ಮೂಡಲಗಿ: ಸ್ವಾಮಿ ವಿವೇಕಾನಂದರು ಯುವಕರಿಗೆ ದೈವ ಭಕ್ತಿಗಿಂತ ರಾಷ್ಟ್ರ ಭಕ್ತಿ ಶ್ರೇಷ್ಠವಾದುದು ಎಂಬುದನ್ನು ತಿಳಿಸಿದ ಮಹಾನ್ ಸಂತ ಎಂದು ಸೇವಾ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಕಡಾಡಿ ಅವರು ಹೇಳಿದರು.
ಕಲ್ಲೋಳಿ ಪಟ್ಟಣದಲ್ಲಿ ಮಂಗಳವಾರ ಜ. 12 ರಂದು ಸೇವಾ ಸಂಸ್ಥೆಯ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನದ ಪ್ರಯುಕ್ತ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಯುವಕರು ವಿವೇಕಾನಂದರನ್ನು ಆದರ್ಶವಾಗಿಟ್ಟುಕೊಂಡು ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸತೀಶ ಕಡಾಡಿ ಅವರು ಪರಕೀಯರ ದಾಸ್ಯದಿಂದ ಕುಗ್ಗಿಹೊಗಿದ್ದ ಭಾರತೀಯರ ಸ್ವಾಭಿಮಾನವನ್ನು ಜಾಗೃತಗೊಳಿಸಿದ ವೀರ ಸಂತ ಸ್ವಾಮಿ ವಿವೇಕಾನಂದರು, ಯುವಕರಿಗೆ ಶಕ್ತಿಯ ಮೌಲ್ಯವನ್ನು ತಿಳಿಸಿ ಸದೃಢ ದೇಶ ಕಟ್ಟುವ ಕಲ್ಪನೆಯನ್ನು ನಮ್ಮ ದೇಶಕ್ಕೆ ನೀಡಿದರು. ಜಾಗತಿಕ ಮಟ್ಟದಲ್ಲಿ ಭಾರತದ ಜ್ಞಾನ ವೈಭವವನ್ನು ತೆರೆದಿಟ್ಟು ಭಾರತದ ಗೌರವವನ್ನು ಇಮ್ಮಡಿಗೊಳಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷರಾದ ಸಿದ್ದಪ್ಪ ಹೆಬ್ಬಾಳ, ನಿರ್ದೇಶಕರಾದ ಪರಪ್ಪ ಗಿರೆಣ್ಣವರ ಹಾಗೂ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ ಸಿಬ್ಬಂದಿ ವರ್ಗದವರು ಯುವಕರಿಗೆ ವಿವೇಕಾನಂದರ ಜೀವನ ಕುರಿತ ಪುಸ್ತಕಗಳನ್ನು ವಿತರಿಸುವ ಮೂಲಕ ಜನ್ಮದಿನಾಚರಣೆಯನ್ನು ಅರ್ಥಪೂರ್ಣಗೊಳಿಸಿದರು.
ಈ ಸಂದರ್ಭದಲ್ಲಿ ಹಣಮಂತ ಕಲಕುಟ್ರಿ, ದೊಡ್ಡಪ್ಪ ಉಜ್ಜಿನಕೊಪ್ಪ, ಶಂಕರ ಕೌಜಲಗಿ, ಸಂತೋಷ ಬಡಿಗೇರ ಸೇರಿದಂತೆ ಹಲವಾರು ಯುವಕರು ಉಪಸ್ಥಿತರಿದ್ದರು. ಶಂಭು ಹತ್ತರಕಿ ಸ್ವಾಗತಿಸಿ ವಂದಿಸಿದರು.