ಗೋಕಾಕ, ನ. 7- ದೇಶ ಭಕ್ತ ಸಂಘಟನೆಯಾದ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ವು (ಆರ್‌ಎಸ್ಎಸ್) ಮುಸ್ಲಿಮರ ವಿರೋಧಿಯೆಂಬಂತೆ ಬಿಂಬಿಸುವುದು ಸರಿಯಲ್ಲ. ಅದು ಮುಸ್ಲಿಮ್ ವಿರೋಧಿಯಲ್ಲ. ದೇಶವನ್ನು ಬಲಿಷ್ಠಗೊಳಿಸಲು ಅವಿರತವಾಗಿ ಶ್ರಮಿಸುತ್ತಿರುವ ಸಂಘಟನೆ ಆರ್ಎಸ್ಸೆಸ್ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಇಲ್ಲಿನ ನಗರಸಭೆಯ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಕ್ಷದ ಗೋಕಾಕ ಗ್ರಾಮೀಣ ಮಂಡಲ ಪದಾಧಿಕಾರಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ತರಬೇತಿ ಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಕೂಡ ಬಾಲ್ಯದಿಂದಲೇ ಆರ್.ಎಸ್.ಎಸ್. ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಲ್ಲಿನ ಶಿಸ್ತು ಮತ್ತು ತತ್ವಬದ್ಧ ಸಿದ್ಧಾಂತ, ನೀತಿಗಳನ್ನು ಮನ ಗಂಡಿದ್ದೇನೆ.ಅದರಿಂದಲೇ ಇಂದು ಭಾರತೀಯ ಜನತಾ ಪಕ್ಷದಲ್ಲಿ ಕಾರ್ಯನಿರ್ವಹಿಸುವುದು ಸರಳವಾಗಿದೆ ‘ಶಿಬಿರದಲ್ಲಿ ಪಾಲ್ಗೊಂಡವರು ಪಕ್ಷದ ಸಿದ್ಧಾಂತಗಳ ಬಗ್ಗೆ ಕಲಿತು ಕಾರ್ಯಕರ್ತರಿಗೆ ತಲುಪಿಸುವ ಮೂಲಕ ಸಂಘಟನೆ ಬಲಿಷ್ಠಗೊಳಿಸಬೇಕು ಎಂದು ಅವರು ತಿಳಿಸಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ‘ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ ಪಕ್ಷವಾಗಿದೆ. ಸಾಮಾನ್ಯ ಕಾರ್ಯಕರ್ತನಿಗೂ ಹೆಚ್ಚಿನ ಅವಕಾಶಗಳು ಇಲ್ಲಿವೆ. ಇದಕ್ಕೆ ಬಹಳಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಪಕ್ಷವು ಉಳಿದ ಪಕ್ಷಗಳಿಗಿಂತ ಭಿನ್ನವಾದ ರೀತಿಯಲ್ಲಿ ಕಾರ್ಯ ನಿರ್ವಹಿಸಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮೌಲ್ಯಾಧಾರಿತವಾಗಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.
ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಇದ್ದರು. ಎಲ್.ಎಚ್. ಬಂಡಿ ಸ್ವಾಗತಿಸಿದರು.
ಕೋವಿಡ್ ಮಾರ್ಗಸೂಚಿಯಂತೆ ಶಾಲಾರಂಭ
ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತಂತೆ ಯಾವುದೇ ನಿರ್ಧಾರವಾಗಿಲ್ಲ. ಈ ಬಗ್ಗೆ ಶಿಕ್ಷಣ ಸಚಿವರು ಹಾಗೂ ಪ್ರಮುಖರು ಚರ್ಚಿಸಿ ನಿರ್ಧಾರ ತೀರ್ಮಾನಿಸಲಿದ್ದಾರೆ’ ಎಂದು ಸಚಿವರು ಹೇಳಿದರು ‘ಕೋವಿಡ್ ಮಾರ್ಗಸೂಚಿಯಂತೆ ಶಾಲೆ ಆರಂಭಿಸುವ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಇಷ್ಟರಲ್ಲೇ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿ ನಿರ್ಧಾರ ಪ್ರಕಟಿಸಲಿದ್ದಾರೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.