ಬೀದರ – ಎಲ್ಲೆಂದರಲ್ಲಿ ತಗ್ಗು ಬಿದ್ದ ರಸ್ತೆಗಳು,.. ದೊಡ್ಡ ವಾಹನಗಳ ಹಿಂದೆ ಇದ್ದವರು ಕಾಣದಷ್ಟು ಏಳುವ ಧೂಳು,.. ಅಲ್ಲಲ್ಲಿ ಅಗೆದು ಅರ್ಧಕ್ಕೆ ಕೈ ಬಿಟ್ಟ ಗುಂಡಿಗಳು,.. ಸರ್ಕಸ್ ಮಾಡುತ್ತಲೇ ಪ್ರಯಾಣಿಸುವ ವಾಹನ ಸವಾರರು,… ಈ ದೃಶ್ಯಗಳೆಲ್ಲ ಬೀದರ್ ಜಿಲ್ಲೆಯಿಂದ ಭಾಲ್ಕಿ ತಾಲೂಕು, ಕಮಲನಗರ, ಮಹಾರಾಷ್ಟ್ರದ ಉದಗೀರ ಮಾರ್ಗದಲ್ಲಿ ಸಾಮಾನ್ಯ ಎಂಬಂತಾಗಿದೆ.
ಕೆಡಿಪಿ ಸಭೆಯಲ್ಲಿ ಉದಗೀರ ಮಾರ್ಗದ ಬಗ್ಗೆ ಹೀಗೆ ಅಳಲನ್ನು ತೋಡಿಕೊಂಡವರು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ.
ಈ ಮಾರ್ಗ ಮೊದಲು ರಾಜ್ಯ ಹೆದ್ದಾರಿಯಾಗಿತ್ತು. ಅಗತ್ಯವಿಲ್ಲದಿದ್ದರೂ ಈ ಮಾರ್ಗವನ್ನು ಮೇಲ್ದರ್ಜೆಗೆ ಏರಿಸಿ 54 ಕಿಲೋಮೀಟರ್ ಕಾಮಗಾರಿಯನ್ನು 360 ಕೋಟಿಗೆ ಟೆಂಡರ್ ನೀಡಲಾಯಿತು.
ಟೆಂಡರ್ ಪ್ರಕಾರ 2019ರ ಎಪ್ರಿಲ್ ಗೆ ಮುಗಿಯಬೇಕಾದ ಈ ಕಾಮಗಾರಿ ಇನ್ನೂ ಮುಗಿದಿಲ್ಲ. ಧೂಳಿನಿಂದ ರೈತರ ಬೆಳೆಗಳು ಹಾಳಾಗುತ್ತಿವೆ, ಆಮೆಗತಿಯ ಕಾಮಗಾರಿಯಿಂದ ರೋಸಿ ಹೋಗಿರುವ ಸ್ಥಳೀಯರು, ವಿಪರೀತ ಧೂಳು, ಹದಗೆಟ್ಟ ರಸ್ತೆಯಿಂದಾಗಿ ನಿತ್ಯವೂ ಹಿಡಿಶಾಪ ಹಾಕುವಂತಾಗಿದೆ.
ತಮ್ಮ ಕ್ಷೇತ್ರಕ್ಕೆ ರಸ್ತೆ ಕಾಮಗಾರಿಗಳನ್ನು ಮುಗಿಸದೆ ಬೀದರ ಸಂಸದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಚೆನ್ನಾಗಿ ಇರುವ ರಸ್ತೆಗಳನ್ನು ಅಗೆದು ರಾಷ್ಟ್ರೀಯ ಹೆದ್ದಾರಿಗೆ ಸೇರಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಮತ್ತೊಂದೆಡೆ ಬೇರೆ ಬೇರೆ ಕಡೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇನ್ನು ಈ ರಸ್ತೆಗಳು ಅಲ್ಲಲ್ಲಿ ಕಿತ್ತು ಹೋಗಿದ್ದು, ಕಳಪೆ ಕಾಮಗಾರಿಯ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ ಎಂದು ಬೀದರ್ ಜಿಲ್ಲಾ ಪಂಚಾಯತ್ ಕೆಡಿಪಿ ಮೀಟಿಂಗ್ನಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದರು.
ರಾಷ್ಟ್ರೀಯ ಹೆದಾರಿ ಹೆಸರಲ್ಲಿ ಸರಿಯಾಗಿದ್ದ ರಸ್ತೆ ಅಗೆದು ಜನರಿಗೆ ತೊಂದರೆ ನೀಡಲಾಗುತ್ತಿದೆ,. ಈ ರಸ್ತೆ ಮೇಲೆ ತೆರಳಿದರೆ ಮೂಳೆ ರೋಗ ಬರುವುದಂತೂ ಗ್ಯಾರಂಟಿ. ಸುಮಾರು 360 ಕೋಟಿ ರೂ. ವೆಚ್ಚದಲ್ಲಿ 24 ತಿಂಗಳಲ್ಲಿ ನಿರ್ಮಾಣವಾಗಬೇಕಿರುವ ಹೆದ್ದಾರಿ 48 ತಿಂಗಳು ಗತಿಸಿದರೂ ಜನರಿಗೆ ಧೂಳು ಹಾಗೂ ತಗ್ಗು ದಿನ್ನೆಗಳಲ್ಲಿ ಸಾಗುವಂತಾಗಿದೆ,. ರಸ್ತೆಯಲ್ಲಿ ಇಲ್ಲಿಯವರೆಗೆ ಹಲವಾರು ಅಪಘಾತಗಳಾಗಿದ್ದು ಈ ರಸ್ತೆ ಮೇಲೆ ತೆರಳಿದ್ದರಿಂದ ಈಗಾಗಲೇ ನಾನು ಮೂಳೆ ರೋಗಕ್ಕೆ ತುತ್ತಾಗಿದ್ದು ಹೀಗಾಗಿ ಎಸ್ಪಿ, ಡಿಸಿಗೆ ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ದೂರು ನೀಡುತ್ತಿದ್ದೇನೆ ಎಂದು ಖಂಡ್ರೆ ಹೇಳಿದರು.