ಆರ್ಯ ಸಮಾಜದಲ್ಲಿ ನಿಷ್ಠೆ ಹೊಂದಿದ್ದ ಲಾಲಾ ಲಜಪತ ರಾಯ್. ಅವರು ತಾವು ವಿದ್ಯಾರ್ಥಿಯಾಗಿದ್ದ ‘ಆರ್ಯ ಗೆಜೆಟ್’ನ ಸಂಪಾದಕರಾಗಿದ್ದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದ ಮೇಲೆ ಅವರು ಪಂಜಾಬಿನಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದರು. ಇದರಿಂದಾಗಿ ಬ್ರಿಟಿಷ್ ಆಡಳಿತ ಅವರನ್ನು ಬರ್ಮಾದ ಮಂಡಾಲೈ ಎಂಬಲ್ಲಿಗೆ ಗಡೀಪಾರು ಮಾಡಿತ್ತು.
ಕೆಲವು ತಿಂಗಳ ನಂತರದಲ್ಲಿ ಲಾರ್ಡ್ ಮಿಂಟೋ ಅವರಿಗೆ ಲಾಲಾ ಲಜಪತ ರಾಯ್ ಅವರು ವಿರುದ್ಧ ಇರುವ ಆರೋಪಗಳಿಗೆ ಸರಿಯಾದ ಸಾಕ್ಷಾಧಾರಗಳಿಲ್ಲ ಎನಿಸಿ ಭಾರತಕ್ಕೆ ಹಿಂದಿರುಗಲು ಪರವಾನಗಿ ನೀಡಿದರು.
೧೯೦೭ರಲ್ಲಿ ಅಮೆರಿಕಕ್ಕೆ ತೆರಳಿದ್ದ ಲಾಲಾ ಲಜಪತ್ ರಾಯ್ ಅವರು ೧೯೧೯ರಲ್ಲಿ ಭಾರತಕ್ಕೆ ಹಿಂದಿರುಗಿದರು. ಅವರು ರಚಿಸಿರುವ ಪ್ರವಾಸಿ ಕಥನದಲ್ಲಿ ಪ್ರಸಿದ್ಧ ಬರಹಗಾರರಾದ ಡಬ್ಲ್ಯೂ. ಇ. ಬಿ. ಡುಬೋಯಿಸ್ ಮತ್ತು ಫ್ರೆಡ್ರಿಕ್ ಡೌಗ್ಲಾಸ್ ಮುಂತಾದವರ ಅನೇಕ ಉಕ್ತಿಗಳನ್ನು ಯಥೇಚ್ಛವಾಗಿ ಉಲ್ಲೇಖಿಸಿದ್ದಾರೆ.
ಲಜಪತ ರಾಯ್ ಅವರು ಲಾಹೋರಿನಲ್ಲಿ ಬ್ರಿಟಿಷ್ ವಿದ್ಯಾಸಂಸ್ಥೆಗಳಿಗೆ ಪರ್ಯಾಯವಾಗಿ ನ್ಯಾಷನಲ್ ಕಾಲೇಜು ಪ್ರಾರಂಭಿಸಿದಾಗ ಅದರಲ್ಲಿ ಭಗತ್ ಸಿಂಗ್ ಅವರೂ ವಿದಾರ್ಥಿಯಾಗಿದ್ದರು.
೧೯೨೦ರ ವರ್ಷದಲ್ಲಿ ಕಲ್ಕತ್ತಾದಲ್ಲಿ ನಡೆದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ ಲಾಲಾ ಲಜಪತ ರಾಯ್ ಆ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದ ಅನುಸಾರವಾಗಿ ಅಸಹಕಾರ ಚಳುವಳಿಯನ್ನು ಕೈಗೊಂಡಾಗ ೧೯೨೧ರಿಂದ ೧೯೨೩ರ ಅವಧಿಯವರೆಗೆ ಅವರು ಕಾರಾಗೃಹ ವಾಸವನ್ನು ಅನುಭವಿಸಿದರು. ಬಿಡುಗಡೆಯಾದ ಸಂದರ್ಭದಲ್ಲಿ ಅವರು ಲೆಜಿಸ್ಲೇಟಿವ್ ಅಸೆಂಬ್ಲಿಗೆ ಚುನಾಯಿತರಾದರು.
ಪಂಜಾಬಿನ ವಿಭಜನೆಗೆ ಅವರು ಮಾತುಕತೆಗಳನ್ನು ಆಯೋಜಿಸಿದರು. ಈ ಕುರಿತು ಅವರು ೧೯೨೪ರ ವರ್ಷದಲ್ಲಿ ‘ದಿ ಟ್ರಿಬ್ಯೂನ್ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಸಿಖ್ ಮತ್ತು ಮುಸ್ಲಿಂ ಜನಸಂಖ್ಯೆಯನ್ನು ಆಧರಿಸಿ ಪಂಜಾಬನ್ನು ಪೂರ್ವ ಮತ್ತು ಪಶ್ಚಿಮ ಪಂಜಾಬುಗಳಾಗಿ ವಿಂಗಡಿಸಬೇಕೆಂಬ ವಾದವನ್ನು ಮಂಡಿಸಿದರು.
ಅದೇ ರೀತಿಯಲ್ಲಿ ಅವರು ವಾಯವ್ಯ ಸೀಮಾ ಪ್ರದೇಶ, ಸಿಂದ್ ಮತ್ತು ಪೂರ್ವ ಬಂಗಾಳಗಳಲ್ಲಿ ಮುಸ್ಲಿಂ ರಾಜ್ಯಗಳನ್ನು ಪ್ರತ್ಯೇಕಿಸಬೇಕೆಂದು ಪ್ರತಿಪಾದಿಸಿದ್ದರು.