ಮೂಡಲಗಿ – ಮೂಡಲಗಿ ನಗರದಲ್ಲಿನ ರಸ್ತೆಗಳ ದುರವಸ್ಥೆ ಕುರಿತಂತೆ ಸ್ಪೀಡ್ ನ್ಯೂಸ್ ಟಿವಿಯ ಆ್ಯಂಕರ್ ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಗೆ ಕಾಲ್ ಮಾಡಿದಾಗ ಬೇರೊಬ್ಬ ವ್ಯಕ್ತಿ ಶಾಸಕರಂತೆ ಮಾತನಾಡಿದ್ದು ಅತ್ಯಂತ ಬೇಜವಾಬ್ದಾರಿಯಿಂದ ಮಾತನಾಡಿ ಟಿವಿ ಆ್ಯಂಕರ್ ಗೆ ಚಳ್ಳೆಹಣ್ಣು ತಿನ್ನಿಸಿದ್ದಾನೆ.
ಆ್ಯಂಕರ್ ಶಾಸಕರಿಗೆ ಕಾಲ್ ಮಾಡಿರುವ ವಿಡಿಯೋ ಈಗ ವೈರಲ್ ಆಗಿದ್ದು ಶಾಸಕರ ಸ್ಥಾನದಲ್ಲಿ ಮಾತನಾಡಿದ ವ್ಯಕ್ತಿ ಯಾರೆಂಬುದು ಇನ್ನೂ ತಿಳಿದುಬಂದಿಲ್ಲ.
ವಿಡಿಯೋದಲ್ಲಿ ಸುದ್ದಿ ಓದುತ್ತಿರುವ ಸ್ಪೀಡ್ ಟಿವಿಯ ಆ್ಯಂಕರ್ ಶಾಸಕರಿಗೆ ಕಾಲ್ ಮಾಡಿ ಮೂಡಲಗಿ ರಸ್ತೆಗಳ ದುರವಸ್ಥೆಯ ಬಗ್ಗೆ, ಅದಕ್ಕೆ ಕಾರಣರಾದ ಬೇಜವಾಬ್ದಾರಿ ಅಧಿಕಾರಿಗಳ ಬಗ್ಗೆ ಪ್ರಶ್ನಿಸುತ್ತಾರೆ. ಶಾಸಕರ ಹೆಸರಿನಲ್ಲಿ ಮಾತನಾಡುವ ವ್ಯಕ್ತಿ ಅತ್ಯಂತ ಬೇಜವಾಬ್ದಾರಿ ಉತ್ತರ ಕೊಡುತ್ತಿದ್ದು, ರಸ್ತೆಗಳ ಅವಸ್ಥೆ ತಾನು ನೋಡಿಲ್ಲ ಔಟ್ ಸೈಡ್ ಇರುವುದಾಗಿ ಹೇಳುತ್ತಾನೆ.ಅಧಿಕಾರಿಗಳು ಸರಿಯಾಗಿದ್ದಾರೆ, ತಮ್ಮ ಕೆಲಸ ತಾವು ಮಾಡುತ್ತ ಎಂಬ ಉಡಾಫೆಯ ಉತ್ತರವನ್ನೂ ನೀಡಿದ್ದಾನೆ.
ಈ ವರದಿಯನ್ನು ಸ್ಪೀಡ್ ನ್ಯೂಸ್ ವರದಿಗಾರ ಮಲಿಕ ಸಪ್ತಸಾಗರ ಎಂಬುವವನು ಬರೆದಿದ್ದಾಗಿ ಹೇಳಲಾಗಿದ್ದು ಉದ್ದೇಶಪೂರ್ವಕವಾಗಿ ಶಾಸಕರ ಹೆಸರು ಕೆಡಿಸಲು ಈ ರೀತಿಯ ಪ್ರಯೋಗ ಮಾಡಿರುವ ಬಗ್ಗೆ ಸ್ಪಷ್ಟವಾಗುತ್ತಿದೆ. ಆದರೆ ಒಂದು ನ್ಯೂಸ್ ಚಾನಲ್ ಹತ್ತಿರ ರಾಜ್ಯದ ಎಲ್ಲಾ ಶಾಸಕರ, ಸಚಿವರುಗಳ ಮೊಬೈಲ್ ಸಂಖ್ಯೆಗಳು ಇದ್ದೇ ಇರುತ್ತವೆ. ತಮ್ಮ ವರದಿಗಾರ ಶಾಸಕರ ಮೊಬೈಲ್ ಸಂಖ್ಯೆಯೆಂದು ಹೇಳಿ ನೀಡಿರುವ ಅವರದೇನಾ ಎಂಬ ಬಗ್ಗೆ ಚಾನಲ್ ನವರು ಸ್ಪಷ್ಟಪಡಿಸಿಕೊಳ್ಳಬೇಕಾಗಿತ್ತು ಅಥವಾ ಸದಾ ಸುದ್ದಿಯಲ್ಲಿ ಇರುವ ಬಾಲಚಂದ್ರ ಜಾರಕಿಹೊಳಿಯವರ ಧ್ವನಿಯನ್ನಾದರೂ ಗುರುತಿಸಬೇಕಾಗಿತ್ತು. ಹಾಗೆ ಆಗದೆ ಯಾವುದೋ ನಂಬರಿಗೆ ಕಾಲ್ ಮಾಡಿ ಅವರೇ ಶಾಸಕರೆಂದು ತಿಳಿದುಕೊಂಡು ಮಾತನಾಡಿದ್ದು, ಆತನಿಂದ ಬೇಜವಾಬ್ದಾರಿ ಉತ್ತರ ಬಂದಾಗಲೂ ತಿಳಿದುಕೊಳ್ಳದೆ ಹೋದದ್ದು….ಆ್ಯಂಕರ್ ಚಳ್ಳೆಹಣ್ಣು ತಿಂದರಾ ಎಂಬ ಪ್ರಶ್ನೆ ಮೂಡಿಸಿದೆ.
ಇಂಥ ಅವಿವೇಕದಲ್ಲಿ ವರದಿಗಾರನ ಪಾತ್ರ ಪ್ರಮುಖವಾಗಿದ್ದು ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿ ಅಭಿಮಾನಿಗಳಲ್ಲಿ ಆಕ್ರೋಶ ಹುಟ್ಟಿಸಿದೆ. ಅಲ್ಲದೆ ಫೋನಿನಲ್ಲಿ ಮಾತನಾಡಿದ ವ್ಯಕ್ತಿಯ ವಿರುದ್ದ ಹಾಗೂ ವರದಿಗಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನತೆ ಆಗ್ರಹಿಸುತ್ತಿದ್ದಾರೆ.