spot_img
spot_img

ಸವದತ್ತಿಯ ರಂಗ ಆರಾಧನೆಯ ನಾಟಕೋತ್ಸವದಲ್ಲಿ…”ಕಾತ್ರಾಳ ರತ್ನಿ ಚಾದಂಗಡಿ”

Must Read

spot_img
- Advertisement -

ದು.ನಿಂ.ಬೆಳಗಲಿ ಪ್ರಾದೇಶಿಕ ಗ್ರಾಮೀಣ ಸೊಗಡಿನ ಬರಹದ ಮೂಲಕ ಪ್ರಸಿದ್ದಿ ಪಡೆದ ಕಾದಂಬರಿಕಾರರು.ಹುಟ್ಟಿದ್ದು ಬನಹಟ್ಟಿಯಲ್ಲಿ ಎಸ್.ಎಸ್.ಎಲ್.ಸಿ ಪಾಸು ಮಾಡಿ ಓದಿದ ಶಾಲೆಯಲ್ಲಿ ಮಾಸ್ತರಿಕೆ. 1951-55 ರ ವರೆಗೆ ನಂತರ ಬನಹಟ್ಟಿಯ ಆರ್.ಎಸ್.ಎ, ಹೈಸ್ಕೂಲು ಹುದ್ದೆ.ಕತೆ,ಕವನ,ಏಕಾಂಕ ವಿನೋದ ಬರಹಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದರು. ಎಂಟು ಕಥಾ ಸಂಕಲನಗಳು. 5 ಕಾದಂಬರಿಗಳು.13ಕ್ಕೂ ಹೆಚ್ಚು ಮಕ್ಕಳ ಸಾಹಿತ್ಯ. ಆರು ಜೀವನ ಚರಿತ್ರೆಗಳು.ಹೆಂಡತಿ ಮತ್ತು ಟ್ರಾನ್ಸಿಸ್ಟರ,ಗಂಡ-ಹೆಂಡತಿ ಲಗೇಜ್ ಮೊದಲಾದ ನಗೆ ಬರಹಗಳ ಸಂಕಲನ.ಐದು ಅನುವಾದ ಕೃತಿಗಳು.ನಾಲ್ಕು ಪ್ರಬಂಧಗಳ ಸಂಕಲನ. ಐದು ಸಂಪಾದಿತ ಕೃತಿಗಳು. ಸೇರಿ 60 ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.

ಆದರ್ಶ ಶಿಕ್ಷಕ ಪ್ರಶಸ್ತಿ,ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ,ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ಇವರ ಮುಡಿಗೇರಿದ್ದು. ಸವದತ್ತಿಯಲ್ಲಿ ದು.ನಿಂ.ಬೆಳಗಲಿಯವರ ಪ್ರಸಿದ್ದ ಕಾದಂಬರಿ ಕಾತ್ರಾಳ ರತ್ನಿ ಚಾದಂಗಡಿ ನಾಟಕವಾಗಿ ಪ್ರದರ್ಶನಗೊಂಡಿತು.

ಸವದತ್ತಿ ಕೋಟೆಯಲ್ಲಿ ಪ್ರತಿವರ್ಷ ನಾಟಕಗಳು ರಂಗ ಆರಾಧನೆ ಸಾಂಸ್ಕೃತಿಕ ಸಂಘಟನೆಯಡಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ.ಸವದತ್ತಿ ಪ್ರವೇಶವಾಗುತ್ತಿದಂತೆ ಕೋಟೆಯೊಂದು ಕಾಣತೊಡಗುತ್ತದೆ. ಇದು ಎರಡನೇ ಜಾಯಗೊಂಡ ದೇಸಾಯಿ ನಿರ್ಮಿಸಿದ ಕೋಟೆ.ಸರಕಾರ ಹಾಗೂ ಸ್ಥಳೀಯ ಪುರಸಭೆ ಈ ಕೋಟೆಯನ್ನು ಅಭಿವೃದ್ದಿಪಡಿಸಿದ ಕಾರಣ ಇದೊಂದು ಐತಿಹಾಸಿಕ ಪ್ರವಾಸೀ ತಾಣವಾಗಿದೆ. ಈ ಕೊಟೆಯೊಳಗಡೆ ಪ್ರತಿವರ್ಷ ಸ್ಥಳೀಯ ರಂಗ ಕಲಾವಿದರ ಸಂಘಟನೆಯಾದ ರಂಗಾರಾಧನಾ ಸಂಸ್ಥೆಯು ನೀನಾಸಂ.ರಂಗಾಯಣದಂಥ ರಾಜ್ಯದ ಖ್ಯಾತ ಸಂಘಟನೆಗಳ ನಾಟಕಗಳನ್ನೊಳಗೊಂಡ ನಾಟಕೋತ್ಸವ ಇಲ್ಲಿ ನಡೆಸುತ್ತಿದೆ. . ಹೀಗಾಗಿ ಹಗಲು ಪ್ರವಾಸೀ ತಾಣವಾದ ಈ ಕೋಟೆ ಪ್ರತಿವರ್ಷ ಹಲವು ದಿನಗಳು ರಾತ್ರಿಯಾಗುತ್ತಿದ್ದಂತೆ ಕೋಟೆಯೊಳಗಿನ ಹುಲ್ಲುಹಾಸು,ಅಲ್ಲಿನ ಕಟ್ಟೆ, ರಂಗ ಆರಾಧಕರ ಮೂಲಕ ನಾಟಕ ತಾಣವಾಗಿ ಗಮನ ಸೆಳೆಯುತ್ತದೆ.

- Advertisement -

ತಂಪಾದ ಗಾಳಿ ಮೆತ್ತನೆಯ ಹುಲ್ಲುಹಾಸು,ತೆರೆದ ಕಟ್ಟೆಯ ಮೇಲೆ ಪರದೆಗಳು ರಂಗ ಸಜ್ಜಿಕೆಗಳು ಧ್ವನಿವರ್ಧಕಗಳು ಬಣ್ಣಬಣ್ಣದ ವಿದ್ಯುತ್ ದೀಪಗಳು ಪ್ಲಾಸ್ಟಿಕ್ ಖುರ್ಚಿಗಳು ಕಾಣತೊಡಗುತ್ತವೆ. 7 ಗಂಟೆಗೆ ನಾಟಕ ಪ್ರಾರಂಭಗೊಂಡು ಎರಡು ತಾಸುಗಳವರೆಗೆ ಪ್ರದರ್ಶನಗೊಳ್ಳುವ ಮೂಲಕ ರಂಗಾಸಕ್ತರ ಮನಸೂರೆಗೊಳ್ಳುವ ನಾಟಕಗಳ ಆಯ್ಕೆಯೂ ಕೂಡ ಮಹತ್ವದ್ದು.

ಪೆಬ್ರುವರಿ 2 ರಂದು ಸವದತ್ತಿ ಕೋಟೆಯ ರಂಗ ಸಜ್ಜಿಕೆಯಲ್ಲಿ ಕಾತ್ರಾಳ ರತ್ನಿ ಚಾದಂಗಡಿ ನಾಟಕ ಝಕೀರ ನದಾಫ್ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.

ಕಾತ್ರಾಳ ರತ್ನಿ ಚಾದಂಗಡಿ ನಾಟಕ.

ಇದು ದು.ನಿಂ.ಬೆಳಗಲಿಯವರ ರಚನೆಯಾಗಿದ್ದು.ಇಲ್ಲಿ ಸ್ವಾತಂತ್ರ್ಯಾ ನಂತರ ಭಾರತ ದೇಶದ ಹಳ್ಳಿಗಳ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಕೆಳವರ್ಗದಲ್ಲಿ ಅಂತರ್ಜಾತಿ ವಿವಾಹವಾಗಿ ಹುಟ್ಟಿದ ಮಗು ಹೆಣ್ಣು ರತ್ನಾ. ಅವಳ ಮದುವೆಯೂ ಆಗಿ ಬೇರೊಬ್ಬನೊಡನೆ ಓಡಿ ಹೋಗಿ ನಂದೂರಿಗೆ ಬಂದು ನೆಲೆಯಾಗಿ ಊರವರ ಕೆಂಗೆಣ್ಣಿಗೆ ಗುರಿಯಾದವಳು. ಕ್ರಮೇಣ ಆ ಊರಿನ ಪ್ರಮುಖ ವಿಷಯಗಳನ್ನು ನಿರ್ಧರಿಸುವ ಹಂತಕ್ಕೆ ಬೆಳೆಯುತ್ತಾಳೆ.ಊರ ಗರತಿಯರ ಶೀಲಕ್ಕೆ ಸಂಚಕಾರ ಒದಗಿ ಬಂದಾಗ ತನ್ನ ಶೀಲವನ್ನೇ ಪಣಕ್ಕಿಟ್ಟು ಅವರ ಮಾನ ಕಾಪಾಡುವಲ್ಲಿ ನಾಟಕ ಕೊನೆಯಾಗುತ್ತದೆ.

- Advertisement -

ಇವೆಲ್ಲವುಗಳ ನಡುವೆ ರತ್ನ ತನ್ನ ಬದುಕನ್ನು ಕಟ್ಟಿಕೊಳ್ಳುವ ರೀತಿ ಎಲ್ಲರಿಗೂ ಮಾದರಿಯಾಗುತ್ತದೆ.ಜಾತಿಯ ಕಾರಣಗಳಿಂದಾಗುವ ಅವಮಾನಗಳು ಮೇಲ್ ವರ್ಗದವರ ದೌರ್ಜನ್ಯ ಹೆಣ್ಣುಮಕ್ಕಳ ಮೇಲಿನ ಶೋಷಣೆ ಹೀಗೆ ಹಳ್ಳಿ ಬದುಕಿನ ಎಲ್ಲ ಆಯಾಮಗಳು ಈ ನಾಟಕದಲ್ಲಿವೆ. ಈ ಕಥೆಯನ್ನು ಝಕೀರ ನದಾಫ್ ರಂಗ ತೆರೆಗೆ ಅಳವಡಿಸಿದ ರೀತಿ ಮರೆಯಲಾಗದ ಅನುಭೂತಿ. ನಿಜಕ್ಕೂ ಅಂದಿನ ಕಾಲಘಟ್ಟದ ಕತೆಯನ್ನು ರಂಗಸಜ್ಜಿಕೆಗೆ ತರುವಲ್ಲಿ ಝಕೀರ ನದಾಫ್ ಅವರ ಪರಿಶ್ರಮ.ಕಲಾವಿದರ ಉತ್ತಮ ಅಭಿನಯ ಪ್ರೇಕ್ಷಕರ ಮನದಾಳದಲ್ಲಿ ನಾಟಕ ಮುಗಿದರೂ ಉಳಿಯುವ ರತ್ನಳ ಪಾತ್ರ.ಅಮೋಘವಾದುದು.

ಇಲ್ಲಿನ ರತ್ನಳ ಪಾತ್ರದಲ್ಲಿ ಪ್ರತಿಭಾ ವಕ್ಕುಂದ.ದಾನೇಶಗೌಡನಾಗಿ ಗೋಪಾಲ ಹಾಸಲಕರ.ಪರಪ್ಪ ದೇಸಾಯಿಯಾಗಿ ರಾಜು ನಡುವಿನಮನಿ.ಕಮಲವ್ವಳಾಗಿ ಅನಿತಾ ದಿನ್ನಿಮನಿ. ರಾಯಪ್ಪನಾಗಿ ಅಶೋಕ ಜಾಧವ. ರಾಚಪ್ಪ ಮತ್ತು ಪೋಲಿಸ್ ಎರಡು ಪಾತ್ರಗಳಲ್ಲಿ ಸಿದ್ದಪ್ಪ ಕಟಿಗೆನ್ನವರ. ಹಾಸ್ಯ ಪಾತ್ರದಲ್ಲಿ ಅಂದಾನೆಪ್ಪ (ಅದು)ನಾಗಿ ಅನಿಲ ಕಗದಾಳ. ತ್ರಿಪುರಾಂತಕ ಸ್ವಾಮಿಯ ಪಾತ್ರದಲ್ಲಿ ಮಯೂರ ಶಿಂಧೆ.ಅವರ ಅಭಿನಯ ನಾಟಕ ಮುಗಿದರೂ ಮನದಾಳದಲ್ಲಿ ಉಳಿದವು.ಈ ನಾಟಕದ ಅವಧಿ 107 ನಿಮಿಷಗಳು.ಕೋಟೆಯ ಆವರಣದಲ್ಲಿ ತೆರೆದ ರಂಗಸಜ್ಜಿಕೆಯಲ್ಲಿ ಅಳವಡಿಸಿದ ಪರದೆಗಳು ಮತ್ತು ವಿಭಿನ್ನ ಪೋಷಾಕು.ಪಾತ್ರಗಳ ಮೇಕಪ,ಪ್ರಸಾದನ,ಧ್ವನಿ,ಬೆಳಕಿನ ಸಂಯೋಜನೆ ಮನಸೂರೆಗೊಂಡಿತು.

ರತ್ನಿಯ ಬದುಕಿನ ಫ್ಲ್ಯಾಶಬ್ಯಾಕ್ ಹೇಳುವ ಸನ್ನಿವೇಶವನ್ನು ರಂಗಸಜ್ಜಿಕೆಗೆ ಅಳವಡಿಸಿದ ರೀತಿ,ಗ್ರಾಮೀಣ ಪ್ರದೇಶದಲ್ಲಿ ಬಸ್ ಬರುವ ರೀತಿ,ಅಲ್ಲಿನ ಪ್ರಯಾಣಿಕರು ರತ್ನಳ ಚಾದಂಗಡಿಯಲ್ಲಿ ಚಹಾ ಸೇವನೆಯ ಸಂದರ್ಭದಲ್ಲಿ ನಡೆಯುವ ಸಂಭಾಷಣೆ, ರತ್ನಳು ಕಮಲವ್ವಳ ಬದುಕಿನಲ್ಲಿ ನಡೆದ ಕಹಿ ಘಟನೆಗೆ ಸ್ಪಂದಿಸುವ ರೀತಿ ಮನೋಜ್ಞವಾಗಿ ಮೂಡಿಬಂದಿವೆ.
ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಭಾವನಾತ್ಮಕ ಸನ್ನಿವೇಶಗಳಲ್ಲಿ ಕಣ್ಣಂಚಲ್ಲಿ ನೀರು ಜಿನುಗುವಂತೆ ದೃಶ್ಯ ಸಂಯೋಜನೆ ಮತ್ತು ಸಂಭಾಷಣೆ ಬರೆದ ಝಕೀರ ನದಾಫ್ ಅವರು ಮೂಲ ಕಥೆಯನ್ನು ರಂಗಕ್ಕೆ ತರುವಲ್ಲಿ ಬಹಳಷ್ಟು ಶ್ರಮವಹಿಸಿರುವುದು ಕಂಡು ಬಂದಿತು.

ನಾವೆಲ್ಲ ನಾಟಕಗಳನ್ನು ಥಿಯೇಟರ್ ಅಥವ ಟೆಂಟ್‍ಗಳಲ್ಲಿ ನಾಟಕ ನೋಡುವುದು ಸಾಮಾನ್ಯ ಸಂಗತಿ. ಆದರೆ ಸವದತ್ತಿಯ ರಂಗಾಸಕ್ತರು ಐತಿಹಾಸಿಕ ಕೋಟೆಯ ಒಳಗಿನ ಆವರಣವನ್ನು ತಮ್ಮ ರಂಗ ಚಟುವಟಿಕೆಗಳಿಗೆ ಪ್ರತಿ ವರ್ಷಕ್ಕೊಂದು ಸಲ ಬಳಕೆ ಮಾಡಿಕೊಂಡು ಕೋಟೆಯ ಚಾರಿತ್ರಿಕ ಹಿನ್ನಲೆಯನ್ನು ಕೂಡ ಜನ ಗಮನಿಸುವಂತೆ ಮಾಡುತ್ತಿರುವುದು ಶ್ಲಾಘನೀಯ ಸಂಗತಿ.ಅದು ಕೂಡ ಕಳೆದ 24 ವರ್ಷದಿಂದ ಈ ಪ್ರಕ್ರಿಯೆ ಜರುಗುತ್ತ ಬಂದಿದ್ದು ದಾಖಲಾರ್ಹ ಸಂಗತಿ.

ಸವದತ್ತಿಯ ರಂಗಾಸಕ್ತ ಮಿತ್ರರೆಲ್ಲ ವೃತ್ತಿರಂಗಭೂಮಿ ಶೈಲಿಯ ನಾಟಕಗಳನ್ನು ಪ್ರದರ್ಶಿಸುತ್ತಿದ್ದ ಸಂದರ್ಭದಲ್ಲಿ ಬದಲಾವಣೆ ಬಯಸಿ ಹವ್ಯಾಸಿ ನಾಟಕಗಳನ್ನು ಪ್ರಸ್ತುತಪಡಿಸಲು ನಿರ್ಧರಿಸಿ, 1997 ರಲ್ಲಿ ಹುಟ್ಟುಹಾಕಿದ ರಂಗಸಂಸ್ಥೆಯೇ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ. ಝಕೀರ್ ನದಾಪ್ ರ ಈ ಸಂಘಟನೆಯಲ್ಲಿ ಇದ್ದವರಾರೂ ವೃತ್ತಿ ರಂಗಭೂಮಿಯಿಂದ ಬಂದವರಲ್ಲ.ಹವ್ಯಾಸಿ ಕಲಾವಿದರು.

ಒಬ್ಬೊಬ್ಬರದು ಒಂದೊಂದು ವೃತ್ತಿ ಈ ತಂಡದಲ್ಲಿ ಉಪನ್ಯಾಸಕರಿದ್ದಾರೆ, ಶಿಕ್ಷಕರಿದ್ದಾರೆ, ಪರ್ತಕರ್ತರಿದ್ದಾರೆ.ವ್ಯಾಪಾರಿಗಳಿದ್ದಾರೆ.ವಿದ್ಯಾರ್ಥಿಗಳಿದ್ದಾರೆ ಹೀಗೆ ವಿವಿಧ ವೃತ್ತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವರ್ಷಕ್ಕೊಮ್ಮೆ ಕೋಟೆಯ ಆವರಣದಲ್ಲಿ ರಂಗ ಆರಾದನಾ ಸಂಸ್ಥೆಯ ಮೂಲಕ ನಾಟಕಗಳನ್ನು ಮಾಡುತ್ತ ತಮ್ಮ ಹವ್ಯಾಸಕ್ಕೊಂದು ಇಂಬು ಕೊಡುತ್ತಿರುವರು.

ಇಲ್ಲಿ ಪ್ರದರ್ಶನಗೊಳ್ಳುವ ಪ್ರತಿಯೊಂದು ನಾಟಕಗಳು ವೈಶಿಷ್ಟ್ಯತೆಯಿಂದ ಕೂಡಿದ್ದು ಇವರ ರಂಗ ಚಟುವಟಿಕೆಗಳು ಸದಾ ನಿರಂತರವಾಗಿ ಹೊರಹೊಮ್ಮುವಂತಾಗಲಿ..ಅಂದಹಾಗೆ ಈ ಎಲ್ಲ ನಾಟಕಗಳ ರಚನೆನಿರ್ದೇಶನಕತೆಯ ವಿಶೇಷತೆ,ರಂಗ ಆರಾಧನಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ನಾಟಕದ ಕೊನೆಯಲ್ಲಿ ಕಲಾವಿದರನ್ನು ಪರಿಚಯಿಸುವ ರೀತಿ. ಹೊಸ ರೀತಿಯ ಪ್ರಯೋಗಾತ್ಮಕ ಜೊತೆಗೆ ಸ್ಥಳೀಯ ಲೇಖಕರ ಕಥೆಗಳನ್ನು ಕೂಡ ನಾಟಕಗಳನ್ನಾಗಿಸಿ ಅದಕ್ಕೊಂದು ಸ್ವರೂಪ ನೀಡುತ್ತಿರುವ ರಂಗ ಆರಾಧನಾ ಸಂಸ್ಥೆಯು ಇನ್ನೂ ಉತ್ತರೋತ್ತರವಾಗಿ ಬೆಳೆಯಬೇಕು ಇದಕ್ಕೆ ಸ್ಥಳೀಯ ಸಂಸ್ಥೆಗಳು ರಂಗಾಸಕ್ತರೂ ಕೂಡ ಹೆಚ್ಚಿನ ಪ್ರೋತ್ಸಾಹ ನೀಡಲಿ.ಇಂದು ಅಳಿಯುತ್ತಿರುವ ರಂಗ ಚಟುವಟಿಕೆಗಳು ನಿರಂತರವಾಗಿ ಇಂತಹ ಪ್ರತಿಭೆಗಳ ಮೂಲಕ ರಂಗ ಕಲೆಯನ್ನು ಉಳಿಸುವಂತಾಗಬೇಕು.


ವೈ.ಬಿ.ಕಡಕೋಳ, ಶಿಕ್ಷಕರು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್.
ಮುನವಳ್ಳಿ-591117
ತಾಲೂಕ:‌ಸವದತ್ತಿ ಜಿಲ್ಲೆ:ಬೆಳಗಾವಿ

8971117442
7975547298

- Advertisement -
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -

More Articles Like This

- Advertisement -
close
error: Content is protected !!
Join WhatsApp Group