ಅಂದು ನವೆಂಬರ್ ೨೭, ೨೦೦೮ ರಂದು ಎಲ್ಲ ಸುದ್ದಿ ಪತ್ರಿಕೆಗಳಲ್ಲಿ ಮುಂಬೈನ ಶಿವಾಜಿ ಟರ್ಮಿನಸ್ ನಲ್ಲಿ ಕೈಯಲ್ಲಿ ಎಕೆ ೪೭ ಗನ್ ಹಿಡಿದಿದ್ದ ಯುವಕನೊಬ್ಬನ ಫೋಟೋ ಪ್ರಕಟವಾಗಿತ್ತು. ಅವನೇ ಅಜ್ಮಲ್ ಕಸಾಬ್.
ಆ ಫೋಟೋ ತೆಗೆದವರು ಸೆಬಾಸ್ಟಿಯನ್ ಡಿಸೋಜಾ ಎಂಬ ಪತ್ರಕರ್ತರು.
ನವೆಂಬರ್ ೨೬, ಭಾರತೀಯರು ಮರೆಯಲಾರದ ದಿನ.
ಹತ್ತು ಜನ ಪಾಕಿಸ್ತಾನಿ ಉಗ್ರರು ಮುಂಬೈ ಮೇಲೆ ದಾಳಿ ಮಾಡಿ ಮೂರು ದಿನಗಳ ಕಾಲ ಭಾರತೀಯರು, ವಿದೇಶೀಯರೆನ್ನದೆ ಎಲ್ಲರ ಮೇಲೂ ಗುಂಡಿನ ಸುರಿಮಳೆಗೈದು ಅಟ್ಟಹಾಸ ಮೆರೆದಿದ್ದರು.
ಮೂರು ದಿನಗಳ ಉಗ್ರ ದಾಳಿಯಲ್ಲಿ ಒಂಬತ್ತು ಉಗ್ರರನ್ನು ಭಾರತೀಯ ಪೊಲೀಸರು, ಯೋಧರು ಕೊಂದು ಹಾಕಿದರು. ಉಳಿದ ಒಬ್ಬನೇ ಪಾತಕಿ ಅಜ್ಮಲ್ ಕಸಬ್ ನನ್ನು ಜೀವಂತವಾಗಿ ಹಿಡಿಯಬೇಕಾದರೆ ಕಾನ್ ಸ್ಟೇಬಲ್ ಶ್ರೀಕಾಂತ ಓಂಬ್ಳೆಯಂಥವರು ಪ್ರಾಣ ತೆರಬೇಕಾಯಿತು. ತನ್ನ ಶರೀರದಲ್ಲಿ ಅಸಂಖ್ಯ ಗುಂಡುಗಳು ಹೊಕ್ಕಿದ್ದರೂ ಪಾಕಿ ಪಾತಕಿಯನ್ನು ಜೀವಂತವಾಗಿ ಹಿಡಿದು ಕೊಟ್ಟು ಒಂಬ್ಳೆಯವರು ಹಿಂದೂಗಳ ಮೇಲೆ ಬಹುದೊಡ್ಡ ಉಪಕಾರವನ್ನೇ ಮಾಡಿದರು.
ಇಲ್ಲದಿದ್ದರೆ ಎಲ್ಲ ಹತ್ತೂ ಉಗ್ರರು ಸತ್ತಿದ್ದರೆ ಅದನ್ನು ಹಿಂದೂ ಉಗ್ರವಾದದ ತಲೆಗೆ ಕಟ್ಟಲು ಕೆಲವು ದೇಶದ್ರೋಹಿಗಳು, ದುಷ್ಟಶಕ್ತಿಗಳು ಹೊಂಚು ಹಾಕಿದ್ದವು ಎಂಬುದು ಆಮೇಲೆ ತಿಳಿದುಬಂದ ಸಂಗತಿ.
ಅಂದ ಹಾಗೆ ಕೊನೆಯ ಪಾತಕಿ ಅಜ್ಮಲ್ ಕಸಾಬ್ ನ ಫೋಟೋ ತೆಗೆದವರು ಪತ್ರಕರ್ತ ಸೆಬಾಸ್ಟಿಯನ್ ಡಿ ಸೋಜ ಎಂಬ ವಿಷಯ ಬಹಳ ಜನರಿಗೆ ತಿಳಿದಿಲ್ಲ.
ಆ ಕೊಲೆಗಡುಕರು ಆವೇಶ ತುಂಬಿ ಮುಗ್ಧ ಜನರನ್ನು ಗುಂಡಿಕ್ಕಿ ಕೊಲ್ಲುವ ದೃಶ್ಯಗಳನ್ನು ಸೆಬಾಸ್ಟಿಯನ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ವಿದೇಶಿ ಮಾಧ್ಯಮಗಳಿಂದ ಪ್ರಶಂಸೆ ಪಡೆದರೆ ಭಾರತೀಯರಿಗಾಗಿ ತೆರೆಮರೆಯ ಹೀರೋ ಆಗಿ ಹೋದರು.
ಸೆಬಾಸ್ಟಿಯನ್ ಒಬ್ಬರೇ ಅಜ್ಮಲ್ ಹಾಗೂ ಇಸ್ಮಾಯಲ್ ಎಂಬ ಇಬ್ಬರು ಉಗ್ರರ ಫೋಟೋ ತೆಗೆದವರು. ಕಸಬ್ ನ ಈ ಚಿತ್ರವೇ ೨೬/೧೧ ರ ಮುಂಬೈ ದಾಳಿಯ ಹಿಂದಿರುವ ಪಾಕ್ ಕೈವಾಡದ ಬಗ್ಗೆ ಎಲ್ಲ ಮಾಹಿತಿಯನ್ನು ಬಿಚ್ಚಿಟ್ಟಿತ್ತು.