ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

0
152

 

ಆತ್ಮಸಂಯಮವಿರಲಿ ಮೌನಾಚರಣೆಯಿರಲಿ
ಸುಪ್ರಸನ್ನತೆಯಿರಲಿ ಮನಸಿನಲ್ಲಿ
ಗುಣಸೌಮ್ಯವಾಗಿರಲಿ ಭಾವಶುಚಿಯಾಗಿರಲಿ
ಮಾನಸಿಕ‌ ತಪವಿದುವೆ – ಎಮ್ಮೆತಮ್ಮ

ಶಬ್ಧಾರ್ಥ
ಆತ್ಮಸಂಯಮ – ಸ್ವಯಂ ನಿಗ್ರಹ.
ಸುಪ್ರಸನ್ನತೆ – ಸಮಾಧಾನ ಚಿತ್ತ.
ಗುಣಸೌಮ್ಯ – ಮೃದುಮಧುರ ಗುಣ.ಭಾವಶುಚಿ – ಮನಶುದ್ಧಿ

ತಾತ್ಪರ್ಯ
ದೇವನನ್ನು‌ ಒಲಿಸಬೇಕಾದರೆ‌ ಕಾಯಾ ವಾಚಾ ಮನಸಾ
ತ್ರಿಕರಣ‌ಶುದ್ಧಿ‌‌ ಇರಬೇಕು. ಕೊನೆಯದಾದ ಮಾನಸಿಕ ಶುದ್ಧಿಯಬಗ್ಗೆ ಈ ಕಗ್ಗ ಚರ್ಚಿಸುತ್ತದೆ. ನಮ್ಮ ಇಂದ್ರಿಯಗಳ ಮೇಲೆ ನಮಗೆ ಹಿಡಿತವಿರಬೇಕು. ಕಣ್ಣು ಸುಂದರ ವಸ್ತುವನ್ನು ನೋಡಿ ಕಿವಿ ಸುಮಧುರ ಧ್ವನಿ ಕೇಳಿ, ನಾಲಗೆ ಸವಿರುಚಿ ನೋಡಿ, ಮೂಗು ಸುಗಂಧ ಮೂಸಿ, ಚರ್ಮ ಮೃದುವಾದ ತಂಪಾದ ಸ್ಪರ್ಶ ಬಯಸಿ ಮೋಹಕ್ಕೊಳಗಾಗುತ್ತವೆ. ಅವುಗಳ ಮೇಲೆ ನಿಯಂತ್ರಣವಿರಬೇಕು. ಅತಿ ಮಾತನಾಡಿ ಸುಳ್ಳು ಹೇಳುವ ಸಂಭವವಿರುತ್ತದೆ.ಅದಕ್ಕೆ ಮಾತನಾಡದೆ ಮನಸು ಮೌನ ತಾಳಬೇಕು. ಸದಾ‌ ಮನದಲ್ಲಿ ಸಮಾಧಾನ ಸಂತೃಪ್ತಿ ತುಂಬಿರಬೇಕು. ಸರಳತೆ, ಆಡಂಬರರಹಿತ, ಮೃದು ಸ್ವಭಾವ ಮಧುರ ಸದ್ಗುಣಗಳಿರಬೇಕು.ಭಾವದಲ್ಲಿ‌ ಪ್ರೀತಿ ಪ್ರೇಮ, ಕರುಣೆ, ಅನುಕಂಪ ತುಂಬಿರಬೇಕು. ಹೀಗಿದ್ದಾಗ ಸದಾ ಮನದಲ್ಲಿ‌ ಆನಂದ ತುಂಬಿರುತ್ತದೆ.ಸದಾ ಲವಲವಿಕೆಯಿಂದ ಇರುವುದರಿಂದ‌ ಮಾನಸಿಕ ಒತ್ತಡ ತೊಲಗಿ ಪರಮಾನಂದ ಉಂಟಾಗುತ್ತದೆ. ಇದುವೆ ಮನಸಿನಿಂದ ಮಾಡುವ ತಪಸ್ಸು.

ರಚನೆ ಮತ್ತು ವಿವರಣೆ
‌‌ ‌‌‌ ಎನ್.ಶರಣಪ್ಪ‌ ಮೆಟ್ರಿ
‌ ‌‌‌ ‌‌‌‌‌ ಮೊ. 9449030990