spot_img
spot_img

ಸಮ್ಮೇಳನಾಧ್ಯಕ್ಷರ ಸಂದರ್ಶನ

Must Read

- Advertisement -

ಯುವಕರು ಮೊಬೈಲ್ ಮಿತಿಗೊಳಿಸಿದಷ್ಟು ಲಾಭವಿದೆ: ಪ್ರೊ. ಸಂಗಮೇಶ ಗುಜಗೊಂಡ

ಪ್ರೊ. ಸಂಗಮೇಶ ಗುಜಗೊಂಡ ಅವರ ಪರಿಚಯ

ಪ್ರೊಫೆಸರ್ ಸಂಗಮೇಶ ಗುಜಗೊಂಡ. ಶಿಶು ಸಾಹಿತ್ಯದಲ್ಲಿ ಪರಿಚಿತ ಹೆಸರು. ಮೂಲತಃ ವಿಜಯಪುರ ಜಿಲ್ಲೆಯ ಮನಗೂಳಿ ಗ್ರಾಮದವರಾದ ಗುಜಗೊಂಡ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದು ತಮ್ಮ ಊರಲ್ಲೇ. ಹಳೆಯ ಬಿಜಾಪೂರದಲ್ಲಿ ಪದವಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಮುಗಿಸಿದರು. ಆಮೇಲೆ ಮೂಡಲಗಿಯ ಪದವಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ೧೯೮೭ ರಿಂದ ಸೇವೆ ಸಲ್ಲಿಸುತ್ತಿದ್ದಾರೆ.

ವಿಶೇಷವಾಗಿ ಮಕ್ಕಳ ಸಾಹಿತ್ಯ ಜೊತೆಗೆ ಪ್ರಬಂಧ ಬರಹ, ಪರಿಸರ ಕಾಳಜಿ ಹಾಗೂ ಸಾಹಿತ್ಯ ಚಟುವಟಿಕೆ, ಸಂಘಟನೆಯಲ್ಲಿ ತೊಡಗಿದ್ದಾರೆ.

ಪ್ರೊ.ಸಂಗಮೇಶ ಅವರ ಬರಹಗಳು ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

- Advertisement -

ಎಂಟನೇ ತರಗತಿಯಲ್ಲಿದ್ದಾಗ ಇವರು ಬರೆದ ‘ ಜಯಶಾಲಿ ಜಾಣ ಮಿತ್ರರು ‘ ಎಂಬ ನೀಳ್ಗತೆಯಿಂದ ಆರಂಭವಾದ ಇವರ ಸಾಹಿತ್ಯ ಪ್ರಯಾಣ ನಿರಂತರವಾಗಿ ಸಾಗುತ್ತಲೇ ಇದೆ. ಕತೆ, ಕವಿತೆ, ಲೇಖನಗಳ ರೂಪದಲ್ಲಿ ಇವರ ಸಾಹಿತ್ಯ ಕೃಷಿ ಸಾಗಿದೆ. ಇವರ ಒಂದು ಕವಿತೆ ‘ ಹುಟ್ಟು ಹಬ್ಬ ‘ ಮಹಾರಾಷ್ಟ್ರದ ಮೂರನೇ ಈಯತ್ತೆಯ ‘ ಬಾಲ ಭಾರತಿ ‘  ಪಠ್ಯಕ್ಕಾಗಿ ಆಯ್ಕೆಯಾಗಿದೆ. ಅಲ್ಲದೆ ಇವರ ಅನೇಕ ಕಥೆಗಳು ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾಗಿವೆ. ೧೯೯೪ರಲ್ಲಿ ಗ್ರಾಮೀಣ ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರೀಯ ಭಾವೈಕ್ಯ , ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ಉಪನ್ಯಾಸ ಪ್ರಕಟವಾಗಿದೆ.ಹಾಗೆಯೇ ಅನೇಕ ಬಹುಮಾನಗಳು ಇವರ ಬರಹಗಳಿಗೆ,ಕೃತಿಗಳಿಗೆ ಸಿಕ್ಕಿವೆ

೨೦೦೪ ರಲ್ಲಿ ಇವರ ‘ಅಮ್ಮಾ ಕೇಳೆ’ ಮಕ್ಕಳ ಕವಿತಾ ಸಂಕಲನಕ್ಕೆ , ಕನ್ನಡ ಪುಸ್ತಕ ಪ್ರಾಧಿಕಾರ ( ಕರ್ನಾಟಕ ಸರ್ಕಾರ ) ಬೆಂಗಳೂರು, ೨೦೦೨ ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಬಹುಮಾನ,ನಾಲತವಾಡದ ವಿಜಯ ಪ್ರಕಾಶನದ ಮಕ್ಕಳ ರತ್ನ ಪ್ರಶಸ್ತಿ, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದಿಂದ ಪಿ. ವಿಜಯಕುಮಾರ ದತ್ತಿ ಪ್ರಶಸ್ತಿ, ಮಕ್ಕಳ ಸಂಗಮ ಬನಹಟ್ಟಿ ಇವರಿಂದ ಲಿಂ. ಮಹಾದೇವಪ್ಪ ಲೋಕಪ್ಪ ಕರ್ಲಟ್ಟಿ ಮಕ್ಕಳ ಸಾಹಿತ್ಯ ಪುರಸ್ಕಾರ ಸಿಕ್ಕಿವೆ.

- Advertisement -

ಕಲಾ ಬದುಕು ಸಂಸ್ಥೆ, ಗೋಕಾಕ ಇವರಿಂದ ಸದ್ಭಾವನಾ ಪ್ರಶಸ್ತಿ, ಪಿ. ವಿಜಯಕುಮಾರ ದತ್ತಿ ಪ್ರಶಸ್ತಿ, ಗೋಕಾಕದ ಗುರು ಸ್ಮೃತಿ ಬಳಗದಿಂದ ಸಾಹಿತ್ಯ ಸೇವೆಗಾಗಿ ಸನ್ಮಾನಿಸಲಾಗಿದೆ.

ಪ್ರೊ.ಗುಜಗೊಂಡ ಅವರ ಸಾಹಿತ್ಯ ಸೇವೆಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಅಪಾರ. ಅನೇಕ ಸೇವಾ ಸಂಸ್ಥೆಗಳ ಸದಸ್ಯತ್ವ, ಅಕಾಡೆಮಿಗಳಲ್ಲಿ ಕಾರ್ಯ ನಿರ್ವಹಣೆ, ಸಾಹಿತ್ಯ ಪ್ರತಿಷ್ಠಾನಗಳ ಸದಸ್ಯತ್ವ, …..ಹೀಗೆ ಗುಜಗೊಂಡ ಅವರ ಸಾಹಿತ್ಯ ಸೇವೆ ಇನ್ನುವರೆಗೂ ನಿರಂತರ ಸಾಗಿದೆ.

ಮೂಡಲಗಿ ತಾಲೂಕಾಗಿ ಹೊರಹೊಮ್ಮಿದ ನಂತರ ಪ್ರಥಮವಾಗಿ ತಾಲೂಕಾ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ. ಸಂಗಮೇಶ ಗುಜಗೊಂಡ ಆಯ್ಕೆಯಾಗಿದ್ದಾರೆ. ಆ ಮೂಲಕ ಮೂಡಲಗಿ ತಾಲೂಕಿನ ಸಾಹಿತ್ಯ ವಲಯ ತನ್ನ ಗೌರವ ಹೆಚ್ಚಿಸಿಕೊಂಡಿದೆ.ಸರಳ ಜೀವಿ, ಸಾತ್ವಿಕ ನಡವಳಿಕೆಯ,ಲೇಶವೂ ಅಹಂ ಇಲ್ಲದ ಸಂಗಮೇಶ ಗುಜಗೊಂಡ ಅವರು ತಮ್ಮ ಮಹಾವಿದ್ಯಾಲಯದಲ್ಲೂ ಅಪಾರ ಶಿಷ್ಯ ಬಳಗದ ಪ್ರೀತಿ ಸಂಪಾದಿಸಿದ್ದಾರೆ.

ಇದೇ ದಿ.೧೩ ರಂದು ನಡೆಯಲಿರುವ ತಾಲೂಕಾ ಸಾಹಿತ್ಯ ಸಮ್ಮೇಳನಕ್ಕೆ ಗುಜಗೊಂಡ ಅವರು ಸರ್ವಾಧ್ಯಕ್ಷರು. ಈ ಸಂದರ್ಭದಲ್ಲಿ ನಮ್ಮ Times of ಕರ್ನಾಟಕ ಬಳಗದಿಂದ ಅವರ ಸಂದರ್ಶನ ಮಾಡಲು ಹೆಮ್ಮೆಯಿದೆ.

ಸಂದರ್ಶನದ ಪೂರ್ಣ ಪಾಠ

ಟೈಮ್ಸ್ನಿಮ್ಮ ಸಾಹಿತ್ಯ ಯಾತ್ರೆಯ ಬಗ್ಗೆ ತಿಳಿಸಿ.

“ಪ್ರೌಢ ಶಾಲೆಯಲ್ಲಿರುವಾಗಲೇ ನಾನು ರಚಿಸಿದ ‘ ಜಯಶಾಲಿ ಜಾಣ ಮಿತ್ರರು ‘ ಎಂಬ ನೀಳ್ಗಥೆ ಧಾರಾವಾಹಿಯಾಗಿ ವಿಜಯಪುರದ ‘ ಕರ್ನಾಟಕ ಸಂದೇಶ ‘ ಪತ್ರಿಕೆಯಲ್ಲಿ ಪ್ರಕಟವಾಯಿತು. ಮನೆಯಲ್ಲಿರುತ್ತಿದ್ದ ಚಂದಮಾಮ, ಬೊಂಬೆಮನೆ ಹಾಗೂ ಆಗಾಗ್ಗೆ ನೋಡಲು ಸಿಗುತ್ತಿದ್ದ ‘ ಸಿಸು’ ಸಂಗಮೇಶರ ಬಾಲ ಭಾರತಿ ಪತ್ರಿಕೆಗಳು ಆಗ ಪ್ರಭಾವ ಬೀರಿದ್ದವು. ನಂತರ ಸ್ನಾತಕೋತ್ತರ ಪದವಿ ಪೂರ್ಣಗೊಳ್ಳುವವರೆಗೆ ಕವಿತೆ, ಕತೆ ಬರೆದೆನಾದರೂ ಪ್ರಕಟಿಸಲಿಲ್ಲ. ೧೯೮೭ ರಿಂದ ಬರವಣಿಗೆಯಲ್ಲಿ ಶ್ರದ್ಧಾಪೂರ್ವಕವಾಗಿ ತೊಡಗಿಸಿಕೊಂಡೆ.”

ಟೈಮ್ಸ್ಮಕ್ಕಳ ಸಾಹಿತ್ಯವನ್ನೇ ಆರಿಸಿಕೊಂಡಿದ್ದರ ಬಗ್ಗೆ ಕಾರಣ ಇದೆಯಾ ಸರ್ ?

“ನನ್ನೂರು ಮನಗೂಳಿ. ವಿಜಯಪುರಕ್ಕೆ ಹತ್ತಿರವಿದೆ. ವಿಜಯಪುರ ಜಿಲ್ಲೆ ‘ ಮಕ್ಕಳ ಸಾಹಿತ್ಯದ ತೊಟ್ಟಿಲು’ ಎಂದೇ ಹೆಸರಾಗಿದೆ. ಹಿರಿಯ ಮಕ್ಕಳ ಸಾಹಿತಿಗಳ ನಿರಂತರ ಒಡನಾಟದಿಂದ ಮಕ್ಕಳ ಸಾಹಿತ್ಯದೆಡೆ ಆಸಕ್ತಿ ಕುದುರಿತು. ಸಿಸು ಸಂಗಮೇಶ, ಈಶ್ವರ ಕಮ್ಮಾರ, ಜಯವಂತ ಕಾಡದೇವರ ಅವರಲ್ಲದೆ ಡಾ.ಗುರುಲಿಂಗ ಕಾಪಸೆಯವರು ಮಕ್ಕಳ ಸಾಹಿತ್ಯ ರಚನೆಗೆ ಒತ್ತು ನೀಡಲು ಪ್ರೇರಣೆ ನೀಡಿದ್ದಾರೆ.”

ಟೈಮ್ಸ್ಈಗಿನ ವಾತಾವರಣದಲ್ಲಿ ಶಿಶು ಸಾಹಿತ್ಯದ ಪ್ರಸ್ತುತತೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.

“ಮಕ್ಕಳ ಸೃಜನಶೀಲ ವಿಕಾಸಕ್ಕೆ , ಮಾನಸಿಕ, ಬೌದ್ಧಿಕ ವಿಕಾಸಕ್ಕೆ, ಮನೋಲ್ಲಾಸಕ್ಕೆ, ಭಾಷಾ ಜ್ಞಾನ ಹಾಗೂ ಲೋಕ ಜ್ಞಾನ ವೃದ್ಧಿಗೆ ಸಾಹಿತ್ಯ ತುಂಬ ಪೂರಕವಾದ ಅಂಶವಾಗಿದೆ. ಮೊಬೈಲ್, ಅಂತರ್ಜಾಲದ ಈ ಯುಗದಲ್ಲಿ ಶಿಶು ಸಾಹಿತ್ಯದ ಪ್ರಸ್ತುತತೆ ಹಿಂದಿಗಿಂತ ಹೆಚ್ಚಾಗಿದೆ.”

ಟೈಮ್ಸ್ಈಗಿನ ಮಕ್ಕಳ ಓದುವಿಕೆ ಹೆಚ್ಚಿಸುವ ಅಗತ್ಯ ಹಾಗೂ ಸಲಕರಣೆಗಳ ಬಗ್ಗೆ ಹೇಳಿ…

“ಮೇಲೆ ಹೇಳಿದ್ದೀನಲ್ಲ…ಇದು ಮೊಬೈಲ್, ಅಂತರ್ಜಾಲ ಮುಂತಾದ ವಿದ್ಯುನ್ಮಾನ ಮಾಧ್ಯಮಗಳ, ತಂತ್ರಜ್ಞಾನ ಯುಗವಾಗಿದ್ದು ಮಕ್ಕಳು ಪಠ್ಯ ಬಿಟ್ಟು ಉಳಿದ ಪುಸ್ತಕಗಳ ಕಡೆಗೆ ಲಕ್ಷ್ಯ ಕೊಡುತ್ತಿಲ್ಲ. ಅವರಲ್ಲಿ ವಾಚನಾಭಿರುಚಿ ಕಡಿಮೆಯಾಗುತ್ತಿದೆ. ಅದನ್ನೂ ಬೆಳೆಸುವುದು ಅನಿವಾರ್ಯ ಅಂಶವಾಗಿದೆ. ಮಕ್ಕಳ ಕೈಗೆ ಪುಸ್ತಕಗಳನ್ನು ನೀಡುವುದು, ಮನೆಯಲ್ಲಿ ಪಠ್ಯೇತರ ಪುಸ್ತಕಗಳ ಬಗ್ಗೆ ಚರ್ಚಿಸಿ ಅದಕ್ಕಾಗಿ ‘ ಓದುವ ಸಮಯ ‘ ಮಾಡಬೇಕಾಗಿರುವ ಸನ್ನಿವೇಶವಿದು.”

ಟೈಮ್ಸ್ಪ್ರಸ್ತುತ ಸಾಹಿತ್ಯದ ಬೆಳವಣಿಗೆಯ ಬಗ್ಗೆ ತಮ್ಮ ಅಭಿಪ್ರಾಯವೇನು ?

“ಸಾಹಿತ್ಯದ ಬೇರೆ ಬೇರೆ ಪ್ರಕಾರದ ಅತ್ಯುತ್ತಮ ಕೃತಿಗಳು ಕನ್ನಡ ಸಾಹಿತ್ಯ ಕಣಜವನ್ನು ನಿರಂತರ ಶ್ರೀಮಂತಗೊಳಿಸುತ್ತಲೇ ಬಂದಿವೆ. ರಾಷ್ಟ್ರ, ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆದಿರುವ ಕೃತಿಗಳು ಪ್ರಸ್ತುತ ಕಾಲದಲ್ಲಿ ಬಂದಿವೆ ಎಂಬುದು ಅಭಿಮಾನದ ಸಂಗತಿಯಾಗಿದೆ.”

ಟೈಮ್ಸ್ಮೊಬೈಲ್ ಗೆ ಅಂಟಿಕೊಂಡಿರುವ ಇಂದಿನ ಯುವಕರಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ತಮ್ಮ ಸಲಹೆ....

‘ಅತಿಯಾದರೆ ಅಮೃತ ಕೂಡ ವಿಷ ‘ ಎಂಬುದನ್ನು ಯುವಕರು ಮನಗಾಣಬೇಕು. ಈ ಅಪಾಯದಿಂದ ಯುವಕರು ತಪ್ಪಿಸಿಕೊಳ್ಳಬೇಕು. ಅವಿಷ್ಕಾರಗಳನ್ನು ಒಳಿತಿಗಾಗಿ ಬಳಸಬೇಕು. ವಿದ್ಯಾರ್ಥಿಗಳು, ಯುವಕರು ಮೊಬೈಲ್‌ ಬಳಕೆಯನ್ನು ಮಿತಿಗೊಳಿಸಿದಷ್ಟು ಲಾಭವಿದೆ. ಇದಕ್ಕೆ ಅನೇಕ ಸಾಧಕರು ತಮ್ಮ ಅನುಭವ ಹಂಚಿಕೊಂಡಿದ್ದು ನಮ್ಮೆದುರಿಗೆ ಇದೆ. ಈ ಬಗ್ಗೆ ಅರಿವು, ಇಚ್ಛಾಶಕ್ತಿ ಯುವಕರಲ್ಲಿ ಲೋಕಾನುಭವದಿಂದ ತಾನೇ ಉಂಟಾಗಬೇಕು.

ಟೈಮ್ಸ್ದೇಶದಲ್ಲಿನ ಪ್ರಸಕ್ತ ರಾಜಕೀಯ ಸನ್ನಿವೇಶದ ಬಗ್ಗೆ ತಾವೇನು ಹೇಳುವಿರಿ ?

“ಭಾರತ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರವೆನಿಸಿಕೊಂಡಿದೆ. ರಾಜಕೀಯ ಸ್ಥಿರತೆಯಿಂದಾಗಿ ಯಾವಾಗಲೂ ಭಾರತದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತ ಬಂದಿವೆ. ಪ್ರಸ್ತುತ ವಿಜ್ಞಾನ ಮತ್ತು ತಂತ್ರಜ್ಞಾನದ ಅವಿಷ್ಕಾರಗಳನ್ನು ಹೆಚ್ಚು ಹೆಚ್ಚು ಬಳಸುತ್ತ ಭಾರತ ಮುಂದೆ ಸಾಗುತ್ತಿದೆ.”

ಟೈಮ್ಸ್ಬುದ್ಧಿಜೀವಿಗಳೆನಿಸಿಕೊಂಡಿರುವ ಸಾಹಿತಿಗಳನ್ನು ಹೇಗೆ ವ್ಯಾಖ್ಯಾನಿಸುತ್ತೀರಿ ?

“ಸಾಹಿತಿಗಳು ಭಾಷೆ ಹಾಗೂ ಸಂಸ್ಕೃತಿಯ ರಾಯಭಾರಿಗಳು. ಬದುಕಿನಲ್ಲಿ ಸಾಹಿತ್ಯ ನೀಡುವ ಆನಂದ, ಪ್ರೇರಣೆ ಯನ್ನು ಲೆಕ್ಕಹಾಕಲು ಬರುವುದಿಲ್ಲ. ಸಾಹಿತ್ಯದ ಪಾತ್ರ ಸಮಾಜದಲ್ಲಿ ಮಹತ್ವದ್ದಾಗಿದೆ. ಅದರ ರೂವಾರಿಗಳು ಸಾಹಿತಿಗಳೇ ಆಗಿದ್ದಾರೆ.”

ಟೈಮ್ಸ್ತಾಲೂಕಾ ಸಮ್ಮೇಳನಾಧ್ಯಕ್ಷರಾಗಿರುವುದರ ಕುರಿತು….

ಸಂತೋಷ ಸಹಜ. ಈ ಮೂಲಕ ಹೊಣೆಗಾರಿಕೆಯೂ ಹೆಚ್ಚಿದೆ ಎಂಬ ಅರಿವೂ ನನ್ನಲ್ಲಿದೆ.

ಟೈಮ್ಸ್ಬರುವ ದಿನಗಳಲ್ಲಿ ಸಾಹಿತ್ಯ ರಚನೆಯ ಜವಾಬ್ದಾರಿ ಹೆಚ್ಚಿದೆ ಅನಿಸುತ್ತದೆಯಾ ? 

“ಆಗಲೇ ಹೇಳಿದೀನಿ. ಖಂಡಿತ ಜವಾಬ್ದಾರಿ ಹೆಚ್ಚಿದೆ”

ಟೈಮ್ಸ್ಧನ್ಯವಾದಗಳು ಸರ್, ನಮಸ್ಕಾರ.

ನಮಸ್ಕಾರ…


ಸಂದರ್ಶನ: ಉಮೇಶ ಬೆಳಕೂಡ

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group