ಮರಳಿ ಗೂಡಿಗೆ
ದಿನಗೂಲಿಗಾಗಿ ದುಡಿಯುವ
ಕಾರ್ಮಿಕರು ನಾವು….
ರಟ್ಟೆಯ ಬಲವ ನಂಬಿದವರು
ಕೆಲಸವಿದೆಯೆಂದು ಕೈಚಾಚಿದರೆ
ದೇಶದ ಉದ್ದಗಲಕ್ಕೂ ಹರಿದಾಡುವರು ನಾವು….!!
ಕೂಲಿ ಕೆಲಸವನರಸಿ ವಿದೇಶಕ್ಕೆ
ಹೋದ ಕಾರ್ಮಿಕರು ಅವರು….
ವಿದ್ಯೆ, ಹುದ್ದೆಯ ಬಲವ ನಂಬಿದವರು
ಹಣದ ಆಸೆಗೆ ದೇಶವನೇ ಹೀಗಳೆದು
ಲೋಹದ ಹಕ್ಕಿಯಲಿ ಕುಳಿತು ಹಾರಾಡುವವರು ಅವರು….!!
ತುತ್ತಿನ ಚೀಲ ತುಂಬಿಸಲು
ಹರಸಾಹಸ ಪಡುವವರು ನಾವು….
ಹರಕುಹಾಸು ಮುರುಕು ಜೋಪಡಿಯಲಿ
ಕರುಳಕುಡಿಯ ನಗುವ ಕಂಡು
ಬೆಂಕಿಯಲಿ ಸುಡುವ ರೊಟ್ಟಿ ಉಂಡು
ಸುಖವ ಕಾಣುವ ಶ್ರೀಮಂತರು ನಾವು…!!
ಆಸ್ತಿ ಅಂತಸ್ತು ಕಾರು ಬಂಗಲೆ ಐಶಾರಾಮಿ ಜೀವನದ ಸುಖವ ಬಯಸುವವರು ಅವರು…!!
ಎಷ್ಟಿದ್ದರೂ ತೀರದ ಬಯಕೆಯವರು..
ಎಲ್ಲಿದ್ದರೂ ಸುಖವ ಕಾಣದವರು….!!
ಹೇಗಿದ್ದೆವೊ ಹಾಗೇ ನೆಮ್ಮದಿಯಾಗಿದ್ದೆವು ನಾವು…!
ದೇಶ ದೇಶಗಳ ನಡುವಿನ ತಿಕ್ಕಾಟಕೆ
ಜೈವಿಕ ಯುದ್ಧದ ಹುಚ್ಚಾಟಕೆ
ಮತ್ತೇ…ಬಲಿಯಿದವರು ನಾವೇ….!!!
ನಾವು ಬಡವರು….!!!
ದೇಶದ ಗಡಿಯನು ಎಂದು ದಾಟದವರು….!!
ಕೂಲಿ ಇಲ್ಲಿ…., ಅನ್ನವಿಲ್ಲಾ….,ನೀರಿಲ್ಲಾ…, ನೆಲೆಯೂ ಇಲ್ಲಾ….,
ನಮ್ಮದಲ್ಲದ ಊರಲಿ ನಮ್ಮ ಕೇಳುವ ಯಾವ ನಾಯಕರು ಇಲ್ಲಾ…!
ಅಲ್ಲೆಲ್ಲೋ ಹರಿದಾಡುವ ಅಂಟುಜಾಡ್ಯವನು ದೇಶಕೆ ತಂದು ಅಂಟಿಸಿದವರಾರೊ….! ನಂಜನುಣ್ಣುತಿರುವವರು ನಾವು…
ನಾವು ಬಡವರು….!!!
ಮಹಾಮಾರಿಯಲ್ಲ… , ಹಸಿವಿನ ಹೆಮ್ಮಾರಿ ನಮ್ಮ ಕೊಲ್ಲುವುದೆಂಬ ಭಯ…!!
ಮರಳಿ ಗೂಡು ಸೇರುವ ತವಕ
ಹಾರಲು ರೆಕ್ಕೆಯಲ್ಲ..!
ನಡೆಯಲು ಶಕ್ತಿಯಿಲ್ಲ….!
ನಮಗಾಗಿ ಒಂದು ರೈಲು ಓಡುವುದಿಲ್ಲ
ನಾವು ಬಡ ದೇಶಿ ವಲಸೆ ಕೂಲಿಕಾರರು….!!
ವಿಮಾನಯಾನ…ಕೆಂಪುಹಾಸು..
ರಾಜೋಪಚಾರ ಕಾದಿದೆ….!!
ಸಾವಿಗಂಜಿ…, ಧಿಕ್ಕರಿಸಿದ ಗೂಡಿನಡಿ
ರಕ್ಷಣೆ ಪಡೆಯಲು ಮರಳುವವರಿಗಾಗಿ….!!
ಅವರು ವಿದೇಶಿ ಶ್ರೀಮಂತ ಕೂಲಿಕಾರರು
ಹಣ ಕೊಟ್ಟು ಕೊಂಡುಕೊಳ್ಳುವರು….!!
ಮರಳಿ ಗೂಡು ಸೇರುವ ತವಕ….!!
ಸಾಯುವ ಭಯವಿಲ್ಲ….!
ಸತ್ತರೂ ಚಿಂತೆ ಇಲ್ಲಾ…!!
ಈ ನಮ್ಮ ಪಯಣ ಸುಖವಾಗಲೆಂದು
ಶುಭಕೋರಿರೆಲ್ಲಾ….!!
✒️ ಡಾ. ನಿರ್ಮಲಾ ಬಟ್ಟಲ, ಬೆಳಗಾವಿ
ಸುಂದರವಾದ ಕವನ.
ಸುಂದರ ಕವನ