ಕನ್ನಡದ ಸೇವಕ ದಿ.ಡಾ.ಸಖಾರಾಮ ಶಿವಲಿಂಗಪ್ಪ ಪಣದೆ
(ಲೇಖನ:ಮಿಥುನ ಅಂಕಲಿ)
💛❤️💛❤️💛❤️
ಕನ್ನಡನಾಡು ಅಂದದ ಬೀಡು ನಾಡಿನ ಜೀವನಾಡಿಯಂತಿರುವ ನಿಪ್ಪಾಣಿ ಕನ್ನಡದ ಪವಿತ್ರ ನೆಲ.ಗಡಿ ನಾಡಾದರೂ ಕನ್ನಡಾಂಬೆಯ ಆದಶ೯ ಧಾಮ.ಇಲ್ಲಿ ಕನ್ನಡದ ವಿಷಯಗಳನ್ನು ಕೆದಕುತ್ತಾ ಹೋದಂತೆ ಹಲವಾರು ಮಹನೀಯರ ಪರಿಚಯವಾಗುತ್ತದೆ.
ಕನ್ನಡದ ಸೇವಕನಾಗಿ ಕನ್ನಡ ಬೆಳೆಸಿದವರಲ್ಲಿ ದಿವಂಗತ ಡಾ ಸಖಾರಾಮ ಪಣದೆ ಒಬ್ಬರು.ಅಂದಿನ ಕಾಲದ ಪ್ರಜ್ಞಾವಂತ ಕನ್ನಡದ ನೇತಾರನಾಗಿ ಬಾಳಿ ಬದುಕಿದ ಸಖಾರಾಮರವರು ೧೫/೧೧/೧೯೧೫ ರಲ್ಲಿ ಗಡಿನಾಡಿನ ಅಂದಿನ ಪ್ರಬಲ ಮರಾಠಿಮಯ ನಾಡಾಗಿದ್ದ ನಿಪ್ಪಾಣಿಯಲ್ಲಿ ಸಂಸ್ಕಾರವಂತ ಮನೆತನದ ಶಿವಲಿಂಗಪ್ಪ ಪಣದೆ ದಂಪತಿಗಳ ಪ್ರೀತಿಯ ಮಗನಾಗಿ ಜನಿಸಿದರು.
ಚಿಕ್ಕಂದಿನಿಂದಲೂ ತುಂಬಾ ಚತುರ ಚಾಣಾಕ್ಷ ಮತಿಯಾಗಿದ್ದ ಸಖಾರಾಮರು ತನ್ನ ತಂದೆತಾಯಿ ಆದಶ೯ಗಳನ್ನು ಮುಂದಿಟ್ಟುಕೊಂಡು ಬೆಳೆಯತೊಡಗಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ವಂತ ಊರಾದ ನಿಪ್ಪಾಣಿಯಲ್ಲಿ ಮರಾಠಿಯಲ್ಲೆ ಪಡೆದರು.ಕನ್ನಡದ ನೆಲೆ ಇಲ್ಲದ ಕಾರಣ ಮರಾಠಿ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿತ್ತು. ತನ್ನ ಶಿಕ್ಷಣವನ್ನು ಮುಂದುವರೆಸಿದ ಪಣದೆಯವರು ಎಲ್.ಸಿ.ಪಿ.ಎಸ್,ಎಲ್ ಜಿ ಒ(ಗೈನಕಾಲಾಜಿ) ವೈದ್ಯಕೀಯ ಶಿಕ್ಷಣವನ್ನು ಮುಂಬೈನಲ್ಲಿ ಎನ್ ಜಿ ಒ ಎಂಬ ಮೆಡಿಕಲ್ ಶಿಕ್ಷಣವನ್ನು ಕೊಲ್ಕತ್ತಾದಲ್ಲಿ ಎಲ್ ಟಿ ಎಂ ಎಂಬ(ಟಿಬಿ) ವೈದ್ಯಕೀಯ ಶಿಕ್ಷಣವನ್ನು ಮದ್ರಾಸಿನಲ್ಲಿ ಪಡೆದು ಉತ್ತಮ ಶೈಕ್ಷಣಿಕ ಸಾಧನೆ ಮಾಡಿ ಕನ್ನಡ ಮಣ್ಣಿನ ಋಣ ತೀರಿಸಲು ವೈದ್ಯ ವೃತ್ತಿಯನ್ನು ಆಯ್ದು ಹುಬ್ಬಳ್ಳಿ ಸಮೀಪದ ಮುಂಡಗೋಡದಲ್ಲಿ ಸರಕಾರಿ ವೈದ್ಯರಾಗಿ ಸೇವೆ ಪ್ರಾರಂಭಿಸಿದರು.
ತದನಂತರ ಗೌರವ ಮನೆತನದ ಗೋಕಾಕದ ಸುಶೀಲಾಬಾಯಿಯೊಂದಿಗೆ ವಿವಾಹವಾಗಿ ಸಂಸಾರದ ಪಥ ಪ್ರಾರಂಭಿಸಿದರು.ಅಲ್ಲಿ ಕನ್ನಡದ ಕಲರವ ಇತ್ತು ಸವ೯ ಕನ್ನಡದ ಪ್ರದೇಶ ಕಂಡು ಅವರಲ್ಲಿ ಕನ್ನಡಾಭಿಮಾನ ಮೊಳಕೆಯೊಡೆಯಿತು ಕನ್ನಡದ ಏಳಿಗೆಯ ಧ್ಯೇಯವಿಟ್ಟು ಸತಿಪತಿಗಳೊಂದಾಗಿ ಆದಶ೯ ಜೀವನ ಸಾಗಿಸುತ್ತಾ ೫ ಮಕ್ಕಳೊಂದಿಗೆ ಜನ್ಮಭೂಮಿಯ ಋಣ ತೀರಿಸಲೆಂದು ೧೯೪೦ ರಲ್ಲಿ ನಿಪ್ಪಾಣಿಗೆ ಆಗಮಿಸಿದರು.
ಇದು ಅವರ ಜೀವನಕ್ಕೆ ಒಂದು ತಿರುವು ಕೊಟ್ಟ ಗಳಿಗೆ.ಅವರು ನಿಪ್ಪಾಣಿಗೆ ಆಗಮಿಸಿದಾಗ ಎಲ್ಲವೂ ಮರಾಠಿಮಯವಾಗಿತ್ತು.
ಪರಿಸ್ಥಿತಿಗೆ ಅನುಗುಣವಾಗಿ ವೃತ್ತಿಯ ನಿರಂತತೆಗೆ ದವಾಖಾನೆಯನ್ನು ಪ್ರಾರಂಭಿಸಿದರು.ಬಂದ ರೋಗಿಗಳಲ್ಲಿ ಕನ್ನಡದ ಮಹತ್ವ ಹೇಳಿ ಎಲೆಮರೆಕಾಯಿಯಂತೆ ಕನ್ನಡದ ಬೀಜ ಬಿತ್ತತೊಡಗಿದರು.ಈ ಸಂದಭ೯ದಲ್ಲಿ ಅವರಿಗೆ ಡಾ. ಗಣಪುಲೆ ಅವರು ಬಹಳ ಸಹಾಯ ಮಾಡಿದ್ದಾರೆ. ಈ ಹತ್ತು ವರುಷದ ಅವಧಿಯಲ್ಲಿ ನಿಪ್ಪಾಣಿಯ ಸುಪ್ರಸಿದ್ದ ವೈದ್ಯರಾಗಿ ಬೆಳೆದು ರೋಗಿಗಳ ಬಡಜನರ ಆರಾಧ್ಯ ದೈವರಾದರು.ತಮ್ಮ ವೃತ್ತಿಯ ಜೊತೆಜೊತೆಯಲ್ಲಿ ಕನ್ನಡವ ಬೆಳೆಸುವ ಆಸಕ್ತಿ ಹೊಂದಿ ಮೊಳಕೆಯಾಗಿದ್ದ ಇವರ ಅಭಿಮಾನ ೧೯೫೦ ರೊಳಗೆ ಹೆಮ್ಮರವಾಗಿ ಬೆಳೆದು ಕಟ್ಟಾ ಕನ್ನಡದ ಕಾವಲುಗಾರರಾದರು.
ಸಖಾರಾಮರೆಂದರೆ ನಿಪ್ಪಾಣಿ ಕೋಠಿವಾಲೆ, ನೇಷ್ಠಿ ಅಂತಹ ಹಿರಿಯರಿಗೆ ತುಂಬಾ ಗೌರವ.ವಿದ್ಯಾವಂತನೆಂಬ ಹೆಮ್ಮೆ.
ಗಡಿನಾಡಿನಲ್ಲಿ ಕನ್ನಡ ಬೆಳೆಯಬೇಕು ಎನ್ನುವ ಉದಾತ್ತ ಧೋರಣೆಯೊಂದಿಗೆ ಹಿರಿಯರೊಂದಿಗೆ ೧೯೬೦ ರಲ್ಲಿ ಕನ್ನಡ ಸಂಘವ ಕಟ್ಟಿ ಕನ್ನಡದ ಶಿಕ್ಷಣ ಸಂಸ್ಥೆ ಸ್ಥಾಪಿಸುವಲ್ಲಿ ಇವರು ಕಾರಣರಾಗಿ ಸದಾ ಕನ್ನಡದ ಕಾವಲುಗಾರರಾಗಿ ಸೇವೆ ಸಲ್ಲಿಸಿದ್ದಾರೆ.೧೯೫೫ ರಲ್ಲಿ ನಡೆದ ಭಾಷೆ ದಂಗೆಯಲ್ಲಿ ಮುಂದಾಳತ್ವ ವಹಿಸಿ ಕನ್ನಡದ ಹಿತಚಿಂತಕರಾಗಿರುವರು.
ಸಮಾಧಿ ಮಠದ ಟ್ರಸ್ಟಿ ಯಾಗಿ ಕೆಲಸಮಾಡಿದ ಇವರು ಶಿಸ್ತುಬದ್ಧ ವ್ಯಕ್ತಿತ್ವವುಳ್ಳವರು. ಕಾಯಕವೇ ಕೈಲಾಸ ಎನ್ನುವ ನುಡಿಯಂತೆ ಕನ್ನಡದ ವೈದ್ಯರಾಗಿ ಸಮಾಜದ ಸೇವಕರಾಗಿ ಶಿಕ್ಷಣ ರೂವಾರಿಯಾಗಿ ನಿಪ್ಪಾಣಿ ಪರಿಸರದಲ್ಲಿ ಮರೆಯಲಾರದ ಕೆಲಸ ಮಾಡಿದ್ದಾರೆ.ನಗರಸಭೆಯ ವೈದ್ಯಕೀಯ ಅಧಿಕಾರಿಯಾಗಿ ಕೆಲಸಮಾಡಿ ಸದ್ದಿಲ್ಲದೇ ಕನ್ನಡ ಕಟ್ಟಿದವರೂ ಮರಾಠಿಗರ ಮನಗೆದ್ದವರು ಶ್ರೀಯುತ ಪಣದೆಯವರು.
ಮುಂದೆ ಪಣದೆ ಇಂಡಸ್ಟ್ರೀಜ್ ಪ್ಲಾಸ್ಟರ್ ಆಫ್ ಪ್ಯಾರೀಸ್ ಕಾಖಾ೯ನೆ ನಿಮಿ೯ಸಿ ವೈದ್ಯಕೀಯ ಲೋಕಕ್ಕೂ ಗಮನಾಹ೯ ಸೇವೆ ಸಲ್ಲಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಇವರು ಕನ್ನಡದ ಪ್ರತಿ ಕಾಯ೯ದಲ್ಲೂ ಮುಂದೆ ನಿಂತು ಕೆಲಸ ಮಾಡಿದ್ದಾರೆ.ಕನ್ನಡ ಸಂಸ್ಕೃತಿ ಯನ್ನು ಉಳಿಸಿ ಬೆಳೆಸಿದ್ದಾರೆ.ಇಂತಹ ಮಹಾನ್ ಮೇಧಾವಿ ಕನ್ನಡದ ರತ್ನ ತನ್ನ ಅವಿರತ ಕನ್ನಡದ ಸೇವೆ ಮಾಡುತ್ತಾ ೧೬ ಮೇ ೧೯೬೭ ರಂದು ದೈವಾಧೀನರಾದರು.ಇವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಕನ್ನಡವನ್ನು ಬೆಳೆಸೋಣ ಇಂದು ನಿಪ್ಪಾಣಿ ಕನ್ನಡದ ಕೋಟೆಯಾಗಿದೆ ಎಂದರೆ ಅದಕ್ಕೂ ಇವರು ಕಾರಣರು.ಇವರಿಗೆ ನನ್ನ ಪ್ರಣಾಮಗಳು.ಕನ್ನಡ ರಾಜ್ಯೋತ್ಸವ ಸಂದಭ೯ದಲ್ಲಿ ಅವರನ್ನು ಹೃದಯದುಂಬಿ ಸ್ಮರಿಸೋಣ
ಮಾಹಿತಿ:
ಶ್ರೀ ಶಿವಕಾಂತ ಪಣದೆ
ಶ್ರೀ ಎಸ್.ಎಂ.ಪುರಾಣಿಕಮಠ
ಶ್ರೀ ಮಾರುತಿ ಕೊಣ್ಣುರಿ
(ಸಹಯೋಗ ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಗಡಿನಾಡು ಕನ್ನಡ ಬಳಗ ನಿಪ್ಪಾಣಿ)