ಮಂಡ್ಯದ ಅಡ್ವೈಸರ್ ಪತ್ರಿಕೆಯು ಪ್ರತಿವರ್ಷದಂತೆ 2019ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿತ್ತು, ಎಂಟು ವಿಭಾಗಗಳಲ್ಲಿ 10 ಪ್ರಶಸ್ತಿಗಳನ್ನು ಕಳೆದ 13 ವರ್ಷದಿಂದ ನೀಡುತ್ತಾ ಬಂದಿದೆ.
ಕನ್ನಡ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ನೀಡುವ ಪ್ರಶಸ್ತಿಗಳಿಗೆ ಹಿರಿಯ-ಕಿರಿಯ ಲೇಖಕರುಗಳನ್ನು ಆಯ್ಕೆ ಮಾಡಲಾಗಿದೆ. ಹಿರಿಯ ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ ನೇತೃತ್ವದ ತೀರ್ಪುಗಾರರ ಮಂಡಳಿ ಕೃತಿಗಳನ್ನು ಆಯ್ಕೆ ಮಾಡಿದ್ದು, ಎಲ್ಲಾ 10 ಪ್ರಶಸ್ತಿಗಳಿಗೆ ಸಮನಾಗಿ ನಗದು ಮೂರು ಸಾವಿರ ರೂಪಾಯಿಗಳು ಮತ್ತು ಪ್ರಶಸ್ತಿ ಪತ್ರ ಹೊಂದಿರುತ್ತದೆ ಎಂದು ಸಂಪಾದಕರಾದ ಸಿ.ಬಸವರಾಜುರವರು ತಿಳಿಸಿರುತ್ತಾರೆ.
ಜಿಲ್ಲಾ ಮಟ್ಟದಲ್ಲಿ ಸದ್ದಿಲ್ಲದೆ ಸಾರಸ್ವತ ಕೈಂಕರ್ಯ ಮಾಡುತ್ತ ಲೇಖಕರನ್ನು ಗೌರವಿಸುತ್ತಿರುವ ಅವರದು ಸ್ನೇಹಮಯಿ ವ್ಯಕ್ತಿತ್ವ . ಕನ್ನಡದ ಇತರ ಸಾಹಿತ್ಯ ಪ್ರಕಾರದಂತೆ ಅಧ್ಯಾತ್ಮ ಸಾಹಿತ್ಯದಲ್ಲಿ ಇತ್ತೀಚೆಗೆ ಹಲವಾರು ಕೃತಿಗಳು ಪ್ರಕಟಗೊಳುತ್ತಿದೆ.
ನನಗೆ ಪ್ರಿಯವಾದ ಸಾಹಿತ್ಯ ವಿಭಾಗವು ಅದಾಗಿದ್ದು ಸ್ವಲ್ಪಮಟ್ಟಿನ ಕೃಷಿ ಮಾಡಿ ಅಂಬೆಗಾಲು ಇಡುತ್ತಿದ್ದೇನೆ , ಇದಕ್ಕೆ ಕಾರಣ ನನ್ನ ತಾಯ್ತಂದೆಗಳು ನೀಡಿದ ಸಂಸ್ಕಾರ. ಇಂದು ಜನಮನ್ನಣೆ ಗಳಿಸಿ ಗೌರವ ಸನ್ಮಾನಗಳು ದೊರೆಯಲು ಅವರ ಆರ್ಶಿವಾದವೇ ಕಾರಣ, ಆದರೆ ಅದನ್ನು ಕಣ್ತುಂಬಿಕೊಳ್ಳಲು ನನ್ನ ತಂದೆ ಇಲ್ಲವಲ್ಲ ಎಂಬ ಕೊರಗು ಇದೆ . ಅವರ ನೆನೆಪಿನಲ್ಲಿ ಏನಾದರೊಂದು ಮಾಡಬೇಕೆಂದು ಯೋಚಿಸುತ್ತಿದ್ದಾಗ ಸಾಹಿತ್ಯ ಬಂಧು ಬಸವರಾಜು ಸಂಪಾದಕತ್ವದ ಅಡ್ವೈಸರ್ ಸಾಹಿತ್ಯ ಪ್ರಶಸ್ತಿಗೆ ಕಳೆದ ವರುಷದಿಂದ ಆಧ್ಯಾತ್ಮಿಕ ಸಾಹಿತ್ಯ ಪ್ರಕಾರದ ಕೃತಿಗೆ ಪುರಸ್ಕಾರಕ್ಕೆ ನಮ್ಮ ತಂದೆ ಪಿ.ಆರ್.ಸುಬ್ಬರಾವ್ ಸ್ಮರಣಾರ್ಥ ಪ್ರಶಸ್ತಿ ಗೆ ಪ್ರಾಯೋಜಕತ್ವ ವಹಿಸಿಕೊಂಡಿದ್ದೆನೆ.
ಈ ಸಾಲಿನ ಪ್ರಶಸ್ತಿಗೆ – ಉಡುಪಿಯ ಪ್ರೊ.ಪಿ.ಶ್ರೀಪತಿ ತಂತ್ರಿ ರವರ ‘ಅಜೀವಿಕರು ಮತ್ತು ಕೆಲವು ವೇದೋತ್ತರ, ದಾರ್ಶನಿಕ ಬೆಳವಣಿಗೆಗಳು’ಪುಸ್ತಕವನ್ನು ತೀರ್ಪುಗಾರರು ಆಯ್ಕೆ ಮಾಡಿರುವುದು ಅತ್ಯಂತ ಸಂತಸ ತಂದಿದೆ . ಸಾರ್ಥಕ ಭಾವ ಮೂಡಿದೆ. ಹಿರಿಯ ವಿದ್ವಾಂಸರಾದ ಪ್ರೊ.ಪಿ.ಶ್ರೀಪತಿ ತಂತ್ರಿ ಬರಹವು ಆಸಕ್ತರಿಗೆ ಬಹು ಉಪಯುಕ್ತವಾಗುವುದೆಂದು ಭಾವಿಸಿದ್ದೇನೆ .
ಸಂಸ್ಕೃತಿ ಪ್ರಸರಣದಲ್ಲಿ ತೊಡಗಿರುವ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಪ್ರಕಟಿಸಿರುವ ಕೃತಿಗೆ ಶಾಸ್ತ್ರಚೂಡಾಮಣಿ ಪ್ರೋ ಮಲ್ಲೇಪುರಂ ಜಿ ವೆಂಕಟೇಶ ರವರ ಅಪ್ತ ಸದಾಶಯದ ಬೆನ್ನುಡಿಯಿದೆ .
ಪುಸ್ತಕ ಒದುವ ಹವ್ಯಾಸ ಕಲಿಸಿದ ಅಪ್ಪನಿಗೆ ಇದಕ್ಕಿಂತ ಹೇಗೆ ನೆನೆಯಲಿ ….
ಡಾ.ಗುರುರಾಜ ಪೋಶೆಟ್ಟಿಹಳ್ಳಿ