ನಮ್ಮ ಗ್ರಾಮ ಕಬ್ಬತ್ತಿ. ಇದು ಹಾಸನ ತಾಲ್ಲೂಕಿಗೆ ಸೇರಿದೆ. ಇಲ್ಲಿ ನಮ್ಮ ಪೂರ್ವಜರ ಕಾಲದಿಂದಲೂ ಪ್ರತಿವರ್ಷ ಮಕರ ಸಂಕ್ರಾಂತಿ ಹಬ್ಬಕ್ಕೆ ಶ್ರೀ ರಂಗನಾಥಸ್ವಾಮಿ ಜಾತ್ರೆಗೆ ಪೌರಾಣಿಕ ನಾಟಕ ತಪ್ಪದೇ ನಡೆಯುತ್ತಾ ಬಂದಿದೆ. ನಾನು ಚಿಕ್ಕವನಿದ್ದಾಗ ನನ್ನ ಚಿಕ್ಕಪ್ಪ ಅಣ್ಣಾಜಿಗೌಡರ ಜೊತೆ ಪ್ರಾಕ್ಟೀಸ್ ಮನೆಗೆ ಹೋಗುತ್ತಿದ್ದೆ. ಅವರು ಉತ್ತಮ ನಟರು. ಭೀಮನ ಪಾತ್ರದಲ್ಲಿ ನಟಿಸುತ್ತಿದ್ದರು. ಇವರು ಗದೆ ತಿರುಗಿಸುವುದು ನೋಡಿ ನನಗೂ ಆಸೆ ಉದಯಿಸಿತು ಎಂದರು ಕೆ.ಬಿ.ಸತೀಶ್.
1993ರಲ್ಲಿ ನಮ್ಮೂರಿನಲ್ಲಿ ನಡೆದ ರಾಜಸುಯೋಗ ಪೌರಾಣಿಕ ನಾಟಕಕ್ಕೆ ಚನ್ನಂಗಿಹಳ್ಳಿ ದೇವರಾಜ ಮಾಸ್ಟರ್ ನನ್ನ ಆಳ್ತನ ನೋಡಿ ನೀನು ಜರಾಸಂದನ ಪಾತ್ರಕ್ಕೆ ಲಗತ್ತಾಗಿದ್ದಿಯ ಎಂದು ಹುರಿದುಂಬಿಸಿ ಆರಿಸಿದರು. ಇದು ನನ್ನ ಮೊದಲ ರಂಗಪ್ರವೇಶ. ಅಲ್ಲಿಂದ ಶುರುವಾದ ನನ್ನ ದೈತ್ಯ ಪಾತ್ರ ಈಗ ಎಪ್ಪತ್ತು ದಾಟಿದೆ. 1994ರಲ್ಲಿ ಊರಿನಲ್ಲಿ ಕುರುಕ್ಷೇತ್ರ. ನಿರ್ದೇಶಕರು ಬನವಾಸೆ ಪುಟ್ಟಾಚಾರ್. ಅಲ್ಲಿ ಮೆಟ್ಟಿನಿಂತ ನನ್ನ ದುರ್ಯೋಧನ ಪಾತ್ರ ಊರ ಜನರ ಮೆಚ್ಚುಗೆ ಗಳಿಸಿ ಮಿತ್ರಬಳಗ ಸತೀಶ್ ದುರ್ಯೋದನ ಎಂದು ಕರೆಯತೊಡಗಿದರು.ಅಲ್ಲಿಂದ ಈ 30 ವರ್ಷದಲ್ಲಿ 35ಕ್ಕೂ ಹೆಚ್ಚು ಬಾರಿ ದುರ್ಯೋಧನ ಪಾತ್ರವೇ ನನ್ನನ್ನು ಹುಡುಕಿಬಂದಿದೆ ಎಂದರು.
ಲೆಕ್ಕ ಹಾಕಿದರೆ ಇವರ 70 ಬಾರಿಯ ಅಭಿನಯದಲ್ಲಿ ಅರ್ಧ ಭಾಗ ದುರ್ಯೋಧನ. ನನ್ನ ಪ್ರಾಥಮಿಕ ಶಿಕ್ಷಣದಲ್ಲಿ ಸರಸ್ವತಿ ಪೂಜೆಗೆ ಭೀಮ, ದುರ್ಯೋಧನ ಏಕಪಾತ್ರಾಭಿನಯದಲ್ಲಿ ನಟಿಸುತ್ತಿದ್ದೆ. ಸತೀಶ್ ಹಾಸನದ ಭಾರತಿ ವಿದ್ಯಾಮಂದಿರದಲ್ಲಿ 1999ರಲ್ಲಿ ಶಿಕ್ಷಕ ವೃತ್ತಿಗೆ ಸೇರಿ ಈಗ ಮುಖ್ಯ ಶಿಕ್ಷಕರು. ಇದು ಅನುದಾನಿತ ವಿದ್ಯಾಸಂಸ್ಥೆ. ಇವರು ಕರ್ನಾಟಕ ರಾಜ್ಯ ಅನುದಾನಿಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಸನ ಜಿಲ್ಲಾಧ್ಯಕ್ಷರು ಹೌದು. ತಂದೆ ಬಸವೇಗೌಡರದು ವ್ಯವಸಾಯ ವೃತ್ತಿ. ತಾಯಿ ಕಮಲಮ್ಮ, ಪತ್ನಿ ಕನಕ. ಇಬ್ಬರು ಮಕ್ಕಳು ದೀಕ್ಷಿತ್ ಮತ್ತು ಹೇಮಂತ್. ಹಾಸನ ಜಿಲ್ಲಾ ಹಿತರಕ್ಷಣಾ ಸಮಿತಿ ಇವರಿಗೆ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಕಲಾರತ್ನ ಕಲಾ ಸಾಮ್ರಾಟ್ ಬಿರುದು ನೀಡಿದೆ.
ಹಳೇಬೀಡು ಪುಷ್ಪಗಿರಿ ಬೆಟ್ಟದಲ್ಲಿ ದುರ್ಯೋಧನ, ಹಿರಣ್ಯ ಕಶೀಪು ಪಾತ್ರ ಮೆಚ್ಚಿ ಪುಷ್ಪಗಿರಿ ಸ್ವಾಮೀಜಿಗಳು ಆಶೀರ್ವಾದಿಸಿದ್ದನ್ನು ಸ್ಮರಿಸುತ್ತಾರೆ. ಹಾಸನ ತಾ. ಬೂದೇಶ್ವರ ಮಠ ಶಿವರಾತ್ರಿ ಜಾತ್ರೆ ಸೀಗೆಬೆಟ್ಟದ ಹುಣ್ಣಿಮೆ ಜಾತ್ರೆಗೆ ಕುರುಕ್ಷೇತ್ರ, ಹೊಳೆನರಸೀಪುರ ತಾ.ಗವಿಸೋಮನಹಳ್ಳಿ ಜಾತ್ರೆಯಲ್ಲಿ ಪ್ರದರ್ಶಿತ ರಾಜವಿಕ್ರಮದಲ್ಲಿ ಶನಿದೇವರ ಪಾತ್ರ ನಿರ್ವಹಿಸಿದ್ದಾರೆ. ಮೈಸೂರು ದಸರಾದಲ್ಲಿ ತಂಡದೊಟ್ಟಿಗೆ ಹೋಗಿ ನಟಿಸಿದ್ದಾರೆ. ಇವರ ಹುಟ್ಟೂರು ಕಬ್ಬತ್ತಿಗಿಂತ ಹೆಚ್ಚಾಗಿ ಹಾಸನ ಕಲಾಭವನದಲ್ಲಿ ದುರ್ಯೋಧನ ಪಾತ್ರದ ನಟನೆಗೆ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ್ದಾರೆ. ಹಾಸನದ ಗಣಪತಿ ಪೆಂಡಲಿನಲ್ಲಿ ಪ್ರತಿವರ್ಷ ನಡೆದುಬರುತ್ತಿರುವ ಗಣೇಶೋತ್ಸವಕ್ಕೆ ನಡೆಯುವ ಪೌರಾಣಿಕ ನಾಟಕ ದೃಶ್ಯಾವಳಿ ಸ್ಫರ್ಧೆಯಲ್ಲಿ ದ್ವಾರಕ ದೃಶ್ಯಕ್ಕೆ ಬಹುಮಾನ ಬಂದಿದೆ. ಅನ್ನಪೂರ್ಣೇಶ್ವರಿ ಕಲಾಸಂಘದ ಗೌರವಾಧ್ಯಕ್ಷರಾಗಿ, ಕೆಂಪೇಗೌಡ ಕಲಾಸಂಘದ ನಿರ್ದೇಶಕರಾಗಿ ಕಲಾಸೇವೆಯಲ್ಲಿ ಕ್ರಿಯಾಶೀಲರು. ಇವರ ನಟನೆಯ ಪಾರ್ಟುಗಳಲ್ಲಿ ರಾಮಾಯಣ-ರಾವಣ ಕುಂಭಕರ್ಣ ಕುರುಕ್ಷೇತ್ರದಲ್ಲಿ ದುರ್ಯೋಧನ ಅರ್ಜುನ ಭೀಮ, ಚಂಡಾಸುರನ ವಧೆ-ಭೀಮ ತ್ರಿಜನ್ಮ ಮೋಕ್ಷ-ಹಿರಣ್ಯ ಕಶೀಪು, ವಜ್ರಶೇಖರನ ವಧೆ-ವಿಶ್ವಕಾಕ್ಷ. ದೇವಿ ಮಹಾತ್ಮೆ ಮಹಿಷಾಸುರ, ಶನಿಪ್ರಭಾವ-ವಿಕ್ರಮ, ಭಕ್ತ ಮಾಂಧಾತದಲ್ಲಿ ಶನಿ ದೇವರು ಹೀಗೆ ಇವರು ಪಾತ್ರಗಳ ವೈವಿಧ್ಯತೆಯಲ್ಲಿ ನುರಿತ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ನಿರ್ದೇಶಕರ ಪಟ್ಟಿಯೂ ದೊಡ್ಡದೆ ಇದೆ. ರಂಗಪ್ಪದಾಸ್, ಎ.ಸಿ.ರಾಜು, ಪದ್ಮರಾಜ್, ರಾಜು ತಂದ್ರೆ, ವೀರಭದ್ರಾಚಾರ್, ಪಾಲಾಕ್ಷಾಚಾರ್, ಅಶ್ವತ್ಥ, ಸಚ್ಚಿನ್, ದೇವರಾಜ್, ಗುಂಡುರಾಜ್, ರವಿಕುಮಾರ್, ಶ್ರೀನಿವಾಸಮೂರ್ತಿ. ಹಾಸನ ರಮೇಶ್ ನಿರ್ದೇಶನದಲ್ಲಿ ತೆರೆಕಂಡ ಶ್ರೀಮಂತ ಚಲನಚಿತ್ರದಲ್ಲಿ ಹಳ್ಳಿಯ ಪಟೇಲನ ಪಾತ್ರದಲ್ಲಿ ನಟಿಸಿ ಸಿನಿಮಾದಲ್ಲಿಯೂ ದುರ್ಯೋಧನ ಪಾತ್ರ ನಿರ್ವಹಿಸಿದ್ದಾರೆ. ಸದ್ಯ ದಕ್ಷ ಯಜ್ಞ ನಾಟಕದ ದಕ್ಷಬ್ರಹ್ಮನ ಪಾತ್ರಕ್ಕೆ ರಂಗತಾಲೀಮು ನಡೆಸಿದ್ದಾರೆ.
ಗೊರೂರು ಅನಂತರಾಜು, ಹಾಸನ.
ಮೊಬೈಲ್: 9449462879.
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.