರೂ ತನ್ನ ಅಸಾಮಾನ್ಯ ಗುಪ್ತ ಭಕ್ತಿಯಿಂದ ಮರುಳಶಂಕರ ದೇವರಿಗೆ, ನಿಷ್ಠೆಯಿಂದ ನೀಲಾಂಬಿಕೆಗೆ, ವಿರಕ್ತಿಗೆ ಅಕ್ಕಮಹಾದೇವಿಗೆ, ಜಾತೀಯತೆಯ ವಿಡಂಬನೆಯಲ್ಲಿ ಪ್ರಭುದೇವರಿಗೆ, ಶ್ರದ್ದೆಗೆ ಕೊಟ್ಟಣದ ಸೋಮವ್ವೆಗೆ ಸಮವೆನಿಸಿ, ಎಲ್ಲ ಶರಣರ ಮೆಚ್ಚುಗೆಗೆ ಪಾತ್ರಳಾದವಳೇ ಬೊಂತಾದೇವಿ. ಬೊಂತಾದೇವಿ ಕಾಶ್ಮೀರದ ಪಾಂಡವ್ಯಪುರದ ಅರಸು ಕುಮಾರಿಯಾಗಿದ್ದು, ಶ್ರೇಷ್ಠ ಶರಣ, ಕಾಯಕ ಕಲಿ ಎಂದೇ ಹೆಸರುವಾಸಿಯಾದ ಮೊಳಿಗೆ ಮಾರಯ್ಯನ ಸಹೋದರಿ. ಮೂಲನಾಮವಾದ ನಿಜದೇವಿಯಿಂದ ಬೊಂತಾದೇವಿಯಾಗಿ ನಾಮಾಂಕಿತಗೊಂಡು ಗುಪ್ತಭಕ್ತಿಗೆ ಹೆಸರು ವಾಸಿಯಾದಳು.

ಬಿಡಾಡಿ” ಎಂಬ ಅಚ್ಚಗನ್ನಡ ಅಂಕಿತದಿಂದ ಅನೇಕ ವಚನಗಳನ್ನು ಬರೆದ ಬೊಂತಾದೇವಿಯ ಮೊದಲಿನ ಹೆಸರು ‘ನಿಜದೇವಿ’. ಚಿಕ್ಕಂದಿನಲ್ಲಿಯೇ ಶಿವಭಕ್ತಿಯಲ್ಲಿ ನಿಷ್ಠೆ ನೆಲೆಗೊಂಡು ವೈರಾಗ್ಯ ತಾಳಿ, ಕಲ್ಯಾಣಕ್ಕೆ ಬಂದು ನೆಲೆಸುತ್ತಾಳೆ. ಈಕೆಯ ವೀರವೈರಾಗ್ಯ, ಗುಪ್ತಭಕ್ತಿಯನ್ನು ಕಾವ್ಯ, ಪುರಾಣಗಳು ಬಣ್ಣಿಸುತ್ತವೆ. ಬಸವಾದಿ ಶರಣರ ಸಮಕಾಲೀನ ಗಟ್ಟಿಮುಟ್ಟಾದ ವಚನಕಾರ್ತೆ ಅರಿವಿನ ಆಂದೋಲನದ ನಾಯಕಿ . ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದ ನಂತರ ಅವರು ಕೌದಿಯನ್ನೇ ಹೊಲೆಯುವದು ಮತ್ತು ಜನರಿಗೆ ಕೌದಿಯನ್ನು ಮಾಡಿ ಕೊಡುವುದು ಇವಳ ಕಾಯಕವಾಗಿತ್ತು.

ಅವರಿಗೆ “ಬೊಂತಾದೇವಿ” ಎಂಬ ಹೆಸರು ಬಂತೆನ್ನಲಾಗಿದೆ. (ಬೊಂತ = ಕೌದಿ).ಅರಿವು ಅನುಭವ ವೈರಾಗ್ಯ ಜ್ಞಾನದಲ್ಲಿ ಅಕ್ಕ ಮಹಾದೇವಿಗೆ ಸರಿ ಸಮಾನಾವಾಗಿ ನಿಲ್ಲುವ ನಿಜ ಶರಣೆ
ಪರಮಾತ್ಮನು ಯಾವ ನಿರ್ಬಂಧಕ್ಕೊಳಗಾಗದ “ಸರ್ವತಂತ್ರ ಸ್ವತಂತ್ರ’’ ಎಂಬರ್ಥದಲ್ಲಿ ಆತನನ್ನು ಬಿಡಾಡಿ ಎಂದು ಕರೆದಿದ್ದಾರೆ . ಗ್ರಾಮೀಣ ಪ್ರದೇಶದಲ್ಲಿ ಬಿಡಾಡಿ ಎಂದರೆ ನಾಯಿ ಮುಕ್ತವಾಗಿ ಓಡಾಡಿಕೊಂಡು ಇರುವ ಪ್ರಾಣಿ. ದೇವರು ದೈವತ್ವವು ಒಂದು ಜಂಗಮ ಚೇತನವಾಗಿದೆ .ಅದು ಸಂಚಾಲಿತ ಕ್ರಿಯಾಶೀಲವಾದ ಬೌದ್ಧಿಕ ಪ್ರವಾಹವಾಗಿದೆ ,ನಿರಂತರ ಚಲನೆಯೇ ಜಂಗಮವು.

- Advertisement -

ಬೊಂತಾದೇವಿ ಮಹಾದೇವ ಭೂಪಾಲ ಮತ್ತು ಮಹಾದೇವಿ ಕಲ್ಯಾಣಕ್ಕೆ ಹೇಗೆ ಬಂದರು?

ಕಲ್ಯಾಣದ ಚಾಲುಕ್ಯರ ಸಾಮ್ರಾಜ್ಯವು ಚಪ್ಪನ್ನೈವತ್ತಾರು ಅಂದರೆ ಐವತ್ತಾರು ರಾಜ್ಯಗಳ ಮೇಲೆ ತನ್ನ ವಿಸ್ತೀರ್ಣ ಹೊಂದಿತ್ತು.ಮಹಾದೇವ ಭೂಪಾಲ ಒಬ್ಬ ಅಪ್ಪಟ ಶಿವ ಭಕ್ತನಾಗಿದ್ದನು . ತನ್ನ ರಾಜ್ಯದಲ್ಲಿ ಶಿವ ಸಾಧಕರು ಅಂದರೆ ( ಜಂಗಮರು ) ನಿತ್ಯ ಪ್ರಸಾದ ಸೇವೆ ಮಾಡುತ್ತಾ ಆಸ್ಥಾನದಲ್ಲಿ ಧ್ಯಾನ ಪ್ರಾರ್ಥನೆಯನ್ನು ಮಾಡುತ್ತಿದ್ದರು.ಆಗ ಬಸವಣ್ಣನವರು ಇವರ ತೊಂಬತ್ತಾರು ಸಾವಿರ ಜಂಗಮರನ್ನು ಕರೆದು ತರಲು ಚೋಳ ಬಸವರಾಜನ ವೇಷ ಧರಿಸಿ ಕಾಶ್ಮೀರಕ್ಕೆ ಬಂದು ಅಲ್ಲಿ ಮಸಾಲೆ ಮಾರುವವನ ವೇಷ ಧರಿಸಿ ಅಲ್ಲಿರುವ ಜಂಗಮರಿಗೆ ಮಸಾಲೆಯಿಂದ ಉತ್ಕೃಷ್ಟವಾದ ಸಾಂಬಾರು ಮಾಡಿ ಇಂತಹ ಪ್ರಸಾದವು ಕಲ್ಯಾಣದಲ್ಲಿ ನಿತ್ಯ ದೊರೆಯುತ್ತದೆ ಎಂದು ಹೇಳಿ ಅಲ್ಲಿರುವ ಜಂಗಮರನ್ನು ತನ್ನ ಜೋಳಿಗೆಯಲ್ಲಿ ಹಾಕಿಕೊಂಡು ಕಲ್ಯಾಣಕ್ಕೆ ಬಂದನೆಂದು ಮತ್ತು ಬಸವಣ್ಣನವರಿಗೆ ಚೋರ ಬಸವನೆಂದು ಹೆಸರು ಬಂತೆಂದು ಪುರಾಣಗಳಲ್ಲಿ ಕಾಣುತ್ತೇವೆ.

ಕಾಶ್ಮೀರದ ಅರಸು ಮಹಾದೇವ ಭೂಪಾಲನು ತನ್ನ ಮಡದಿ ರಾಣಿ ಮಹಾದೇವಿಯೊಂದಿಗೆ ಚಿಂತಿತನಾಗಿ ಜಂಗಮರಿಲ್ಲದೆ ಪ್ರಸಾದ ಸೇವನೆ ಸಾಧ್ಯವಿಲ್ಲವೆಂದು ತಾನು ತನ್ನ ಪತ್ನಿ ಸಮೇತ ಕಲ್ಯಾಣಕ್ಕೆ ಹೊರಡು ನಿಲ್ಲಲು ತಂಗಿ ಗುಪ್ತ ವೈರಾಗಿಣಿ ನಿಜದೇವಿಯು ತನ್ನ ಅಣ್ಣ ಅತ್ತಿಗೆಯೊಂದಿಗೆ ಕಲ್ಯಾಣಕ್ಕೆ ಕಾಲಿಡುತ್ತಾರೆ . ಕಲ್ಯಾಣದಲ್ಲಿ ಅನುಭವ ಮಂಟಪಕಕ್ಕೆ ಪ್ರವೇಶ ಪಡೆಯಲು ಕಾಯಕವು ಕಡ್ಡಾಯವಾಗಿತ್ತು .ಮಹಾದೇವ ಭೂಪಾಲ ಮತ್ತು ರಾಣಿ ಮಹಾದೇವಿಯು ಕಟ್ಟಿಗೆಯನ್ನು ಕಡಿದು ( ಮೋಳಿಗೆ ) ಒಣಗಿಸಿ ಮಾರುಕಟ್ಟೆಯಲ್ಲಿ ಮಾರಿ ಬಂಡ ಹಣದಲ್ಲಿ ಜಂಗಮ ಸೇವೆ ಮಾಡುವುದು ಇವರ ನಿತ್ಯ ಕಾಯಕವಾದರೆ ,ಬೊಂತಾದೇವಿಯು ಅನಾಥರಿಗೆ ರೋಗಿಗಳಿಗೆ ಔಷಧೋಪಚಾರ ಅವರಿಗೆ ಬಟ್ಟೆ ಬರೆಗಳನ್ನು ನೀಡುವುದು, ನಿರ್ಗತಿಕರಿಗೆ ರಾತ್ರಿ ಮಲಗಲು ಕೌದಿಯನ್ನು ನೀಡುವುದು ಇವಳ ಕಾಯಕವಾಗಿತ್ತು . ಇವಳು ಕೌದಿ ಹೊಲೆಯುತ್ತಿದ್ದಾಳೆನ್ನುವ ಕಾರಣಕ್ಕೆ ಇವಳಿಗೆ ಬೊಂತಾದೇವಿ ಎನ್ನುವ ಹೆಸರು ಬಂತು ( ಬೊಂತಾ ಅಂದರೆ ಕೌದಿ )

- Advertisement -

ಬೊಂತಾದೇವಿ ಅಕ್ಕಮಹಾದೇವಿಯಂತೆ ವಿವಾಹ ಬಂಧನಕ್ಕೆ ಸಿಲುಕದೆ ಶರಣ ದೀಕ್ಷೆ ಸ್ವೀಕರಿಸಿದರು. ಕಾಶ್ಮೀರದಲ್ಲಿದ್ದಾಗ ವಿಪರೀತ ಚಳಿಯಿಂದ ನಡುಗುತ್ತಿದ್ದ ವೃದ್ಧೆಗೆ ತಾನುಟ್ಟ ಬಟ್ಟೆಯನ್ನೇ ಬಿಚ್ಚಿಕೊಟ್ಟ ಬೊಂತಾದೇವಿ ಬಡಜನರ ಸೇವೆಯಲ್ಲಿ ತತ್ವರರಾಗಿದ್ದವರು. ಧನಕನಕದ ಮೋಹದಿಂದ ಹೊರಬಂದವರು. ಕಲ್ಯಾಣದಲ್ಲಿ ಕೌದಿ ಹೊಲಿದು ಮಾರುವ ಕಾಯಕ ಕೈಕೊಂಡ ಆಕೆ ರೋಗಗ್ರಸ್ತ ಬಡವರಿಗೆ ತಾನೇ ಔಷಧೋಪಚಾರ ಸೇವೆ ಮಾಡುತ್ತಿದ್ದರು.

ಬೊಂತಾದೇವಿಯವರ ಆರು ವಚನಗಳು ಲಭ್ಯವಾಗಿವೆ. ಶಬ್ಧಗಳಲ್ಲಿ ಅಪಾರವಾದ ಅಧ್ಯಾತ್ಮಿಕ ಅರ್ಥವನ್ನು ತುಂಬಿ ತನ್ನ ವಚನರಚನಾ ಸಾಮರ್ಥ್ಯವನ್ನು ಬೊಂತಾದೇವಿ ತೋರಿದ್ದಾಳೆ. ಬಯಲು ಅಂದರೆ ಶೂನ್ಯ. ಈ ಶೂನ್ಯದಿಂದಲೆ ವಿಶ್ವ. ಈ ಶೂನ್ಯ ಸಂಪಾದನೆಯೇ ಭಕ್ತನ ಪರಮ ಗುರಿ. ಬಯಲನ್ನು ಶಿವ ನಲ್ಲಿ ಒಂದಾಗಿ ಎಲ್ಲರೂ ಬಯಲಾಗುದೇ ಜೀವನದ ಅಂತ್ಯ ಎಂದಿದ್ದಾಳೆ.

ಘಟದೊಳಗಣ ಬಯಲು, ಮಠದೊಳಗಣ ಬಯಲು,
ಬಯಲು ಬಯಲು ಬಯಲು ?
ತಾನೆಲ್ಲಾ ಬಯಲು, ಬಿಡಾಡಿ ಬಯಲು.

ಈಗ ದೊರೆತ ಆರು ವಚನಗಳನ್ನು ದೇವನ ಸ್ವರೂಪ ಅನಂತತೆ ಮತ್ತು ಸರ್ವಾಂತರ್ಯಾಮಿತ್ವವನ್ನು ವರ್ಣಿಸಲಾಗಿದೆ. ಜೊತೆಗೆ ಅಧ್ಯಾತ್ಮಿಕ ಸಾಧನೆ, ಸಮತಾಭಾವ ಮತ್ತು ಸಾಮಾಜಿಕ ಕಳಕಳಿ ಅವುಗಳಲ್ಲಿ ವ್ಯಕ್ತವಾಗಿದೆ. ಉದಾತ್ತೀಕರಣದ ಪರಿಕಲ್ಪನೆಯು ಇವರ ವಚನಗಳಲ್ಲಿ ದಟ್ಟವಾಗಿ ಗೋಚರಿಸುತ್ತದೆ .ಸಂಖ್ಯಾ ದೃಷ್ಟಿಯಿಂದ ಕಡಿಮೆ ಎನಿಸಿದರೂ ಅನುಭಾದವಾದ ಹಿನ್ನೆಲೆಯಲ್ಲಿ ನೋಡಿದಾಗ ಬೊಂತಾದೇವಿ ತುಂಬಾ ದಿಟ್ಟ ನಿಲುವಿನ ಶರಣೆಯು .

ಅರಿವೆ ಬಿಡಾಡಿ, ಅರಿಯದೆ ಬಿಡಾಡಿ,
ಮರವೆ ಬಿಡಾಡಿ, ಮರೆಯದೆ ಬಿಡಾಡಿ,
ಅರಿವರತು ಕುರುಹಿಲ್ಲದಾತ ನೀನೆ ಬಿಡಾಡಿ.

ಅರಿವೆಂಬುದು ಯಾವುದೇ ಬಂಧನಕ್ಕೊಳಪಡದ ಮುಕ್ತ ಸಂಚಾಲಿತ ಜ್ಞಾನವು. ಅರಿಯದೆ ಇರುವುದು ಕೂಡ ಅರಿವಿನ ನೆರಳಿನಂತಿರುವ ಅಜ್ಞಾನದ ಭಾವವು .ಮರವು ಒಂದು ಅರ್ಥದಲ್ಲಿ ಬಿಡಾಡಿ ಕಾರಣ ಮರೆಯಬೇಕೆಂಬ ಉದ್ದೇಶ ಸದ್ಭಕ್ತನಿಗೆ ಇರುವದಿಲ್ಲ ಹೀಗಾಗಿ ಅದು ಕೂಡ ಮುಕ್ತವಾಗಿ ಸಂಚಲಿತಗೊಳ್ಳುವ ಭಾವವು.ಮರೆಯದೆ ಇರುವ ತೀವ್ರತೆಯು ಕೂಡಾ ಒಂದು ಅರ್ಥದಲ್ಲಿ ಜ್ಞಾನದ ನಿರಂತರ ಶೋಧನವಾಗಿರುವದರಿಂದ ಸ್ಥೂಲ ಸೂಕ್ಷ್ಮ ಕಾರಣ ಇವುಗಳ ಬಂಧನದಿಂದ ಹೊರವಿದ್ದು ಸತ್ಯಕ್ಕೆ ಪರಿತಪಿಸುವ ಜ್ಞಾನಾರ್ಜನೆಯ ಪ್ರಾಮಾಣಿಕ ಪ್ರಯತ್ನವು ಕೂಡ ಮುಕ್ತ ಸ್ವತಂತ್ರವಾದ ಬಿಡಾಡಿಯೇ ಎಂದೆನ್ನುತ್ತಾಳೆ ಬೊಂತಾದೇವಿ. ಮುಕ್ತಿಯ ಅರಿವನ್ನು ಪಡೆದು ಮತ್ತೆ ಕುರುಹಿನ ಸಂಕೋಲೆಗೆ ಬಂಧನಕ್ಕೆಸಿಲುಕದೆ ಇರುವವ ದೇವರು ಬಿಡಾಡಿ ಎಂದು ಅರ್ಥಗರ್ಭಿತವಾಗಿ ಹೇಳಿದ್ದಾಳೆ ಬೊಂತಾದೇವಿ.

ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ ?
ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆ ಬಯಲೆಂದುಂಟೆ?

ಎಂಬ ವಚನದ ಮೂಲಕ ಕುಲ ಒಂದೇ ಎಂದು ಸ್ವಾರ್ಥಿಯಾದ ಮಾನವ ಭಿತ್ತಿಮಾತ್ರದಿಂದ ಬಯಲಿನಲ್ಲಿ ಒಳಹೊರಗೆಂಬ ಅಂತರ ಉಂಟಾಗುವಂತೆ, ಮಾನವ ತನ್ನ ಕಲ್ಪನೆಯ ಭಿತ್ತಿಯಿಂದ ಮೇಲುಕಿಳೆಂಬ ಜಾತಿಯ ಕೃತ್ರಿಮತೆಯನ್ನುಂಟು ಮಾಡಿ ಕೊಂಡಿದ್ದಾನೆ. ಅನಂತವಾದ ಬಯಲೊಂದೇ ಇರುವಂತೆ ಸರ್ವವ್ಯಾಪಿ ಭಗವಂತನೊಬ್ಬನೇ, ಕುಲವೊಂದೇ ಎಂಬ ಭಾವನೆ ಯನ್ನು ವಚನಗಳ ಮೂಲಕ ವ್ಯಕ್ತಪಡಿಸಿದ್ದಾಳೆ.

ಪರಮಾತ್ಮನು ದೈವತ್ವವು ಯಾವ ನಿರ್ಬಂಧಕ್ಕೊಳಗಾಗದ “ಸರ್ವತಂತ್ರ ಸ್ವತಂತ್ರ’’ ಎಂಬರ್ಥದಲ್ಲಿ ಆತನನ್ನು ಬಿಡಾಡಿ ಎಂದು ಕರೆದಿದ್ದಾರೆ ಬೊಂತಾದೇವಿ. ಅವರ ಒಂದು ವಚನ:

ಅಂತಾಯಿತ್ತಿಂತಾಯಿತ್ತೆಂತಾಯಿತ್ತೆನಬೇಡ,
ಅನಂತನಿಂತಾತನೆಂದರಿಯಾ ಬಿಡಾಡಿ.
ಕರೆದಡೆ ಓ ಎಂಬುದು ನಾದವೊ ಬಿಂದುವೊ ಪ್ರಾಣವೊ
ಇದಾವುದು ? ಬಲ್ಲಡೆ ನೀ ಹೇಳಾ, ಬಿಡಾಡಿ.

ಧಾರ್ಮಿಕ ವಿಧಾನಗಳಲ್ಲಿ ದೇವರ ಪರಿಕಲ್ಪನೆ ಹಾಗೆ ಹೀಗೆ ಎಂದು ಹೇಳಲು ಬೇಡ ,ಅನಂತದಿಂದ ಅನಂತವಾಯಿತೆನ್ನಬೇಡಾ ಕರೆದಡೆ ಓ ಎನ್ನುವುದೇ ನಾದವು ,ಬಿಂದುವು ಅಥವಾ ಪ್ರಾಣವು .
ನಾದ ಬಿಂದು ಕಳೆಯು ಸೃಷ್ಟಿಯ ವಿಕಸನದ ಹಂತವನ್ನು ಹೇಳುತ್ತವೆ .ಸೂರ್ಯನಿಂದ ಸಿಡಿದ ಬಂದು ಒಂದು ಭಾಗವೇ ಭೂಮಿ ಆಗ ಬೆಂಕಿಯ ಉಂಡೆಯಂತಿದ್ದ ಭೂಮಿ ಮೊದಲು ನಾದವನ್ನು ಹೊರಡಿಸಿತು ,ನಾದವು ಕ್ರಮೇಣವಾಗಿ ಬಿಂದು ಎಂಬ ಘನವನ್ನು ರೂಪಿಸಿತು. ಆ ಬಿಂದು ಎಂಬ ಘನದ ಮೇಲೆ ಕಳೆ ಎಂಬ ಜೀವ ಪ್ರಾಣವು ನಿರ್ಮಿತಗೊಳ್ಳುತ್ತವೆ.

ಕರೆದಾಗ ನಾದವಾಗಲಿ ಬಿಂದುವಾಗಲಿ ಓ ಎನ್ನುವವೇ ಆದರೆ ಈ ಭೂಮಿಯ ಜೈವಿಕ ವಿಕಾಸದಲ್ಲಿ ಪ್ರಾಣವೆಂಬ ಶಕ್ತಿ ಓ ಕಾರಕ್ಕೆ ಸ್ಪಂದಿಸುತ್ತದೆ ಅದುವೇ ಜೀವ ಅದುವೇ ದೈವತ್ವ ಎಂದು ಹೇಳುತ್ತಾ ಭೂಮಿಯ ಘನ ಜಡ ಶಬ್ದವನ್ನು ತಿರಸ್ಕರಿಸಿ ಪ್ರಾಣವೆಂಬ ಜೀವ ಸಂಕುಲದಲ್ಲಿ ದೇವರು ಇದ್ದಾನೆ ಅಂತಹ ದೇವರು ಮುಕ್ತವಾಗಿ ಸಂಚರಿಸುವ ಬಿಡಾಡಿಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾಳೆ.

ನಾಲ್ಕು ವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ, ಇಪ್ಪತ್ತೆಂಟಾಗಮ
ಇದಪ್ರತಿ ಬಿಡಾಡಿ.
ಶಬ್ದವೆ ಬ್ರಹ್ಮ, ಶಬ್ದವೆ ಸಿದ್ಧ, ಶಬ್ದವೆ ಶುದ್ಧ ಕಾಣಿರೆ, ಬಿಡಾಡಿ ?

ವೇದ ಶಾಸ್ತ್ರಗಳು ಹದಿನೆಂಟು ಪುರಾಣಗಳು ಇಪ್ಪೆತ್ತೆಂಟು ಆಗಮಗಳು ದೇವರ ಸ್ತುತಿಯನ್ನು ಮಾಡುತ್ತವೆ ಇದಕ್ಕೆ ಪ್ರತಿಯಾಗಿ ದೇವರು ಜೀವ ಜಾಲದ ಶಬ್ದದಲ್ಲಿದೆ ಆ ಶಬ್ದವೇ ಬ್ರಹ್ಮ ಶಬ್ದವೇ ಸಿದ್ಧ ಮತ್ತು ಶಬ್ದವೇ ಶುದ್ಧ ಜೀವ ಭಾವವು ಅದುವೇ ದೇವರು ಬಿಡಾಡಿ ಎಂದಿದ್ದಾರೆ . ಸನಾತನ ವ್ಯವಸ್ಥೆಯ ವೇದ ಆಗಮ ಶಾಸ್ತ್ರಗಳಲ್ಲಿನ ದೇವರ ಪರಿಕಲ್ಪನೆಯನ್ನು ಪ್ರಶ್ನಿಸುವ ಧಿಕ್ಕರಿಸುವ ದಿಟ್ಟತನವು ಬೊಂತಾದೇವಿಯಲ್ಲಿರುವುದು ಅಪರೂಪ ಮತ್ತು ಅಗಾಧವಾದದ್ದು.

ಯಾರ ಬಂಧನಕ್ಕೂ ಸಿಲುಕದೆ ಮುಕ್ತ ಸ್ವತಂತ್ರವಾದ ವೈಚಾರಿಕ ಚಳುವಳಿಗೆ ಹೆಸರಾದಳು ಬೊಂತಾದೇವಿ. ಕಲ್ಯಾಣದಲ್ಲಿ ತಿಪ್ಪೆಯಪ್ಪರಿಗೆಯನ್ನದೆ ಎಲೆಯ ಮರೆಯ ಹೂವಾಗಿ, ಸಾಧನೆ ಮಾಡುತ್ತಾ ಉಳಿದುಕೊಳ್ಳುತ್ತಾಳೆ. ಅಸಂಖ್ಯಾತ ಶರಣರ ತಾಣವಾದ ಕಲ್ಯಾಣದಲ್ಲಿ ಬೊಂತಾದೇವಿಯನ್ನು ಯಾರು ಗಮನಿಸಿರುವುದಿಲ್ಲ, ದಿವ್ಯಜ್ಞಾನಿಯಾದ ಅಲ್ಲಮಪ್ರಭು ಮಾತ್ರ ಆಕೆಯ ಗುಪ್ತಭಕ್ತಿಯ ನೆಲೆಯನ್ನು ಗಮನಿಸುತ್ತಾನೆ. ಅಕ್ಕಮಹಾದೇವಿ ಶ್ರೀ ಶೈಲದ ಕದಳಿಗೆ ಹೊರಟು ನಿಂತಾಗ, ಆಕೆಯನ್ನು ಬೀಳ್ಕೊಡಲು ಸೇರಿದ ಶರಣರೆಲ್ಲ ಮಹಾದೇವಿಯಂಥ ಶರಣೆ ಕಲ್ಯಾಣದಲ್ಲಿ ಸಿಗುವುದು ದುರ್ಲಭವೆಂದು ಶರಣರು ಉದ್ಗಾರ ತೆಗೆಯುತ್ತಾರೆ. ಆಗ ನೆರೆದ ಶರಣವೃಂದಕ್ಕೆ ಅಲ್ಲಮಪ್ರಭು ಬೊಂತಾದೇವಿಯ ಮಹಿಮೆಯನ್ನು ತಿಳಿಹೇಳುತ್ತಾನೆ. ಕಲ್ಯಾಣಕ್ರಾಂತಿಯ ನಂತರ ಶರಣರೆಲ್ಲ ದಿಕ್ಕಾಪಾಲಾಗಿ ಅನೇಕ ಕಡೆಗೆ ಚದುರಿಹೋದರು.

ಆದರೆ ಬೊಂತಾದೇವಿ ಮಾತ್ರ ಅಲ್ಲಿಯೇ ಇದ್ದು ತನ್ನ ಸೇವಾಕಾರ್ಯ ಮುಂದುವರಿಸಿ ಅಣ್ಣ ಮೋಳಿಗೆ ಮಹಾದೇವ ( ಮಾರಯ್ಯ) ಅತ್ತಿಗೆ ಮೋಳಿಗೆ ಮಹಾದೇವಿಯವರ ಜೊತೆ ಅಲ್ಲಿಯೇ ಸಮೀಪದ ಮೂರಕೇರಾದಲ್ಲಿಯೇ ಲಿಂಗೈಕ್ಯರಾಗುವ ಮೂಲಕ ಆದರ್ಶ ಶರಣೆಯೆನಿಸಿದ್ದಾರೆ.

ಅವುಗಳಲ್ಲಿ ಹುದುಗಿದ್ದ ಭಾವವು ಅಗಮ್ಯ ಆಗಸದಲ್ಲಿ ಕಾಣುವ ಮಿನುಗುವ ನಕ್ಷತ್ರಗಳು.

ಇವಳ ವಚನಗಳು ನೋಡಲು ಸರಳವೆಂದೆನಿಸಿದರೂ ಅವುಗಳೊಳಗೆ ಅಗಾಧ ಆಧ್ಯಾತ್ಮಿಕ ಸಾಮಾಜಿಕ ಧಾರ್ಮಿಕ ಪ್ರಜ್ಞೆಯ ಚಿಂತನೆಯು. ಒಂದು ದಿನ ಅವಳು ತನ್ನ ಸಖಿಯರೊಂದಿಗೆ ವಾಯು ವಿಹಾರಕ್ಕೆ ಹೋಗಿ ಅರಮನೆಗೆ ತಿರುಗಿ ಹೋಗುವಾಗ ಅಲ್ಲೊಬ್ಬ ಬಡ ಭಿಕ್ಷುಕಿ ತನಗೆ ಬಟ್ಟೆ ಇಲ್ಲದೆ ರಾಜಕುಮಾರಿ ನಿಜದೇವಿ ( ಬೊಂತಾದೇವಿ ) ಅವರಿಗೆ ಬಟ್ಟೆ ನೀಡಲು ಕೇಳಿದಳಂತೆ . ನಿಜದೇವಿ ತನ್ನ ಉಡುಪು ಕೊಟ್ಟು ತಾನು ಒಂದು ಹಳೆಯ ಬೊಂತೆ ಅಂದರೆ ಕೌದಿ ಹೊಡೆದುಕೊಂಡಳಂತೆ .ಇಂತಹ ವೈರಾಗ್ಯ ತನ್ನ ಬಾಲ್ಯದಿಂದಲೇ ಮೈಗೂಡಿಸಿಕೊಂಡು ಬಂದ ಚೈತನ್ಯ ಮೂರ್ತಿಯಾಗಿದ್ದಳು.

ಕಲ್ಯಾಣಕ್ಕೆ ಅಣ್ಣ ಮಹಾದೇವ ಭೂಪಾಲ ಮತ್ತು ಅತ್ತಿಗೆ ಮಹಾರಾಣಿ ಮಹಾದೇವಿಯು ಹೊರಟು ನಿಂತಾಗ ಅವರೊಂದಿಗೆ ತಾನು ಕಲ್ಯಾಣಕ್ಕೆ ಹೊರಟು ನಿಂತಳು ನಿಜದೇವಿ.ಇನ್ನೊಂದು ವಿಷಯವೆಂದರೆ ಬೊಂತಾದೇವಿ ಅತ್ಯಂತ ಗುಪ್ತಗಾಮಿನಿಯಾಗಿ ಕಲ್ಯಾಣದಲ್ಲಿ ತನ್ನ ಸೇವೆಯನ್ನು ಮುಂದುವರೆಸಿದಳು . ಅಣ್ಣ ಮತ್ತು ಅತ್ತಿಗೆ ಕಟ್ಟಿಗೆ ಕಡಿದು ಒಣಗಿಸಿ ಸೌದೆ ಮಾಡಿ ಬರುತ್ತಿದ್ದರು.

ಬೊಂತಾದೇವಿ ಚಿಂದಿ ಬಟ್ಟೆಗಳನ್ನು ಎತ್ತಿ ಅವುಗಳನ್ನು ಕೌದಿಯನ್ನಾಗಿ ಹೆಣೆದು ಬಡವರ ರೋಗಿಗಳ ನಿರ್ಗತಿಕರ ಸೇವೆ ಮಾಡುತ್ತಿದ್ದಳು . ರೋಗಿಗಳ ಔಷಧೋಪಚಾರ ದಲಿತರ ಅಸಹಾಯಕರ ಅಂಗವಿಕಲರ ಸೇವೆಯಲ್ಲಿ ದಿನವಿಡೀ ಯಾರಿಗೂ ಗೊತ್ತಾಗದ ರೀತಿಯಲ್ಲಿ ಸೇವೆಗೈಯುತ್ತಿದ್ದಳು.

ಇನ್ನು ತನ್ನ ಆಧ್ಯಾತ್ಮಿಕ ಹಸಿವು ಅತ್ಯಂತ ಮಾರ್ಮಿಕ ಮತ್ತು ಅರ್ಥಗರ್ಬಿತವಾಗಿತ್ತು .ದೇವರ ಮತ್ತು ದೈವತ್ವದ ಕಲ್ಪನೆಯನ್ನುಸುಂದರವಾಗಿ ಬಿಂಬಿಸಿದ್ದಾಳೆ.

ಬಿಡಾಡಿ ಉತ್ತರ ಕನ್ನಡದ ಭಾಷೆಯಲ್ಲಿ ಅದನ್ನು ನಾಯಿ ಎಂದು ಕರೆಯುವುದುಂಟು . ಬಿಡಾಡಿ ಅಂದರೆ ಯಾವುದೇ ಬಂಧನಕ್ಕೊಳಪಡದ ಮುಕ್ತವಾವಾದ ಸ್ವತಂತ್ರ ಭಾವವು ಜಡವಾದ ವಸ್ತುಗಳು ದೇವರಾಗಬಲ್ಲವೇ ? ಶಬ್ದ ದೇವರಾಗಬಹುದೇ . ಪ್ರಾಣವೇ ದೇವರು ಚೇತನ್ಯವೇ ಆತ್ಮ ಸಂಗತಿ . ಉತ್ತಮ ಕಾರ್ಯವೇ ಮುಕ್ತಿ ಎಂದು ಬಿಂಬಿಸಿ ತನ್ನ ವಿಚಾರಧಾರೆಗಳನ್ನು ಹರಿಬಿಟ್ಟ ದಿಟ್ಟ ಶರಣೆ . ಅಲ್ಲಮರ ಅರಿವು ಚೆನ್ನ ಬಸವಣ್ಣನವರ ಜ್ಞಾನ ಅಕ್ಕ ಮಹಾದೇವಿಯ ವೈರಾಗ್ಯ ಬಸವಣ್ಣನವರ ಸೇವೆ , ಮಡಿವಾಳ ಮಾಚಿದೇವರ ಗಣಾಚಾರವನ್ನು ಆಯ್ದಕ್ಕಿ ಲಕ್ಕಮನ ದಿಟ್ಟತನ ಮೈಗೂಡಿಸಿಕೊಂಡು ಕಲ್ಯಾಣ ಕ್ರಾಂತಿಯ ನಂತರಕಲ್ಯಾಣದಿಂದ ಐದು ಕಿಲೋಮೀಟರು ಅಂತರದಲ್ಲಿರುವ ಮೂರಕೇರಾ ಎಂಬ ಗ್ರಾಮದಲ್ಲಿ ಕಲ್ಯಾಣದ ಕೊನೆಯ ಅವಸಾನವನ್ನು ಕಣ್ಣಾರೆ ಕಂಡು ಮುಮ್ಮಲವಾಗಿ ಮರುಗಿದ ಶರಣೆ ಕಲ್ಯಾಣದ ಮಣಿ ಮುಕುಟವಾದಳು .ಅಣ್ಣ ಅತ್ತಿಗೆಯ ಜೊತೆಗೂಡಿ ಮೂರಕೇರಾದಲ್ಲಿಯೇ ಐಕ್ಯವಾದರು.



ಕುಮಾರಿ ಪೂಜಾ ಶಶಿಕಾಂತ ಪಟ್ಟಣ, ಬೆಂಗಳೂರು

- Advertisement -

1 COMMENT

Comments are closed.

- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group