..ದಾರಿ ಯಾವುದಾದರೇನು!!!…
ದಾರಿ ಯಾವುದಾದರೇನು ?
ತಲುಪುವ ಗುರಿ ನಿಶ್ಚಿತವಿರಲಿ,
ನಿನ್ನ ಗುರಿ ಅಭ್ಯುದಯದತ್ತ ಸಾಗುತಿರಲಿ,
ಗುರಿ ತಲುಪಲು ಏಕಾಗ್ರತೆಯ ಅರಿವಿರಲಿ,
ನಿನ್ನ ದಾರಿಯ ಪಥಿಕ ನೀನೆ,
ನಿನ್ನ ಸಮಾಜದ ನಿರ್ಮಾತೃ ನೀನೆ !!
ಈ ದಾರಿ ಇಂದು ನಿನ್ನೆಯದಲ್ಲ,
ಗಾಳಿ ,ಬೆಳಕು ಜನಿಸಿದಾಗ,
ಮಾನವ ಪ್ರಾಣಿಯ ಉಗಮವಾದಾಗ,
ದಾರಿ ತನ್ನಂತೆ ತಾನೇ ರೂಪುಗೊಂಡಿದ್ದು…
ದಿಗಂಬರನಾಗಿದ್ದ ಮಾನವ
ಮರದ ತೊಗಟೆ ,ಎಲೆಗಳ ಸುತ್ತಿ
ಬೆತ್ತಲೆ ದೇಹ ಮುಚ್ಚಿಕೊಂಡಿದ್ದು,
ಕಲ್ಲುಗಳ ಚಚ್ಚಿ ಬೆಂಕಿಯ ಹಚ್ಚಿ ದ್ದು,
ಕಾಡುಗೆಣಸು,ಮಾಂಸಗಳ ತಿಂದಿದ್ದು,
ಮರಗಳ ಮೇಲೆ ಪ್ರಾಣಿಯಂತೆ ಬದುಕಿದ್ದ ಮಾನವ
ಸುಂದರ ಕುಟೀರಗಳ ನಿರ್ಮಿಸಿದ್ದು,
ಇದಕೆಲ್ಲ ಕಾರಣವಾಗಿದ್ದು ನವಚಿಂತನೆಯ ದಾರಿ….
ಸ್ವೇಚ್ಛಾಚಾರದ ಲೈಂಗಿಕತೆ ತ್ಯಜಿಸಿ
ಸುಂದರ ಸಂಸಾರ ಕಟ್ಟಿಕೊಂಡಿದ್ದು,
ಮಗ-ಮಗಳು-ಪತ್ನಿ-ಸೋದರ-ಸೋದರಿಯರ
ಸುಮಧುರ ಬದುಕು ರೂಪಿಸಿಕೊಂಡಿದ್ದು..
ಇದಕೆಲ್ಲ ಕಾರಣವಾಗಿದ್ದು ಹೊಸ ಚಿಂತನೆಯ ದಾರಿ………..
ಹರಿವ ನೀರು-ಸುಂದರ ಪರಿಸರ ದೇವರಾಗಿದ್ದು,
ಕೃಷಿ, ಕೈಗಾರಿಕೆ,ವಾಣಿಜ್ಯಗಳ ಬದುಕು ಕಂಡಿದ್ದು,
ಪ್ರಜಾಪ್ರಭುತ್ವ ರೂಪುಗೊಂಡಿದ್ದು,
ಹಕ್ಕುಗಳು ಸಿಕ್ಕಿದ್ದು,ಸಮಾನತೆ ದಕ್ಕಿದ್ದು,
ವಿವಿಧ ಭಾಷೆ-ಸಂಸ್ಕೃತಿ ಜನಿಸಿದ್ದು…
ಇದಕೆಲ್ಲಾ ಕಾರಣವಾಗಿದ್ದು ನವ ಚಿಂತನೆಯ ದಾರಿ…..
ಇದೀಗ ನೀ ಸಾಗುತಿರುವ ದಾರಿ
ಏಕೋ ವಿನಾಶದ ದಿಕ್ಕಿನೆಡೆ ಹೊರಟಿದೆ,
ಅಣುಬಾಂಬುಗಳ ಜನನ, ಅನುದಿನ ಪರಿಸರದ ಹನನ
ನಾನು-ನನ್ನದೆಂಬ ಅಹಮಿಕೆಯ ಸ್ವಾರ್ಥ
ಜಾತಿ-ಧರ್ಮ-ಭಾಷೆಗಳ ಕಲರವ
ಭ್ರಷ್ಟಾಚಾರದ ರುದ್ರ ತಾಂಡವ..
ನಿನ್ನ ದಾರಿಯಲಿ ರಣಕೇಕೆ ಹಾಕುತಿದೆ………
ಮುಗ್ಧರಾದ ನಿನ್ನ ಹಿರಿಯ ತಲೆಮಾರು
ಸಾಗಿದರು ನಿಸ್ವಾರ್ಥದ,ಅಭ್ಯುದಯದ ಹಾದಿಯಲಿ,
ನೀ ಸಾಗುತಿರುವೆ ವಿನಾಶದ ಹಾದಿಯಲಿ,
ಮಾನವ ಈಗಲಾದರೂ ಎಚ್ಚೆತ್ತುಕೋ
ಬಣ್ಣಬಣ್ಣದ ಬದುಕಿನ ಹಾದಿ ತ್ಯಜಿಸು,
ಇಲ್ಲದಿರೆ ನೀ ಸಾಗುವೆ ವಿನಾಶದ ತುತ್ತತುದಿಗೆ….
ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:94496 80583,
63631 72368