ನಿನ್ನ ಯಾದ್ ನಲ್ಲಿ ಮುಳುಗಿದವನಿಗೆ ಹಗಲೇನು ಇರುಳೇನು ಒಂದೇ ಅಲ್ಲವಾ ಸಾಕಿ
ಎಲ್ಲ ತೊರೆದು ನಿದಿರೆಯಲಿರುವವನಿಗೆ ಹಗಲೇನು ಇರುಳೇನು ಒಂದೇ ಅಲ್ಲವಾ ಸಾಕಿ
ಮುಲಾಮು ಇಲ್ಲದ ಗಾಯಗಳ ಮತ್ತೆ ಮತ್ತೆ ತಲಾಷಿ ಮಾಡಲು ಹೋಗಬೇಡ ಓ ಸಾಕಿ
ಹಾಡಿನ ಚರಣದಲಿ ತೇಲಿದವನಿಗೆ ಹಗಲೇನು ಇರುಳೇನು ಒಂದೇ ಅಲ್ಲವಾ ಸಾಕಿ
ಮದ್ಯದ ನಂಟು ಬಹಳ ದೊಡ್ಡದು ಈ ಜಗತ್ತಿಗಿಂತಲೂ ಇನ್ನೇನು ಹೇಳುವುದು ಹೆಚ್ಚು
ನಾಳೆಯ ಚಿತ್ರ ನೋಡಿದವನಿಗೆ ಹಗಲೇನು ಇರುಳೇನು ಒಂದೇ ಅಲ್ಲವಾ ಸಾಕಿ
ಮುಚ್ಚಿದ ಬಾಗಿಲೊಳಗೆ ಇದ್ದು ಬಿಡುವುದು ನೆತ್ತಿಗೇರಿದ ಅಮಲು ಇಳಿಸಿದಂತಲ್ಲ ದೊರೆ
ಕಾಣಬಾರದನೆಲ್ಲ ಕಂಡು ಉಂಡವನಿಗೆ ಹಗಲೇನು ಇರುಳೇನು ಒಂದೇ ಅಲ್ಲವಾ ಸಾಕಿ
ಅರ್ಥ ನನ್ನ ಕೈಯಲಿಲ್ಲ ವ್ಯರ್ಥ ಬದುಕು ಕೊಟ್ಟು ಹೋದದ್ದೂ ಅಲ್ಲ ಓ ಜಾಲಿ ಈ
ಜೀವ ಹೋರಾಡ ವ್ಯಾಪಾರ ಎಂದವನಿಗೆ ಹಗಲೇನು ಇರುಳೇನು ಒಂದೇ ಅಲ್ಲವಾ ಸಾಕಿ.
ವೇಣು ಜಾಲಿಬೆಂಚಿ
ರಾಯಚೂರು.
ಗಜಲ್
ಆ ಒಂದು ದಿನ ನಾವೆಲ್ಲರೂ ಸೇರಲಿದ್ದೇವಂತೆ ಒಂದೇ ವೇದಿಕೆಯಲಿ
ನೋಡಿ ಹಾಗೆ ಹೋದವರೂ ಸೇರಲಿದ್ದೇವಂತೆ ಒಂದೇ ವೇದಿಕೆಯಲಿ
ನಾನು ನಾಯಿಯಾಗಿದ್ದೆ ನೀನು ಬೆಕ್ಕಾಗಿದ್ದೆ ಇಂತಹ ಮಾತಿನ ಕಂತೆ
ಒಣಪುರಾಣ ಊದಿದವರೂ ಸೇರಲಿದ್ದೇವಂತೆ ಒಂದೇ
ವೇದಿಕೆಯಲಿ
ಬದುಕಿನ ತುಂಬ ಮಾಡಿದ ತಪ್ಪುಗಳು ತಿಳಿದು ತಿಳಿಯದೆಯೂ
ನಾ ತುಂಬಾ ಸಾಚಾ ಅಂದವರೂ ಸೇರಲಿದ್ದೇವಂತೆ ಒಂದೇ ವೇದಿಕೆಯಲಿ
ನಾವು ಮನುಷ್ಯರಾಗುವುದೆಂದರೆ ಅಷ್ಟು ಸಲೀಸಲ್ಲ ತಪ್ಪು ಮಾಡಿದಷ್ಟು
ಸರಿತಪ್ಪು ಗೊತ್ತಿಲ್ಲ ಎಂದವರೂ ಸೇರಲಿದ್ದೇವಂತೆ ಒಂದೇ ವೇದಿಕೆಯಲಿ
ಜಾಲಿ ನಮಗಿಲ್ಲಿ ಎಲ್ಲ ಒಪ್ಪಿತವೇ ತಿಂದ ಏಟುಗಳಿಗೆ ಲೆಕ್ಕ ಇಟ್ಟವರಾರು
ಮೂಕೇಟು ಛಡಿಯೇಟು ಬಿದ್ದವರೂ ಸೇರಲಿದ್ದೇವಂತೆ ಒಂದೇ ವೇದಿಕೆಯಲಿ.
ವೇಣು ಜಾಲಿಬೆಂಚಿ
ರಾಯಚೂರು.
ಗಜಲ್
ಎಲ್ಲರಿಗೂ ಬೇಸರವಾಗಿ ಬದುಕು ಕಳೆಯುವುದು ಹ್ಯಾಂಗ
ಸುಡುಗಾಡಿಗೂ ಬೇಡವಾಗಿ ದಿನ ದೂಡುವುದು ಹ್ಯಾಂಗ
ಯಾಕೆ ಕೊಡುವನೋ ನನ್ನೊಡೆಯ ಕೊಲ್ಲುವ ಆಯುಷ್ಯವ
ಹಣ್ಣೆಲೆಯ ಅನಾದರ ಕಂಡು ಜೀವಿಸುವಿದು
ಹ್ಯಾಂಗ
ಎಲ್ಲವೂ ಇತ್ತು ಏನೂ ಇಲ್ಲವೀಗ ಇದ್ದುದು ನೆನಪಾಗಿ ಕಾಡ್ಯಾದ
ಒಡಲ ಸಂಕಟದಲಿ ಒದ್ದಾಡುತ ಇರುವುದು ಹ್ಯಾಂಗ
ಮಕ್ಕಳ ಮೋಹ ಬಿಸಾಡಿದೆ ಈಗ ಎರವಿನ ಸಂಸಾರದಲಿ
ನನ್ನದು ನಾನೆಂಬುದು ಸುಳ್ಳೀಗ ಮುಂದಿನದು ಹ್ಯಾಂಗ
ದಾರಿ ತೋರುವ ದೇವರೇ ಸುಮ್ಮನೆ ಕೂಡಬ್ಯಾಡ ಕಲ್ಲಿನ ಹಾಂಗ
*ಅನು* ಬೇಡುತ್ತಾಳೆ ಇಂಥವರ ನಾಳೆಯದು
ಹ್ಯಾಂಗ
ಅನಸೂಯ ಜಹಗೀರದಾರ
ಗಜಲ್
ಒಂದೊಳ್ಳೆ ರೂಪಕದಲಿ ಬರೆಯಬೇಕೆಂದು ತಲೆ ಬಿಸಿ ಮಾಡಿಕೊಂಡೆ
ರೂಪ ವಿರೂಪವಾಗಿ ಬರೆಯಲೇನೆಂದು ತಲೆ ಬಿಸಿ ಮಾಡಿಕೊಂಡೆ
ಮಾತು ಒಡೆಯದಂತೆ ಮುಚ್ಚಿಟ್ಟು ಬಚ್ಚಿಟ್ಟು ಕಾಪಿಟ್ಟು ಬೆವರಾದೆನು
ನಿಗೂಢ ಲೋಕದ ವಜ್ರ ಹಿಡಿಯಲೇಗೆಂದು ತಲೆ ಬಿಸಿ ಮಾಡಿಕೊಂಡೆ
ಎಷ್ಟು ಗುಡಾಣಗಳೋ ಅಷ್ಟು ಗುಟ್ಟುಗಳು ತೆರೆದರೆ ಭೂಕಂಪವಷ್ಟೆ!
ರಹಸ್ಯಗಳ ಕೀಲಿಕೈ ತರುವುದೇಗೆಂದು ತಲೆ ಬಿಸಿ ಮಾಡಿಕೊಂಡೆ
ಒಬ್ಬನು ಛೋಟಾ ಮಾಲೀಕ ಅವನ ಮೇಲೊಬ್ಬ ಬಡಾ ಮಾಲೀಕ
ಕಟ್ಟಡಗಳು ಎತ್ತರ ಗಿಡ್ಡ ಸರಿಮಾಡುವುದೇಗೆಂದು ತಲೆ ಬಿಸಿ ಮಾಡಿಕೊಂಡೆ
ಇರುವುದನು ಬಿಟ್ಟು ಇಲ್ಲದುದನು ತೋರಿಸುವ ಕಲೆಗೆ ಪದವ್ಯಾಪಾರವೇಕೆ
ಜಾಲಿ ಈ ಜೀವ ಅರ್ಥಗೆಡಿಸದಿರುವುದೇಗೆಂದು ತಲೆ ಬಿಸಿ ಮಾಡಿಕೊಂಡೆ
ವೇಣು ಜಾಲಿಬೆಂಚಿ
ರಾಯಚೂರು.
ಗಜಲ್
ಪದಗಳಿಗೆ ಮಾತುಗಳಿಗೆ ಅರ್ಥಗಳಿಗೆ ಒಮ್ಮೊಮ್ಮೆ ಏನೇನೂ ಸಂಬಂಧ ಇಲ್ಲ ಅನಿಸುತ್ತದೆ ಸಾಕಿ
ಮದ್ಯಕ್ಕೆ ವಿವೇಕಕ್ಕೆ ವಿವೇಚನಗೆ ನಶೆಗೆ ಒಮ್ಮೊಮ್ಮೆ ಏನೇನೂ ಸಂಬಂಧ ಇಲ್ಲ ಅನಿಸುತ್ತದೆ ಸಾಕಿ
ಪದವಿಗೂ ಅಲಂಕಾರಕೂ ಎಷ್ಟೊಂದು ಅಂತರವೆಂದು ಹೇಳುವುದು ತಮಾಷೆಯಲ್ಲ
ಕೃತಿಗೆ ಕೃತಾರ್ಥತೆಗೆ ಜಂಭ ಸ್ತಂಭಗಳಿಗೆ ಒಮ್ಮೊಮ್ಮೆ ಏನೇನೂ ಸಂಬಂಧ ಇಲ್ಲ ಅನಿಸುತ್ತದೆ ಸಾಕಿ
ಅಂತರಂಗದ ತುಂಬ ಕತ್ತಲ ಕೋಣೆಗಳು ಧೂಳು ಹಿಡಿದ ಜಡಚರ ವಸ್ತುಗಳು ತಿಪ್ಪೆಯ ರಾಶಿ
ಲಟಲಟ ಪಟಪಟ ಸವಂಡುಗಳಿಗೆ ಒಮ್ಮೊಮ್ಮೆ ಏನೇನೂ ಸಂಬಂಧ ಇಲ್ಲ ಅನಿಸುತ್ತದೆ ಸಾಕಿ
ಕಣ್ಣೆದುರಿಗೆ ನಿಂತು ಕಣ್ಣಿಗೆ ಇರಿಯುವ ಮೊಂಡುತನದ ಕೈಗಳಿಗೆ ಅದು ಎಲ್ಲಿಲ್ಲದ ಬಲ ಬೆಂಬಲ
ತೊಟ್ಟ ಬಟ್ಟೆಗೆ ತೆರೆ ಹಿಂದಿನ ಪರದೆಗಳಿಗೆ ಒಮ್ಮೊಮ್ಮೆ ಏನೇನೂ ಸಂಬಂಧ ಇಲ್ಲ ಅನಿಸುತ್ತದೆ ಸಾಕಿ
ಮಾಡುವುದೊಂದು ಹೇಳುವುದಿನ್ನೊಂದು ಹಚ್ಚಿ ಸಣ್ಣಕೆ ಬೆಂಕಿ ಉರಿಸಿ ಬೂದಿಮಾಡುವರು
ಜಾಲಿ ಗಾಳಿಪಟಗಳಿಗೆ ಬಾಲಂಗೋಚಿಗಳಿಗೆ ಒಮ್ಮೊಮ್ಮೆ ಏನೇನೂ ಸಂಬಂಧ ಇಲ್ಲ ಅನಿಸುತ್ತದೆ ಸಾಕಿ
ವೇಣು ಜಾಲಿಬೆಂಚಿ
ರಾಯಚೂರು.