spot_img
spot_img

ಶ್ರೀ ಸಿದ್ಧೇಶ್ವರ ಸ್ವಾಮಿಗಳು (ಇಂದು ಜನ್ಮದಿನ)

Must Read

- Advertisement -

ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು, ಈಗಲೂ ಇದ್ದಾರೆ. ಆದರೆ ಜ್ಞಾನಯೋಗಿಗಳು ಬಹಳ ಅಪರೂಪ. ಅಂಥವರಲ್ಲೊಬ್ಬರು ಶ್ರೀ ಸಿದ್ಧೇಶ್ವರ ಸ್ವಾಮಿಗಳು.

ಬಿಜಾಪುರ(ವಿಜಯಪುರ)ದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಅತ್ಯಂತ ಪ್ರವರ್ಧಮಾನಕ್ಕೆ ಬಂತು.

- Advertisement -

ಉತ್ತರ ಕರ್ನಾಟಕದ ಜನಮಾನಸದಲ್ಲಿ ಬಹಳವಾಗಿ ಮಹತ್ವ ಪಡೆಯಿತು. ನಿಸ್ವಾರ್ಥ ಸೇವೆ, ಮಮಕಾರಗಳಿಲ್ಲದೆ, ಯಾರ ಹಂಗಿಗೂ ಒಳಗಾಗದೆ ಸರ್ವಜನರಿಂದಲೂ ಪ್ರೀತಿ, ವಿಶ್ವಾಸದ ಆಶ್ರಯತಾಣವಾಗಿ ಬೆಳೆಯಿತು.

ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು.

ಕರ್ನಾಟಕವಲ್ಲದೆ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ತಿಂಗಳುಗಟ್ಟಲೆ ಪ್ರವಚನ ನೀಡುತ್ತಿದ್ದರು. ಇವರ ಗಾಢ ಪ್ರಭಾವ ಸುತ್ತಮುತ್ತಲ ಜನರ ಮೇಲೆ ಉಂಟಾಗಿ ಕ್ರಮೇಣ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಅವರಿಗೆ ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದರು. ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾದರು. ಹಾಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಶ್ರೀ ಸಿದ್ದೇಶ್ವರರೂ ಒಬ್ಬರು.

- Advertisement -

ವಿಜಾಪುರ ಜಿಲ್ಲೆ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಶ್ರೀ ಸಿದ್ಧೇಶ್ವರರು ಜನಿಸಿದರು. ರೈತ ಕುಟುಂಬ ಎಂದ ಮೇಲೆ ಅಲ್ಲಿನ ಬಡತನ, ನಿರಕ್ಷರತೆಯ ವಾತಾವರಣವನ್ನು ವಿವರಿಸಿ ಹೇಳಬೇಕಾಗಿಲ್ಲ. ಊರಿನ ಶಾಲೆಯಲ್ಲಿಯೇ ನಾಲ್ಕನೇ ತರಗತಿವರೆಗೆ ಓದಿದ ನಂತರ ಅವರು ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಬಂದರು.

‘ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬಂತೆ ಬಾಲಕ ಸಿದ್ಧೇಶ್ವರನ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬರಲು ತಡವಾಗಲಿಲ್ಲ. ತಾವು ಪ್ರವಚನ ಮಾಡುವ ಸ್ಥಳಗಳಿಗೆ ಅವರು ಸಿದ್ಧೇಶ್ವರರನ್ನು ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದರು.

ಎಂ.ಎ. ಪದವಿಯ ಅಭ್ಯಾಸದ ಸಮಯದಲ್ಲಿ ಶ್ರೀ ಸಿದ್ಧೇಶ್ವರರರು ಕೊಲ್ಹಾಪುರದಲ್ಲಿ ಶ್ರೀ ವಿಜಯ ಪಾಟೀಲರ ಮನೆಯಲ್ಲಿ ವಾಸವಿದ್ದರು. ಆ ಅವಧಿಯಲ್ಲಿಯೇ ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದ ಪ್ರವಚನಗಳನ್ನು
ಒಂದುಗೂಡಿಸಿ “ಸಿದ್ದಾಂತ ಶಿಖಾಮಣಿ “ಎಂಬ ಪುಸ್ತಕ ಬರೆದು ಗುರುಗಳ ಹೆಸರಿನಲ್ಲೇ ಪ್ರಕಟಿಸಿದ್ದರು.ಆಗ ಅವರಿಗೆ ಕೇವಲ 19 ವರ್ಷ ಮಾತ್ರ ಆಗಿತ್ತೆಂಬುದು ಗಮನಾರ್ಹ.

ಸಿದ್ದೇಶ್ವರರ ಮಾತು ಎಂದರೆ ಮಲ್ಲಿಕಾರ್ಜುನ ಸ್ವಾಮಿಗಳಿಗೆ ಬಲು ಪ್ರೀತಿ. ಆತ ಮಹಾ ಬುದ್ದಿವಂತ, ಆಧ್ಯಾತ್ಮಿಕದಂತೆ ಲೌಕಿಕ ವಿಷಯಗಳಲ್ಲೂ ವಿಶೇಷ ಪರಿಜ್ಞಾನವಿದೆ. ಮುಂದೆ ಜಗತ್ತಿಗೇ ದೊಡ್ಡವನಾಗುತ್ತಾನೆ ಎಂದು ವಿಶ್ವಾಸದಿಂದ ಎಲ್ಲರೆದುರು ಹೇಳುತ್ತಿದ್ದರು.

ಸ್ನಾತಕೋತ್ತರ ಪದವಿ ಪಡೆದು ಬಿಜಾಪುರಕ್ಕೆ ಹಿಂದಿರುಗಿದ ನಂತರ ಸಿದ್ದೇಶ್ವರರಿಗೆ ಭಗವದ್ಗೀತೆಯ ಬಗ್ಗೆ, ಉಪನಿಷತ್ತುಗಳ ಬಗ್ಗೆ ಮಲ್ಲಿಕಾರ್ಜುನ ಸ್ವಾಮಿಗಳು ವ್ಯಾಖ್ಯಾನವನ್ನು ನೀಡಿ ಅವರ ಜ್ಙಾನದಿಗಂತವನ್ನು ವಿಸೃತಗೊಳಿಸಿದರು. ಪೂಜ್ಯರು ಉಪನಿಷತ್ತುಗಳು, ಭಗವದ್ಗೀತೆ,ಯೋಗಸೂತ್ರ,ವಚನಶಾಸ್ತ್ರ ಮುಂತಾದ ವಿಷಯಗಳ ಬಗೆಗೆ ತಾವು ಹೇಗೆ ಗುರು ಮುಖೇನ ಕಲಿತ ಜ್ಙಾನವನ್ನು ಬಳಸಿಕೊಂಡು ಬೋದಪ್ರದ ಪ್ರವಚನಗಳನ್ನು ನೀಡುತ್ತಿದ್ದಾರೆ. ಗಹನವಾದ ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನಮಾನಸದಲ್ಲಿ ಉಳಿಯುವಂತೆ ವಿವರಿಸುವುದೇ ಅವರ ವೈಶಿಷ್ಟ್ಯ.

ಬಿಜಾಪುರ ಜ್ಞಾನಯೋಗಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಸಿದ್ಧೇಶ್ವರರು ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸಿದ್ದೇಶ್ವರರ ಪ್ರವಚನ ಕೇಳಿದವರು ಅದರಲ್ಲೇ ಅನುರಕ್ತರಾಗಿ ಬಿಡುತ್ತಾರೆ. ಅವರ ಪ್ರವಚನ ಕಾರ್ಯಕ್ರಮ ಎಲ್ಲಿ ಏರ್ಪಡಿಸಿದರೂ ಸಹ ಅಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ.. ಒಂದು ಗಂಟೆಯ ಅವರ ಪ್ರವಚನದುದ್ದಕ್ಕೂ ಸೇರಿದ ಅಷ್ಟು ತುಂಬು ತನ್ಮಯತೆಯಿಂದ ಕುಳಿತಿರುತ್ತಾರೆ. ಸೂಜಿಗಲ್ಲಿನಂತಹ ಸೆಳೆತ, ಅವರು ಭಾಷೆ,ಧಾಟಿ,ಪ್ರದಪ್ರಯೋಗ,ಉದಾಹಣೆಗಳ ಮೂಲಕ ಪ್ರಚಲಿತ ಸಂಗತಿಗಳನ್ನು ಸಮ್ಮಿಳಿತಗೊಳಿಸುವರು. ಜೊತೆಗೆ ಕಲ್ಲು,ಮಣ್ಣು,ಗಿಡ,ಮರ,ಹೂ,ಹಕ್ಕು,ಪಕ್ಷಿ,ಪ್ರಾಣಿಗಳಲ್ಲಿ ಜೀವಚೈತನ್ಯವಿದೆ ಎಂಬುದನ್ನು ಅವರು ವಿವರಿಸುವ ರೀತಿ ಅದ್ಬುತವಾದುದು.

ತಮ್ಮ ಗುರುಗಳು ಸ್ಥಾಪಿಸಿದ ನೂರಾರು ವಿದ್ಯಾ ಸಂಸ್ಥೆಗಳನ್ನು ಸಿದ್ದೇಶ್ವರರು ಮುಂದುವರಿಸಿಕೊಂಡು ಬರುತ್ತಿದ್ದರೂ ಅವರ ಯಾವ ಸಂಸ್ಥೆಗಳಿಗೂ ಆಶ್ರಮದ ಹೆಸರಾಗಲಿ,ಅವರ ಹೆಸರಾಗಲಿ ಇರುವುದಿಲ್ಲ ಎಂದರೆ ಆಶ್ಚರ್ಯವಲ್ಲವೆ?

ಕೆರೆಯ ನೀರನ್ನು ಕೆರೆಗೆ ಚೆಲ್ಲಿ… ಎಂಬ ದಾಸ ವಾಣಿಯಂತೆ ನನ್ನದೇನಿದೆ,ಎಲ್ಲವೂ ಭಗವಂತನದು,ಇಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ದೇವರು.ಎಲ್ಲರಲ್ಲೂ ದೇವರನ್ನು ಕಾಣಬೇಕು. ನಾನು ನನ್ನದೆಂಬ ಮಮಕಾರ ಸಲ್ಲದು. ಇಹಪರ ಎರಡೂ ಒಂದೆ ಎಂದು ಸಾರುತ್ತ ಅದರಂತೆ ನಡೆಯುತ್ತ ಇರುವ ಅಪರೂಪದ ಯೋಗಿಗಳು ಶ್ರೀ ಸಿದ್ದೇಶ್ವರರು.

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group