ಸಂರಕ್ಷಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ 1993 ರಲ್ಲಿ ಅಮೆರಿಕದ ಸ್ಮಿತ್ ಸೋನಿಯನ್ ವಲಸೆ ಪಕ್ಷಿಗಳ ಕೇಂದ್ರ ‘ಜಾಗತಿಕ ವಲಸೆ ಹಕ್ಕಿಗಳ ದಿನ’ ಎಂಬ ಕಾರ್ಯಕ್ರಮವನ್ನು ಆರಂಭಿಸಿತು. ನಂತರದ ವರ್ಷಗಳಲ್ಲಿ ಮತ್ತಷ್ಟು ದೇಶಗಳ ಸಂಘಸಂಸ್ಥೆಗಳು ಕೈ ಜೋಡಿಸಿ ಗಮನಸೆಳೆದ ಹಿನ್ನೆಲೆಯಲ್ಲಿ ಸಂಯುಕ್ತ ರಾಷ್ಟ್ರಗಳ ವಲಸೆ ಹಕ್ಕಿಗಳ ಸಂರಕ್ಷಣಾ ಒಪ್ಪಂದದ ಅಡಿಯಲ್ಲಿ 2006 ರಿಂದ ಮೇ ತಿಂಗಳ ಎರಡನೇ ಶನಿವಾರ ವನ್ನು “ಜಾಗತಿಕ ವಲಸೆ ಹಕ್ಕಿಗಳ ದಿನ” ಎಂದು ನಿರ್ಧರಿಸಲಾಯಿತು . ಜಾಗತಿಕವಾಗಿ ವಿವಿಧ ಪಕ್ಷಿಪ್ರೇಮಿಗಳು , ಸಂಘಗಳು ವಲಸೆಹಕ್ಕಿಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಶಿಬಿರಗಳನ್ನು , ಪಕ್ಷಿವೀಕ್ಷಣಾ ಕಾರ್ಯಕ್ರಗಳನ್ನು ಹಮ್ಮಿಕೊಳ್ಳುವ ಈ ಆಚರಣೆಯಲ್ಲಿ ಇದೀಗ 118 ರಾಷ್ಟ್ರಗಳು ಭಾಗವಹಿಸುತ್ತಿವೆ . ಪ್ರತಿವರ್ಷವೂ ಒಂದೊಂದು ಘೋಷವಾಕ್ಯಗಳನ್ನು ನೀಡಿ ಅದಕ್ಕನುಸಾರವಾಗಿ ಕಾಠ್ಯಕ್ರಮಗಳನ್ನು ಸಂಯುಕ್ತರಾಷ್ಟ್ರಗಳು ರೂಪಿಸುತ್ತವೆ.
ಪ್ರಸಕ್ತ ವರ್ಷದ ಘೋಷವಾಕ್ಯ
“ಪಕ್ಷಿಗಳು ನಮ್ಮ ಜಗತ್ತನ್ನು ಸಂಪರ್ಕಿಸುತ್ತವೆ”
( “Birds Connect Our World” )
ಆದರೆ ಮೇ ತಿಂಗಳಲ್ಲಿ ಅಮೆರಿಕವನ್ನು ಹೊಂದಿಕೊಂಡಿರುವ ಕೆಲವು ರಾಷ್ಟ್ರಗಳಿಗಷ್ಟೇ ವಲಸೆ ಹಕ್ಕಿಗಳು ಭೇಟಿ ನೀಡುವ ಸಮಯವಾಗಿದ್ದುದರಿಂದ ಹಲವು ಅಪಸ್ವರಗಳು ಕೇಳಿಬಂದ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಈ ಆಚರಣೆಯನ್ನು ವರ್ಷಕ್ಕೆರಡು ಬಾರಿ ಅಂದರೆ ಮೇ ಮತ್ತು ಅಕ್ಟೋಬರ್‌ನ ಎರಡನೇ ಶನಿವಾರದಂದು ಆಚರಿಸಲಾಗುತ್ತಿದೆ.