ಸುಭಾಷ್ ಚಂದ್ರ ಬೋಸ್ ಜನನ
ಜನವರಿ ೨೩, ೧೮೯೭ — ಮರಣ (ಮಾಹಿತಿ ಇಲ್ಲ) ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು.
ಅವರು ಭಾರತದ ಮಹಾನ್ ವ್ಯಕ್ತಿಯಾಗಿದ್ದರು. ಅವರು ಭಾರತೀಯ ಸ್ವಾತಂತ್ರ್ಯದ ಕಾರಣಕ್ಕಾಗಿಯೇ ಹೋರಾಡಿದ್ದರು. ಭಾರತವು ಸ್ವಾತಂತ್ರ್ಯ ಪಡೆಯಲು ಭಾರತಕ್ಕೆ ಸಹಾಯ ಮಾಡಿದ ಜರ್ಮನಿ, ಜಪಾನ್, ರಷ್ಯಾಗಳಂತಹ ದೇಶಗಳು ಬ್ರಿಟಿಷ್ ವಿರುದ್ಧ ಹೋರಾಡಲು ಮತ್ತು ಸ್ವಾತಂತ್ರ್ಯ ಪಡೆಯಲು ಬೋಸರಿಗೆ ಸಹಾಯ ಮಾಡಲು ಸಿದ್ಧವಾಗಿದ್ದವು ಎಂದು ಭಾವಿಸಲಾಗಿವೆ.
ಗಾಂಧಿಯವರು ಸ್ವಾತಂತ್ರ್ಯ ಪಡೆಯುವ ಬಗೆಗೆ ಒಂದೇ ಮಾರ್ಗದಲ್ಲಿದ್ದರು. ಆದರೆ ಬೋಸ್ ಸ್ವಾತಂತ್ರಕ್ಕೆ ಸಸಸ್ತ್ರ ಹೋರಾಟವನ್ನೂ ಒಪ್ಪಿದ್ದರು. ಅವರ ಹೋರಾಟವು ವಿಫಲವಾದರೂ, ಭಾರತ ಸ್ವಾತಂತ್ರ ಪಡೆಯುವಲ್ಲಿ ಜನರನ್ನು ಉತ್ತೇಜಿಸಿ ತನ್ನದೇ ಆದ ಕೊಡಿಗೆ ನೀಡಿದೆ ಎಂದು ಭಾವಿಸಲಾಗಿದೆ.
ಜನನ: ಜನವರಿ ೨೩,೧೮೯೭ ಕಟಕ್, ಒಡಿಶಾ
ವಿದಾಯ: ಆಗಸ್ಟ್ ೧೮, ೧೯೪೫
ಟೈಪೈ, ಟೈವಾನ್(ಸಂಭಾವಿತ)
ವಿಮಾನ ಅಪಘಾತ (ಸಂಭಾವಿತ)
Known for: ಭಾರತದ ಸ್ವಾತಂತ್ರ್ಯ ಸಂಗ್ರಾಮ, ಭಾರತೀಯ ರಾಷ್ಟ್ರೀಯ ಸೇನೆ ನೇತಾಜಿ, ಆಜಾದ್ ಹಿಂದ್ ಮುಖ್ಯಸ್ಥ, ಅವಿಭಜಿತ ಅಖಂಡ ಭಾರತದ ಪ್ರಥಮ ಪ್ರಧಾನಿ
Political party: Indian National Congress ನ ಫಾರ್ವರ್ಡ್ ಬ್ಲಾಕ್
ಮಗಳು: ಅನಿತ ಬೋಸ್ ಫಾಫ್
ವಿದ್ಯಾಭ್ಯಾಸ
ಸುಭಾಷ್‌ಚಂದ್ರ ಬೋಸ್ ಜನಿಸಿದ್ದು ೧೮೯೭ರ ಜನವರಿ ೨೩ರಂದು, ಒಡಿಶಾದ ಕಟಕ್‌ನಲ್ಲಿ. ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಆ ದಂಪತಿಗಳ ೧೪ ಜನ ಮಕ್ಕಳಲ್ಲಿ ಸುಭಾಷ್ ೯ ನೇಯವರು.ಕಟಕ್‌ನಲ್ಲಿ ರಯಾವೆನ್‌ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ, ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್‌ರ ರಿಂದ ಪ್ರೇರಣೆ, ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು ’ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರಭಾವಿತರಾದ ಬೋಸರು ಅರವಿಂದರ ’ಆರ್ಯ’ ಮಾಸಪತ್ರಿಕೆಯ ತಪ್ಪದ ಓದುಗ!
೧೯೧೯ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ, ನಂತರ ೧೯೧೯ರ ಸೆಪ್ಟೆಂಬರ್ ೧೫ರಂದು ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ. ೧೯೨೦ರ ಸೆಪ್ಟಂಬರ್‌ನಲ್ಲಿ ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪದವಿ ಪ್ರಾಪ್ತಿ.ವಿದೇಶೀ ನೌಕರಿ ಒಲ್ಲೆ ಎಂದು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನು ೧೯೨೧ರ ಎಪ್ರಿಲ್ ೨೨ರಂದು ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ಮರಳಿಸಿದ್ದರು ಬೋಸ್!
೨೦ ತಿಂಗಳ ಇಂಗ್ಲೆಂಡ್ ವಾಸದ ನಂತರ ೧೯೨೧ರ ಜುಲೈ ೧೬ರಂದು ಮುಂಬಯಿಗೆ ಮರಳಿದರು ಬೋಸ್. ಅಂದೇ ಗಾಂಧೀಜಿ ಜತೆ ಮೊದಲ ಭೇಟಿ.೧೯೨೧ರ ಆಗಸ್ಟ್‌ನಿಂದ ಚಿತ್ತರಂಜನ್‌ದಾಸ್‌ರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ. ಚಳುವಳಿಯ ಸಂದರ್ಭವೊಂದರಲ್ಲಿ ಮ್ಯಾಜಿಸ್ಟ್ರೇಟರು ೬ ತಿಂಗಳ ಸಜೆ ಘೋಷಿಸಿದಾಗ ’ಬರಿಯ ೬ ತಿಂಗಳೇ? ನನ್ನದೇನು ಕೋಳಿಕದ್ದ ಅಪರಾಧವೇ?’ ಎಂದಿದ್ದರು ಬೋಸ್!
ರಾಷ್ಟ್ರ ನಿರ್ಮಾಣದ ಜವಾಬ್ದಾರಿ
ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್‌ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ಕಾಂಗ್ರೆಸ್‌ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ಸುಭಾಷರು.
ತಾನು ಕಷ್ಟಪಟ್ಟುಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಬೋಸ್‌ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಮಾಡಿದವರಲ್ಲ.
ಶೀಘ್ರ ಸ್ವಾತಂತ್ರ್ಯಪ್ರಾಪ್ತಿಗಾಗಿ ಅವರು ಮಂಡಿಸುತ್ತಿದ್ದ ವಾದಗಳು, ಅದಕ್ಕಾಗಿ ಶ್ರಮಿಸಬೇಕಾದ ತ್ವರಿತ ಸಿದ್ಧತೆಗಳ ಕುರಿತು ಬೋಸ್‌ರ ನಿಲುವುಗಳೆಲ್ಲ ಕಾಂಗ್ರೆಸ್‌ನ ಮಂದಗಾಮಿ ಗುಂಪಿಗೆ ಅಸಹನೀಯವಾಗಿತ್ತು. ಸ್ವತಃ ಗಾಂಧೀಯವರೇ ಹಲವು ಬಾರಿ ಬೋಸ್‌ರನ್ನು ಟೀಕಿಸಿದ್ದರು! ಅವರಿಗೆ ದೂರಗಾಮಿ ಚಿಂತನೆ ಇಲ್ಲ ಎಂಬ ಆರೋಪ.
ಆದರೆ ೧೯೩೮ರಲ್ಲಿ ಭಾರತದ ವಿಭಜನೆಯ ಮುಸ್ಲಿಂಲೀಗ್- ಬ್ರಿಟಿಷರ ತಂತ್ರಗಾರಿಕೆಯ ಕುರಿತು ಮೊದಲಬಾರಿಗೆ ಬಹಿರಂಗವಾಗಿ ಎಚ್ಚರಿಸಿದರೂ ಮಂದಗಾಮಿಗಳಿಗೆ ಕೇಳಿಸಲಿಲ್ಲ. ಪರಿಣಾಮವಾಗಿ ೯ ವರ್ಷದಲ್ಲೇ ದೇಶ ಹೋಳಾಯಿತು! ಬೋಸ್‌ರ ದೂರಗಾಮಿ ಚಿಂತನೆಗಳಿಗೂ ಕವಡೆ ಕಿಮ್ಮತ್ತಿನ ಬೆಲೆ ಕೊಡದ ಕಾಂಗ್ರೆಸ್‌ನಿಂದ ಸ್ವತಃ ಹೊರಬಂದವರು ಬೋಸ್
ಸ್ವರಾಜ್ಯಪಕ್ಷ ಸ್ಥಾಪನೆ.
ಕಾಂಗ್ರೆಸ್‌ನ ಡೋಲಾಯಮಾನ ನೀತಿಗಳಿಗೆ ಬೇಸತ್ತು ಚಿತ್ತರಂಜನ್‌ದಾಸ್‌ರಿಂದ ’ಸ್ವರಾಜ್ಯಪಕ್ಷ ಸ್ಥಾಪನೆ. ಬೋಸ್‌ರು ದಾಸ್‌ರ ಜತೆಗೇ ಚಟುವಟಿಕೆಗಳಲ್ಲಿ ಭಾಗಿ. ೧೯೨೩ರ ಅಕ್ಟೋಬರ್‌ನಿಂದ ದಾಸ್‌ರು ಸ್ಥಾಪಿಸಿದ್ದ ’ಫಾರ್ವರ್ಡ್’ ದಿನಪತ್ರಿಕೆಯ ನಿರ್ವಹಣೆಯ ಜವಾಬ್ದಾರಿ. ೧೯೨೫ರ ಜೂನ್ ೧೬, ದಾಸ್‌ರ ನಿಧನ, ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಬೋಸ್‌ರ ಬಂಧನ, ಬಿಡುಗಡೆ.
೧೯೨೭ರ ನವೆಂಬರ್‌ನಲ್ಲಿ ಬಂಗಾಳಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆ, ಆದರೆ ಗಾಂಧಿ ಪ್ರಣೀತ ಮಂದ ಮಾರ್ಗಕ್ಕಿಂತ ಸುಭಾಷ್‌ರದು ತೀರಾ ಭಿನ್ನ ಎಂಬುದು ಕ್ರಮೇಣ ಗೊತ್ತಾಯಿತು. ಹತ್ತಾರು ಚಳುವಳಿಗೆ ನೇತೃತ್ವ, ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆ.೧೯೩೩, ಫೆಬ್ರವರಿ ೨೩ರಂದು ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ.
ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿ ವಿಯೆನ್ನಾಗಳ ಭೇಟಿ, ತ್ವರಿತಗತಿಯ ಪ್ರವಾಸ, ಮಿಂಚಿನ ಓಡಾಟ. ಸ್ವಿಟ್ಜರ್ಲೆಂಡ್, ಚೆಕೋಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಪ್ರಚಾರ. ಇಟೆಲಿ ಪ್ರಧಾನಿ ಬೆನಿತೋ ಮುಸ್ಸೋಲಿನಿ ಜತೆ ಚರ್ಚೆ. ೧೯೩೬ ಏಪ್ರಿಲ್ ೮ರಂದು ಮರಳಿ ಭಾರತಕ್ಕೆ, ಬಂದರಲ್ಲೇ ಬಂಧನ. ೧೯೩೭ರಲ್ಲಿ ಮತ್ತೆ ಆಸ್ಟ್ರಿಯಾ ಪಯಣ.
ರಾಜಕೀಯ ಅನುಭವ-ಒಳನೋಟ
ಕಾಂಗ್ರೆಸ್‌ನ ಅಖಿಲಭಾರತ ಅಧಿವೇಶನದ ಅಧ್ಯಕ್ಷತೆ ೧೯೩೮ರ ಫೆಬ್ರವರಿ ೧೯ರಂದು, ಹರಿಪುರದಲ್ಲಿ. ವಿದೇಶೀ ನೆಲಗಳ ಓಡಾಟದಿಂದ ಪಡೆದ ರಾಜಕೀಯ ಅನುಭವ-ಒಳನೋಟಗಳಿಂದ ಬ್ರಿಟಿಷರ ಒಡೆದು ಆಳುವನೀತಿ ಕುರಿತ ಕ್ಷಾತ್ರತೇಜದ ಐತಿಹಾಸಿಕ ಭಾಷಣ, ದೇಶ ವಿಭಜನೆಯ ಬ್ರಿಟಿಷರ ತಂತ್ರದ ಸೂಚನೆ. ಮುಂದಿನ ೯ ವರ್ಷದಲ್ಲೇ ಸತ್ಯವಾದ ಬೋಸ್ ಭವಿಷ್ಯವಾಣಿ! ಆರೆಸ್ಸೆಸ್‌ನ ’ಸಂಘ ಶಿಕ್ಷಾವರ್ಗ’ ಶಿಬಿರಕ್ಕೆ ೧೯೩೮ರಲ್ಲಿ ಭೇಟಿಗೆ ಒಪ್ಪಿಗೆ, ಸಂಘದ ಧ್ಯೇಯ – ಅನುಶಾಸನ ಕಾರ‍್ಯಪದ್ಧತಿ ಕುರಿತ ಶ್ಲಾಘನೆ.
ಆದರೆ ಕಾರಣಾಂತರಗಳಿಂದ ಭೇಟಿ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಅಧ್ಯಕ್ಷಗಾದಿಗೆ ನಡೆದ ಮೊತ್ತಮೊದಲ ಚುನಾವಣೆಯಲ್ಲಿ ಡಾ|| ಪಟ್ಟಾಭಿ ಸೀತಾರಾಮಯ್ಯರ ವಿರುದ್ಧ ೨೧೫ ಮತಗಳ ಗೆಲುವು! ಸುಭಾಷ್ ವಿರುದ್ಧ ಹಲವಾರು ಟೀಕೆಗಳು, ಅನಗತ್ಯ ಋಣಾತ್ಮಕ ಮಾತುಗಳು ಗಾಂಧೀಜಿಯಿಂದ. ಸ್ವಾತಂತ್ರ್ಯದ ಮೋಡಗಳು ಸಮೀಪ ಇರುವಂತೆಯೇ ಬ್ರಿಟಿಷ್ ಸರ್ಕಾರದ ಜತೆ ದುರ್ಬಲ ಕಾಂಗ್ರೆಸ್‌ನ ತಾರ್ಕಿಕ ನಡೆಗಳಿಂದ ಬೇಸತ್ತು ಕಾಂಗ್ರೆಸ್‌ಗೆ ರಾಜೀನಾಮೆ.
’ಫಾರ್‌ವರ್ಡ್ ಬ್ಲಾಕ್’ ಸ್ಥಾಪನೆ.
೧೯೪೦, ಜೂನ್ ೧೮ರಂದು ಡಾ|| ಹೆಡಗೇವಾರ್ ಜತೆ ಭೇಟಿ ಆದರೆ ತೀವ್ರ ಜ್ವರದಿಂದ ಹಾಸಿಗೆ ಹಿಡಿದಿದ್ದ ಡಾ|| ಹೆಡಗೇವಾರ್ ಜತೆ ಸಾಧ್ಯವಾಗದ ಮಾತುಕತೆ. ಮೂರೇದಿನದಲ್ಲಿ ಡಾ|| ಹೆಡಗೇವಾರ್ ನಿಧನ. ಕೈ ತಪ್ಪಿದ ಮಹಾಮಿಲನ. ನಂತರ ವೀರ ಸಾವರ್ಕರ್ ಭೇಟಿ.ಬೋಸ್ ಕಾಣೆಯಾಗಿದ್ದಾರೆ’ ಎಂಬ ಸುದ್ದಿ ೧೯೪೧ ಜನವರಿ ೨೬ಕ್ಕೆ!
ಕಾಬೂಲ್ ಮೂಲಕ ಬರ್ಲಿನ್ ಸೇರಿದ ಬೋಸ್‌ರಿಂದ ಸೈನಿಕ ಕಾರ‍್ಯಾಚರಣೆ. ’ಫ್ರೀ ಇಂಡಿಯಾ ಸೆಂಟರ್’ ೧೯೪೧, ನವೆಂಬರ್ ೨ಕ್ಕೆ ಉದ್ಘಾಟನೆ, ’ಆಜಾದ್ ಹಿಂದ್’ ಲಾಂಛನ, ’ಜೈಹಿಂದ್’ ಘೋಷಣೆ, ಬೋಸರಿಗೆ ’ನೇತಾಜಿ’ ಬಿರುದು. ಜರ್ಮನ್ ಸೇನಾಕೇಂದ್ರಗಳಿಗೆ ಸೈನಿಕ ತರಬೇತಿ, ಬರ್ಲಿನ್ ರೇಡಿಯೋದಲ್ಲಿ ಆಗಾಗ ಭಾಷಣ, ಹಿಟ್ಲರ್ ಜತೆ ಭೇಟಿ. ಜಪಾನ್‌ಗೆ ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮೂಲಕ ಅವಿರತ ಚಟುವಟಿಗೆ.
ಆಜಾದ್ ಹಿಂದ್ ಸೇನೆ
ಬಲಿಷ್ಠಗೊಂಡ ಆಜಾದ್ ಹಿಂದ್ ಸೇನೆಗೆ ದೌಡಾಯಿಸುತ್ತಿದ್ದ ನಿವೃತ್ತಯುದ್ಧ ಕೈದಿಗಳು. ಮುಂದಿನ ದಿನಗಳಲ್ಲಿ ಪಕ್ವ ಸೈನ್ಯವಾಗಿ ರೂಪುಗೊಂಡ (ಐ.ಎನ್.ಎ).
ಪಾದರಸದಂತೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಓಡಾಡಿ ಸ್ವರಾಜ್ಯ ಹೋರಾಟಕ್ಕೆ ಅಗಾಧ ಬೆಂಬಲ ಪಡೆದ ಬೋಸ್‌ರಿಂದ ಆರ್ಜೀ-ಹುಕುಮಂತ್-ಎ-ಆಜಾದ್ ಹಿಂದ್ (ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ) ಸ್ಥಾಪನೆ; ಐಎನ್‌ಎಯ ಕಮಾಂಡರ್ ಇನ್ ಚೀಫ್ ಆಗಿ ಬೋಸ್. ೧೯೪೫ರ ಆಗಸ್ಟ್ ೧೮ರಂದು ದಕ್ಷಿಣ ವಿಯೆಟ್ನಾಂನ ಸೈಗಾನ್‌ನಿಂದ ವಿಮಾನಹತ್ತಿದ ಸುಭಾಷ್, ವಿಮಾನ ಸ್ಫೋಟದಿಂದಾಗಿ ನಿಧನ.
ಆ ಕುರಿತು ಸ್ಪಷ್ಟಗೊಳ್ಳದ ಅನೇಕ ವಿವಾದಗಳು ಇಂದಿಗೂ ಇದೆ. ಅನ್ವೇಷಣಾ ಸಮಿತಿ ನೇಮಿಸಿದರೂ, ಸಾವನ್ನೊಪ್ಪದ ಅನೇಕಮಂದಿ ಬಹಳವರ್ಷ ನೇತಾಜಿ ಬದುಕಿದ್ದಾರೆಂದೇ, ತಿಳಿದಿದ್ದರು. ಬೋಸರು ಆಗಾಗ ಹೇಳುತ್ತಿದ್ದರು “ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂಥ ಸರಕಲ್ಲ ಅದು ನಾವು ಪಡೆದುಕೊಳ್ಳಬೇಕಾದದ್ದು”
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಸತತ ಎರಡು ಬಾರಿ ಕಾರ್ಯ ನಿರ್ವಹಿಸಿದ ಇವರು, ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ತತ್ವಗಳನ್ನು ಒಪ್ಪದೆ ಪಕ್ಷದಿಂದ ಹೊರಬಂದರು. ಮುಂದೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನೇತಾಜಿಯವರು ಭಾರತೀಯ ರಾಷ್ಟ್ರೀಯ ಸೇನೆಯನ್ನು ಸ್ಥಾಪಿಸಿದರು. ಇವರು ಟೈವಾನ್‍ನಲ್ಲಿ ೧೯೪೫ರ ಆಗಸ್ಟ್ ೧೮ರಂದು ವಿಮಾನ ಅಪಘಾತದಲ್ಲಿ ಮರಣ ಹೊಂದಿದರು ಎಂದು ಭಾವಿಸಲಾಗಿದೆ. ಆದರೆ ಈ ಘಟನೆ ವಿವಾದಿತವಾಗಿದೆ.
ವಿಮಾನ ಅಪಘಾತದಲ್ಲೇ ಬೋಸ್ ಸಾವು
ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು 1945ರ ಆಗಸ್ಟ್ 18ರಂದು ತೈವಾನ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲೇ ಮೃತಪಟ್ಟಿದ್ದಾರೆ ಎಂದು ಜಪಾನ್ ಸರ್ಕಾರ ಬಿಡುಗಡೆ ಮಾಡಿರುವ ವರದಿ ತಿಳಿಸಿವೆ.ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು 1945ರ ಆಗಸ್ಟ್ 18ರಂದು ತೈವಾನ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲೇ ಮೃತಪಟ್ಟಿದ್ದಾರೆ ಎಂದು ಜಪಾನ್ ಸರ್ಕಾರ ಬಿಡುಗಡೆ ಮಾಡಿರುವ ವರದಿ ತಿಳಿಸಿವೆ.
ಬೋಸ್ ಅವರ ಸಾವಿನ ಕುರಿತ 60 ವರ್ಷದ ಹಳೆಯ ವರ್ಗಿಕೃತ ದಾಖಲೆಗಳನ್ನು ಜಪಾನ್ ಸರ್ಕಾರ ಗುರುವಾರ ಸಾರ್ವಜನಿಕವಾಗಿ ಬಹಿರಂಗಪಡಿಸಿದೆ. ಸುಭಾಷ್ ಸಾವಿನ ಕುರಿತ ದಾಖಲೆಗಳಿಗಾಗಿಯೇ ರೂಪಿಸಲಾಗಿರುವ ‘ಬೋಸ್‌ಫೈಲ್ಸ್. ಇನ್ಫೊ’ ವೆಬ್‌ಸೈಟ್‌ನಲ್ಲಿ ಮೊದಲ ಬಾರಿ ಈ ದಾಖಲೆಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಲಾಗಿದೆ. ಸುಭಾಷ್ ಚಂದ್ರ ಬೋಸ್ ಅವರ ಸಾವಿಗೆ ಕಾರಣಗಳು ಮತ್ತು ಇತರ ವಿಷಯಗಳು’ ಶೀರ್ಷಿಕೆ ಅಡಿಯಲ್ಲಿ ಈ ಬಗ್ಗೆ ವರದಿಯನ್ನು ಪ್ರಕಟಿಸಲಾಗಿದೆ.
ಬೋಸ್ ಅವರ ಸಾವಿನ ಕುರಿತು 1956ರಲ್ಲೇ ವರದಿಯನ್ನು ಸಿದ್ಧಪಡಿಸಿ ಟೊಕಿಯೊದಲ್ಲಿನ ಭಾರತೀಯ l ಸಲ್ಲಿಸಲಾಗಿತ್ತು. ಆದರೆ, ವರ್ಗೀಕೃತ ದಾಖಲೆಗಳಾಗಿದ್ದರಿಂದ ಇಲ್ಲಿಯವರೆಗೂ ಭಾರತ ಅಥವಾ ಜಪಾನ್ ಈ ವರದಿಯನ್ನು ಬಹಿರಂಗಪಡಿಸಿರಲಿಲ್ಲ’ ಎಂದು ವೆಬ್‌ಸೈಟ್ ತಿಳಿಸಿದೆ.
ಜಪಾನ್ ಭಾಷೆಯಲ್ಲಿನ 7 ಪುಟಗಳು ಮತ್ತು ಇಂಗ್ಲಿಷ್‌ಗೆ ಭಾಷಾಂತರಿಸಿದ 10 ಪುಟಗಳ ವರದಿ ಇದಾಗಿದೆ. 1945ರ ಆಗಸ್ಟ್ 18ರಂದು ಬೋಸ್ ಅವರಿದ್ದ ವಿಮಾನ ಅಪಘಾತಕ್ಕೀಡಾಯಿತು. ಅದೇ ದಿನ ಸಂಜೆ ತೈಪೆ ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬೋಸ್ ಅವರು ಪ್ರಯಾಣಿಸುತ್ತಿದ್ದ ವಿಮಾನ, ಹಾರಾಟ ಆರಂಭಿಸಿದ ತಕ್ಷಣ ನೆಲಕ್ಕೆ ಅಪ್ಪಳಿಸಿತು. ಆಗ ಬೋಸ್ ಅವರು ತೀವ್ರ ಗಾಯಗೊಂಡರು. ಮಧ್ಯಾಹ್ನ 3 ಗಂಟೆಗೆ ತೈಪೆಯ ಸೇನಾ ಆಸ್ಪತ್ರೆಗೆ ಬೋಸ್ ಅವರನ್ನು ದಾಖಲಿಸಲಾಯಿತು. ಬಳಿಕ 7 ಗಂಟೆಗೆ ಅವರು ಮೃತಪಟ್ಟರು.
ಆಗಸ್ಟ್ 22ರಂದು ಬೋಸ್ ಅವರ ಅಂತ್ಯಕ್ರಿಯೆ ನಡೆಸಲಾಯಿತು’ ಎಂದು ವರದಿ ತಿಳಿಸಿದೆ. ವಿಮಾನ ಅಪಘಾತಕ್ಕೀಡಾದ ವಿವರಗಳನ್ನು ಸಹ ವರದಿಯಲ್ಲಿ ತಿಳಿಸಲಾಗಿದೆ. ವಿಮಾನ ಹಾರಾಟ ಆರಂಭಿಸಿ 20 ಮೀಟರ್ ಎತ್ತರಕ್ಕೆ ಹೋದ ಬಳಿಕ ಎಡಬದಿಯ ರೆಕ್ಕೆಗೆ ಧಕ್ಕೆಯಾಯಿತು.
ಬಳಿಕ ಎಂಜಿನ್‌ಗೂ ಧಕ್ಕೆಯಾಗಿ ಕೆಲವೇ ಕ್ಷಣಗಳಲ್ಲಿ ವಿಮಾನ ಬೆಂಕಿಗೆ ಆಹುತಿಯಾಯಿತು. ಈ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಬೋಸ್ ಅವರು ಸಾಹಸಪಟ್ಟು ವಿಮಾನದಿಂದ ಕೆಳಗೆ ಇಳಿದರು (ಲಂಡನ್ ನಿಂದ ಬಂದ ವರದಿ).
(ಜಪಾನ್ ಸರ್ಕಾರ ಬಿಡುಗಡೆ ಮಾಡಿರುವ ಈ ವರದಿಯು ಭಾರತ ಸರ್ಕಾರ 1956ರಲ್ಲಿ ರಚಿಸಿದ್ದ ಶಹ ನವಾಜ್ ಖಾನ್ ನೇತೃತ್ವದ ತನಿಖಾ ವರದಿಯನ್ನು ಅನುಮೋದಿಸುತ್ತದೆ ಎಂದು ವೆಬ್‌ಸೈಟ್ ತಿಳಿಸಿದೆ.)
ವಿಮಾನ ಅಪಘಾತದಲ್ಲಿ ನೇತಾಜಿ ಸಾವು: ಆಶಿಶ್ ರೇ
ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಕುರಿತು ತಮ್ಮ ಬಳಿ ಸಾಕ್ಷ್ಯ ಇದೆ’ ಎಂದು ನೇತಾಜಿ ಅವರ ಸೋದರ ಮೊಮ್ಮಗ ಹಾಗೂ ಸಂಶೋಧಕ ಆಶಿಶ್ ರೇ ದಿ.4-12-2016 ಭಾನುವಾರ ಹೇಳಿದ್ದಾರೆ. ‘1945 ಆಗಸ್ಟ್ 18ರಂದು ತೈವಾನ್‌ನ ತೈಪೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಬೋಸ್ ಅವರು ಮೃತಪಟ್ಟಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
‘ಜಪಾನ್‌ನ ರೆಂಕೋಜಿ ದೇವಾಲಯದಲ್ಲಿರುವ ನೇತಾಜಿ ಅವರ ಚಿತಾಭಸ್ಮವನ್ನು ಭಾರತಕ್ಕೆ ತರಬೇಕು’ ಎಂದೂ ರೇ ಆಗ್ರಹಿಸಿದ್ದಾರೆ. ‘ನೇತಾಜಿ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬುದನ್ನು ಮೂರು ವರದಿಗಳು ದೃಢಪಡಿಸಿವೆ. ಅವರು ಸೋವಿಯತ್ ಒಕ್ಕೂಟ ಪ್ರವೇಶಿಸಿರುವ ಸಾಧ್ಯತೆ ಇಲ್ಲ ಮತ್ತು ಅಲ್ಲಿ ಅವರು ಕೈದಿಯಾಗಿರಲಿಲ್ಲ’ ಎಂದೂ ಹೇಳಿದ್ದಾರೆ.
‘ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಕಮ್ಯುನಿಷ್ಟ್ ರಾಷ್ಟ್ರವಾದ ರಷ್ಯಾ ಸಹಾಯ ಮಾಡಬಹುದು ಎಂದು ನೇತಾಜಿ ವಿಶ್ವಾಸ ಇರಿಸಿಕೊಂಡಿದ್ದರು. ಅದಕ್ಕಾಗಿ ಅವರು ರಷ್ಯಾಕ್ಕೆ ತೆರಳಲು ಬಯಸಿದ್ದರು’ ಎಂದು ತಿಳಿಸಿದ್ದಾರೆ. ‘ತಮಗೆ ರಕ್ಷಣೆ ನಿಡಲು ಜಪಾನ್‌ಗೆ ಸಾಧ್ಯವಿಲ್ಲ ಎಂದು ನೇತಾಜಿ ಅರಿತಿದ್ದರು. ಯಾಕೆಂದರೆ ಅದು ಶರಣಾಗಿತ್ತು.
ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವ ತಮ್ಮ ಧ್ಯೇಯಕ್ಕೆ ಸೋವಿಯತ್ ಒಕ್ಕೂಟ ಮಾತ್ರ ಸಹಾಯ ಮಾಡಬಲ್ಲುದು ಎಂದು ಅವರು ಬಲವಾಗಿ ನಂಬಿದ್ದರು’ ಎಂದು ರೇ ವಿವರಿಸಿದ್ದಾರೆ. ‘ನೇತಾಜಿ ಸಾವಿನ ಕುರಿತು ಭಾರತದ ನಿಲುವು ಭಾವನಾತ್ಮಕವಾಗಿದೆ. ಆದರೆ ಸತ್ಯವನ್ನು ತಿಳಿಯಲು ಇದರಿಂದ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ಬೋಸರ ಅಂತಿಮದಿನದ ಕಡತಗಳು
ಪ್ರಧಾನಿ ನರೇಂದ್ರ ಮೋದಿ ಅವರು 2016ರ ಜನವರಿಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಈ ಸ್ವಾತಂತ್ರ್ಯ ಹೋರಾಟಗಾರನಿಗೆ ಸಂಬಂಧಿಸಿದ, ಕೇಂದ್ರ ಸರ್ಕಾರದ ವಶದಲ್ಲಿದ್ದ ವರ್ಗೀಕೃತ ಕಡತಗಳನ್ನು ಬಹಿರಂಗಪಡಿಸುವ ಕೆಲಸಕ್ಕೆ ಚಾಲನೆ ನೀಡಿದರು. ಮೋದಿ ಅವರ ಪ್ರವೃತ್ತಿಗೆ ಅನುಗುಣವಾಗಿ ಈ ಕಾರ್ಯಕ್ರಮ ಭಾರಿ ಅಬ್ಬರದ ಪ್ರದರ್ಶನವಾಗಿಯೇ ನಡೆಯಿತು.
ಭಾವುಕ ಸಂಶೋಧಕರ ಗುಂಪೊಂದು ಎನ್‌ಡಿಎ ಸರ್ಕಾರದ ಮನವೊಲಿಸಿತು. ಈ ಅಂಶಗಳೆಂದರೆ,
- ಈಗ ಹೇಳಿರುವಂತೆ, 1945ರ ಆಗಸ್ಟ್‌ನಲ್ಲಿ ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಬೋಸ್ ಸತ್ತಿಲ್ಲ ಮತ್ತು
- ಬೋಸ್ ಅವರ ಜೀವನ ಮತ್ತು ಸಾವಿನ ಬಗೆಗಿನ ನೆನಪುಗಳನ್ನು ಮುಚ್ಚಿಡುವ ಮೂಲಕ ಜವಾಹರಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ ಅವರಿಗೆ ಅವಮಾನ ಮಾಡಿದೆ ಎಂದು ದೂರಿದರು.
- ಕಡತ ಬಹಿರಂಗಪಡಿಸುವ ಪ್ರಕ್ರಿಯೆ ಆರಂಭ ಆಗಿ ಒಂದು ವರ್ಷ ಆಗಿದೆ. ಈಗಾಗಲೇ 1200 ಕಡತಗಳನ್ನು ಬಹಿರಂಗ ಮಾಡಲಾಗಿದ್ದು ಯಾವ ಕಡತವೂ ಪಿತೂರಿ ಸಿದ್ಧಾಂತವನ್ನು ದೃಢಪಡಿಸಿಲ್ಲ.
- ಅಷ್ಟೇ ಅಲ್ಲ, ; ವಾಸ್ತವದಲ್ಲಿ, ಬೋಸ್ ಅವರ ಮಗಳು ಆಸ್ಟ್ರಿಯಾದಲ್ಲಿ ನೆಲೆಸಿದ್ದ ಅನಿತಾ ಅವರಿಗೆ ಸರ್ಕಾರದ ಬೊಕ್ಕಸದಿಂದ ಭತ್ಯೆ ಮಂಜೂರು ಮಾಡುವ ಮೂಲಕ ನೆಹರೂ ಅತ್ಯಂತ ಗೌರವಪೂರ್ವಕವಾಗಿ ನಡೆದುಕೊಂಡಿದ್ದಾರೆ.
ಬೋಸ್ ಮತ್ತು ಗಾಂಧಿ
ಬೋಸ್ ಮತ್ತು ಗಾಂಧಿ ನಡುವೆ ಒಂದು ಪ್ರಸಿದ್ಧ ಮತ್ತು ಮಹತ್ವದ ಭಿನ್ನಾಭಿಪ್ರಾಯ ಇತ್ತು ಎಂಬುದು ನಿಜ. 1939ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಬೋಸ್ ಅವರ ಪುನರಾಯ್ಕೆಯನ್ನು ಗಾಂಧಿ ವಿರೋಧಿಸಿದ ಸಂದರ್ಭದಲ್ಲಿ ಇದು ಉಂಟಾಯಿತು. ಆದರೆ ಬೋಸ್ ಅದಕ್ಕಿಂತ ಹಿಂದಿನ ಕನಿಷ್ಠ ಒಂದೂವರೆ ದಶಕಗಳ ಕಾಲ ಗಾಂಧಿಯ ಬಹುದೊಡ್ಡ ಅಭಿಮಾನಿಯಾಗಿದ್ದರು.
ಗಾಂಧಿ ಸ್ವಾತಂತ್ರ್ಯ ಹೋರಾಟದ ಸರ್ವೋಚ್ಚ ನಾಯಕ ಎಂದು ಬೋಸ್ ಭಾವಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಮೊದಲಿನ ಪತ್ರ ವ್ಯವಹಾರದಲ್ಲಿಯೂ ಬೋಸ್ ಇದನ್ನು ಸ್ಪಷ್ಟಪಡಿಸಿದ್ದಾರೆ- ‘ನಿಮ್ಮ ಬಗ್ಗೆ ನನಗಿರುವ ಗೌರವವನ್ನು ಕಡಿಮೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಪತ್ರವೊಂದರಲ್ಲಿ ಗಾಂಧಿಗೆ ಬೋಸ್ ಹೇಳಿದ್ದರು. ‘ಇತರರ ವಿಶ್ವಾಸ ಗೆಲ್ಲಲು ಸಾಧ್ಯವಾದರೂ ಭಾರತದ ಅತ್ಯಂತ ಶ್ರೇಷ್ಠ ವ್ಯಕ್ತಿಯ ವಿಶ್ವಾಸ ಸಿಗದಿರುವುದು ನನ್ನ ಮಟ್ಟಿಗೆ ದೊಡ್ಡ ದುರಂತ’ ಎಂದೂ ಬೋಸ್ ಬರೆದಿದ್ದರು.
ಅಹಿಂಸೆಯಲ್ಲಿ ಸಂಪೂರ್ಣ ನಂಬಿಕೆ ಇಲ್ಲದ್ದರಿಂದಲೇ ಬೋಸ್ ಅವರು ಇಂಡಿಯನ್ ನ್ಯಾಷನಲ್ ಆರ್ಮಿಯನ್ನು (ಐಎನ್‍ಎ) ಸ್ಥಾಪಿಸಿದರು. ಹಾಗಿದ್ದರೂ, ಐಎನ್‍ಎಯ ನಾಲ್ಕು ದಳಗಳಲ್ಲಿ ಮೂರಕ್ಕೆ ಗಾಂಧಿ, ಜವಾಹರಲಾಲ್ ನೆಹರೂ ಮತ್ತು ಮೌಲಾನಾ ಆಜಾದ್ ಅವರ ಹೆಸರು ಇರಿಸಿದ್ದರು ಎಂಬುದು ಗಮನಾರ್ಹ!
ಅವರಿಗೆ ಅತಿ ಹೆಚ್ಚು ಗೌರವ ಇದ್ದದ್ದು ಮಹಾತ್ಮ ಗಾಂಧಿಯ ಬಗ್ಗೆಯೇ ಆಗಿತ್ತು. 1943ರ ಅಕ್ಟೋಬರ್ 2ರಂದು ಬ್ಯಾಂಕಾಕ್‌ನಿಂದ ರೇಡಿಯೊದಲ್ಲಿ ಮಾತನಾಡಿದ್ದ ಬೋಸ್, ‘ಅತ್ಯಂತ ಶ್ರೇಷ್ಠ ನಾಯಕ ಮಹಾತ್ಮ ಗಾಂಧಿಯ 75ನೇ ಹುಟ್ಟುಹಬ್ಬ ಇಂದು’ ಎಂಬುದನ್ನು ಭಾರತೀಯ ಕೇಳುಗರಿಗೆ ನೆನಪಿಸಿದ್ದರು. ಗಾಂಧಿಯ ಕೊಡುಗೆಗಳನ್ನು ವಿವರಿಸಿದ್ದರು.
1920ರಲ್ಲಿ ಅಸಹಕಾರ ಚಳವಳಿಯನ್ನು ಅವರು ಹೇಗೆ ಆರಂಭಿಸಿದ್ದರು ಎಂಬುದನ್ನು ಹೇಳಿದರು. ‘ಸ್ವಾತಂತ್ರ್ಯದ ಮಾರ್ಗವನ್ನು ತೋರುವುದಕ್ಕಾಗಿ ದೇವರೇ ಈ ವ್ಯಕ್ತಿಯನ್ನು ಕಳುಹಿಸಿದಂತೆ ತೋರುತ್ತದೆ. ತಕ್ಷಣ ಮತ್ತು ಸ್ವಯಂಪ್ರೇರಣೆಯಿಂದ ಇಡೀ ದೇಶ ಅವರ ಹಿಂದೆ ನಿಂತಿತು’ ಎಂದು ಬೋಸ್ ಹೇಳಿದರು. ಗಾಂಧಿ ರಾಷ್ಟ್ರ ನಾಯಕರಾಗಿ ಬೆಳೆದ ನಂತರದ 20 ವರ್ಷಗಳ ಅವಧಿಯಲ್ಲಿ ಭಾರತೀಯರು ‘ರಾಷ್ಟ್ರೀಯ ಆತ್ಮಗೌರವ ಮತ್ತು ಆತ್ಮವಿಶ್ವಾಸವನ್ನು’ ಕಲಿತರು.
ಈಗ ಅವರಿಗೆ ‘ಇಡೀ ದೇಶವನ್ನು ಪ್ರತಿನಿಧಿಸುವ ರಾಷ್ಟ್ರವ್ಯಾಪಿ ಸಂಘಟನೆಯೂ ಇದೆ. ಭಾರತಕ್ಕೆ ಮತ್ತು ಭಾರತದ ಸ್ವಾತಂತ್ರ್ಯಕ್ಕೆ ಗಾಂಧಿ ನೀಡಿದ ಕೊಡುಗೆ ವಿಶಿಷ್ಟ ಮತ್ತು ಪರ್ಯಾಯವಿಲ್ಲದ್ದಾಗಿದೆ. ನಮ್ಮ ರಾಷ್ಟ್ರೀಯ ಇತಿಹಾಸದಲ್ಲಿ ಎಲ್ಲ ಕಾಲದಲ್ಲಿಯೂ ಅವರ ಹೆಸರನ್ನು ಸ್ವರ್ಣಾಕ್ಷರದಲ್ಲಿಯೇ ಬರೆದಿಡಲಾಗುತ್ತದೆ’ ಎಂಬುದು ಬೋಸ್ ಅವರ ಮಾತಾಗಿತ್ತು. ಬೋಸ್ ಅವರ ಈ ಭಾಷಣದ ಸಂದರ್ಭದಲ್ಲಿ ಗಾಂಧೀಜಿ ಪುಣೆಯ ಜೈಲಿನಲ್ಲಿದ್ದರು.
ರಾಷ್ಟ್ರಪಿತ ಮಹಾತ್ಮಗಾಂಧಿ ಮತ್ತು ಸುಭಾಷ್‌ಚಂದ್ರ ಬೋಸ್ ನಡುವ 1939ರಲ್ಲಿ ಇಬ್ಬರ ನಡುವೆ ಮೂಡಿದ್ದ ಒಡಕು ತಾತ್ಕಾಲಿಕ. ಅವರ ಒಟ್ಟು ಸಂಬಂಧವನ್ನು ಗಮನಿಸಿದರೆ ಪರಸ್ಪರರ ನಡುವೆ ಪ್ರೀತಿ, ಬಾಂಧವ್ಯ, ಗೌರವ ಕಾಣಬಹುದಾಗಿದೆ’ ಎಂದು ಬೋಸ್ ಅವರ ಸಂಬಂಧಿ, ಇತಿಹಾಸಕಾರ ಸುಗತ ಬೋಸ್ ಹೇಳಿದ್ದಾರೆ.
ಗಾಂಧೀಜಿಯವರನ್ನು ‘ರಾಷ್ಟ್ರಪಿತಾಮಹ’ ಎಂದು ಮೊದಲು ಹೇಳಿದವರು ಬೋಸ್:ಗಾಂಧೀಜಿಯವರು ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾಗ, ಕಸ್ತೂರಿ ಬಾ ಅವರು ಫೆಬ್ರವರಿ 22, 1944 ರಂದು ನಿಧನರಾದರು. ಗಾಂಧೀಜಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನೇತಾಜಿ, 1944 ರ ಜೂನ್ 4 ರಂದು ರಂಗೂನ್‌ನ ಆಜಾದ್ ಹಿಂದ್ ರೇಡಿಯೊದಲ್ಲಿ ಮಹಾತ್ಮರಿಗೆ ಈ ಕೆಳಗಿನ ಸಂದೇಶವನ್ನು ಕಳುಹಿಸಿದರು.
“……….. ಸ್ವದೇಶದಲ್ಲಿರುವ ನಮ್ಮ ದೇಶವಾಸಿಗಳು ತಮ್ಮ ಸ್ವಂತ ಪ್ರಯತ್ನಗಳ ಮೂಲಕ ಅಥವಾ ಯಾವುದೇ ಆಕಸ್ಮಿಕವಾಗಿ ತಮ್ಮನ್ನು ಸ್ವತಂತ್ರಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಯಾರೂ ನನಗಿಂತ ಹೆಚ್ಚು ಸಂತೋಷಪಡುದಿಲ್ಲ, ಬ್ರಿಟಿಷ್ ಸರ್ಕಾರವು ನಿಮ್ಮ` ಕ್ವಿಟ್ ಇಂಡಿಯಾ’ ವನ್ನು ಸ್ವೀಕರಿಸುತ್ತದೆ, ರೆಸಲ್ಯೂಶನ್ ಮತ್ತು ಅದಕ್ಕೆ ಪರಿಣಾಮಕಾರಿ ಉತ್ತರ ನೀಡುತ್ತದೆ ಎಂದು ಆಶಿಸುತ್ತೇನೆ. ಆದರೆ, ಮೇಲಿನ ಯಾವುದೂ ಸಾಧ್ಯವಿಲ್ಲ ಮತ್ತು ಹೋರಾಟ ಅನಿವಾರ್ಯವಾಗಿದೆ ಎಂಬ ನಂಬುಗೆಯ ಮೇಲೆ ನಾವು ಮುಂದುವರಿಯುತ್ತಿದ್ದೇವೆ.
ಭಾರತದ ವಿಮೋಚನೆಗಾಗಿ ಈ ಪವಿತ್ರ ಯುದ್ಧದಲ್ಲಿ ನಮ್ಮ ರಾಷ್ಟ್ರದ ಪಿತಾಮಹ, ನಾವು ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳನ್ನು ಕೇಳುತ್ತೇವೆ (ಬಯಸುತ್ತೇವೆ) “.
ಮೇಲಿನ ಸಂದೇಶವು ನಿಸ್ಸಂದೇಹವಾಗಿ ನೇತಾಜಿಯವರ ರಾಷ್ಟ್ರದ ಪಿತಾಮಹ ಎಂದು ಸಂಬೋಧಿಸಿದ ಗಾಂಧೀಜಿಯವರ ಗೌರವ ಮತ್ತು ಆತ್ಮೀಯ ಭಾವನೆಗಳನ್ನು ಸಾಬೀತುಪಡಿಸುತ್ತದೆ.
ಗಾಂಧೀಜಿ ಬೋಸ್ ಬಗ್ಗೆ 1946ರ ಜನವರಿಯಲ್ಲಿ ಯುನೈಟೆಡ್ ಪ್ರೆಸ್ ಆಫ್ ಇಂಡಿಯಾ ಸುದ್ದಿ ಸಂಸ್ಥೆ ಜತೆ ಮಾತನಾಡುತ್ತಾ, ಐಎನ್‍ಎಯ ‘ಜೈ ಹಿಂದ್’ ಘೋಷಣೆಯನ್ನು ಕಾಂಗ್ರೆಸ್‌ಗೆ ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು. ಯುದ್ಧದಲ್ಲಿ ಬಳಕೆಯಾಗಿದೆ ಎಂಬ ಕಾರಣಕ್ಕೆ ಈ ಘೋಷಣೆ ಹಿಂಸೆಯ ರೂಪ ಎಂದು ಪರಿಗಣಿಸಬೇಕಾಗಿಲ್ಲ ಎಂದು ಗಾಂಧಿ ಹೇಳಿದರು.
ಬೋಸ್ ಅವರ ಬಗ್ಗೆ ಗಾಂಧಿಯ ಅಭಿಪ್ರಾಯ ಹೀಗಿತ್ತು: ‘ತಮ್ಮ ತ್ಯಾಗದ ಸಾಮರ್ಥ್ಯ ಅವರಿಗೆ ಸದಾ ತಿಳಿದಿತ್ತು. ಅವರ ವ್ಯವಹಾರ ಚಾತುರ್ಯ, ಸೇನೆಯನ್ನು ಮುನ್ನಡೆಸುವ ತಾಕತ್ತು ಮತ್ತು ಸಂಘಟನಾ ಸಾಮರ್ಥ್ಯ ಅವರು ದೇಶ ತೊರೆದು ಹೋದ ಮೇಲಷ್ಟೇ ನನಗೆ ತಿಳಿಯಿತು. ಮಾರ್ಗದ ಬಗ್ಗೆ ನನ್ನ ಮತ್ತು ಅವರ ನಡುವಣ ದೃಷ್ಟಿಕೋನದ ವ್ಯತ್ಯಾಸ ಬಹಳ ಪ್ರಸಿದ್ಧವೇ ಆಗಿದೆ’.
ಐಎನ್‍ಎಯಲ್ಲಿ ಮೇಜರ್ ಜನರಲ್ ಆಗಿದ್ದ ಷಾ ನವಾಜ್ ಖಾನ್ ಅವರನ್ನು ಬಿಹಾರಕ್ಕೆ (ಬಿಹಾರದಲ್ಲಿ ಮುಸ್ಲಿಮರು ಎದುರಿಸಿದ ಹಿಂಸೆ ಅಷ್ಟೇ ಘೋರವಾಗಿತ್ತು) ಕಳುಹಿಸಿದರು. ಖಾನ್ ಮತ್ತು ಐಎನ್‍ಎಯ ಇತರ ಆರು ಯೋಧರು ಮನೆಗಳು ಮತ್ತು ಗ್ರಾಮಗಳನ್ನು ಪುನರ್ ನಿರ್ಮಿಸಲು ನಿರಾಶ್ರಿತ ಮುಸ್ಲಿಮರಿಗೆ ನೆರವಾದರು.ಷಾ ನವಾಜ್ ಸಾಹೇಬ್ ಅವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದು ಬಿಹಾರದ ಪ್ರಾರ್ಥನಾ ಸಭೆಯೊಂದರಲ್ಲಿ ಗಾಂಧಿ ಹೇಳಿದ್ದರು. ಷಾ ನವಾಜ್ ಮತ್ತು ಐಎನ್‍ಎಯ ಮಾಜಿ ಯೋಧರ ತಂಡ ಗಲಭೆ ಸಂತ್ರಸ್ತರಿಗೆ ಹೇಗೆ ಆಹಾರ ವಿತರಿಸಿತು ಎಂಬುದನ್ನೆಲ್ಲ ಗಾಂಧಿ ವಿವರಿಸಿದರು.
ಮಾಹಿತಿ ಕೃಪೆ: ವಿಕಿಪೀಡಿಯ
ಸಂಗ್ರಹ: ಶ್ರೀ ಇಂಗಳಗಿ ದಾವಲಮಲೀಕ