ಯಲ್ಲಪ್ಪ ಹರ್ನಾಳಗಿ, ಅನಸೂಯ ಜಹಗೀರದಾರ…..
ಜೀವನದ ಸಂತೆಯೊಳಗೆ ಚಿಂತೆಗಳು ನಡೆದಾಡುತಿವೆ ಗೆಳೆಯಾ,
ಮುಂಜಾನೆಯ ಸವಾಲಿನೊಳಗೆ ಕೂಗುಗಳು ಕುಣಿದಾಡುತಿವೆ ಗೆಳೆಯಾ !!
ಬಂಧು ಬಳಗಗಳ ದಲ್ಲಾಳಿತನವು ನಸು ನಗೆಯು ಹುಸಿಯಾಗಿ,
ಬದುಕಿನ ಕಸುವೆಲ್ಲ ಕುಸ್ತಿಯಾಡುತ ಸೋಲುತಿವೆ ಗೆಳೆಯಾ!!
ಬದುಕ ಪುಟ್ಟಿಯೊಳಗಿನ ಭಾವಗಳು ಹೆದರಿ, ಬೆದರಿ,
ನಗ್ನ ಮನಸುಗಳು ಭಂಡರಿಗೆ ಖರೀದಿಯಾಗುತಿವೆ ಗೆಳೆಯಾ!!
ಬಾಳ ಸಂಜೆಯಲಿ ಬಾಡಿದ ಮನಸುಗಳು
ಆಸರೆಯಿಲ್ಲದೆ ನೋವ ತಿಪ್ಪೆಯಲಿ ನರಳಾಡುತಿವೆ ಗೆಳೆಯಾ!!
ಕೊನೆಯಂಚಿನ ಮೌನ ಮಂದಿರದಲಿ
ಯಮಹನ ಗಜಲ್ ಗಾನ ಆಲಾಪನೆಯ ಅಲೆಗಳು ತೇಲುತಿವೆ ಗೆಳೆಯಾ!!
ಯಲ್ಲಪ್ಪ ಮಲ್ಲಪ್ಪ ಹನಾ೯ಳಗಿ ಶಿಕ್ಷಕರು.
ಎದೆಯ ಬಡಿತದಲಿ ಮಿಳಿತವಾಗಿಹನವನು ಏತರ ಭಯವು
ಭಾವಗಳ ಒಡೆಯನಾಗಿಹನವನು ಏತರ ಭಯವು
ಹೆಜ್ಜೆ ಇಟ್ಟಲ್ಲೆಲ್ಲ ಅವನದೇ ನೆನಪುಗಳು ಸುಳಿದಾಡಿವೆ
ಕಾಲಂದುಗೆಯ ನಾದದಲಿ ರಿಂಗಣವಾಗಿಹನವನು ಏತರ ಭಯವು
ಬಳೆಯ ಕಿಣಿ ಕಿಣಿ ನಾದದಲಿ ಅವನದೇ ಸ್ಪರ್ಶದ ಒನಪಿದೆ
ಆ ದನಿಗೆ ಕಿವಿ ತೆರೆದು ಸುಳಿದಾಡುತಿಹನವನು ಏತರ ಭಯವು
ಕಣ್ಣ ನೋಟದಲಿ ನನ್ನದೇ ಚಿತ್ರ ನನ್ನದೇ ಮಾತಿನ ಪಲಕುಗಳು ನೋಡಿದಲ್ಲೆಲ್ಲ ನೀನೇ ಇರುವಿ ಎಂದು ಸಾರಿ ಹೇಳಿಹನವನು ಏತರ ಭಯವು
ಅವನಿಲ್ಲದೇ ಬದುಕನ್ನು ಊಹಿಸಲು ಭಯವಿದೆ ಜೊತೆ ಜೊತೆಗೆ ನಡೆದು ಬದುಕಲಿ ಧೈರ್ಯ ತುಂಬಿಹನವನು ಏತರ ಭಯವು
ಬಾಳಬಂಡಿಯಲಿ ಹಲವು ನೋವುಗಳಿವೆ ಕಾವುಗಳಿವೆ ಕೈ ಹಿಡಿದು ನಡೆಸಿ ಹೆಗಲು ಕೊಟ್ಟಿಹನವನು ಏತರ ಭಯವು.
ಅನಸೂಯ ಜಹಗೀರದಾರ
ಕೊಪ್ಪಳ.