ವಿದ್ಯಾರ್ಥಿ ದೆಸೆಯಿಂದಲೇ ಪತ್ರಿಕೋದ್ಯಮದತ್ತ ಆಕರ್ಷಿತರಾಗಿ, ಅದಕ್ಕೆ ಪೂರಕವೆಂಬಂತೆ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ವೃತ್ತಿಯಿಂದ ಮಾಧ್ಯಮ ಸಮಾಲೋಚಕರಾಗಿ, ಪ್ರವೃತ್ತಿಯಿಂದ ಸಂಸ್ಕೃತಿ ಚಿಂತಕರಾಗಿ ಸಾತ್ವಿಕ ಮನೋಭಾವದ ಪ್ರತಿರೂಪವಾಗಿ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರು ಹತ್ತಾರು ಆಸಕ್ತಿಗಳ ಆಗರ.
ಸಾಂಸ್ಕೃತಿಕ ಪರಿಚಾರಕೆಯ ಜೊತೆಗೆ ಆಧ್ಯಾತ್ಮಿಕ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ಕ್ರಿಯಾಶೀಲರಾಗಿ, ಶ್ರದ್ಧೆ, ಬದ್ಧತೆ, ತಲ್ಲೀನತೆ, ನಿಸ್ಪೃಹತೆಯ ವ್ಯಕ್ತಿತ್ವವನ್ನು ರೂಢಿಸಿಕೊಂಡು ನಿರಂತರ ಕೃಷಿಯೊಂದಿಗೆ ಅವಿಚ್ಛಿನ್ನ ಭಾರತೀಯ ಸನಾತನ ಧರ್ಮದ ಆಚರಣೆಗಳ ಹಿಂದಿನ ಅರ್ಥವನ್ನು ತಾತ್ವಿಕ ಹಾಗೂ ವೈಚಾರಿಕ ನೆಲೆಗಟ್ಟಿನಲ್ಲಿ ಪರಾಮರ್ಶಿಸಿ ಅವುಗಳನ್ನು ಜನಮಾನಸಕ್ಕೆ ಅಂಕಣಕಾರರಾಗಿ ಪ್ರಬುದ್ಧ ಲೇಖನಗಳ ಮೂಲಕ ತಲುಪಿಸುವ ಗುರುತರ ಕೈಂಕರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ.
“ಪ್ರಣವ ” ಕಾವ್ಯನಾಮದಲ್ಲಿ ಪ್ರಚಾರ, ಮುದ್ರಣ ಮತ್ತು ಬರವಣಿಗೆಗಳಲ್ಲಿ ನಿರತರಾಗಿ, ಕಾಕೋಳು ಕ್ಷೇತ್ರದ ಶ್ರೀಪಾದರಾಜ ಪ್ರತಿಷ್ಠಾಪಿತ ವೇಣುಗೋಪಾಲನ ಬ್ರಹ್ಮರಥೋತ್ಸವ ಅಷ್ಟದಶಮಾನೋತ್ಸವ ಸಂದರ್ಭದ “ಶ್ರೀಕೃಷ್ಣಕಲಾದರ್ಶನ” ಸಂಭ್ರಮದ ಸಮನ್ವಯಕಾರರಾಗಿ ಪಾಂಚಜನ್ಯ ಪ್ರತಿಷ್ಠಾನಕ್ಕಾಗಿ “ವೇಣುವರ್ಣ-ಅಪರಿಮಿತ ಅವತರಣ” ವಿಶಿಷ್ಟ ಚಿತ್ರ ಸಂಕಲನದ ರೂವಾರಿರಾಗಿ, ಕನ್ನಡ ಸಾಹಿತ್ಯದಲ್ಲಿ ಬಿತ್ತರಗೊಂಡಿರುವ ಗಣಪತಿಯ ವಿವಿಧ ಮುಖಗಳನ್ನು ಪರಿಚಯಿಸುವ ಅಪರೂಪದ ಸೃಷ್ಟಿ “ಕನ್ನಡ ಕಂಪಿನಲ್ಲಿ ಕರಿವದನ” ಹಾಗೂ ‘ವಿಶ್ವವಂದಿತ ವಿನಾಯಕ’ ಹೊತ್ತಿಗೆಯ ಕರ್ತೃವಾಗಿ , ವಿವಿಧ ಕೇಶವನಾಮಗಳ ಸಂಗ್ರಹ ‘ಭಕ್ತಿ ಪಾರಿಜಾತ’ , ದೈವೀಕ ಕಲಾರಾಧಕಿ ಡಾ. ಮೀರಾಕುಮಾರ್ ವರ್ಣಯಾನ, ಡಾ.ಅರಳುಮಲ್ಲಿಗೆ ಪಾರ್ಥಸಾರಥಿ 70ರ ಸಂಭ್ರಮದ 950 ಪುಟಗಳ ಉದ್ಗ್ರಂಥ ‘ಭೀಮರಥಿ ಬಾಗಿನ’ ಪ್ರಧಾನ ಸಂಪಾದಕರಾಗಿ, ಇತ್ತೀಚಿನ ಇವರ ವಿದ್ವತ್‍ಪೂರ್ಣ ಕೃತಿ ‘ವಂದೇ ಗುರು ಪರಂಪರಾಮ್’ ವರೆವಿಗೂ ಗೈದ ಸಾಧನೆಗಳು ಶ್ರೀಯುತರ ಕರ್ತೃತ್ವಶಕ್ತಿ ನಿರೂಪಣಾ ಕುಶಲತೆ ಮತ್ತು ಕಲಾಪ್ರಜ್ಞೆಗೆ ಸಾಕ್ಷಿಗಳಾಗಿವೆ.
ಧಾರ್ಮಿಕ ಪುಸ್ತಕಗಳಿಗೆ ಅನುದಾನ ನೀಡುವ ಟಿ.ಟಿ.ಡಿ.ಯ ಪರಿಣತ ತಜ್ಞ ಸಮಿತಿಯ ಸದಸ್ಯರಾಗಿ, ಗಾಂಧಿ ತತ್ವ ಪ್ರಸರಣದ “ಅಮರ ಬಾಪು ಚಿಂತನ ” ಪತ್ರಿಕೆ ಇವುಗಳಲ್ಲಿ ಸಕ್ರಿಯರಾದ ಇವರ ಸಾರಸ್ವತ ಕೈಂಕರ್ಯವನ್ನು ಪುರಸ್ಕರಿಸಿ ಅಲಂಕರಿಸಿದ ಪ್ರಶಸ್ತಿಗಳಲ್ಲಿ ‘ಸದ್ಗುರು ಸಾಧನ ರತ್ನ’, ‘ಡಾ. ಶಿವರಾಮ ಕಾರಂತ ಸದ್ಭಾವನಾ ರಾಜ್ಯ ಪ್ರಶಸ್ತಿ’ ‘ಭಕ್ತಿ ಸಂಸ್ಕೃತಿ ಸೇವಾರತ್ನ’, ‘ನಾಡ ಭೂಷಣ’, ‘ಸರ್ ಎಂ.ವಿ. ರಾಜ್ಯ ಪ್ರಶಸ್ತಿ’, ‘ಆಚಾರ್ಯ ವಿದ್ಯಾರಣ್ಯ’ ಪ್ರಶಸ್ತಿ, ‘ಧನ್ವಂತರಿ’ಪುರಸ್ಕಾರ , ‘ಹರಿದಾಸ ಅನುಗ್ರಹ’ ಮತ್ತು ಉಡುಪಿ ಪರ್ಯಾಯ ಫಲಿಮಾರು ಮಠದ ‘ಶ್ರೀಕೃಷ್ಣ ಸೇವಾಮಾನ್ಯ’ ಪ್ರಶಸ್ತಿ ; ಇವುಗಳಿಗೆ ಮುಕುಟಪ್ರಾಯವಾಗಿ ಸನಾತನ ಸಂಸ್ಕೃತಿಯ ಪ್ರಸರಣಕ್ಕೆ ಇವರ ವಿಶಿಷ್ಟ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರದ ನೀತಿ ಆಯೋಗದಿಂದ ಮಾನ್ಯವಾಗಿರುವ ಇಂಡಿಯನ್ ವರ್ಚುಯಲ್ ಯುನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಷನ್ ಸಂಸ್ಥೆಯ ವತಿಯಿಂದ ವರಿಸಿ ಬಂದ ಗೌರವ ಡಾಕ್ಟರೇಟ್ ಪದವಿ ಉಲ್ಲೇಖಾರ್ಹ.
ಪುಸ್ತಕ ಸಂಸ್ಕೃತಿ ಪರವಾದ ಆಲೋಚನೆಗಳನ್ನು ಸಾಕಾರಗೊಳಿಸುತ್ತಿರುವ ಅದಮ್ಯ ಉತ್ಸಾಹಿ, ಬರಹದ ಬದುಕಿನಲ್ಲಿ ದಿಟ್ಟ ಹೆಜ್ಜೆಗಳನ್ನು ಊರುತ್ತ ಮುನ್ನಡೆಯುತ್ತಿರುವ ಅನನ್ಯ ಅಕ್ಷರ ಪ್ರೇಮಿ ಆದ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ ನಗರದ ಕನಕಪುರ ರಸ್ತೆ ತಾತಗುಣಿ ಗ್ರಾಮದ ಬಳಿ ಇರುವ ಅಗರದ ಸಾಹಿತ್ಯ ಸಂಸ್ಕೃತಿ ವೇದಿಕೆ ವತಿಯಿಂದ ನ. 15 ಭಾನುವಾರ ಬೆಳಿಗ್ಗೆ 10.30ಕ್ಕೆ ಸಾಹಿತ್ಯ ರತ್ನ ಆರ್. ಸದಾಶಿವಯ್ಯ ಕಲಾ ಮಂಟಪದಲ್ಲಿ 65ನೇ ಕರ್ನಾಟಕ ರಾಜ್ಯೋತ್ಸವದ ಸಡಗರದಲ್ಲಿ ವಿದ್ವಜ್ಜನರ ಸಮ್ಮುಖದಲ್ಲಿ ‘ಅಧ್ಯಾತ್ಮ ಪ್ರಭೂಷಣ’ ಎಂಬ ಉಪಾಧಿಯೊಂದಿಗೆ ಪುರಸ್ಕರಿಸಿ ಗೌರವಿಸಲಾಗುತ್ತಿದೆ.