spot_img
spot_img

ಸರಸ ಸಂಭ್ರಮ

Must Read

spot_img
ಜ್ವಾಳಾ ತಿಂದವ ತ್ವಾಳಾ !
ಪ್ರೊ. ಜಿ. ಎಚ್. ಹನ್ನೆರಡುಮಠ
            ಬೆಂಗ್ಳೂರಿಗೆ ಬಂದು ಸ್ಯಾಂಡ್ವಿಚ್ಚು, ಮ್ಯಾಗಿ, ಪೀಜಾ ತಿಂದರೂ ಹುಬ್ಬಳ್ಳಿಯ ಮಾದ್ಲಿ- ಹುರಕ್ಕಿಹೋಳ್ಗಿ- ಕರ್ಚೀಕಾಯಿ- ಗೋದಿಹುಗ್ಗಿ ಮರೆಯಲು ಸಾಧ್ಯವಾಗುತ್ತಲೇ ಇಲ್ಲ ! ಏನು ಮಾಡಲಿ ?
ಬೆಂಗಳೂರು ….”ಐಟಿ ಕಿಂಗ್ಡಂ”…. “ಗಾರ್ಡನ್ ಸಿಟಿ ಆಫ್ ಇಂಡಿಯಾ”…. “ಸಿಲಿಕಾನ್ ವ್ಯಾಲಿ”…. ಅಂತ ಯಾವ ಪುಣ್ಯಾತ್ಮ ಬರೆದನೋ ಏನೊ ! ಎಲ್ಲಾ ಭೋಗಸ್. ಈಗ ಅಕ್ಷರಶಃ ಬೆಂಗ್ಳೂರು ಸಕ್ರೀ ರೋಗದ ಅಕ್ಕರೆಯ ರಾಜಧಾನಿ ! ಯಾರನ್ನು ಕೇಳಿದರೂ ಅವರಿಗೆ ದಮ್ಮಿನ ಬ್ಯಾನಿ, ಸಕ್ರಿಯ ಕಸಾರ್ಕಿ. ಆದರೂ ಈ ಜನ ಕಾಫೀ ಬಿಟ್ಟಿಲ್ಲ ! ಇಡ್ಲಿಗೆ ಕೈ ಕೊಟ್ಟಿಲ್ಲ ! ಇವರು ತಿಂಡೀ ಪ್ರೀಯರು ! ತಿಂಡಿ ಅಂದರೆ ಇವರಿಗೆ ತಿನಿಸು…. ಹುಬ್ಬಳ್ಳಿಯವರಾದ ನಮಗೆ ತಿಂಡಿ ಅಂದರೆ ಮೈತಿಂಡಿ !
ನನಗೆ ನೆನಪಿದೆ. ನಾ ಸಣ್ಣವನಿದ್ದಾಗ ಅವ್ವ ಕರ್ಚೀಕಾಯಿ ಮಾಡಿ, ನೆಲುವಿಗಿಯ ಗಡಿಗಿ ತುಂಬಿ ನೇತುಬಿಟ್ಟಿದ್ದಳು . ದಿನಕ್ಕೆ ಎರಡೇ ಎರಡು ಲೆಕ್ಕಹಾಕಿ ನನಗೆ ಕರ್ಚೀಕಾಯಿ ಕೊಡುತ್ತಿದ್ದಳು. ನಾನು ಶೂರತನದಿಂದ ಬುಟ್ಟಿಯಮೇಲೆ ಬುಟ್ಟಿ ಇಟ್ಟು, ನೆಲವಿಗಿಯ ಗಡಿಗಿಯಿಂದ ಹತ್ತಾರು ಕರ್ಚೀಕಾಯಿ ಕಳವು ಮಾಡಿ , ಹಿತ್ತಲದ ಬೇವಿನಮರದ ಬೊಡ್ಡೆಯ ಹಿಂದೆ ಕದ್ದು ಗಬಾಗಬಾ ತಿನ್ನುತ್ತಿದ್ದೆ ! ಆಗ ನನ್ನ ಹಿಂದೆಯೇ ಮಗ್ಗಲಮನಿ ಕೆಂಪುಹುಡಿಗಿ ನನ್ನನ್ನು ಹುಳುಹುಳು ನೋಡುತ್ತ ನಿಂತದ್ದು ಕಂಡು ನಾನು ನಾಚಿ, ಔಡಲೆಣ್ಣಿ ಕುಡಿದಂತೆ ಕಂಗಾಲಾದೆ !
ಅಮ್ಮ ಸಿದ್ದಮ್ಮ ಬಿಸಿಲಲ್ಲಿ ಕಲ್ಗಡಗಿ ಇಟ್ಟು ಅದರಲ್ಲಿ ಕರಿಂಡಿಯನ್ನು ಬಿಸಿಲಿನ ಕಾವಿಗೆ ಉಮರಿಕೊಳ್ಳಲು ಬಿಡುತ್ತಿದ್ದಳು. ಅದರಲ್ಲಿಯ ಅಗಸಿ ಹಿಂಡಿಯಲ್ಲಿ ಹುಳಿಹಿಡಿದ ಗಜ್ರಿಹೋಳು, ಸವುತೀಕಾಯಿ ಹೋಳು ನಾಲಿಗೆಯ ಮೇಲೆ ಇಟ್ಟು ಚಪ್ಪರಿಸಿದರೆ ಎಂಥಾ ರುಚಿ ! ಜೊತೆಗೆ ನಮ್ಮ ಹಿತ್ತಲಲ್ಲಿಯೇ ಇದ್ದ ಚಳ್ಳಕಾಯಿ ಮರದ ಚಳ್ಳಕಾಯಿ ಉಪ್ಪಿನಕಾಯಿ ಚಟ್ಟ ಅನ್ನದಲ್ಲಿ ಕಲಿಸಿ…. ಮೇಲೆ ಕುರುಂಕುರುಂ ಅಲಸಂದಿಹಪ್ಳ ಬಾಯಾಡಿಸುತ್ತ ಉಂಡರೆ ಎಂಥಾ ಘನಮ್ರೀ ಸುಖಾ !
ಹಾಂ ! ನೆನಪಾತು. ಅಂದಿನ ಆ ಅನ್ನ…. ಮಲೆನಾಡಿನ ನಮ್ಮ ಜಿನ್ನೂರ ಹೊಲದಲ್ಲಿ ರಾಮಣ್ಣ ಚನಬಸಪ್ಪ ಬೆಳೆದ “ಸೋಮಸ್ಯಾಳಿ” , “ಅಂತರ ಸ್ಯಾಳಿ” ಜಾತಿಯ ಭತ್ತ ಥಳಿಸಿ ಮಾಡಿದ್ದು. ಅಕ್ಕ ಗುರಕ್ಕ ಅಕ್ಕಿ ಥಳಿಸುವಾಗ ನಾನು ಆಧಾರವಾಗಿ ಒನಕೆ ಹಿಡಿದು ನಿಲ್ಲುತ್ತಿದ್ದೆ. ಸೋಮಸ್ಯಾಳಿ, ಅಂತರಸ್ಯಾಳಿ ಭತ್ತದ ಗಮಗಮ ಅಕ್ಕಿಗೆ ಮಸರು ಕಲಿಸಿ , ಬುತ್ತಿಕಟ್ಟಿಕೊಂಡು ….ಉಳವಿ, ಶ್ರೀಶೈಲ, ಬನಶಂಕರಿ ಜಾತ್ರಿಗೆ ಹೋದರೆ ಐದು ದಿನವಾದರೂ ಅನ್ನ ಹಳಸುತ್ತಿದ್ದಿಲ್ಲ. ದಿನದಿನಕ್ಕೆ ಹುಳ್ಳುಳ್ಳಾಗಿ ಹುಳಿಹಿಡಿದು ಮತ್ತಷ್ಟು ರುಚಿಯಾಗುತ್ತಿತ್ತು. ಅಂಥಾ ಮಸರಬುತ್ತೀ ಜೋಡಿ ಅಗಸಿ ಹಿಂಡಿ, ಬಳ್ಳೊಳ್ಳಿ ಚಟ್ನಿ, ಬದ್ನೀಕಾಯಿ ಭರ್ತಾ, ಬೂದುಗುಂಬಳ ಕಾಯಿಯ ಸ್ಯಾಂಡಿಗಿ, ಕುಚ್ಚಿದ ಮೆಣಸಿನಕಾಯಿ ಪಲ್ಲೆ ಇದ್ದರಂತೂ ನಾಲಿಗೆಯ ಮೇಲೆ ಗಣಪ್ಪ ಕುಣಿಯುತ್ತಿದ್ದ. ಹೊಟ್ಟಿಯ ಖಬರು ಇಲ್ಲದೇ ತಿನ್ನುತ್ತಿದ್ದೆವು.
ಅಬ್ಬಬ್ಬಾ ! ತಾರಕಾಸುರ, ನರಕಾಸುರರು ದಾಳಿಯಿಟ್ಟು ಬಂದಂತೆ ನೀರಾವರಿ ಡ್ಯಾಮುಗಳು ಕರ್ನಾಟಕದ ಒಳಗೂ ಹೊರಗೂ ಬಂದು ಜನ ಫ್ಯಾಕ್ಟರಿಯ ಹೈ-ಪಾಲೀಶ್ ಮಾಡಿದ ಸುಡುಗಾಡ ಸಿದ್ದನಮಠದ ಅಕ್ಕಿಅನ್ನ ಉಣ್ಣಲು ಎಂದು ಸುರುಮಾಡಿದರೋ ಅಂದೇ ಸಕ್ಕರಿಯ ರೋಗದ ಅಕ್ಕರೆಯ ನಾಜೂಕು ನಾರಿ ಗೆಜ್ಜಿ ಕಟ್ಟಿಕೊಂಡು ಹೆಜ್ಜಿ ಹಾಕುತ್ತ ಮನೆಮನೆಗೂ ಬಂದಳು !
ನಾನು ಬೆಂಗಳೂರು- ಮಂಡ್ಯ- ಮೈಸೂರಿನ ಹಳೇ ಹಿರಿಯರೊಂದಿಗೆ ಮಾತಾಡಿದ್ದೇನೆ. ಏನಿದ್ದರೂ ಅವರಿಗೆ ರಾಗಿಮುದ್ದಿ ಬೇಕೇಬೇಕು. ರಾಗಿ ಉಂಡವನಿಗೆ ರೋಗ ಇಲ್ಲ ! ಈ ರಾಗಿ ಉಂಡು ರಾಜರಂತಿದ್ದ ಹಿರಿಯರು ಇಂದಿಗೂ ರೋಗಮುಕ್ತರಾಗಿಯೇ ಇದ್ದಾರೆ. ಒಂದು ಕಾಲಕ್ಕೆ ಬೆಂಗಳೂರ- ಮೈಸೂರ-ತುಮಕೂರ ಇವು ರಾಗಿ ಊಟದ ಸ್ವರ್ಗಗಳು ! ರಾಗಿಗುಂಡ ಸಾರಿನಲ್ಲಿ ಕಡ್ಯಾಡಿಸಿ ಗುಳುಂಗುಳುಂ ನುಂಗುವ ಇವರಿಗೆ ಇಂದಿಗೂ ಅನ್ನ ಅಂದರೆ ಹೇಸಿಕೆ…. ಚಪಾತಿ ಅಂದರೆ ವಾಕರಿಕೆ…. ಇಂಥಾದ್ದರಲ್ಲಿ ಮೈದಾಹಿಟ್ಟಿನ ಚಪಾತಿ-ಪುರಿಗಳು…. ಅಬ್ಬಬ್ಬಾ…. ಅವುಗಳ ನರಕ ಹೇಳಲೇಬಾರದು !
ನಮ್ಮ ಮೂಲ ಆಹಾರ ಪದ್ಧತಿಗಳಲ್ಲಿ ವಿಜಾಪೂರ- ರೋಣ- ಗದಗ- ಹಾವೇರಿ- ಹುಬ್ಬಳ್ಳಿ- ಬಾಗಲಕೋಟ- ಕೊಪ್ಪಳ- ಜಮಖಂಡಿಗಳಲ್ಲಿ ಹಿಂದೆ ಅನ್ನ ಉಣ್ಣುತ್ತಿದ್ದರು…. ಆದರೆ ಅದು ಅಕ್ಕಿ ಅನ್ನ ಅಲ್ಲ…. “ನವಣಿ ಅನ್ನ” ! ಇದರೊಂದಿಗೆ “ಬರಗಾ” ,”ಸ್ಯಾವಿ”ಯ ಅನ್ನ ಉಣ್ಣುತ್ತಿದ್ದರು. ಈಗಿನವರಿಗೆ “ಬರಗಾ” “ಸ್ಯಾವಿ” “ನವಣಿ” ಗೊತ್ತೇ ಇಲ್ಲ. ಏನಿದ್ದರೂ ಅಕ್ಕಿಯೇ ಇಂದಿನವರಿಗೆ ಹಕ್ಕಿ !
ನಮ್ಮ ಅಮ್ಮ ಮಾದ್ಲೀ ಕುಟ್ಟಿದರೆ ಇಡೀಮನೆ ಘಮಘಮ ವಾಸನಿ ತುಂಬುತ್ತಿತ್ತು. ಆ ಮಾದ್ಲಿಯಲ್ಲಿ ತುಪ್ಪ- ಕೆನಿಹಾಲು- ಕಲಿಸಿಕೊಂಡು ಉಂಡರೆ ಏನ ಸುಖಾ ಅಂತೀರಿ ! ಈಗ ಆ ಕಾಲದ ಹೆಡಸು ಎಮ್ಮಿಯ ಹಾಲು- ಬೆಣ್ಣಿ- ತುಪ್ಪದ ಮುಂದೆ ಈ ಕಾಲದ ಪಾಕೀಟ ಹಾಲಿನ ಹೈಬ್ರೀಡ್ ಹೈನ ಎಲ್ಲಿಂದೆಲ್ಲಿಗೆ ?
ಎರೇಸೀಮಿಯ ಆ ಜವಾರಿ ಗೋದಿಯ ಚಪಾತಿ ಬರಿಬಾಯಿಂದಲೇ ತಿನ್ನಬಹುದಿತ್ತು. ಆಗ ಅದಕ್ಕೆ ನಾವು “ಚಪಾತಿ” ಅನ್ನುತ್ತಿದ್ದಿಲ್ಲ, “ಗೋದಿರೊಟ್ಟಿ” ಅನ್ನುತ್ತಿದ್ದೆವು ! ಯಾವುದಾದರೂ ಕನ್ಯಾದ ವರ್ಣನಾ ಮಾಡುವಾಗ ….”ಗೋದಿ ಬಣ್ಣದ ಹುಡಿಗಿ ವೈನೈತಿ” ಅನ್ನುತ್ತಿದ್ದೆವು !
ಎಂದು ಈ ಪುಣ್ಯಭೂಮಿಮೇಲೆ ಹೈಬ್ರೀಡ್ ಜೋಳ ಅವತರಿಸಿ ಬಂತೋ ಆಗ ಆ ನಮ್ಮ ಹಳೆಯ “ಲಕ್ಕುಂಡಿ ಜ್ವಾಳ” , “ನಂದ್ಯಾಳ ಜ್ವಾಳ”, “ಮಾಲದಂಡಿಗಿ ಜ್ವಾಳ”, “ಗಟ್ಟಿದೆನಿ”, “ಮೂಗುತೀ ಜ್ವಾಳ” , “ರೆಳ್ಳದೆನಿ ಜ್ವಾಳ” , “ಡೋಣೀಸಾಲಿನ ಜ್ವಾಳ” ಎಲ್ಲಾ ಹೇಳ ಹೆಸರಿಲ್ಲದಂತೆ ನಾಪತ್ತೆ ಆದವು. “ಡೋಣೀ ಸಾಲು ಬೆಳೆದರೆ ಓಣೆಲ್ಲಾ ಜ್ವಾಳಾ” ಅಂತ ಹಿರಿಯರು ಹೇಳುತ್ತಿದ್ದರು. ಎರೇಸೀಮಿಯ ಈ ಜೋಳದಿಂದ ಮಾಡಿದ ಕೈರೊಟ್ಟಿ, ಹುಳ್ಳಾನುಚ್ಚು, ಬಾನಾ, ಇಡಿಗಿಚಡಿ, ಚಕ್ಕುಂಡಿ, ಜ್ವಾಳದ ಕಡಬು, ಜ್ವಾಳದ ಸಂಗ್ಟೀ , ಸುಟ್ಟ ಸೀತೆನಿ-ಬೆಲ್ಲಾ ತಿಂದರೆ ಆ ಊರಿನ ಅಗಸೀ ಬಾಗಲಕ್ಕೂ ಸಕ್ರೀ ರೋಗವಾಗಲೀ ದಮ್ಮಿನ ಗುಮ್ಮನಾಗಲೀ ಬರುತ್ತಿದ್ದಿಲ್ಲ. ನೂರು ತುಂಬಿದರೂ ಹಂಪೀ ತೇರಾಗಿ ಓಡಾಡುತ್ತಿದ್ದರು. ಭೂಮಿಯ ಪ್ರಕೃತಿ ಪರಿಸರದಲ್ಲಿ ನಮ್ಮ ಹೊಟ್ಟೆಯ ಶಾರೀರಿಕ ಜೀವಕೋಶಗಳಿಗೂ ದೇಸೀ ಆಹಾರಗಳಿಗೂ ಒಂದು ಬ್ಯಾಲನ್ಸ ಇತ್ತು. ಆದರೆ ಇಂದು ಈ ಆಹಾರದ “ಇಕಾಲಾಜಿಕಲ್ ಬ್ಯಾಲನ್ಸು” ಬುಡಮೇಲಾಗಿ ಬುಡರಸಿಂಗಿ ಆತು. ನಮ್ಮ ದೇಶಿ ಆಹಾರ ಪದ್ಧತಿ “ಕ್ಯುಲಿನರಿ” ಈಗ ಹೊಸಾ ಇಲಿಮರಿ ಆತು !
ನಮ್ಮ ದೇಶದ ಮೇಲೆ ವಾಯುವ್ಯ ಕಣಿವೆಯಿಂದ ಮೊಗಲರು- ಮುಸ್ಲೀಮರು ದಾಳೀಮಾಡಿ ಬಂದರು ಎಂಬ ಮಾತನ್ನು ನಾನು ನಂಬುವದೇ ಇಲ್ಲ. ಖರೇ ಹೇಳಬೇಕೆಂದರೆ ಯಾವ ಕಾಲಕ್ಕೆ ಉಡುಪಿ ಬ್ರಾಹ್ಮಣರು ಹುಟ್ಟು- ಸವುಟು ಹಿಡಕೊಂಡು ಹುಬ್ಬಳ್ಳಿ- ವಿಜಾಪೂರ- ಕಲಬುರ್ಗಿ -ಕೊಪ್ಪಳ- ರಾಯಚೂರ- ಬೀದರ- ಬೆಂಗಳೂರ- ಮುಂಬೈ ಮೇಲೆ ದಾಳಿ ಮಾಡಿದರೋ ಆಗ ನಮ್ಮ ನಾಲಿಗೆ ತನ್ನ ಹಳೇರುಚಿ ಕಳಕೊಂಡು, ಹೊಸಾ ಊಟದ ಚಾಳಿಗೆ ಗಂಟುಬಿತ್ತು. ರೊಟ್ಟಿ ಹೋತು ದ್ವಾಸಿ ಬಂತು. ನುಚ್ಚು ಹೋತು ಇಡ್ಲಿ ಬಂತು. ಇತ್ತಿತ್ತಲಾಗಿ “ಚೈನಾ ಸಿಸ್ಟಂ”, “ನಾರ್ತ ಇಂಡಿಯನ್ ಡಿಶ್”, “ಇಟಾಲಿಯನ್ ವೆಜ್”…. ಇತ್ಯಾದಿ ಸಹಸ್ರಾರು “ಕ್ಯುಲಿನರಿ ಸ್ಪೆಸ್ಯಾಲಿಸ್ಟ”ಗಳು ಬಂದು ಯರ್ರಾಬಿರ್ರೀ ಊಟದ ನಮೂನೆಗಳನ್ನು ತಂದರು. ನನ್ನ ಹೇಂತಿ ಟೀವಿಯಲ್ಲಿ ಊಟದ ಸೀನುಗಳು ಬಂದಾಗ ದೇವರು ಪ್ರತ್ಯಕ್ಷ ಆದರೂ “ನೋ ಟಾಯಿಮ್ ” ಅನ್ನುತ್ತಿದ್ದಾಳೆ !
ಆ ಕಾಲದ ಊಟಗಳು ಜೀವನ ಶೈಲಿಗೆ ಮೂಲಭೂತವಾದ ತಾಕತ್ತು- ನಿಯತ್ತು- ಸಂಪತ್ತು ನೀಡುತ್ತಿದ್ದವು. ಇಂದು ಊಟವೇ ಆಟ ! ಊಟವೇ ಫ್ಯಾಶನ್ನು ! ಆ ಕಾಲದಲ್ಲಿ ಹಸಿವೆಯಾದಾಗ ಉಂಡರೆ , ಈ ಕಾಲದಲ್ಲಿ ಫ್ಯಾಶನ್ನಿಗಾಗಿ ಉಣ್ಣುವವರು ಬಂದರು. ಹೊಟ್ಟೆ ಗರಗರ ಹಸಿದಾಗ ನಮ್ಮ ಅಮ್ಮ ಕೈಯಲ್ಲಿಯೇ ಎರಡು ದಮ್ಮನ್ನ ರೊಟ್ಟಿ ಹಿಡಕೊಂಡು, ಅದರಲ್ಲಿ ಗುರೆಳ್ಳಹಿಂಡಿ- ಕೆನಿಮೊಸರು ಹಾಕೊಂಡು ಕತ್ತರಿಸಿ ತಿನ್ನುತ್ತಿದ್ದಳು. ನಾವು ಅವಳಿಗೆ ವಸೀಲಿ ಹಚ್ಚಿ ತುತ್ತು ಬಾಯಲ್ಲಿ ಹಾಕಿಸಿಕೊಳ್ಳುತ್ತಿದ್ದೆವು. ಈಗ ಊಟಕ್ಕಿಂತ ಊಟದ ಸ್ಟಾಯಿಲ್- ಕಾಂಬೀನೇಶನ್- ಕಲರ್- ಕಾಂಡೀಮೆಂಟ್ಸ- ಲುಕ್- ಗೆಟಪ್ ಇವು ಮುಖ್ಯವಾದವು.
ಅಯ್ಯಯ್ಯೋ…. ಬೆಂಗಳೂರಲ್ಲಿ ಯಾರಿಗಾದರೂ ಒಂದು ಗುಲಾಬ ಜಾಮೂನ ಕೊಟ್ಟು ನೋಡಿರಿ. ಅದರಲ್ಲಿ ಅವರು ಅರ್ಧ ಮಾತ್ರ ತಿಂದು ಉಳಿದರ್ಧ ತಿಪ್ಪೆಗೆ ಎಸೆಯುತ್ತಾರೆ. ನಮ್ಮ ಅಜ್ಜ ಐವತ್ತು ಗುಲಾಬ ಜಾಮೂನ ತಿಂದು, ಮೇಲೆ ಗಟಗಟ ಸಾರು ಕುಡಿಯುತ್ತಿದ್ದ !
ಹುರಕ್ಕಿ ಹೋಳ್ಗಿ, ಗುಳ್ಳೆಡಕಿ ಉಂಡಿ, ತಂಬಿಟ್ಟು, ಕರ್ಚೀಕಾಯಿ, ಕ್ವಾಡಬ್ಯಾಳಿ, ತಾಲಿಪೆಟ್ಟು ಏನ ಖುಶಿ ಅಂತೀರಿ ! ಸೇಂಗಾಹೋಳ್ಗಿ, ಎಳ್ಳಿನಹೋಳ್ಗಿ ಮೇಲೆ ಹೆರತುಪ್ಜ ಹಚ್ಚಿ ತಿಂದಾಗ ಏನ್ ಮಜಾ ಅಂತೀರಿ? ಸುರಳೀಹೋಳ್ಗೀ ಮೇಲೆ ತುಪ್ಪ- ಕೆನಿಹಾಲು ಹಾಕಿ ಕಿವುಚಿಕೊಂಡು ಉಂಡಾಗ ನಮ್ಮ ಮುಂದೆ ರಂಭೆ- ಊರ್ವಶಿಯರು ಬಂದರೂ ನೋಡಲು ಪುರಸೊತ್ತು ಸಿಗುವದಿಲ್ಲ.
ನಮ್ಮ ಬಿಳಿಜ್ವಾಳದ ಹೊಲಕ್ಕೆ ಬುತ್ತಿ ಕಟ್ಟಿಕೊಂಡು, ನಾಲ್ಕು ಮೈಲು ನಡೆದು ಹೋಗಿ, ಹೊಲದ ವಂಡಿನಮೇಲೆ ಕುಂತು , ಬಾಯಾಡಿಸಿಕೊಳ್ಳಲು ಹೊಲದಲ್ಲಿಯ ಹಕ್ಕರಿಕಿ- ಎಳೆಸವುತೀಕಾಯಿ- ಮೂಲಂಗಿ- ಗಜ್ರಿ- ಉಳ್ಳಾಗಡ್ಡಿ ತಪ್ಲ- ಕೋತಂಬ್ರಿ- ಮೆಂತೆಪಲ್ಲೆ- ಚಪ್ಪರಣ್ಣು- ಕಡ್ಲಿಬುಡ್ಡಿ ಬಾಯಾಡಿಸುತ್ತ ತಿಂದರೆ ಯಾವ ಡಾಕ್ಟರರೂ ಬೇಡ ! ಹಾಗೆ ಕೂಳು ತಿಂದು ಹೊಲದ ಬದುವಿನಲ್ಲಿ ಮಾವಿನ ಗಿಡದ ಬುಡಕ್ಕೆ ಮಲಗಿದ ನಮ್ಮನ್ನು ಸಂಜೆ ಎಮ್ಮಿ-ಎತ್ತು ಬಂದು ನೆಕ್ಕಿ ಎಬ್ಬಿಸುತ್ತಿದ್ದವು !
ಏನ್ ಸುಖಾ ಅಂತೀರಿ…….
ಲೇಖಕರ ವಿಳಾಸ –
# ೫ : “ಮಾವು ಮಲ್ಲಿಗೆ” : ಇಂದ್ರಪ್ರಸ್ಥ ಕಾಲನಿ
ಬನ್ನೇರುಘಟ್ಟದ ದಾರಿ : ಗೊಟ್ಟಿಗೆರೆ ಅಂಚೆ
ಬೆಂಗಳೂರ- ೫೬೦೦೮೩
ದೂರವಾಣಿ- ೯೯೪೫೭ ೦೧೧೦೮
- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group