ಜಾನಪದವು ವಿಶಾಲವೂ ಮತ್ತು ವ್ಯಾಪಕವೂ ಆಗಿದ್ದು ಜಗತ್ತನ್ನೆಲ್ಲ ತನ್ನಲ್ಲಿ ಹುದುಗಿಸಿಕೊಂಡಿದೆ. ಇಲ್ಲಿ ಪ್ರಾಚೀನ ಅರ್ವಾಚೀನಗಳೆರಡೂ ಸಂಧಿಸಿ ಪರಸ್ಪರ ಕೈಕುಲುಕುತ್ತವೆ. ಈ ಜಾನಪದಕ್ಕೆ ಆದಿ ಅಂತ್ಯಗಳಿಲ್ಲ ಸಾವಿಲ್ಲ. ಆಧುನಿಕ ಮಾನವನಲ್ಲಿ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಾ ಬೀಜದಲ್ಲಿ ವೃಕ್ಷವಡಗಿರುವಂತೆ ಕಲೆ, ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಜಾನಪದ ಚೈತನ್ಯ ಸುಪ್ತವಾಗಿರುತ್ತದೆ…
ತಾಯಿ ತೊಟ್ಟಿಲು ತೂಗುತ್ತಾ, ಗರತಿಯರು ರಾಗಿ ಬೀಸುತ್ತಾ, ರಸಿಕ ಗಾಡಿ ಹೊಡೆಯುತ್ತಾ, ಗಂಡು ಹೆಣ್ಣುಗಳು ನಾಟಿ ಹಾಕುತ್ತಾ, ಸ್ತ್ರೀಯರು ರಾಟೆ ತಿರುಗಿಸುತ್ತಾ, ಮಕ್ಕಳು ಕುಣಿಯುತ್ತಾ ಹಾಡುವುದೆಲ್ಲಾ ಜನಪದ ಗೀತೆಯಾಗುತ್ತದೆ. ಸಾಮಾನ್ಯ ಜನ ಚಳಿಗಾಲದಲ್ಲಿ ಬೆಂಕಿ ಕಾಯಿಸುತ್ತಾ ಕುಳಿತು, ಬೇಸಿಗೆಯ ಬೆಳದಿಂಗಳಲ್ಲಿ ಬೀದಿ ಪಡಸಾಲೆಗಳ ಮೇಲೆ ನೆರೆದು ಹಬ್ಬ ಹರಿದಿನ ಮದುವೆಗಳಲ್ಲಿ ಒಂದೆಡೆ ಕಲೆತು, ಕುಳಿತು ಹರಟೆ ಹೊಡೆಯುವಾಗ, ಉತ್ಸಾಹದ ಭರದಲ್ಲಿ ಕುಣಿಯುವಾಗ ಕತೆಗಳ ಲಹರಿ ಉಕ್ಕುತ್ತದೆ. ಗಾದೆಗಳು ಹೊರಸೂಸುತ್ತವೆ. ತಾಯಿ ರಂಗವಲ್ಲಿ ಬಿಡುವಾಗ, ತಂದೆ ಕೃಷಿ ಮಾಡುವಾಗ, ಪಶುಗಳನ್ನು ಮೇಯಿಸುವಾಗ, ಗೃಹಕೃತ್ಯದಲ್ಲಿ ತೊಡಗಿರುವಾಗ ಮಕ್ಕಳು ನೋಡಿ ತಿಳಿಯುತ್ತದೆ. ಹಾಗೆಯೇ ಮರಗೆಲಸ, ಚಿನ್ನದ ಕೆಲಸ, ಕಬ್ಬಿಣದ ಕೆಲಸ, ಚಮ್ಮಾರಿಕೆ ಮೊದಲಾದ ಕಸುಬಗಳು ತಂದೆಯಿಂದ ಮಗನಿಗೆ ಪ್ರಿತ್ರಾರ್ಜಿತ ಆಸ್ತಿಯಂತೆ ವರ್ಗವಾಗುತ್ತವೆ. ಆದರೆ ಇವೆಲ್ಲಾ ಓದಿ ಕಲಿತವಲ್ಲ. ಆಡಿದ್ದನ್ನು ಕೇಳಿ, ನೋಡಿದ್ದನ್ನು ಮಾಡಿ ಕಲಿತದ್ದು. ಮುತ್ತಜ್ಜನಿಂದ ಅಜ್ಜನಿಗೆ, ಅಜ್ಜನಿಂದ ತಂದೆಗೆ, ತಂದೆಯಿಂದ ಮಗನಿಗೆ, ಮಗನಿಂದ ಮೊಮ್ಮಗನಿಗೆ ಪರಂಪರೆಯಿಂದ ಬರುವಂತಹವು. ಹಾಗೆ ಪೀಳಿಗೆಯಿಂದ ಪೀಳಿಗೆಗೆ ಬರುವಾಗ ಅವು ವ್ಯತ್ಯಾಸಗೊಳ್ಳುವುದೂ ಉಂಟು. ಇದನ್ನೆಲ್ಲ ಜಾನಪದದ ಹೆಸರಿಗೆ ಜಮಾ ಮಾಡುತ್ತೇವೆ..
ಅರಸೀಕೆರೆಯಲ್ಲಿ ಉಪನ್ಯಾಸಕರಾಗಿರುವ ಡಾ.ಬಿ.ಡಿ.ಕುಮಾರ್ ಅವರ ಕೃತಿ ಹಾಸನ ಸೀಮೆಯ ಐತಿಹ್ಯಗಳು ಹಾಸನ ತಾಲ್ಲೂಕಿಗೆ ಸಂಬಂಧಿಸಿದ ಐತಿಹ್ಯಗಳ ಅಧ್ಯಯನವಾಗಿದೆ. ಲೇಖಕರ ಚೊಚ್ಚಲ ಕೃತಿ ಮತ್ತು ಜಾನಪದ ಅಧ್ಯಯನ ಕೃತಿ ಇದಾಗಿದೆ. ಲೇಖಕರು ಹಾಸನ ತಾಲ್ಲೂಕಿನ ಕಿರು ಪರಿಚಯ ಮಾಡುತ್ತಾ ಅರೆಮಲೆನಾಡಾದ ಇದು ಹರಿದ್ವರ್ಣಮಯ ಸಿರಿಯನ್ನು ಅನುಪಮ ಶಿಲ್ಪಕಲಾ ಬೆಡಗನ್ನು ಪಡೆದು ತನ್ನದೇ ಆದ ವೈಶಿಷ್ಟ್ಯ ವನ್ನು ಹೊಂದಿ ಬಡವರ ಊಟಿ ಎಂಬ ಖ್ಯಾತಿಯನ್ನು ಪಡೆದಿದೆ. ಇಲ್ಲಿಯ ಕಲಾಸಂಪತ್ತು ಜಗತ್ ಪ್ರಸಿದ್ಧವಾದುದು. ಹಲವು ನದಿಗಳು ಹರಿದಿರುವ ಸಂಗಮ. ಸಮುದ್ರಮಟ್ಟದಿಂದ ಸುಮಾರು ೯೩೯.೧೭ ಮೀ. ಎತ್ತರದಲ್ಲಿದ್ದು ಭೌಗೋಳಿಕವಾಗಿ ಈ ಜಿಲ್ಲೆ ಸಂಪದ್ಭರಿತವಾದ ನೈಸರ್ಗಿಕ ಸಂಪನ್ಮೂಲಗಳಿಂದ ಕೂಡಿದೆ..
ಕೃತಿಯಲ್ಲಿ ಲೇಖಕರು ತಮ್ಮ ಭೌಗೋಳಿಕ ನೆಲೆಯಲ್ಲಿ ಐತಿಹ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಶ್ರಮಿಸಿದ್ದಾರೆ. ಅವುಗಳ ಸಾಂಸ್ಕೃತಿಕ ಒಳತೋಟಿಗಳನ್ನು ಒಳನುಗ್ಗಿ ನೋಡಲು ಪ್ರಯತ್ನ ಮಾಡಿದ್ದಾರೆ. ಬಹುಮುಖಿ ದೃಷ್ಟಿಯಿಂದ ಅವುಗಳ ಆಶಯ ಕಾರ್ಯತತ್ಪರತೆಯನ್ನು ಪ್ರಾತ್ಯಕ್ಷೀಕರಿಸಲು ಪ್ರಯತ್ನಿಸಿದ್ದಾರೆ. ಜನಪದದಲ್ಲಿ ಜಾತಿ ಇಲ್ಲ ಅರ್ಥಾತ್ ತಾರತಮ್ಯ ಇಲ್ಲ. ಅಲ್ಲಿರುವುದು ಸಹಜ ಮಾನವೀಯ ಬದುಕು ಎಂಬುದನ್ನು ಮನಮುಟ್ಟಿಸಿದ್ದಾರೆ ಇದು ಡಾ. ಹಿ.ಶಿ.ರಾಮಚಂದ್ರೇಗೌಡರ ಪ್ರಶಂಸೆ.
ಅಖಂಡ ಭಾರತ ಕೃಷಿ ಸಂಸ್ಕೃತಿಯ ಋಷಿ ದೇಶವಾಗಿದೆ. ಜಾನಪದದ ತೊಟ್ಟಿಲು ಎಂದು ಜಾಗತಿಕ ಮಟ್ಟದಲ್ಲಿ ಹೆಸರಾಗಿದೆ. ಹಾಗಿದ್ದೂ ಈ ದೇಶ, ರಾಜ್ಯದಲ್ಲಿಯಾಗಲೀ ಜಾನಪದ ಕ್ಷೇತ್ರವನ್ನು ಒಂದು ವೈಜ್ಞಾನಿಕ ತಳಹದಿಯ ಮೇಲೆ ಭಾರತೀಯರು ಅಧ್ಯಯನ ಮಾಡಲೇ ಇಲ್ಲ. ಹಾಗೆ ನೋಡಿದರೆ ವಿಶ್ವದಲ್ಲಿ ಜಾನಪದ ಅಧ್ಯಯನ ಸ್ಪಷ್ಟರೂಪ ಪಡೆದದ್ದೇ ೧೮೪೫ ರಿಂದೀಚೆಗೆ. ಪ್ಲೋಕ್ಲೋರ್ ಎಂಬ ಪದವನ್ನು ಇಂಗ್ಲೆಂಡಿನ ವಿಲಿಯಂ ಜಾನ್ ಥಾಮ್ಸ್ ಟಂಕಿಸಿದ ಮೇಲೆ ಜಾನಪದ ಕ್ಷೇತ್ರ ಒಂದು ವೈಜ್ಞಾನಿಕ ಅಧ್ಯಯನದ ತಿರುವು ಪಡೆಯಿತು. ಡಾ.ಹಾ.ಮಾ.ನಾಯಕರು ಜಾನಪದ ಎಂಬ ಕನ್ನಡ ಪದವನ್ನು ಕೊಟ್ಟ ಮೇಲೆ ಇಲ್ಲಿಯೂ ಜಾನಪದದ ಅಧ್ಯಯನ ನಡೆದು ಬಂದಿದೆ. ಮೌಖಿಕ ಸಾಹಿತ್ಯ ಜಾನಪದದ ಪ್ರಮುಖ ಹಜ್ಜೆ ಗುರುತಾಗಿ ಕಥೆ, ಗೀತೆ, ಗಾದೆ ಒಗಟು, ಪುರಾಣ, ಐತಿಹ್ಯಗಳ ಅಧ್ಯಯನಗಳು ಮಹತ್ವ ಪಡೆದುಕೊಳ್ಳುತ್ತವೆ.
ಹಾಸನ ತಾಲ್ಲೂಕನ್ನು ಕೇಂದ್ರವಾಗಿಟ್ಟುಕೊಂಡು ಇಲ್ಲಿಯ ಐತಿಹ್ಯಗಳ ಮನೋಧರ್ಮ, ಆಶಯ ಆಕೃತಿಗಳನ್ನು ಶೋಧಿಸಿಕೊಡುವಲ್ಲಿ ಕೃತಿ ಯಶಸ್ವಿಯಾಗಿದೆ. ಇಲ್ಲಿಯ ಜನಜೀವನದಲ್ಲಿ ಅಡಗಿರುವ ಮೌಖಿಕ ಇತಿಹಾಸದ ಸ್ವರೂಪ, ಸಾಂಸ್ಕೃತಿಕ ಪರಂಪರೆಗಳ ಮೌಲ್ಯ, ಧಾರ್ಮಿಕ ಆಚರಣೆಗಳ ಮಹತ್ವ ಸಾಮಾಜಿಕ ಸ್ಥಿತಿಗತಿಗಳನ್ನು ಕಟ್ಟಿಕೊಡುವಲ್ಲಿ, ತಾಲ್ಲೂಕಿನ ಐತಿಹ್ಯಗಳು ಹೇಗೆ ಸಾಂಸ್ಕೃತಿಕ ಆಸ್ಮಿತೆಯನ್ನು ಬಿಂಬಿಸುತ್ತವೆ ಎಂಬುದನ್ನು ಲೋಕಮುಖಕ್ಕೆ ಬಿಂಬಿಸಿರುವುದು ಈ ಕೃತಿಯ ಧನಾತ್ಮಕ ಅಂಶ. ಐತಿಹ್ಯಗಳ ಕುರಿತು ಸಮೃದ್ಧವಾಗಿ ಮಾಹಿತಿಗಳನ್ನು ಕಲೆಹಾಕಿ ಯೋಗ್ಯ ರೀತಿ ಅಧ್ಯಯನ ನಡೆಸಲಾಗಿದೆ. ಕನ್ನಡ ಜಾನಪದ ಅಧ್ಯಯನಕ್ಕೆ ಇದೊಂದು ಒಳ್ಳೆಯ ಸೇರ್ಪಡೆ ಎಂಬುದು ಡಾ. ಜಿ.ಎನ್.ಉಪಾಧ್ಯರ ಅಭಿಪ್ರಾಯ.
ಜನತೆಯ ಮನಸ್ಸನ್ನು ಆಕರ್ಷಿಸಿ ಅವರ ನಾಲಿಗೆಯಲ್ಲಿ ನಲಿದು ನಿಂತು, ಕಂಠಸ್ಥ ಸಂಪ್ರದಾಯದ ಮೌಖಿಕ ಪರಂಪರೆಯಲ್ಲಿ ಉಳಿದು ಬೆಳೆದು ಬಂದಿರುವ ಐತಿಹ್ಯಗಳು ಕನ್ನಡ ನಾಡಿನಾದ್ಯಂತ ವಿಪುಲವಾಗಿವೆ. ಚರಿತ್ರೆ ಕಾಣದ ಅನೇಕ ಸತ್ಯಾಂಶಗಳನ್ನು ಐತಿಹ್ಯ ಪಿಸುಗುಡುತ್ತದೆ. ಈ ಐತಿಹ್ಯಗಳು ಸಾವಿನಲ್ಲಿಯೂ ಮರುಹುಟ್ಟನ್ನು ಪಡೆದು ಸಮಕಾಲೀನತೆಯಲ್ಲೂ ಸಾಗುತ್ತವೆ. ಈ ಐತಿಹ್ಯಗಳು ಕೇವಲ ಪುರಾಣವಲ್ಲ ಐತಿಹಾಸಿಕ ಸಾಮಾಗ್ರಿಯೂ ಹೌದು. ಪ್ರಾಚೀನ ಕಾಲದ ಸಂಗತಿಯೊಂದು ಕ್ರಮೇಣ ಅಪೂರ್ವವೂ ಅದ್ಭುತವೂ ಆದ ಸನ್ನಿವೇಶಗಳನ್ನು ಒಳಗೊಳ್ಳುತ್ತಾ ತಲೆಮಾರುಗಳ ಮೂಲಕ ಹರಿದು ಬರುವಾಗ ಬಹುಶ: ಐತಿಹ್ಯಗಳ ರೂಪ ಪಡೆದುಕೊಳ್ಳುತ್ತವೆ. ಅಂದರೆ ಐತಿಹ್ಯಗಳು ವ್ಯಕ್ತಿಗಳ ಸ್ಥಳಗಳ ಘಟನೆಗಳ ವಾಸ್ತವ ಅಥವಾ ತೋರಿಕೆಯ ನಂಬಿಕೆಗಳನ್ನೊಳಗೊಂಡ ಕಥನಗಳು. ಇವು ನಡೆದ, ನಡೆಯದ, ನಡೆದಂತೆ ನಡೆಯದೆ, ನಡೆಯದಂತೆ ನಡೆದ ಘಟನೆಗಳ ಪಳೆಯುಳಿಕೆಗಳು ಎನ್ನಬಹುದು.. ಒಂದು ಪ್ರದೇಶದ ಐತಿಹ್ಯಗಳ ಉಗಮದ ನೆಲೆಯನ್ನು ಅರಿಯಲು ಈ ಮಾಹಿತಿಯನ್ನು ಲೇಖಕರು ತಳಹದಿಯಾಗಿ ಬಳಸಿಕೊಂಡಿರುವುದು ಮೆಚ್ಚತಕ್ಕುದಾಗಿದೆ. ಮಾಹಿತಿ ಸಂಗ್ರಹದ ದೃಷ್ಟಿಯಿಂದ ಇದು ಉತ್ತಮ ಮಾರ್ಗ. ಹಾಸನ ತಾಲ್ಲೂಕಿನ ಕನ್ನಡಿಯಲ್ಲಿ ಜಗತ್ತಿನ ಐತಿಹ್ಯಗಳನ್ನು ತೋರಿಸುವ ದೃಷ್ಟಿಕೋನ ಇಲ್ಲಿ ಸಫಲವಾಗಿದೆ ಎನ್ನುತ್ತಾರೆ ಡಾ. ಸಣ್ಣರಾಮ.
ಹಾಸನ ತಾಲ್ಲೂಕಿನ ಐತಿಹ್ಯಗಳ ಅಧ್ಯಯನದಲ್ಲಿ ಸ್ಥಳೀಯ ಐತಿಹ್ಯಗಳು, ಸಂಚಾರಿ ಐತಿಹ್ಯಗಳು, ಪುರಾಣ ಮೂಲದ ಐತಿಹ್ಯಗಳು ಹೀಗೆ ವಿಭಾಗಿಸಿಕೊಂಡು ರಾಮದೇವರಹಳ್ಳ, ಕೊಂತ್ಯಮ್ಮನಹಳ್ಳ, ಬೀಮನಗುಂಡು, ಬೈರಾಪುರದ ಭೀಮನಗುಡ್ಡ, ಕಣವೆ ಬೈರವ, ಹಾಸನಾಂಬೆ, ದೇವಿಕೆರೆ, ವೇದಾವತಿಯ ಗಂಗಮ್ಮನ ಗುಡ್ಡ ಪ್ರದೇಶಗಳ ಐತಿಹ್ಯಗಳನ್ನು ಪುರಾಣ ಮೂಲದಿಂದ ಕಟ್ಟಿಕೊಡುತ್ತಾರೆ. ಜನಪ್ರಿಯ ನಂಬಿಕೆ ಹಾಗೂ ಕೌಟುಂಬಿಕ ಮತ್ತು ಧ್ವನಿಯ ಹಿನ್ನೆಲೆಯಲ್ಲಿ ಬಂದ ಐತಿಹ್ಯಗಳಲ್ಲಿ ದೆವ್ವಗಳ ಸಂಚಾರದ ಐತಿಹ್ಯಗಳೂ ಸಹ ನಂಬಿಕೆಗಳ ಆಧಾರದಿಂದ ರೂಪುಗೊಂಡವಾಗಿರುತ್ತವೆ. ಗೊರಗುಂಡಿ ಅಮ್ಮ, ಪುರದಮ್ಮ, ಮುತ್ತಿಗೆ ಅಮ್ಮ, ರಂಬೆ ನಿನ್ ಸೊಳ್ ಅಡಗಲಿಲ್ಲವಾ (ಅಂಬುಗ) ಗಂಟೆಯ ನಾದ ಬಿಡಾರದಹಳ್ಳಿ ಬೂದೇಶ್ವರ, ಹಗರೆ ಗ್ರಾಮದ ಹಗರಮ್ಮ, ಅಗಿಲೆ ಗ್ರಾಮದ ದ್ಯಾವಮ್ಮ, ಭೈರವ ಹೀಗೆ ಕೆಲವು ಗ್ರಾಮಗಳ ಅಧ್ಯಯನ ಕುತೂಹಲಭರಿತವಾಗಿವೆ. ತ್ಯಾಗ ಬಲಿದಾನಗಳ ಬಲಿ ಐತಿಹ್ಯಗಳು ಅಂಬುಗಮ ರಂಬಮ್ಮ, ಹಂದಿನಕೆರೆ ರಕ್ತ ಕೋಡಿಹಳ್ಳಿ, ದುದ್ದ ಹೋಬಳಿ ಬಸವಾಘಟ್ಟದ ಹಿರೇಕೆರೆ, ದುದ್ದ ಗ್ರಾಮದ ಕರೇಬೀರಣ್ಣ ಇವು ಅಷ್ಟೇ ಕೌತುಕ ಮೂಡಿಸುತ್ತವೆ. ಅರ್ಧಚಾರಿತ್ರಿಕ ಐತಿಹ್ಯಗಳಲ್ಲಿ ವಿಜಯನಗರ ಮೂಲದ ಕಥಾನಕದ ಹೊನ್ನಾವರ, ಚಿಗ್ಗಿರಿರಂಗ, ಬಸವಣ್ಣರ ಕಾಲದ ಬಿಡಾರದಹಳ್ಳಿ ಪ್ರಮುಖವಾಗಿ ಇತಿಹಾಸದ ಹಿನ್ನೆಲೆಯಲ್ಲಿ ಕಟ್ಟಿಕೊಡಲಾಗಿದೆ. ಇನ್ನೂ ನಿಕ್ಷೇಪಕ್ಕೆ ಸಂಬಂಧಿಸಿದ ಐತಿಹ್ಯಗಳಲ್ಲಿ ಮುತ್ತಿಗೆ ನಿಧಿಕೋಟೆ, ಯಲಗುಂದ ನಿಧಿಕೋಟೆ, ಪವಾಡ ಪುರುಷ ಮಡಿವಾಳಪ್ಪ ಜನಪದ ಕಥೆಗಳು ರೋಚಕವಾಗಿವೆ. ಗಂಡುಭೂಮಿಗೆ ಸಂಬAಧಿಸಿದ ವ್ಯಕ್ತಿನಾಮ ಸ್ಥಳನಾಮ ಐತಿಹ್ಯಗಳು ಭಾಗದಲ್ಲಿ ಕುದುರುಗುಂಡಿ, ಕೌಶಿಕ, ಬುರುಡಾಳು ಬೋರೆ, ಬ್ರಹ್ಮದೇವರಹಳ್ಳಿ, ಸೀಗೆಗುಡ್ಡ, ಆಂಜನೇಯಪುರ, ಎಡೆಯೂರು, ರುದ್ರಾಕ್ಷಿ ಪಟ್ಟಣ, ಚೌಡೇನಹಳ್ಳಿ, ಯಲಗುಂದ, ಕಿತ್ತಾನೆ, ಗೋರಿಬಾಬಯ್ಯ, ಲಿಂಗರಸನಹಳ್ಳಿ, ದುದ್ದ, ಮೊಸಳೆ, ಶಾಂತಿಗ್ರಾಮ, ಬಾಗ್ಢೆ ಮಂಜ ಮುಂತಾಗಿ ಪ್ರದೇಶಗಳ ಅಧ್ಯಯನ ಜನಪದೀಯವಾಗಿ ಮನ ಸೆಳೆಯುತ್ತವೆ. ಲೇಖಕರು ತಮ್ಮ ಕ್ಷೇತ್ರಕಾಂತದ ಅಧ್ಯಯನದಲ್ಲಿ ತೆಗೆದ ಪೋಟೋಗಳನ್ನು ಕೃತಿಯಲ್ಲಿ ಹಾಕಿದ್ದಾರೆ. ಮಾಹಿತಿ ಸಂಗ್ರಹಿಸುವ ದಿಶೆಯಲ್ಲಿ ಮಾಹಿತಿ ನೀಡಿ ಕಥೆ ಹೇಳಿದ ವಕ್ತೃಗಳ ಹೆಸರು ವಿವರಗಳ ಪಟ್ಟಿಯನ್ನು ಒದಗಿಸಿದ್ದಾರೆ. ಒಟ್ಟಾರೆ ಹಾಸನ ತಾಲ್ಲೂಕನ್ನು ಕೇಂದ್ರವಾಗಿಟ್ಟುಕೊಂಡು ನಡೆಸಿರುವ ಜನಪದ ಅಧ್ಯಯನ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಸಂಶೋಧನೆ ಅಧ್ಯಯನ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ.
—
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.