ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಕಪಲ್ ಛಾಲೇಂಜ್ ಎಂಬುದು ಭಾರಿ ಟ್ರೆಂಡ್ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಸ್ವೀಕರಿಸುವ ಮುನ್ನ ಎಚ್ಚರಿಕೆ ವಹಿಸಿ ಎಂದು ಪುಣೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪುಣೆಯ ಸೈಬರ್ ಕ್ರೈಂ ಪೊಲೀಸರು ಈ ಸಂಬಂಧ ಟ್ವಿಟರ್ ಮೂಲಕ ಸಂದೇಶ ರವಾನಿಸಿದ್ದು ಕಪಲ್ ಛಾಲೇಂಜ್ ನಲ್ಲಿ ಹಾಕುವ ಫೋಟೋಗಳು ದುರುಪಯೋಗವಾಗುವ ಸಾಧ್ಯತೆ ಇದೆ. ಹಾಗಾಗಿ ಎಚ್ಚರಿಕೆ ವಹಿಸಿ ಎಂದಿದ್ದಾರೆ.
ಈ ಸಂಬಂಧ ಈಗಾಗಲೆ ಪೊಲೀಸರಲ್ಲಿ ಹಲವರು ದೂರು ದಾಖಲಿಸಿದ್ದಾರೆ. ತಮ್ಮ ಪೋಟೋಗಳು ದುರುಪಯೋಗವಾಗಿವೆ ಎಂದು ದೂರಿದ್ದಾರೆ. ಹಾಗಾಗಿ ಯಾವುದೇ ರೀತಿಯ ಅನುಮಾನ ಬಂದಲ್ಲಿ ಕೂಡಲೇ ಸಂಪರ್ಕಿಸಿ ಎಂದಿದ್ದಾರೆ.
ಈಗಾಗಲೆ ಲಕ್ಷಾಂತರ ಜನರು ಕಪಲ್ ಛಾಲೇಂಜ್ ನಲ್ಲಿ ಭಾಗವಹಿಸಿ ಫೋಟೋಗಳನ್ನು ಹಾಕಿದ್ದಾರೆ. ನಿತ್ಯವೂ ಸಾವಿರಾರು ಜನರು ಅದರಲ್ಲಿ ಸೇರುತ್ತಲೇ ಇದ್ದಾರೆ. ಅದಕ್ಕೆ ವೈವಿಧ್ಯಮಯ ಕಮೆಂಟ್ ಗಳೂ ಬರುತ್ತಿವೆ. ಇದರಿಂದ ಸ್ಫೂರ್ತಿಗೊಂಡು ಅನೇಕರು ಇನ್ನೂ ತಮ್ಮ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿದ್ದಾರೆ. ಆದರೆ ಇದು ಕೌಟುಂಬಿಕ ಅಶಾಂತಿಗೆ ಕಾರಣವಾಗಬಹುದು ಹಾಗೂ ಫೋಟೋ ಗಳ ದುರುಪಯೋಗವಾಗಿ ಅನಾಹುತಗಳಿಗೆ ಕಾರಣವಾಗಬಹುದು ಎಂದೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ, ಯಾವ್ಯಾವುದೋ ಚಾಲೇಂಜ್ ಬರುತ್ತದೆ ಎಂದು ಅಕ್ಸೆಪ್ಟ್ ಮಾಡುವ ಮುನ್ನ ಹಿಂದೆ ಮುಂದೆ ವಿಚಾರಿಸುವುದು ಒಳಿತು ಎಂಬ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ.