“ಅಭಿಯಾನದ” ಎಂಭತ್ತನೇ ದಿನ ಬದಾಮಿಯ ಬನಶಂಕರಿ

Must Read

“ಅಭಿಯಾನದ” ಎಂಭತ್ತನೇ ದಿನ ಬದಾಮಿಯ ಬನಶಂಕರಿ, ತುಳಸಿಗೆರೆ ಹಣಮಂತನ ಅರ್ಚಕರಿಗೂ ಕಿಟ್! ನೀರಲಕೆರೆಯ ವಿಠ್ಠಲನೂ ಹಸಿದಿದ್ದ ನಾವೂ ಹಸಿದಿದ್ದೆವು! ಹೊಲದ
ಶೆಡ್ ಕೆಳಗೇ ಖಡಕ್ ರೊಟ್ಟಿ, ಚಟ್ನಿ!!

ಮಾರ್ಚ 23 ರಂದು ಆರಂಭವಾದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ “ಹಸಿದವರತ್ತ ನಮ್ಮ ಚಿತ್ತ” ಅಭಿಯಾನವು ಬುಧವಾರ ಜೂನ್ 10 ಕ್ಕೆ 80 ದಿನಗಳನ್ನು ಪೂರ್ಣಗೊಳಿಸಿದೆ. ನೂರು ದಿನ ತಲುಪಲು” ಇನ್ನೂ ಇಪ್ಪತ್ತು ದಿನ” ಬಾಕಿ! ಇದನ್ನೇ “ಇನ್ನು ಇಪ್ಪತ್ತೇ ದಿನ” ಎಂದು ತಿಳಿದರೆ ಗುರಿ ತಲುಪಲು ಹಗುರ ಎನಿಸುತ್ತದೆ!

ಶಿಖರ ಏರುವವನಿಗೆ ಕೊನೆಯ ಹಂತ ಏರುವಷ್ಟರಲ್ಲಿ ಕೈಗಳು ಸೋಲತೊಡಗುತ್ತವೆ. ಆದರೆ ಮೇಲೆ ನೋಡಿದಾಗ ಇನ್ನೇನು ಸ್ವಲ್ಪ ಏರಿದರೆ ಸಾಕು ಎನಿಸಿ ಮತ್ತೆ ಏರತೊಡಗುತ್ತಾನೆ. ನನಗೂ ಕೈಸೋತ ಅನುಭವವಾಗುತ್ತಿದೆ.ಆದರೆ ಎದುರಿಗೆ ಕಾಣುವ ಹಸಿದ ಮುಖಗಳು ಕಂಡಾಗ ಮತ್ತೆ ಗಟ್ಟಿ ಮನಸ್ಸು ಮಾಡುತ್ತೇನೆ. ನಿರೀಕ್ಷಿತ ವಲಯದಿಂದ ಬರಬೇಕಾಗಿದ್ದ ಆಹಾರ ಧಾನ್ಯದ ದಾನ ಬರದೇ ಅನಿರೀಕ್ಷಿತ ಮೂಲಗಳಿಂದ ದಾನ ಬರುತ್ತಿದೆ.

ಬುಧವಾರ ನಾನು ಬಿಜಿನೆಸ್ ಗಾಗಿ ಬಾಗಲಕೋಟೆಗೆ ಹೋಗಿದ್ದೆ.ಅಲ್ಲಿ ಮೂರು ಗಂಟೆ ಮಾತ್ರ ಕೆಲಸ. ಸುಮೊದಲ್ಲಿ ಒಂದಿಷ್ಟು ಕಿಟ್ ಹಾಕಿದೆ. ಎಲ್ಲಿಯೂ ಟಿಫಿನ್,ಊಟ ಮಾಡಬಾರದೆಂದು ಎಲ್ಲವನ್ನೂ ಕಟ್ಟಿಕೊಂಡೇ ನಾಲ್ವರು ಹೊರಟು ಮೊದಲು ನೇಸರಗಿ ಯರಗಟ್ಟಿ ನಡುವಿನ ತೆನಿಕೊಳ್ಳದ ಬಸ್ ಶೆಲ್ಟರ್ ಬಳಿಯೇ ಇಡ್ಲಿ ಟಿಫಿನ್.

ಬಾಗಲಕೋಟೆಯಲ್ಲಿ ಕೆಲಸ ಮುಗಿಸಿ ಬದಾಮಿಯತ್ತ ಹೊರಟಾಗ ಮಧ್ಯಾನ್ಹ 2.30. ನೀರಲಕೆರೆ ಬಳಿ ರಸ್ತೆಯ ಬದಿಯ ಕಬ್ಬಿನ ತೋಟದಲ್ಲಿ ಶೆಡ್ ಕಂಡಿತು. ಬಾಗಿಲುಗಳಿಗೆ ಕೀಲಿ ಹಾಕಿದ್ದರು.ಹೊರಗೆ ಜಾಗೆಯಿತ್ತು.ಅಲ್ಲಿಯೇ ಊಟಕ್ಕೆ ಕುಳಿತಾಗ ಅಲ್ಲಿಯೇ ವಿಠ್ಠಲ ತೆಗ್ಗಿ ಎಂಬ ಹುಡುಗ ಆಡುಗಳನ್ನು ಕಾಯುತ್ತಿದ್ದ.ಊಟಕ್ಕೆ ಕರೆದೆ. ಬಂದು ಖಡಕ್ ಸಜ್ಜೆ, ಜೋಳದ ರೊಟ್ಟಿ, ಶೇಂಗಾ, ಬಳ್ಳೊಳ್ಳಿ ಚೆಟ್ನಿ, ಅಗಸಿ ಪುಡಿ, ಕೆನೆ ಮೊಸರು, ಮೊಸರನ್ನ ಊಟ. ವಿಠ್ಠಲ ಕೈಯಲ್ಲಿ ರೊಟ್ಟಿ,ಚೆಟ್ನಿ ಹಿಡಿದುಕೊಂಡು ಅನೇಕ ಬಾರಿ ಎದ್ದೆದ್ದು ಹೋದ. ಅವನ ಆಡುಗಳು ಬೇರೆಯವರ ಹೊಲದಲ್ಲಿ ಹೋಗಬಾರದೆಂಬ ಕಾಳಜಿ ಅವನಿಗೆ!

ವಿಠ್ಠಲನಿಗೆ ನಾನು, “ಬದಾಮಿಯ ಎಮ್.ಎಲ್.ಎ. ಯಾರು? ಎಂದು ಕೇಳಿದೆ.ಗೊತ್ತಿಲ್ಲ ಎಂದು ಉತ್ತರಿಸಿದ.ಸಿದ್ದರಾಮಯ್ಯ ಯಾರು? ಎಂದು ಅದಕ್ಕೂ ಉತ್ತರಿಸಲಿಲ್ಲ.” ನನಗೆ ಜಾರಕಿಹೊಳಿಯವರು ಗೊತ್ತು” ಎಂದು ಉತ್ತರಿಸಿದ ವಿಠ್ಠಲ ನಾಲ್ವರು ಜಾರಕಿಹೊಳಿಯವರ ಹೆಸರನ್ನು ಪಟಪಟನೇ ಹೇಳಿಬಿಟ್ಟ!

ಅಲ್ಲಿಂದ ಬನಶಂಕರಿ. ಅಲ್ಲಿ ಭಣ, ಭಣ. ಭಕ್ತರೇ ಇಲ್ಲ. ತಲೆಯ ಮೇಲೆ ರೊಟ್ಟಿ ಬುಟ್ಟಿ ಹೊತ್ತು ಸದಾ ತಿರುಗುತ್ತಿದ್ದ ಢಾಕಣ ಶಿರೂರು ಗ್ರಾಮದ ಮಹಿಳೆಯರೇ ಕಾಣಲಿಲ್ಲ. ದೇವಿ ದರ್ಶನ ಪಡೆದು ಅರ್ಚಕರಿಗೆ ಆಹಾರ ಧಾನ್ಯ ಅರ್ಪಿಸಿ ನಮ್ಮ ಅಭಿಯಾನವನ್ನು ವಿವರಿಸಿದೆ.

ಹೊರಗೆ ಕಾವಲು ನಿಂತಿದ್ದ ಈರಯ್ಯ ವಸ್ತ್ರದ ಮುಖಕ್ಕೆ ಹಾಕಿದ್ದ ಮಾಸ್ಕ ಮೇಲೆ ಬದಾಮಿಯ ಶಾಸಕ,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿರುವದನ್ನು ನಮ್ಮ ವೀರೇಂದ್ರ ಗಮನಿಸಿದ.ಫೋಟೊ ತೆಗೆದೆ.ತಾಲೂಕಿನ ತುಂಬ ಇಂತಹ ಮಾಸ್ಕ ಹಂಚಲಾಗಿದೆ. ಈ ” ಐಡಿಯಾ” ಇತರ ಶಾಸಕರಿಗೆ ಇನ್ನೂ ಬಂದಂತೆ ಕಾಣಿಸುತ್ತಿಲ್ಲ!

ವಾಪಸ್ ಬೆಳಗಾವಿಗೆ ಬರುವಾಗ ಮುಧೋಳ ತಾಲೂಕಿನ ತುಳಸೀಗೆರೆಯ ಹಣಮಂತನ ದರ್ಶನ. ಅಲ್ಲಿಯ ಅರ್ಚಕರಿಗೂ ಅರ್ಪಿಸಿದೆವು.ಅಲ್ಲಿಯೂ ಭಕ್ತರೇ ಇಲ್ಲ.ತೆಂಗಿನ ಕಾಯಿ ಮಾರುವವರೂ ಉಪವಾಸ,ವನವಾಸ!!

ಕೈ ಸೋತರೂ ನೂರು ದಿನಕ್ಕೆ ಇನ್ನು” ಕೇವಲ 20″ ದಿನ ಮಾತ್ರ ಎಂದುಕೊಂಡೇ ಸಾಗುತ್ತೇನೆ.ನನ್ನ ಶೆಟ್ಟಿಗಲ್ಲಿಯ ಮಿತ್ರ,ಬರಹಗಾರ ಶ್ರೀ ಮಹಾಂತೇಶ ಗದ್ದಿಹಳ್ಳಿ ಶೆಟ್ಟಿ ಅವರು ಅಭಿಯಾನದ ಬಗ್ಗೆ,ನನ್ನ ಬಗ್ಗೆ ಬರೆದಿದ್ದಾರೆ. ಧನ್ಯವಾದ.

ಅಶೋಕ ಚಂದರಗಿ,ಅಧ್ಯಕ್ಷರು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿ
ಮೊ; 9620114466
ಕೇವಲ ಫೋನ್: 9448114466

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group