ನಿಷ್ಠಾವಂತ ಕಾರ್ಯಕರ್ತರಿಗೆ ಸರಿಯಾದ ಸ್ಥಾನಮಾನ ನೀಡುವ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ರಾಜ್ಯಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆಯೇ ಟಿಕೆಟ್ ತಮಗೇ ನೀಡಬೇಕು ಎಂಬುದನ್ನು ಬಾಯಲ್ಲಿ ಹೇಳದೆ ಭಿನ್ನರಾಗ ಹಾಡಿ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಸಲು ಹವಣಿಸಿದ ಘಟಾನುಘಟಿಗಳಿಗೆ ಮುಟ್ಟಿನೋಡಿಕೊಳ್ಳುವಂಥ ಶಾಕ್ ನೀಡಿದೆ ಪಕ್ಷದ ಹೈಕಮಾಂಡ್.
ಹೌದು, ಹೈಕಮಾಂಡ್ ಎಂದರೆ ಕೇವಲ ಹೌದಪ್ಪಗಳನ್ನು ಅಥವಾ ಆಂತರಿಕ ವಾತಾವರಣ ಕೆಡಿಸುವವರನ್ನು ಮಾತ್ರ ಮೇಲೆತ್ತುವ ಸಮಯಸಾಧಕರ ಗುಂಪಾಗಿರಬಾರದು. ಇಲ್ಲಿ ಗುಂಪುಗಾರಿಕೆಗೆ ಅವಕಾಶ ಇರಬಾರದು ಅಥವಾ ಒಂದೇ ಕುಟುಂಬಕ್ಕೆ ಸೀಮಿತವಾಗಿರಬಾರದು. ಎಲ್ಲಕಿಂತಲೂ ಪಕ್ಷ ಮೇಲೆ, ಪಕ್ಷಕ್ಕಿಂತಲೂ ಕಾರ್ಯಕರ್ತ ಮೇಲೆ ಎಂಬ ನೀತಿಯೇ ಹೈಕಮಾಂಡ್ ಎಂಬ ಆಡಳಿತಕ್ಕೆ ನಿಜವಾದ ಕಿಮ್ಮತ್ತು ತಂದುಕೊಡುತ್ತದೆ. ಬಿಜೆಪಿಯ ಹೈಕಮಾಂಡ್ ಈ ಸಂದರ್ಭದಲ್ಲಿ ಎಲ್ಲ ಪಕ್ಷಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ.
ರಾಜ್ಯಸಭೆಗೆ ವಯಸ್ಸಾದವರು ಮಾತ್ರ ಸ್ಪರ್ಧಿಸಬೇಕು ಎಂಬ ಅಲಿಖಿತ ನಿಯಮವನ್ನು ತೆಗೆದುಹಾಕಿ ನಿಷ್ಠಾವಂತ ಕಾರ್ಯಕರ್ತರೂ ಪಕ್ಷದ ವತಿಯಿಂದ ಸ್ಪರ್ಧಿಸಬಹುದು ಎಂಬುದನ್ನು ಒತ್ತಿಹೇಳುವಂತೆ ಈರಣ್ಣ ಕಡಾಡಿ ಹಾಗೂ ಅಶೋಕ ಗಸ್ತಿ ಎಂಬ ಎಲೆಮರೆಯ ಕಾಯಿಗಳನ್ನು ಹೊರತಂದು ರಾಜ್ಯಸಭಾ ಸ್ಪರ್ಧೆಯ ಟಿಕೆಟ್ ನೀಡುವ ಮೂಲಕ ಬಿಜೆಪಿಯು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಕೇಂದ್ರೀಕೃತ ಅಧಿಕಾರದ ಲೇವಡಿ ಮಾಡಿ ನೀವಾಳಿಸಿ ಒಗೆದಿದೆ ! ಅಲ್ಲದೆ ತಾವಿಲ್ಲದೆ ಪಕ್ಷವೇ ಇಲ್ಲ ಎಂಬ ಭಾವನೆ ತಾಳಿ ಪಕ್ಷದಲ್ಲಿ ಭಿನ್ನಮತ ಹುಟ್ಟುಹಾಕಲು ಹವಣಿಸುತ್ತಿರುವವರಿಗೆ ಚಾಟಿಯೇಟು ನೀಡಿ ಯಾರೂ ಪಕ್ಷಕ್ಕಿಂತ ದೊಡ್ಡವರಲ್ಲ ಎಂಬುದನ್ನು ಸಾರಿ ಹೇಳಿದೆ. ಕೊರೋನಾ ಮಹಾಮಾರಿಯ ಹೊಡೆತದ ಈ ಸಂಕಟದ ಸಮಯದಲ್ಲಿ ಇನ್ನಾದರೂ ಮಾತು ಮಾತಿಗೂ ಭಿನ್ನಮತದ ಅಪಸ್ವರ ಎತ್ತುವ ಪ್ರತಿಷ್ಠಿತ ಎನ್ನಿಸಿಕೊಂಡಿರುವ ನಾಯಕರು ಪಕ್ಷದ ಎಲ್ಲ ತೀರ್ಮಾನಗಳಿಗೆ ಸಹಕಾರ ನೀಡಿ ಸ್ಥಿರ ಸರ್ಕಾರ ಹಾಗೂ ಅಭಿವೃದ್ಧಿ ಪರ ಆಡಳಿತಕ್ಕೆ ಸಹಕಾರ ನೀಡಬೇಕಾಗಿದೆ
ಉಮೇಶ ಬೆಳಕೂಡ, ಮೂಡಲಗಿ