ಜನತೆಯ, ವಿರೋಧ ಪಕ್ಷಗಳ ಅಷ್ಟೇ ಏಕೆ ಸ್ವ ಪಕ್ಷೀಯರಿಂದಲೇ ವಿರೋಧ ಬಂದ ಹಿನ್ನೆಲೆಯಲ್ಲಿ ದಿ. ೨೪ ರಿಂದ ಜಾರಿಯಲ್ಲಿ ಬರಲಿದ್ದ ರಾತ್ರಿ ಕರ್ಫ್ಯೂ ವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿದೆ.
ಕೊರೋನಾದ ಇನ್ನೊಂದು ರೂಪ ವಕ್ಕರಿಸಿದ ಕಾರಣ ಜನರನ್ನು ಹತೋಟಿಯಲ್ಲಿಡಲು ಸರ್ಕಾರ ರಾತ್ರಿ ಕರ್ಫ್ಯೂ ಹೇರಿತ್ತು. ಮೊದಲು ರಾತ್ರಿ ಹತ್ತರಿಂದ ಬೆಳಿಗ್ಗೆ ಆರರವರೆಗೆ ಎಂದು ಹೇಳಿ ಅನಂತರ ರಾತ್ರಿ ಹನ್ನೊಂದರಿಂದ ಬೆಳಿಗ್ಗೆ ಐದರವರೆಗೆ ಎಂದು ಹೇಳಲಾಯಿತು.
ಇದಕ್ಕೆ ರಾಜ್ಯದ ಜನರು ತೀವ್ರವಾಗಿ ಪ್ರತಿಕ್ರಿಯಿಸಿ, ಮೊದಲೇ ಚಳಿಯಿಂದ ಜನರು ರಾತ್ರಿ ಹೊರಗೆ ಬರುವುದಿಲ್ಲ, ಅಲ್ಲದೆ ಎಲ್ಲ ರೀತಿಯ ವಾಹನಗಳು ಓಡಾಡಲು ಪರವಾನಿಗೆ ಇರುವ ಇದು ಎಂಥಾ ಕರ್ಫ್ಯೂ? ಇಂಥ ಸಲಹೆಯನ್ನು ಯಾವ ಮಹಾನುಭಾವ ನೀಡಿದ್ದಾನೋ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಸಿದ್ಧರಾಮಯ್ಯ, ಡಿ ಕೆ ಶಿವಕುಮಾರ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು, ಸರ್ಕಾರ ನಮ್ಮ ಮಾತನ್ನೇ ಕೇಳುವುದಿಲ್ಲ. ಬರೀ ಅಸಂಬದ್ಧ ನಿರ್ಣಯಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಟೀಕಿಸಿದ್ದರು.
ಸ್ವತಃ ಬಿಜೆಪಿ ಪಕ್ಷದವರಿಗೇ ಸರ್ಕಾರದ ಈ ಲಾಜಿಕ್ ಅರ್ಥವಾಗಿಲ್ಲ ಎಂಬುದನ್ನು ಕೆಲವು ನಾಯಕರು ಆಡಿ ತೋರಿಸಿದರು.
ಬಸನಗೌಡಾ ಪಾಟೀಲ ಯತ್ನಾಳ ಅವರು, ಎಲ್ಲವನ್ನೂ ನಡೆಯಲು ಬಿಟ್ಟು ಇವರು ಎಂಥ ರಾತ್ರಿ ಕರ್ಫ್ಯೂ ಜಾರಿಗೆ ತರಲಿದ್ದಾರೆಯೇನೋ ಎಂದು ಪ್ರತಿಕ್ರಿಯಿಸಿದ್ದರು.
ಈ ಎಲ್ಲ ಟೀಕೆ ಟಿಪ್ಪಣಿಗಳ ಹಿನ್ನೆಲೆಯಲ್ಲಿ ಸರ್ಕಾರವು ನೈಟ್ ಕರ್ಫ್ಯೂ ಹಿಂದೆ ತೆಗೆದುಕೊಂಡಿದ್ದು, ಕ್ರಿಸ್ ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಕೆಲವು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡಿದೆ.