ಕವನಗಳು

0
1166

ನೀರೆ ನೀನಾರೆ ?

ಹಸಿರೆಲೆಯ ಮೇಲೆ
ಮುತ್ತುಗಳ ಮಾಲೆ
ಏಳ್ಬಣ್ಣ ಬಾಲೆ
ನೀರೆ ನೀನಾರೆ ?

ಜುಳುಜುಳನೆ ಹರಿವ
ಫಳಫಳನೆ ಹೊಳೆವ
ಸುಳಿನಾಭಿಯಿರುವ
ನೀರೆ ನೀನಾರೆ ?

ಮಿಂಚುಗಣ್ಣವಳೆ
ಗುಡುಗುದನಿಯಳೆ
ಮುತ್ತುಸುರಿಸುವಳೆ
ನೀರೆ ನೀನಾರೆ ?

ತೆರೆಕರಗಳವಳೆ
ಭೋರ್ಗರೆಯುವವಳೆ
ನೊರೆವಸನಧರಳೆ
ನೀರೆ ನೀನಾರೆ ?

ಬಿಳಿವಸ್ತ್ರಧರಳೆ
ಮೀನ್ಗಂಗಳವಳೆ
ಅಲೆಹಸ್ತದವಳೆ
ನೀರೆ ನೀನಾರೆ ?

ಎನ್.ಶರಣಪ್ಪ ಮೆಟ್ರಿ


ಬನ್ನಿ ನಾವು ಸನ್ಮಾನಿಸುತ್ತೇವೆ

ನಮ್ಮನ್ನು ಯಾರು
ಗುರ್ತಿಸುತ್ತಿಲ್ಲವೆಂದೇಕೆ
ಚಿಂತಿಸುತ್ತೀರಿ
ಬನ್ನಿ ನಾವು ಸನ್ಮಾನಿಸುತ್ತೇವೆ

ಒಂದೆರಡು ಕವನ
ಗೀಚಿದರೆ ಸಾಕು
ಒಂದೆರಡು ಚಿತ್ರ
ಬಿಡಿಸಿದರೆ ಸಾಕು
ಒಂದೆರಡು ಹಾಡು
ಹಾಡಿದರೆ ಸಾಕು
ಒಂಚೂರು ಸಮಾಜಸೇವೆ
ಮಾಡಿದರೆ ಸಾಕು
ನಿಮ್ಮ ಸಿದ್ಧಿಸಾಧನೆಗಳನ್ನು
ನಾವು ಗಣಿಸದೆ
ಬನ್ನಿ ನಾವು ಸನ್ಮಾನಿಸುತ್ತೇವೆ

ನೂರು ರೂಪಾಯಿ ಶಾಲು ಹೊದಿಸಿ
ನೂರು ರೂಪಾಯಿ ಹಾರ ಹಾಕಿ
ನೂರು ರೂಪಾಯಿ ನೆನಪಿನ ಕಾಣಿಕೆ ಕೊಟ್ಟು
ಮತ್ತೆ ಮೇಲೊಂದು ಪ್ರಶಸ್ತಿ ಪತ್ರ ಪ್ರದಾನಿಸಿ
ಒಂದೆರಡು ಫೋಟೋ ಕ್ಲಿಕ್ಕಿಸಿ
ಪತ್ರಿಕೆಯಲ್ಲಿ ಸುದ್ದಿ ಹಾಕಿಸಿ
ನಿಮ್ಮ ಗೌರವ ಹೆಚ್ಚಿಸುತ್ತೇವೆ
ನಮ್ಮ ಆದಾಯ ಹೆಚ್ಚಿಸಿಕೊಳ್ಳುತ್ತೇವೆ
ನೀವೊಂದಿಷ್ಟು ದೊಡ್ಡ ಮೊತ್ತದ
ದೇಣಿಗೆಯಿತ್ತರೆ ಸಾಕು
ಬನ್ನಿ ನಾವು ಸನ್ಮಾನಿಸುತ್ತೇವೆ


ಎನ್.ಶರಣಪ್ಪ ಮೆಟ್ರಿ